ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ನಾಯಕತ್ವಕ್ಕೆ ಅಪಸ್ವರ

Last Updated 12 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಚುನಾವಣೆಗಳಲ್ಲಿ ಪಕ್ಷದ ಸೋಲಿನ ಹೊಣೆಯನ್ನು ರಾಹುಲ್‌ ಗಾಂಧಿ ಅವರ ತಲೆಗೆ ಕಟ್ಟುವುದನ್ನು ತಪ್ಪಿಸಲು ಕಾಂಗ್ರೆಸ್‌ನ ಹಲವು ಹಿರಿಯ ನಾಯಕರು ಗುರಾಣಿಯಾಗಿ ನಿಂತಿದ್ದರೂ, ಪ್ರಾಮಾಣಿಕ ಆತ್ಮವಿಮರ್ಶೆ ನಡೆಯಬೇಕು ಎಂದು ಕೆಲವು ನಾಯಕರು ಅಭಿಪ್ರಾಯಪಟ್ಟಿದ್ದಾರೆ.

‘ಸಾಮೂಹಿಕ ಹೊಣೆಗಾರಿಕೆ ಮೂಲಕ ಸೋಲನ್ನು ಎದುರಿಸಬೇಕು ಎಂದು ನಿರ್ಧಾರವಾಗಿದ್ದರೂ ಹಲವು ನಾಯಕರು  ರಾಹುಲ್‌ ನಾಯಕತ್ವದ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಲಿನ ಬಗ್ಗೆ ‘ಪ್ರಾಮಾಣಿಕ ಆತ್ಮವಿಮರ್ಶೆ’ ನಡೆಯಬೇಕು ಎಂದು ಹಿರಿಯರ ಮೇಲೆ ಒತ್ತಡ ತರಲು ಕೆಲವು ನಾಯಕರು ಸಿದ್ಧತೆ ನಡೆಸಿದ್ದಾರೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಬಗ್ಗೆ ಪ್ರಾಮಾಣಿಕ ಆತ್ಮವಿಮರ್ಶೆ ನಡೆಸಲಾಗುತ್ತದೆ ಎಂದು ಭರವಸೆ ನೀಡಲಾಗಿತ್ತು. ಆದರೆ ಅದು ನಡೆಯಲಿಲ್ಲ. ಇದೇ ಕಾರಣಕ್ಕೆ ಹಲವು ನಾಯಕರು  ಬೇರೆ ಪಕ್ಷಗಳತ್ತ ಮುಖಮಾಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಉತ್ತರ ಪ್ರದೇಶದಲ್ಲಿ ಚುನಾವಣೆ ಎದುರಿಸಲು ಪಕ್ಷ ಅನುಸರಿಸಿದ ತಂತ್ರದ ಬಗ್ಗೆ ಹಲವರು ನೇರವಾಗಿಯೇ ಪ್ರಶ್ನೆ ಎತ್ತಿದ್ದಾರೆ.

ರಾಜ್ಯದ ಕಾಂಗ್ರೆಸ್‌ ಮುಖಂಡ ಸಂದೀಪ್ ದೀಕ್ಷಿತ್, ‘ಸಮಾಜವಾದಿ ಪಕ್ಷದ ಜತೆ ಮೈತ್ರಿ ಮಾಡಿಕೊಂಡದ್ದು ಅತ್ಯಂತ ಕೆಟ್ಟ ನಿರ್ಧಾರ’ ಎಂದು ಹೇಳಿದ್ದಾರೆ. ಸಂದೀಪ್‌, ಕಾಂಗ್ರೆಸ್‌ ನಾಯಕಿ ಶೀಲಾ ದೀಕ್ಷಿತ್ ಅವರ ಮಗ. ಮೈತ್ರಿಗೂ ಮುನ್ನ ಶೀಲಾರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತು.

‘ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲೂ ಪಕ್ಷದ ಹಿರಿಯ ನಾಯಕರ ಸಲಹೆ ಕೇಳದೆ, ಚುನಾವಣಾ ತಂತ್ರ ನಿರೂಪಕ ಪ್ರಶಾಂತ್‌ ಕಿಶೋರ್‌ಗೆ ಮಣೆ ಹಾಕಿದ್ದು ಸರಿಯಲ್ಲ  ಎಂಬ ಅಸಮಾಧಾನವನ್ನು ಪಕ್ಷದ, ಉತ್ತರ ಪ್ರದೇಶ ನಾಯಕರು ಹೊರಹಾಕಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಫಲಿತಾಂಶ ಪ್ರಕಟವಾದ ನಂತರ ಹೊರಗೆ ಎಲ್ಲೂ ಕಾಣಿಸಿಕೊಳ್ಳದ ರಾಹುಲ್ , ಟ್ವೀಟ್‌ ಅಷ್ಟೇ ಮಾಡಿದ್ದಾರೆ.

ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಹೀನಾಯ (ಲಖನೌ ವರದಿ): ಉತ್ತರ ಪ್ರದೇಶದಲ್ಲಿ 27 ವರ್ಷಗಳ ಹಿಂದೆ ಕಳೆದುಕೊಂಡಿದ್ದ ಅಧಿಕಾರವನ್ನು ಮತ್ತೆ ಪಡೆಯಬೇಕು ಎಂಬ ಕಾಂಗ್ರೆಸ್ ಕನಸು ನುಚ್ಚು ನೂರಾಗಿದೆ.

ಅಧಿಕಾರ ಹಿಡಿಯಬೇಕು ಎಂಬ ಉದ್ದೇಶದಿಂದ ಸಮಾಜವಾದಿ ಪಕ್ಷದ ಜತೆ ಮೈತ್ರಿ ಮಾಡಿಕೊಂಡರೂ ಕಾಂಗ್ರೆಸ್ ಅತ್ಯಂತ ಹೀನಾಯ ಸೋಲು ಅನುಭವಿಸಿದೆ.

ಚುನಾವಣೆಯಲ್ಲಿ ಪಕ್ಷದ ಸಾಧನೆ ಒಂದಂಕಿಗೆ ಇಳಿದಿದೆ. ಮತ ಗಳಿಕೆಯ ಪ್ರಮಾಣವೂ ಪಾತಾಳ ಕಂಡಿರುವುದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಮರುಜೀವ ಪಡೆಯುವುದು ಬಹಳ ಕಷ್ಟ ಎಂದು ವಿಶ್ಲೇಷಿಸಲಾಗುತ್ತಿದೆ.

105 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್, ಕೇವಲ ಏಳು ಕ್ಷೇತ್ರಗಳಲ್ಲಿ ಗೆದ್ದಿದೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ  ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಲೋಕಸಭಾ ಕ್ಷೇತ್ರಗಳಾದ ರಾಯ್‌ಬರೇಲಿ ಹಾಗೂ ಅಮೇಠಿಗಳಲ್ಲೂ ಭಾರಿ ಸೋಲು ಅನುಭವಿಸಿದೆ.

ಬಿಜೆಪಿಯ ಮಿತ್ರ, ಪ್ರಾದೇಶಿಕ ಪಕ್ಷ ಅಪ್ನಾ ದಳ ಕೂಡ 9 ಸ್ಥಾನಗಳನ್ನು ಗೆದ್ದಿದೆ. ಈ ಸಣ್ಣ ಪಕ್ಷಕ್ಕಿಂತಲೂ ಜಾಸ್ತಿ ಸ್ಥಾನ ಗೆಲ್ಲಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT