ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಯಿಖಾನೆ ವಿರುದ್ಧ ಸಹಿ ಸಂಗ್ರಹ

Last Updated 13 ಮಾರ್ಚ್ 2017, 7:02 IST
ಅಕ್ಷರ ಗಾತ್ರ

ಕನಕಪುರ: ‘ರೈತರನ್ನು ಉಳಿಸುವ ಮತ್ತು ಅಂತರ್ಜಲ ಹೆಚ್ಚಿಸುವ ಮೇಕೆದಾಟು ಜಲಾಶಯ ನಿರ್ಮಾಣ ಆಗಬೇಕು, ಪ್ರಾಣಿಗಳನ್ನು ವಧೆ ಮಾಡುವ ಪರಿಸರ ನಾಶ ಮಾಡುವ ಕಸಾಯಿಖಾನೆ ನಮಗೆ ಬೇಡ’ ಎಂದು ಮೇಕೆದಾಟು ಹೋರಾಟ ಸಮಿತಿಯ ಅಧ್ಯಕ್ಷ ಬಿ.ನಾಗರಾಜು ಆಗ್ರಹಿಸಿದರು.

ನಗರದ ಚನ್ನಬಸಪ್ಪ ವೃತ್ತದಲ್ಲಿ ಕಸಾಯಿಖಾನೆ ಬೇಡವೆಂದು ಮುಖ್ಯಮಂತ್ರಿಗೆ ಮನವಿ ನೀಡುವ ಸಾರ್ವಜನಿಕರಿಂದ ಸಹಿ ಸಂಗ್ರಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ತಾಲ್ಲೂಕಿನ ಹಾರೋಹಳ್ಳಿ ಬೃಹತ್‌ ಕೈಗಾರಿಕಾ ಪ್ರದೇಶದಲ್ಲಿ ಸಾವಿರಾರು ಪ್ರಾಣಿಗಳನ್ನು ವಧೆ ಮಾಡುವ ಯಾಂತ್ರೀಕೃತ ಕಸಾಯಿಖಾನೆ ನಿರ್ಮಾಣ ಮಾಡಲು ಸರ್ಕಾರವು ಬಿ.ಬಿ.ಎಂ.ಪಿ.ಗೆ ಜಾಗ ನೀಡಿದೆ. ಇಲ್ಲಿ ಖಾಸಗಿ ಒಡೆತನದ ಕಸಾಯಿಖಾನೆ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಇದರ ವಿರುದ್ಧ ತಾಲ್ಲೂಕು ಸೇರಿದಂತೆ ಜಿಲ್ಲೆಯ ಜನತೆ ತೀವ್ರ ಹೋರಾಟ ನಡೆಸುತ್ತಿದ್ದಾರೆ ಎಂದರು.

ಕಸಾಯಿಖಾನೆ ಬೇಕೆಂದು ಯಾರೂ ಅರ್ಜಿ ಹಾಕಿ ಸರ್ಕಾರವನ್ನು ಒತ್ತಾಯಿಸಿಲ್ಲ, ಬೇರೆ ಪ್ರದೇಶದಲ್ಲಿ ವಿರೋಧ ವ್ಯಕ್ತವಾದ ಬಳಿಕ ಅಲ್ಲಿಂದ ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದರು.

ಮೇಕೆದಾಟು ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂಪತ್‌ಕುಮಾರ್‌ ಮಾತನಾಡಿ, ರಾಮಚಂದ್ರಾಪುರ ಮಠದ ರಾಘವೇಶ್ವರಭಾರತಿ ಸ್ವಾಮಿ ಹೋರಾಟದ ನೇತೃತ್ವ  ವಹಿಸಿಕೊಂಡಿದ್ದು ಮಾರ್ಚ್‌ 24ರಂದು ಹಾರೋಹಳ್ಳಿಯಲ್ಲಿ ಬೃಹತ್‌ ಹೋರಾಟ ಹಮ್ಮಿಕೊಳ್ಳಲಾಗಿದೆ. ತಾಲ್ಲೂಕಿನ ಪ್ರತಿಯೊಂದು ಗ್ರಾಮದ ಜನತೆ ಈ ಹೋರಾಟದಲ್ಲಿ ಪಾಲ್ಗೊಂಡು ಹೋರಾಟ ಬೆಂಬಲಿಸಬೇಕು ಎಂದರು.

ಕಸಾಯಿಖಾನೆ ಬೇಡವೆಂಬ ವಿರೋಧವನ್ನು ಜನಾಂದೋಲನವಾಗಿ ರೂಪಿಸುತ್ತಿದ್ದು ಜಿಲ್ಲೆಯ ಎಲ್ಲಾ ಜನರಿಂದ ಮುಖ್ಯಮಂತ್ರಿಗೆ ಮನವಿ ಪತ್ರವನ್ನು ನೀಡಲಾಗುತ್ತಿದೆ. ಅದಕ್ಕಾಗಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ಹೋರಾಟ ಸಮಿತಿಯವರು ಮಠದ ಗೋಕಿಂಕರರ ತಂಡದೊಂದಿಗೆ ಮನೆ ಮನೆಗೆ ಭೇಟಿ ನೀಡಿ ಸಹಿ ಸಂಗ್ರಹ ಮಾಡುತ್ತಿರುವುದಾಗಿ ತಿಳಿಸಿದರು.

9ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ  ಮಾತನಾಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಮುಕ್ತವಾಗಿ ಬೆಂಬಲಿಸಬೇಕಿದೆ, ಈ ಹೋರಾಟವು ಯಾರದೇ ವಿರುದ್ಧ ಅಲ್ಲ ಮತ್ತು ಯಾವುದೇ ರಾಜಕೀಯ ದುರುದ್ದೇಶ ಹಾಗೂ ರಾಜಕೀಯ ಲಾಭದಿಂದ ಕೂಡಿಲ್ಲ. ಇದೊಂದು ಸಾರ್ವಜನಿಕ ಸಂಘಟಿತ ಹೋರಾಟವಾಗಿದ್ದು ಎಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿದರು. ಪುರಸಭೆ ಮಾಜಿ ಅಧ್ಯಕ್ಷರಾದ ಮಳಗಾಳು ಮಂಜುನಾಥ್‌ ಮತ್ತು ಬಿ.ನಾಗರಾಜು ಸಹಿ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರದ 27 ವಾರ್ಡುಗಳಲ್ಲಿ ಮನೆ ಮನೆಗೆ ತೆರಳಿ ಸಹಿ ಸಂಗ್ರಹ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT