ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯದ ತೊಟ್ಟಿಯಾದ ಕಾಲೇಜು ಆವರಣ!

Last Updated 15 ಮಾರ್ಚ್ 2017, 7:49 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ಸರ್ಕಾರಿ ಪದವಿ ಪೂರ್ವ (ಜೂನಿಯರ್) ಕಾಲೇಜು ಆವರಣದಲ್ಲಿರುವ ಪ್ರೌಢಶಾಲೆಯ ಕೊಠಡಿಗಳ ಬಳಿ ಕೆಲ ಕ್ಷೌರಿಕರು ತಮ್ಮ ಅಂಗಡಿಯಲ್ಲಿ ಬಳಸಿದ ಬ್ಲೇಡ್‌ಗಳನ್ನು ಸುರಿಯುತ್ತಿದ್ದು, ಶಿಕ್ಷಕರಲ್ಲಿ ಆತಂಕ ಮೂಡಿಸಿದೆ. ಅಲ್ಲದೆ ಕೆಲವರು ವ್ಯಾಪಾರಿಗಳು ತ್ಯಾಜ್ಯವನ್ನೂ ಸುರಿಯುತ್ತಿದ್ದು ಇದರಿಂದ ಶಾಲಾ ಆವರಣ ಕಸದ ತೊಟ್ಟಿಯಾಗಿದೆ.

ಫೆ.19 ರಂದು ಕಾಲೇಜು ಆವರಣದ ನಂದಿ ರಂಗಮಂದಿರದಲ್ಲಿ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದಕ್ಕಾಗಿ ಕೆಳಗಿನ ತೋಟದ ಮಾರ್ಗದ ರಸ್ತೆಗೆ ಹೊಂದಿಕೊಂಡಿರುವ ಕಾಲೇಜು ಆವರಣದ ತಡೆಗೋಡೆ ತೆರವುಗೊಳಿಸಲಾಗಿತ್ತು. ಕಾರ್ಯಕ್ರಮ ಮುಗಿದು ತಿಂಗಳು ಸಮೀಪಿಸುತ್ತ ಬಂದರೂ ಈವರೆಗೆ ಪುನಃ ತಡೆಗೋಡೆ ನಿರ್ಮಿಸಿಲ್ಲ.

ತಡೆಗೋಡೆ ತೆಗೆದು ಹಾಕಿರುವ ಪರಿಣಾಮ ಸುತ್ತಲಿನ ಕೆಲವರು ತ್ಯಾಜ್ಯವನ್ನು ಶಾಲೆ ಕೊಠಡಿಗಳ ಹಿಂಭಾಗದಲ್ಲಿ ಸುರಿಯುತ್ತಿದ್ದಾರೆ. ಅಲ್ಲದೆ ಶಾಲಾ ಆವರಣಕ್ಕೆ ವಾಹನಗಳ ಪ್ರವೇಶ ಹೆಚ್ಚುತ್ತಿದೆ. ಇದರಿಂದ ಶಾಲಾ, ಕಾಲೇಜಿನ ವಾತಾವರಣ ಹದಗೆಡುತ್ತಿದೆ.

ತ್ಯಾಜ್ಯದ ಜತೆಗೆ ಬ್ಲೇಡ್‌ನಂತಹ ಅಪಾಯಕಾರಿ ವಸ್ತುಗಳು ಶಾಲೆ ಆವರಣದಲ್ಲಿ ಎಸೆಯುತ್ತಿರುವುದರಿಂದ ಶಿಕ್ಷಕರಲ್ಲಿ ಭಯ ಮೂಡಿಸಿದೆ.

ವಿದ್ಯಾರ್ಥಿಗಳು ಯಾವ ಸಂದರ್ಭದಲ್ಲಿ ಬ್ಲೇಡ್‌ ರಾಶಿಯ ಬಳಿ ಹೋಗಿ ಅಪಾಯ ಮಾಡಿಕೊಳ್ಳುತ್ತಾರೆ ಎನ್ನುವ ಭಯ ಶಿಕ್ಷಕರಲ್ಲಿ ಇದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಶಾಲೆ ಆವರಣದಲ್ಲಿರುವ ತ್ಯಾಜ್ಯ ವಿಲೇವಾರಿಗೆ ಕ್ರಮಕೈಗೊಳ್ಳುವ ಜತೆಗೆ ಕೂಡಲೇ ತಡೆಗೋಡೆ ನಿರ್ಮಿಸಬೇಕು ಎಂದು ಶಿಕ್ಷಕರು ಒತ್ತಾಯಿಸುತ್ತಾರೆ.

‘ಶಾಸಕರ ಕಾರ್ಯಕ್ರಮದ ಪ್ರಯುಕ್ತ ತಡೆಗೋಡೆ ಕಿತ್ತು ಹಾಕಿದರು. ಕಾರ್ಯಕ್ರಮ ಮುಗಿದು ತಿಂಗಳಾದರೂ ಅದನ್ನು ಅಳವಡಿಸುವ ಕೆಲಸವಾಗಿಲ್ಲ. ಕೀಳುವಾಗ ಇರುವ ಉತ್ಸಾಹ ಪುನಃ ಸರಿಪಡಿಸುವಾಗ ಏಕೆ ಇರುವುದಿಲ್ಲ? ಶಾಲೆಯ ಪರಿಸರದಲ್ಲಿ ಸ್ವಚ್ಛತೆ ಕಾಪಾಡಬೇಕಾದವರೇ ಗಲೀಜು ಮಾಡುತ್ತಿದ್ದಾರೆ’ ಎಂದು ಅವರು ಬೇಸರ ವ್ಯಕ್ತಪಡಿಸುವರು.

ಆದೇಶ ಉಲ್ಲಂಘನೆ!: ಶಾಲಾ, ಕಾಲೇಜಿನ ಆವರಣವನ್ನು ಶಿಕ್ಷಣೇತರ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುವುದನ್ನು ನಿರ್ಬಂಧಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದ್ದರೂ ಈ ಕಾಲೇಜು ಆವರಣದಲ್ಲಿ ಬೆಲೆ ಇಲ್ಲದಂತಾಗಿದೆ. ಇತರರಿಗೆ ನಂದಿ ರಂಗಮಂದಿರ ಸಿಗದಂತೆ ನೋಡಿಕೊಳ್ಳುವ ಶಾಸಕ ಡಾ.ಕೆ.ಸುಧಾಕರ್‌ ಅವರು ತಾವು ಮಾತ್ರ ಪದೇ ಪದೇ ಕಾನೂನು ಉಲ್ಲಂಘಿಸಿ ಕಾಲೇಜು ಆವರಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಇತ್ತೀಚೆಗೆ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ. ನಾಗರಾಜ್‌, ಮುಖಂಡರಾದ ಕೆ.ಬಿ.ಬಚ್ಚೇಗೌಡ, ಕೆ.ಸಿ.ರಾಜಾಕಾಂತ, ವಕೀಲ ನಾರಾಯಣಸ್ವಾಮಿ ಆರೋಪಿಸಿದ್ದರು.

***

ಬ್ಲೇಡ್‌ಗಳಿಂದ ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಯಾರು ಹೊಣೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಈ ಬಗ್ಗೆ ಎಚ್ಚೆತ್ತು ತ್ಯಾಜ್ಯ ಸುರಿಯುವವರ ವಿರುದ್ಧ  ಕ್ರಮಕ್ಕೆ ಮುಂದಾಗಬೇಕು.
-ಅಶ್ವತ್ಥ್, ಬಿ.ಬಿ.ರಸ್ತೆ ನಿವಾಸಿ

**

-ಬೊಮ್ಮೇಕಲ್ಲು ವೆಂಕಟೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT