ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಡಿವ ಹೃದಯಗಳು...

ಸಾಧನೆಯ ಕಥೆಗಳು
Last Updated 15 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಶ್ರಿಯಾ ರಂಗರಾಜನ್
ಶ್ರಿಯಾ ರಂಗರಾಜನ್ ಓದಿದ್ದು ಬಿ.ಇ ಪದವಿ. ಆದರೆ ಅವರ ಮನಸ್ಸು ಮಾತ್ರ ಗ್ರಾಮೀಣ ಅಭಿವೃದ್ಧಿ ಕಡೆ ತುಡಿಯುತ್ತಿತ್ತು. ಪದವಿ ಬಳಿಕ ಶ್ರಿಯಾ ಕೆಲಸಕ್ಕೆ ಸೇರಲಿಲ್ಲ! ಬದಲಿಗೆ ಗ್ರಾಮೀಣಾಭಿವೃದ್ಧಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಸ್ವಯಂ ಸೇವಾ ಸಂಸ್ಥೆಯನ್ನು ಆರಂಭಿಸಿದರು. ಇದೀಗ ಗ್ರಾಮೀಣ ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗ ಕೊಡಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.
 
ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿರುವ ಜವಾಹರ್ ಗುಡ್ಡಗಾಡು ಪ್ರಾಂತ್ಯದಲ್ಲಿ ಬುಡಕಟ್ಟು ಮಹಿಳೆಯರ ಅಭಿವೃದ್ಧಿಗಾಗಿ ಶ್ರಿಯಾ ಶ್ರಮಿಸುತ್ತಿದ್ದಾರೆ. ಅಲ್ಲಿನ ಯುವತಿಯರು ಮತ್ತು ಮಹಿಳೆಯರಲ್ಲಿ ಹುದುಗಿರುವ ಕಲೆಯನ್ನು ಹೊರತೆಗೆಯುತ್ತಿದ್ದಾರೆ. 
 
ಎಂಬ್ರಾಯಿಡರಿ, ಕಸೂತಿ, ಆಟಿಕೆಗಳು, ಮಣ್ಣು ಮತ್ತು ಮರದ ಶಿಲ್ಪಗಳು, ಬಿದಿರಿನ ಕಲಾಕೃತಿಗಳನ್ನು ತಯಾರಿಸಿ ಮುಂಬೈ ಮತ್ತು ಪುಣೆಯಲ್ಲಿ ಮಳಿಗೆಗಳನ್ನು ತೆರೆದು ಮಾರಾಟ ಮಾಡುತ್ತಿದ್ದಾರೆ. ಸುಮಾರು 2000ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ್ದಾರೆ.
 
ರಾತ್ರಿ ಶಾಲೆಗಳನ್ನು ತೆರೆದು ಅಶಿಕ್ಷಿತ ಮಹಿಳೆಯರಿಗೆ ಅಕ್ಷರಜ್ಞಾನ ಸೇವೆಯನ್ನು ನೀಡುತ್ತಿದ್ದಾರೆ. ಕೇವಲ ನೂರು ರೂಪಾಯಿ ಕೂಲಿಗಾಗಿ ದಿನವಿಡೀ ದುಡಿಯುತ್ತಿದ್ದ ಮಹಿಳೆಯರು ಇಂದು ಮನೆಯಲ್ಲೇ ಕುಳಿತು ದಿನಕ್ಕೆ 300ರಿಂದ400 ರೂಪಾಯಿವರೆಗೂ ಸಂಪಾದನೆ ಮಾಡುತ್ತಿದ್ದಾರೆ. ಇದೇ ನಿಜವಾದ ಬದಲಾವಣೆ ಎನ್ನುತ್ತಾರೆ ಶ್ರಿಯಾ.
 
‘ಬಿ.ಇ. ಪದವಿ ಪಡೆದ ಬಳಿಕ ನಾನು ಕೈತುಂಬಾ ಸಂಬಳ ಬರುವ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡು ಆರಾಮಾಗಿ ಇರಬಹುದಿತ್ತು. ಆದರೆ ಚಿಕ್ಕ ವಯಸ್ಸಿನಿಂದಲೂ ಹಳ್ಳಿಗಳಲ್ಲಿ ಬೆಳೆದಿದ್ದರಿಂದ ಅಲ್ಲಿನ ಮಹಿಳೆಯರ ಕಷ್ಟಗಳನ್ನು ತಿಳಿದಿದ್ದೆ. ಹಾಗೂ ಅವರಲ್ಲಿರುವ ಕಲೆಯ ಕುರಿತು ಅರಿತಿದ್ದೆ. ಅವರನ್ನು ಮುಖ್ಯವಾಹಿನಿಗೆ ತಂದು, ಅವರ ಜೀವನವನ್ನು ಉತ್ತಮಪಡಿಸಬೇಕು ಎಂದು ಅಂದು ನಿರ್ಧರಿಸಿದ್ದೆ. ಇಂದು ಆ ಕನಸು ಸಾಕಾರಗೊಂಡಿದೆ’ ಎಂದು ಶ್ರಿಯಾ ಹೆಮ್ಮೆಯಿಂದ ಹೇಳುತ್ತಾರೆ. Shriya.rangarajan@gmail.com
 
ರತುಲ್ ನರೇನ್
ಭಾರತದಲ್ಲಿ ನವಜಾತಶಿಶು ಮರಣಸಂಖ್ಯೆ ಏರಿಕೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಕೇಂದ್ರಗಳು ಇಲ್ಲದಿರುವುದು ಮತ್ತು ಪೋಷಕರ ಅಜ್ಞಾನವೇ ಇದಕ್ಕೆ ಕಾರಣ ಎನ್ನುತ್ತಾರೆ ರತುಲ್ ನರೇನ್. ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ರತುಲ್ ನರೇನ್, ‘ಬಿಂಪು’ ಎಂಬ ಸಂಸ್ಥೆ ಸ್ಥಾಪಿಸುವ ಮೂಲಕ ನವಜಾತ ಶಿಶುಗಳನ್ನು ಆರೈಕೆ ಮಾಡುತ್ತಿದ್ದಾರೆ.

ಈ ಬಿಂಪು ಫೌಂಡೇಶನ್, ಶಿಶುಗಳಿಗಾಗಿ ‘ಮಥಾಯಿ’ ಎಂಬ ಆರೋಗ್ಯ ಕಿಟ್ ಅನ್ನು ತಯಾರಿಸುತ್ತಿದೆ. ತೊಟ್ಟಿಲು ಮಾದರಿಯಲ್ಲಿರುವ ಈ ಕಿಟ್‌ನಲ್ಲಿ ಎಲ್ಲ ರೀತಿಯ ವೈದ್ಯಕೀಯ ಸಾಮಗ್ರಿಗಳು ಇರುತ್ತವೆ ಹಾಗೂ ಇದಕ್ಕೆ ‘ಏರ್ ಕೂಲರ್’ ಅಳವಡಿಸಲಾಗಿರುತ್ತದೆ. ಹುಟ್ಟಿದ ಶಿಶುವನ್ನು ಇದರ ಒಳಗೆ ಹಾಕುವುದರಿಂದ ಮಗುವಿಗೆ ಯಾವುದೇ ತೊಂದರೆ ಆಗುವುದಿಲ್ಲ ಎನ್ನುತ್ತಾರೆ ರತುಲ್.

ಉದಾಹರಣೆಗೆ, 35 ರಿಂದ 40 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಮಗು ಜನಿಸಿದರೆ ಆ ಉಷ್ಣತೆಯನ್ನು ನವಜಾತಶಿಶು ತಡೆದುಕೊಳ್ಳುವುದಿಲ್ಲ. ಇಂತಹ ಸಂದರ್ಭದಲ್ಲಿ ಶಿಶುವನ್ನು ವೆಂಟಿಲೇಟರ್‌ನಲ್ಲಿ ಇಡಬೇಕಾಗುತ್ತದೆ. ಗ್ರಾಮೀಣ ಭಾಗದಲ್ಲಿ ಈ ಸೌಲಭ್ಯಗಳು ಇರುವುದಿಲ್ಲ.

ಇಂತಹ ಸಂದರ್ಭಗಳಲ್ಲಿ ಮಗು ಸಾವನ್ನಪ್ಪುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇದನ್ನು ಮನಗಂಡು ಮಥಾಯಿ ಕಿಟ್ ತಯಾರಿಸಿರುವುದಾಗಿ ರತುಲ್  ಹೇಳುತ್ತಾರೆ. 2000 ರೂಪಾಯಿಗೆ ದೊರೆಯುವ ಈ ಕಿಟ್‌ನಲ್ಲಿ ಮಗುವಿಗೆ ಅಗತ್ಯವಾಗಿ ನೀಡಬೇಕಾಗಿರುವ ಲಸಿಕೆಗಳು ಇರುತ್ತವೆ.

ರತುಲ್ ಓದಿದ್ದು ಬಯೋ ಕೆಮಿಕಲ್ ಪದವಿ. ಇವರ ತಂದೆ ವಿಶ್ವಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರ ಜತೆ ಅಭಿವೃದ್ಧಿ ಹೊಂದುತ್ತಿರುವ ದೇಶ ಮತ್ತು ಬಡ ರಾಷ್ಟ್ರಗಳನ್ನು ಸುತ್ತುವ ಅವಕಾಶ ಲಭಿಸಿತ್ತು.

ಬಡ ದೇಶಗಳಲ್ಲಿ ವೈದ್ಯಕೀಯ ಸೇವೆ ಇಲ್ಲದೆ ಶಿಶುಗಳು ಸಾವನ್ನಪ್ಪುತ್ತಿರುವ ಘಟನೆಗಳು ರತುಲ್ ಅವರ ಮನಕಲಕಿತ್ತು. ನಂತರದ ದಿನಗಳಲ್ಲಿ ಅವರು ಬಿಂಪು ಫೌಂಡೇಶನ್ ಸ್ಥಾಪಿಸಿ ನವಜಾತ ಶಿಶುಗಳ ಆರೈಕೆ ಮಾಡುವ ಕೆಲಸವನ್ನು ಆರಂಭಿಸಿದರು. ಈ ಸಂಸ್ಥೆ ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆ.    www.bimpu.com

ಮನು ಪ್ರಕಾಶ್

ತಂತ್ರಜ್ಞಾನ ಅಂದರೆ ಬಹಳ ದುಬಾರಿ ಎನ್ನುವ ಪ್ರತೀತಿ ಇದೆ. ಉದಾಹರಣೆಗೆ ಹೇಳುವುದಾದರೆ, ಇಂದಿನ ವೈದ್ಯಕೀಯ ಕ್ಷೇತ್ರದಲ್ಲಿ, ಮನುಷ್ಯ ಕಾಯಿಲೆ ಬಿದ್ದಾಗ ಅವನ ರಕ್ತವನ್ನು ಪರೀಕ್ಷೆ ಮಾಡಿ ಅವನಿಗೆ ಯಾವ ರೋಗ ಬಂದಿದೆ ಎಂದು ಪತ್ತೆಹಚ್ಚಲು ಸಾವಿರಾರು ರೂಪಾಯಿ ಖರ್ಚು ಮಾಡಬೇಕು. ಇದೇ ತಂತ್ರಜ್ಞಾನದ ಮೂಲಕ ಕೇವಲ 60 ರೂಪಾಯಿಗಳಲ್ಲಿ ರಕ್ತವನ್ನು ಪರೀಕ್ಷಿಸಬಹುದು ಎಂದು ಯುವ ವಿಜ್ಞಾನಿ ಮನು ಪ್ರಕಾಶ್ ತೋರಿಸಿಕೊಟ್ಟಿದ್ದಾರೆ.

ಹೌದು. ಅಮೆರಿಕದಲ್ಲಿ ನೆಲೆಸಿರುವ ಮನುಪ್ರಕಾಶ್ ಸ್ಥಳೀಯ ವಿಶ್ವವಿದ್ಯಾಲಯವೊಂದರಲ್ಲಿ ಅಧ್ಯಾಪಕರಾಗಿ ಬೋಧನೆ ಮಾಡುತ್ತಿದ್ದಾರೆ. ಕೇವಲ 60 ರೂಪಾಯಿ ವೆಚ್ಚದಲ್ಲಿ ಮೈಕ್ರೋಸ್ಕೋಪ್ ತಯಾರಿಸಿದ ಹೆಗ್ಗಳಿಕೆ ಇವರದ್ದು. ಕಾಗದ, ಬ್ಯಾಟರಿ ಮತ್ತು ಮಸೂರಗಳನ್ನು ಬಳಸಿ ಹತ್ತು ನಿಮಿಷಗಳಲ್ಲಿ ಮೈಕ್ರೋಸ್ಕೋಪ್ ವಿನ್ಯಾಸ ಮಾಡಬಹುದು. ಮಲೇರಿಯಾ ವೈರಾಣುಗಳನ್ನು ಈ ಕಾಗದದ ಮೈಕ್ರೋಸ್ಕೋಪ್ ಮೂಲಕ ಸುಲಭವಾಗಿ ಪತ್ತೆ ಹಚ್ಚಬಹುದು ಎಂದು ಮನು ಪ್ರಕಾಶ್ ಹೇಳುತ್ತಾರೆ.
 


ಅಧ್ಯಾಪಕ ವೃತ್ತಿಯ ಜತೆಗೆ ಕಡಿಮೆ ವೆಚ್ಚದಲ್ಲಿ ದುಬಾರಿ ಮೊತ್ತದ ಸಾಧನಗಳನ್ನು ತಯಾರಿಸುವ ಕಲಿಕೆಯಲ್ಲಿ ಮನುಪ್ರಕಾಶ್ ನಿರತರಾಗಿದ್ದಾರೆ. ಈಗಾಗಲೇ ಮೈಕ್ರೋಫ್ಲೂಡಿಕ್ ಲ್ಯಾಬ್ ಅನ್ನು ಕೇವಲ 500 ರೂಪಾಯಿ ವೆಚ್ಚದಲ್ಲಿ ವಿನ್ಯಾಸ ಮಾಡಿದ್ದಾರೆ. ಈ ಸಂಶೋಧನೆಗೆ ಅಮೆರಿಕ ಸರ್ಕಾರ ಯುವ ವಿಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಸ್ತುತ ಮನು ಪ್ರಕಾಶ್, ನೀರಿನ ಹನಿಗಳ ಮೂಲಕ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ ಕೆಲಸ ಮಾಡುವಂತಹ ಸಂಶೋಧನೆ ನಡೆಸುತ್ತಿದ್ದಾರೆ.

ಮನು ಪ್ರಕಾಶ್  ಅಮೆರಿಕದಲ್ಲಿ ‘ಫ್ರಗಲ್ ಸೈನ್ಸ್’ ಎಂಬ ಚಳವಳಿ ಹುಟ್ಟುಹಾಕಿದ್ದಾರೆ.  ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆ ಕುರಿತಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಈ ಚಳವಳಿಯ ಉದ್ದೇಶ ಎನ್ನುತ್ತಾರೆ. ಶಾಲಾ  ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ  ಕಡಿಮೆ ವೆಚ್ಚದಲ್ಲಿ ಸಂಶೋಧನಾ ಅಥವಾ ವೈದ್ಯಕೀಯ ಉಪಕರಣಗಳನ್ನು ತಯಾರಿಸುವುದು ಹೇಗೆ ಎಂಬುದನ್ನು  ಪ್ರಾತ್ಯಕ್ಷಿಕೆಗಳ ಮೂಲಕ ತೋರಿಸಿಕೊಡುತ್ತಿದ್ದಾರೆ.
www.facebook/manuprakash/frudelscience

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT