ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಜಿಡಿಪಿ ಶೇ 6.9ಕ್ಕೆ ಕುಸಿತ

ಬರ, ನೋಟು ರದ್ದತಿ ಪರಿಣಾಮ * ಕೈಗಾರಿಕೆ, ಸೇವಾ ವಲಯದ ಪ್ರಗತಿ ಕುಂಠಿತ
Last Updated 15 ಮಾರ್ಚ್ 2017, 19:58 IST
ಅಕ್ಷರ ಗಾತ್ರ

ಬೆಂಗಳೂರು:  ಎರಡು ವರ್ಷಗಳಿಂದ ನಿರಂತರ ಬರಗಾಲ ಮತ್ತು ನೋಟು ರದ್ದತಿಯ ಪರಿಣಾಮ 2016–17ನೇ ಸಾಲಿನ ರಾಜ್ಯದ ಆರ್ಥಿಕ ಪ್ರಗತಿ ಶೇ 0.4ರಷ್ಟು ಕುಸಿಯಲಿದೆ  ಎಂದು ಆರ್ಥಿಕ ಸಮೀಕ್ಷೆ ಅಂದಾಜಿಸಿದೆ. 

2015–16ರಲ್ಲಿ  ಶೇ 7.3ರಷ್ಟಿದ್ದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) 2016–17ರಲ್ಲಿ ಶೇ 6.9ಕ್ಕೆ ಕುಸಿಯುವ ಮೂಲಕ ₹8,71,995 ಕೋಟಿಗೆ ತಲುಪುವ ಮುನ್ಸೂಚನೆ ಇದೆ. ಕೈಗಾರಿಕಾ  ಮತ್ತು ಸೇವಾ ವಲಯದ ಬೆಳವಣಿಗೆ ಕುಂಠಿತಗೊಂಡಿರುವುದೇ  ಇದಕ್ಕೆ ಮುಖ್ಯ ಕಾರಣ ಎಂದು  ಸಮೀಕ್ಷೆ ಹೇಳಿದೆ. 

ನೋಟು ರದ್ದತಿಯಿಂದ ಆರ್ಥಿಕ ಚಟುವಟಿಕೆಗಳು ಕುಂಠಿತಗೊಂಡಿದ್ದು ಆರ್ಥಿಕ ಶಿಸ್ತು, ಸಂಪನ್ಮೂಲ ಸಂಗ್ರಹದಿಂದ ನಷ್ಟ ತುಂಬಿಕೊಳ್ಳಲಾಗಿದೆ. ಆ ಮೂಲಕ ರಾಜ್ಯದ ಆರ್ಥಿಕ ವ್ಯವಸ್ಥೆ ಹಳಿ ತಪ್ಪದಂತೆ  ಎಚ್ಚರ ವಹಿಸಲಾಗಿದೆ ಎಂದು ಸಮೀಕ್ಷೆ ಹೇಳಿದೆ.

ವಿತ್ತೀಯ ಕೊರತೆಯ  ನಿಯಂತ್ರಣ: ಸದ್ಯಕ್ಕೆ ರಾಜ್ಯದ ಆರ್ಥಿಕ ಸ್ಥಿತಿ ಬಲಿಷ್ಠ ಮತ್ತು ಸ್ಥಿರವಾಗಿದ್ದು ವಿತ್ತೀಯ ನಿರ್ವಹಣೆ ಸಮರ್ಪಕವಾಗಿದೆ. ವಿತ್ತೀಯ ಕೊರತೆ ಶೇ 2.79 ರಿಂದ  ಶೇ 2.12ಕ್ಕೆ ಇಳಿಯಲಿದೆ.  ತೆರಿಗೆ  ಸಂಗ್ರಹ ವಿಷಯದಲ್ಲಿ ರಾಜ್ಯ ಉತ್ತಮ ಸ್ಥಾನದಲ್ಲಿದೆ ಎಂದು ಸಮೀಕ್ಷೆ ಹೇಳಿದೆ.

ಕಳೆದ ಸಾಲಿನಲ್ಲಿ ಶೇ 4.9ರಷ್ಟಿದ್ದ ಕೈಗಾರಿಕಾ ಪ್ರಗತಿಯು ಪ್ರಸಕ್ತ ವರ್ಷ ಶೇ 2.2ಕ್ಕೆ ಮತ್ತು ಅದೇ ರೀತಿ  ಸೇವಾ ವಲಯ ಶೇ 10.4 ರಿಂದ ಶೇ 8.5ಕ್ಕೂ ಕುಸಿಯುವ ನಿರೀಕ್ಷೆ ಇದೆ. ಗಣಿಗಾರಿಕೆ, ನಿರ್ಮಾಣ, ವಿದ್ಯುತ್‌, ಅನಿಲ, ತಯಾರಿಕಾ ವಲಯದ ಬೆಳವಣಿಗೆ ದರ ಶೇ 2.2ಕ್ಕೆ ಇಳಿಯಲಿದೆ.

ಆಹಾರಧಾನ್ಯ ಉತ್ಪಾದನೆ ಕುಂಠಿತ: ಈ ವರ್ಷವೂ ರಾಜ್ಯದಲ್ಲಿ ಬರಗಾಲ ಛಾಯೆ ಆವರಿಸಿದ್ದು, ಆಹಾರಧಾನ್ಯಗಳ  ಉತ್ಪಾದನೆ 96.44 ಲಕ್ಷ ಟನ್‌ಗಳಿಂದ 91.54 ಲಕ್ಷ ಟನ್‌ಗಳಿಗೆ ಇಳಿಯುವ ಸಾಧ್ಯತೆ ಇದೆ. ಆದರೆ, ಕೃಷಿ ವಲಯ ಶೇ 1.5ರಷ್ಟು ಪ್ರಗತಿ ಸಾಧಿಸುವ ನಿರೀಕ್ಷೆ ಇದ್ದು, ತೊಗರಿ, ತರಕಾರಿ ಮತ್ತು ಹಣ್ಣುಗಳ ಉತ್ಪಾದನೆ ಹೆಚ್ಚುವ ನಿರೀಕ್ಷೆ ಇದೆ.  

ಮಕ್ಕಳ ಲಿಂಗಾನುಪಾತ ಕುಸಿತ: ಜನನ ಮತ್ತು ಮರಣ ಪ್ರಮಾಣದಲ್ಲಿ  ಇಳಿಮುಖವಾಗಿದ್ದು, ಜನಸಂಖ್ಯೆಯಲ್ಲಿ  ಬದಲಾವಣೆಗೆ ಕಾರಣವಾಗಿದೆ. 2001–2011 ಅವಧಿಯಲ್ಲಿ ಮಕ್ಕಳ ಲಿಂಗಾನುಪಾತದಲ್ಲಿ ಇಳಿಕೆಯಾಗಿರುವುದು ಗಮನಾರ್ಹವಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ 22, ದಾವಣಗೆರೆಯಲ್ಲಿ ಶೇ 15, ಚಿತ್ರದುರ್ಗದಲ್ಲಿ ಶೇ 13ರಷ್ಟು ಮಕ್ಕಳ ಲಿಂಗಾನುಪಾತ ಕಡಿಮೆಯಾಗಿದೆ.

ಎಫ್‌ಡಿಐಗೆ ನೆಚ್ಚಿನ ತಾಣ: ವಿದೇಶಿ ನೇರ ಬಂಡವಾಳ ಹೂಡಿಕೆಗೆ ದೇಶದ ಐದು ಪ್ರಶಸ್ತ ತಾಣಗಳಲ್ಲಿ ಕರ್ನಾಟಕವೂ ಒಂದಾಗಿದೆ.

2015–16ರಲ್ಲಿ ಭಾರತಕ್ಕೆ ಹರಿದು ಬಂದ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಶೇ 10.30ರಷ್ಟು ಬಂಡವಾಳ ಪಡೆದುಕೊಳ್ಳಲು ಸಫಲವಾಗಿದೆ. 2015–16ರಲ್ಲಿ ಸಾಫ್ಟ್‌ವೇರ್ ಸೇವಾ ವಲಯದಲ್ಲಿ ಒಟ್ಟು ₹3,25,414 ಕೋಟಿ  ರಫ್ತು ಮಾಡುವ ಮೂಲಕ  ಕರ್ನಾಟಕ  (ಶೇ 36.96) ಅಗ್ರ ಸ್ಥಾನದಲ್ಲಿದೆ.

ರಫ್ತು ವಹಿವಾಟಿಗೆ ಕರ್ನಾಟಕ ₹2.20ಲಕ್ಷ ಕೋಟಿ ಕೊಡುಗೆ ನೀಡಿದೆ. ರಾಜ್ಯದ ಒಟ್ಟು ಜಿಡಿಪಿಗೆ ಸಾಫ್ಟ್‌ವೇರ್‌ ಉದ್ಯಮ ಶೇ 25ಕ್ಕೂ ಹೆಚ್ಚಿನ ಕೊಡುಗೆ ನೀಡುತ್ತಿದೆ.

ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) (ಕೋಟಿ ₹ ಗಳಲ್ಲಿ)

* 6.9 % 2016–17ರಲ್ಲಿ ರಾಜ್ಯದ ಜಿಡಿಪಿ ಅಂದಾಜು

* 0.4%ರಷ್ಟು ಕುಸಿತ

* 7.3% 2014–15ರಲ್ಲಿನ ರಾಜ್ಯದ ಜಿಡಿಪಿ

ಕೈಗಾರಿಕಾ ಸೂಚ್ಯಂಕ

* 185.79 2015–16ರಲ್ಲಿ ಕೈಗಾರಿಕಾ ಪ್ರಗತಿ

* 182.46 2014–15ರಲ್ಲಿ ಕೈಗಾರಿಕಾ ಪ್ರಗತಿ

ರಾಜ್ಯದ ಚಿತ್ರಣ

* ಶೇ 14.91 ರಾಜ್ಯದಲ್ಲಿ ಮಹಿಳಾ ಪ್ರಧಾನ ಕುಟುಂಬ

* 0–6ವರ್ಷದ ವಯಸ್ಸಿನ ಮಕ್ಕಳ  ಸಂಖ್ಯೆ ಶೇ 2.30ರಷ್ಟು ಕಡಿಮೆ

* ಉದ್ಯೋಗ ಸೃಷ್ಟಿ ಮುಂಚೂಣಿಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರ

* 10 ಲಕ್ಷ ಜನರಿಗೆ ನೇರ ಮತ್ತು 30 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ

* ರಾಷ್ಟ್ರದ ಸರಾಸರಿಗಿಂತ ರಾಜ್ಯದ ಸಾಕ್ಷರತಾ ಪ್ರಮಾಣದಲ್ಲಿ ಹೆಚ್ಚಳ

* ನಿರುದ್ಯೋಗ ದರ ಶೇ 1.4. ದೇಶದ ಸರಾಸರಿಗಿಂತಲೂ ಕಡಿಮೆ

* ಸಾಕ್ಷರತೆ ಪಟ್ಟಿಯಲ್ಲಿ ರಾಜ್ಯಕ್ಕೆ 9ನೇ ಸ್ಥಾನ

ಏನಿದು ಆರ್ಥಿಕ ಸಮೀಕ್ಷೆ?
ಅರ್ಥ ವ್ಯವಸ್ಥೆಯ ವಿವಿಧ  ವಲಯಗಳಲ್ಲಿನ ಸಮಗ್ರ ಪ್ರಗತಿಯನ್ನು ಅಳೆಯುವ ಮತ್ತು ಮೌಲ್ಯಮಾಪನ ಮಾಡುವ ವರದಿಯೇ ಆರ್ಥಿಕ ಸಮೀಕ್ಷೆ.

ಅರ್ಥ ವ್ಯವಸ್ಥೆಯ ಸ್ಥೂಲ ಚಿತ್ರಣ, ಆರ್ಥಿಕ ನೀತಿ ಮತ್ತು ಜಾರಿಗೆ ತಂದಿರುವ ಅಭಿವೃದ್ಧಿ ಕಾರ್ಯಕ್ರಮಗಳ ಸಮಗ್ರ ದತ್ತಾಂಶ ಮತ್ತು ಮಾಹಿತಿಯನ್ನು ಈ ಆರ್ಥಿಕ ಸಮೀಕ್ಷೆ ಒಳಗೊಂಡಿರುತ್ತದೆ. ಈ ಬಾರಿಯ ಕರ್ನಾಟಕ ಆರ್ಥಿಕ ಸಮೀಕ್ಷೆಯಲ್ಲಿ ಇದೇ ಮೊದಲ ಬಾರಿಗೆ ಹೊಸದಾಗಿ ಕ್ಷಿಪ್ರ ಚಿತ್ರಣ ನೀಡಲು ‘ಸಂಕ್ಷಿಪ್ತ ನೋಟ’ ಎಂಬ ಪ್ರತ್ಯೇಕ ವಿಭಾಗ ಸೇರಿಸಲಾಗಿದೆ. ಬೆರಳತುದಿಯಲ್ಲಿ ಅಂಕಿ, ಅಂಶ ಬಯಸುವರಿಗೆ ಇದು ಉಪಯುಕ್ತವಾಗಿದ್ದು ಪಕ್ಷಿನೋಟ ನೀಡುತ್ತದೆ. 
ಹೂಡಿಕೆದಾರರು, ನೀತಿ  ನಿರೂಪಕರು, ಉದ್ಯಮಿಗಳು, ಸಂಶೋಧಕರು, ಆರ್ಥಿಕ ತಜ್ಞರು, ಸಂಶೋಧಕರಿಗೆ ಆರ್ಥಿಕ ಸಮೀಕ್ಷೆಯು ಮಾಹಿತಿಯ ಕಣಜದಂತೆ ಕೆಲಸ ಮಾಡುತ್ತದೆ.

ವಿದ್ಯುತ್‌ ಕೊರತೆ
ಹೆಚ್ಚುತ್ತಿರುವ ಬೇಡಿಕೆಯಿಂದ ರಾಜ್ಯ ವಿದ್ಯುತ್‌ ಕೊರತೆ ಎದುರಿಸುತ್ತಿದೆ. ನೈಸರ್ಗಿಕ ಇಂಧನ ಮೂಲ ಮತ್ತು ಸಾಂಪ್ರದಾಯಿಕ ಇಂಧನ ಮೂಲಗಳಿಂದ ವಿದ್ಯುತ್‌ ಉತ್ಪಾದನೆಗೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಉತ್ತೇಜನ ನೀಡಲು ಹಲವಾರು ಯೋಜನೆ ರೂಪಿಸಲಾಗಿದೆ ಎಂದೂ ಆರ್ಥಿಕ ಸಮೀಕ್ಷೆಯಲ್ಲಿ ಅಭಿಪ್ರಾಯಪಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT