ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೆ ಸರಿಯದಿರಿ

Last Updated 17 ಮಾರ್ಚ್ 2017, 20:19 IST
ಅಕ್ಷರ ಗಾತ್ರ

ನಮ್ಮಲ್ಲಿ ‘ಬೇರ್‌ ಮೆಟಲ್‌ ಸ್ಟೆಂಟ್‌’ ಮತ್ತು ‘ಡ್ರಗ್‌ ಎಲ್ಯೂಟಿಂಗ್‌ ಸ್ಟೆಂಟ್’ ಎಂಬ ಎರಡು ರೀತಿಯ ಸ್ಟೆಂಟ್‌ಗಳು ಹೆಚ್ಚಾಗಿ ಬಳಕೆ ಆಗುತ್ತಿವೆ. ಅದರಲ್ಲೂ ಡ್ರಗ್‌ ಎಲ್ಯೂಟಿಂಗ್‌ ಸ್ಟೆಂಟ್‌ಗಳು ಶೇ 95ರಷ್ಟು ಬಳಕೆಯಾಗುತ್ತಿವೆ. ಈ ಸ್ಟೆಂಟ್‌ಗಳ ದರ ಇಳಿಸುವ ಮೂಲಕ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.

ಸ್ಟೆಂಟ್‌ಗಳನ್ನು ಉತ್ಪಾದಿಸುವ ದೇಶಿ ಉದ್ಯಮಗಳೂ ಇವೆ. ಹಲವು ಬಹುರಾಷ್ಟ್ರೀಯ ಕಂಪೆನಿಗಳೂ ಇವೆ. ಬೆಲೆ ಕಡಿಮೆ ಮಾಡುವುದರಿಂದ ಸ್ಟೆಂಟ್‌ಗಳ ಗುಣಮಟ್ಟದ ಮೇಲೆ ಪರಿಣಾಮ ಉಂಟಾಗಬಹುದು ಎನ್ನುವುದು ಅವುಗಳನ್ನು ತಯಾರಿಸುವ ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳ ವಾದ.

ತಯಾರಕರಿಂದ ಗ್ರಾಹಕರಿಗೆ ಮಧ್ಯವರ್ತಿಗಳ ಮೂಲಕ ತಲುಪುವಷ್ಟರಲ್ಲಿ ಸ್ಟೆಂಟ್‌ಗಳ ಬೆಲೆ ಹಲವು ಪಟ್ಟು ಏರಿರುತ್ತಿತ್ತು. ಅದರಲ್ಲೂ ದೊಡ್ಡ ಆಸ್ಪತ್ರೆಗಳು ಸ್ಟೆಂಟ್‌ ಬೆಲೆಯನ್ನು ಶೇ 11ರಿಂದ ಶೇ 654ರಷ್ಟು ಹೆಚ್ಚಿಗೆ ನಿಗದಿಪಡಿಸುತ್ತಿದ್ದವು.

ಅಬೋಟ್‌ ಎಂಬ ಬಹುರಾಷ್ಟ್ರೀಯ ಕಂಪೆನಿ ಉತ್ಪಾದಿಸುವ ಸ್ಟೆಂಟ್‌ಗಳಿಗೆ ₹ 17 ಸಾವಿರದಿಂದ ₹ 25 ಸಾವಿರ ಬೆಲೆ ಇದೆ. ಆದರೆ, ಹೃದ್ರೋಗಿಯ ಎದೆಯೊಳಗೆ ಸೇರುವಷ್ಟರಲ್ಲಿ ಅದರ ಬೆಲೆ ₹ 65 ಸಾವಿರದಿಂದ ₹ 1.50 ಲಕ್ಷ ಆಗುತ್ತಿತ್ತು.

ದೆಹಲಿಯ ಒಂದು ಆಸ್ಪತ್ರೆಯಲ್ಲಿ ₹ 50 ಸಾವಿರಕ್ಕೆ ಲಭ್ಯವಾಗುತ್ತಿದ್ದ ಮೆರಿಲ್‌ ಎಂಬ ಕಂಪೆನಿ ತಯಾರಿಸುವ ಸ್ಟೆಂಟ್‌ಗೆ ಅದೇ ಊರಿನ ಇನ್ನೊಂದು ಆಸ್ಪತ್ರೆಯಲ್ಲಿ ₹ 1 ಲಕ್ಷ  ಬೆಲೆ ಇತ್ತು.  ಆಸ್ಪತ್ರೆಯಿಂದ ಆಸ್ಪತ್ರೆಗೆ ಈ ರೀತಿಯ ಬೆಲೆ ವ್ಯತ್ಯಾಸ ವಿಪರ್ಯಾಸ ಅಲ್ಲವೇ?

ಇದನ್ನು ಗಂಭೀರವಾಗಿ ಪರಿಗಣಿಸಿ ಮತ್ತು ಸ್ಟೆಂಟ್‌ಗಳಿಗೆ ಬೇಡಿಕೆ ಹೆಚ್ಚುತ್ತಿದ್ದುದರಿಂದ ಸರ್ಕಾರ ಬೆಲೆ ಕಡಿಮೆ ಮಾಡಲು ಮುಂದಾಗಿದ್ದು ಒಳ್ಳೆಯ ಬೆಳವಣಿಗೆ.
ವಿಶೇಷವೆಂದರೆ, ಖಾಸಗಿ ಆಸ್ಪತ್ರೆಗಳಲ್ಲಿ ಒಮ್ಮೆ ಸ್ಟೆಂಟ್‌ ಅಳವಡಿಸಿದರೆ ತಗಲುವ ಒಟ್ಟು ವೆಚ್ಚದಲ್ಲಿ ಸ್ಟೆಂಟ್‌ ಬೆಲೆಯೇ ಶೇ 70ರಿಂದ 90ರಷ್ಟು ಇರುತ್ತಿತ್ತು.

ಅದೇ ಸರ್ಕಾರಿ ಆಸ್ಪತ್ರೆಯಲ್ಲಿ ಶೇ 20ರಿಂದ 40ರಷ್ಟು ಮಾತ್ರ ಇರುತ್ತದೆ. ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಅತ್ಯಾಧುನಿಕ ಸೌಲಭ್ಯದಲ್ಲಿ ಚಿಕಿತ್ಸೆ ನೀಡುವ ಆಸ್ಪತ್ರೆಗಳು ಸ್ಟೆಂಟ್‌ ಬೆಲೆಯನ್ನು ಅತಿಯಾಗಿ ಹೆಚ್ಚಿಸುತ್ತಿದ್ದುದಕ್ಕೆ ಇದು ನಿದರ್ಶನ.

ಸ್ಟೆಂಟ್‌ ಬೆಲೆ ನಿಯಂತ್ರಣಕ್ಕೆ ಖಾಸಗಿ ಆಸ್ಪತ್ರೆಗಳು ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿವೆ. ಆದರೆ ಅಭಿವೃದ್ಧಿಯಲ್ಲಿ ಮುಂದುವರಿದ ದೇಶವಾದ ಜರ್ಮನಿ, ಯುರೋಪ್‌ನಲ್ಲಿ ಸ್ಟೆಂಟ್‌ ಬೆಲೆ ಕಡಿಮೆ ಇದೆ.

ಸ್ಟೆಂಟ್‌ ಒಂದೇ ಅಲ್ಲ, ಮೂಳೆಗಳ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಅಳವಡಿಸಲಾಗುವ ಉಪಕರಣಗಳ ಬೆಲೆಯನ್ನೂ ಕಡಿಮೆ ಮಾಡಬೇಕಾದ ಅಗತ್ಯವಿದೆ.
ಸರ್ಕಾರ ಈಗ ತೆಗೆದುಕೊಂಡಿರುವ ಬೆಲೆ ನಿಯಂತ್ರಣ ನಿರ್ಧಾರ ಸಮರ್ಥನೀಯವಾಗಿದೆ. ಇದರಿಂದ ಹಿಂದೆ ಸರಿಯಲೇಬಾರದು.


-ಗೋಪಾಲ ದಾಬಡೆ
ಅಧ್ಯಕ್ಷ, ಡ್ರಗ್‌ ಆ್ಯಕ್ಷನ್‌ ಫೋರಂ ಕರ್ನಾಟಕ

*
ಉಳಿಯಬೇಕಿದೆ
ವ್ಯವಸ್ಥೆ ಸರಿಪಡಿಸುವ ದಿಕ್ಕಿನಲ್ಲಿ ಇದು ಒಳ್ಳೆಯ ನಡೆ. ಹಾಗೆಂದು ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶ ಇದ್ದದ್ದೆ. ಈ ನೀತಿಯ ಪರಿಣಾಮ ತಿಳಿಯಲು ಇನ್ನೂ ಒಂದು ವರ್ಷ ಕಾಯಬೇಕು. ಅದೇ ಸಂದರ್ಭದಲ್ಲಿ ಹೆಲ್ತ್‌ ಕೇರ್‌ ಉದ್ಯಮಗಳೂ ಉಳಿಯಬೇಕಿದೆ. ಸರ್ಕಾರ ಈ ನಿಟ್ಟಿನಲ್ಲೂ ಯೋಚಿಸಬೇಕು.


ಡಾ. ಎನ್‌.ಎಸ್‌.ಹೀರೇಗೌಡರ, ಹೃದ್ರೋಗ ತಜ್ಞ

*
ನಾವು ಕೈಗೊಂಬೆಗಳು
ಸ್ಟೆಂಟ್‌ಗಳ ಕೃತಕ ಅಭಾವ ಉಂಟಾಗಿರುವುದು ಸುದ್ದಿಯಾಗಿದೆ. ಅಂಥ ಕೃತ್ಯದ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ರವಾನೆಯಾಗುತ್ತಿದ್ದಂತೆ ಪರಿಸ್ಥಿತಿ ಸುಧಾರಣೆಯಾಗಿದೆ. ಆದರೆ ಬೆಲೆ ನಿಯಂತ್ರಣದ ವಿಷಯದಲ್ಲಿ ನಾವು ಕೈಗೊಂಬೆಗಳು. ನಮಗೆ ಯಾವುದೇ ಅಧಿಕಾರ ಇಲ್ಲ.
-ಭಾಗೋಜಿ ಟಿ. ಖಾನಾಪುರೆ, ರಾಜ್ಯ ಔಷಧ ನಿಯಂತ್ರಕ

*


ಅವೈಜ್ಞಾನಿಕ
ಬೆಲೆ ನಿಗದಿ ಒಳ್ಳೆಯದೆ. ಆದರೆ, ಈಗಿನದು ಅವೈಜ್ಞಾನಿಕ ನಿರ್ಧಾರ. ತಾಂತ್ರಿಕತೆ ಹಾಗೂ ಗುಣಮಟ್ಟಕ್ಕೆ ತಕ್ಕಂತೆ ಬೆಲೆ ನಿಗದಿ ಮಾಡಬೇಕು.
-ಡಾ. ಕೆ.ಎಸ್‌.ರವೀಂದ್ರನಾಥ್‌,
ಕುಲಪತಿ, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ

*
ಬೆಲೆ ಪರಿಷ್ಕರಿಸಿ
ಸ್ಟೆಂಟ್‌ಗಳನ್ನು ‘ಬೆಲೆ ನಿಯಂತ್ರಣ’ದ ವ್ಯಾಪ್ತಿಗೆ ತಂದಿರುವುದರಿಂದ ದುಬಾರಿ ದರ ವಿಧಿಸುವುದಕ್ಕೆ ಲಗಾಮು ಬಿದ್ದಿದೆ. ಇದೊಂದು ಉತ್ತಮ ಬೆಳವಣಿಗೆ. ಆದರೆ ನಾವು ಇನ್ನೊಂದು ದೃಷ್ಟಿಯಿಂದಲೂ ನೋಡಬೇಕಿದೆ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಬೆಲೆ ನಿಗದಿಯಿಂದ ರೋಗಿಗಳ ಆಯ್ಕೆ ಸ್ವಾತಂತ್ರ್ಯ ಹರಣವಾಗಿದೆ. ಉನ್ನತ ಗುಣಮಟ್ಟದ ಸ್ಟೆಂಟ್‌ಗಳ ಆಯ್ಕೆ  ರೋಗಿಗಳಿಗೆ ಬಿಟ್ಟ ವಿಚಾರ. ಈಗ ಆಯ್ಕೆಗೆ  ಅವಕಾಶ ಇಲ್ಲದಂತಾಗಿದೆ. 

ಆರೋಗ್ಯ ಸೇವೆಗಳ ಮಹಾನಿರ್ದೇಶಕ (ಡಿಜಿಎಚ್‌ಎಸ್) ಡಾ. ಜಗದೀಶ ಪ್ರಸಾದ್‌ ಅವರು ಸ್ಟೆಂಟ್‌ಗಳಿಗೆ ಮೂರು ರೀತಿಯ ಬೆಲೆ ನಿಗದಿ ಮಾಡಬೇಕು ಎಂದು ಶಿಫಾರಸು ಮಾಡಿದ್ದರು. ಅದನ್ನು ಕೇಂದ್ರ ಸರ್ಕಾರ ಪರಿಗಣಿಸಿಲ್ಲ. ಕೇಂದ್ರದ ನಿರ್ಧಾರದಿಂದ ಹಲವು ರೋಗಿಗಳಲ್ಲಿ ತಲ್ಲಣ ಉಂಟಾಗಿದೆ.

ನಮ್ಮಲ್ಲಿ ಗುಣಮಟ್ಟದ ಸ್ಟೆಂಟ್‌ಗಳು ಸಿಗುತ್ತಿಲ್ಲ ಎಂಬ ಭಾವನೆ ಮೂಡಿದೆ. ಉತ್ತರ ಭಾರತದ ಕೆಲವು ರೋಗಿಗಳು ನೇಪಾಳದ ಕಠ್ಮಂಡುವಿನ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದಾರೆ. ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು. ತಜ್ಞರ ಸಲಹೆ ಪ್ರಕಾರ ಬೆಲೆ ಪರಿಷ್ಕರಣೆ ಮಾಡಬೇಕು.


-ಡಾ. ವಿವೇಕ ಜವಳಿ,
ನಿರ್ದೇಶಕ, ಫೋರ್ಟಿಸ್‌ ಆಸ್ಪತ್ರೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT