ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳಾದರೂ ಮೊಳಕೆ ಒಡೆಯದ ಮೇವಿನ ಬೀಜ

Last Updated 18 ಮಾರ್ಚ್ 2017, 7:11 IST
ಅಕ್ಷರ ಗಾತ್ರ

ತುರುವನೂರು: ಗೋನೂರು ಕೆರೆ ಅಂಗಳದಲ್ಲಿ ಅಂದಾಜು 40 ಎಕರೆ ಪ್ರದೇಶದಲ್ಲಿ ಮೇವಿಗಾಗಿ ಬಿತ್ತನೆ ಮಾಡಿದ್ದ ಕೆಂಪು ಜೋಳದ ಬಿತ್ತನೆ ಬೀಜ ಒಂದು ತಿಂಗಳಾದರೂ ಮೊಳಕೆ ಒಡೆದಿಲ್ಲ.

ಕೆರೆ ಅಂಗಳದ ತೇವಾಂಶದ ಮೇಲೆ ಭರವಸೆ ಇಟ್ಟು ಬಿತ್ತಿದ್ದ ಮೇವಿನ ಬೀಜಗಳು ಮೊಳೆಕೆ ಒಡೆಯಲಿಲ್ಲ. ಎರಡು ತಿಂಗಳಲ್ಲಿ 100 ಟನ್‌ ಮೇವು ಸಿಗಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿದೆ.

ಹಿಂಗಾರು ಮತ್ತು ಮುಂಗಾರು ಕೈಕೊಟ್ಟಿದ್ದರಿಂದ ರೈತರು ಜನ–ಜಾನುವಾರಿಗೆ ಕುಡಿಯುವ ನೀರು, ಮೇವಿನ ಕೊರತೆ ಎದುರಿಸುತ್ತಿದ್ದರು.

ಹೀಗಾಗಿ ಜಿಲ್ಲಾಡಳಿತ ಮತ್ತು ಪಶು ವೈದಕೀಯ ಇಲಾಖೆ ಸಹಯೋಗದಲ್ಲಿ ಗೋನೂರು ಕೆರೆ ಅಂಗಳದಲ್ಲಿ ಫೆಬ್ರುವರಿ 11ರಂದು ಮೇವಿನ ಬೀಜ ಬಿತ್ತನೆಗೆ ಮುಂದಾಯಿತು. ಇದಕ್ಕಾಗಿ ಸ್ಥಳೀಯ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರ ನೆರವು ಪಡೆದಿತ್ತು.

ಮೇವಿನ ಬೀಜ ಬಿತ್ತನೆ ಮಾಡಿ, ಎರಡು ತಿಂಗಳಿಗೆ ಕೊಯ್ಲಾಗುವ ಸಮಯದಲ್ಲಿ ಟನ್‌ ಮೇವಿಗೆ ₹ 1, 500ರಂತೆ ಹಣ ನೀಡಿ ಖರೀದಿಸುವುದಾಗಿ ಮಹಿಳಾ ಸ್ವಸಹಾಯ ಸಂಘಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದೇ ವೇಳೆ ಭೇಟಿ ನೀಡಿದ್ದ ಕೇಂದ್ರ ಬರ ಅಧ್ಯಯನ ತಂಡದ ಸದಸ್ಯರಿಗೂ ಈ ಮೇವು ಬಿತ್ತನೆ ಪ್ರಯೋಗವನ್ನು ತೋರಿಸಲಾಗಿತ್ತು. ಆ ಸಮಯದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ನಿತೇಶ್ ಪಾಟೀಲ್, ‘ತೇವಾಂಶವಿರುವ ಜಾಗದಲ್ಲಿ ಮೇವಿನ ಬೀಜ ಬಿತ್ತನೆ ಮಾಡುತ್ತಾರೆ. ಕೆರೆಯಂಗಳ­ದಲ್ಲಿರುವ ನೀರು ಬಳಸಿಕೊಂಡು ಒಂದು ಹಂತದ ನೀರಿನ ಪೂರೈಕೆ ಮಾಡಲಾಗುತ್ತದೆ’ ಎಂದು ಹೇಳಿದ್ದರು.  ಆದರೆ, ಬೀಜ ಬಿತ್ತನೆ ನಂತರ ತೇವಾಂಶ ಕಡಿಮೆಯಾಯಿತು. ಒಂದು ಬಾರಿಯೂ ನೀರು ಪೂರೈಕೆಯಾಗಲಿಲ್ಲ.

ಈ ಬಗ್ಗೆ ಬಿತ್ತನೆ ಮಾಡಿದ ಗೋನೂರು ನೇತ್ರಾವತಿ, ಕರಿಬಸವೇಶ್ವರ, ಮಾರಿಕಾಂಬಾ, ಬಸವೇಶ್ವರ ಸ್ವ- ಸಹಾಯ ಸಂಘದ ಸದಸ್ಯರನ್ನು ಮಾತನಾಡಿಸಿದಾಗ, ‘15 ಮಹಿಳೆಯರು ಕೆರೆ ಅಂಗಳದ ಒಣ ಭೂಮಿಯಲ್ಲಿ ಮೇವು ಬಿತ್ತನೆ ಮಾಡಿದ್ದರು. ಈವೆರೆಗೂ ಬಿತ್ತನೆ ಮಾಡಿದ ಕೂಲಿಯ ಹಣವನ್ನೂ ನೀಡಿಲ್ಲ. ಮೇವು ಬಿತ್ತನೆ ಮಾಡಿದ ಪ್ರದೇಶಕ್ಕೆ ಸಮರ್ಪಕವಾಗಿ ನೀರು ಪೂರೈಕೆ ಮಾಡಿದರೆ ಮೇವು ಹುಲುಸಾಗಿ ಬೆಳೆಯುತ್ತಿತ್ತು. ಕೇಂದ್ರ ಬರ ಅಧ್ಯಯನ ತಂಡ ಸದಸ್ಯರು ಮತ್ತು ಜಿಲ್ಲೆಯ ಅಧಿಕಾರಿಗಳು ಭೇಟಿ ನೀಡಿದಾಗ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಅಂದಿನಿಂದ ಇಂದಿನವರೆಗೂ ಯಾವ ಅಧಿಕಾರಿಯೂ ಇತ್ತ ಕಡೆ ಗಮನಹರಿಸಿಲ್ಲ’ ಎಂದು ಪ್ರತಿಕ್ರಿಯಿಸಿದರು. 

‘ಒಂದು ಹದ ನೀರು ಕೊಟ್ಟಿದ್ದರೆ ಬಿತ್ತಿದ ಬೀಜಗಳೆಲ್ಲ ಮೊಳೆತು, ಖಂಡಿತವಾಗಿಯೂ ಮೇವು ಲಭ್ಯವಾಗುತ್ತಿತ್ತು’ ಎಂದು ಮಹಿಳಾ ಸ್ವ ಸಹಾಯ ಸಂಘದ ಸದಸ್ಯೆ ಗುಂಡಮ್ಮ ಅಭಿಪ್ರಾಯಪಡುತ್ತಾರೆ.

ಮೇವು ಬೆಳೆಯದಿರುವುದಕ್ಕೆ ತಾಂತ್ರಿಕ ಕಾರಣ ನೀಡಿದ ಪಶುವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಪ್ರಸನ್ನ ಕುಮಾರ್, ‘ಮೇವು ಬಿತ್ತನೆ ಮಾಡುವುದಕ್ಕಿಂತ ಮುಂಚೆ ಟ್ಯಾಕ್ಟರ್‌ನಿಂದ ಉಳುಮೆ ಮಾಡಿಸಿದ್ದರು. ತೇವವಾಗಿದ್ದ ಮಣ್ಣು ಮೇಲಕ್ಕೆ ಬಂದು ಒಣಗಿತು. ಬಿತ್ತನೆ ನಂತರ ನೀರು ಪೂರೈಕೆ ಮಾಡದಿದ್ದರಿಂದ ಬೀಜಗಳು ಮೊಳೆಯಲಿಲ್ಲ’ ಎಂದು ವಿವರಿಸಿದರು.

ಸದ್ಯಕ್ಕೆ ಗೋನೂರು ಕೆರೆ ಅಂಗಳದ ಮೇವಿನ ಕನಸು ಕಮರಿದೆ. ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಉಡುವಳ್ಳಿ ಕೆರೆ, ಮೇಟಿಕುರ್ಕೆ ಕೆರೆ, ಕತ್ತೆಹೊಳೆ ಕೆರೆಗಳಲ್ಲಿ ಬಿತ್ತನೆ ಮಾಡಿರುವ ಮೇವಿನ ಬೀಜಗಳು ಮೊಳಕೆ ಒಡೆದು, ಅರ್ಧ ಅಡಿ ಬೆಳೆದಿವೆ. ಚಳ್ಳಕೆರೆ ತಾಲ್ಲೂಕಿನ ರಾಣಿಕೆರೆ ಕೆರೆಯ 10 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಈ ಭಾಗಗಳಲ್ಲಿ ನೀರನ್ನು ಪೂರೈಸಲಾಗಿದೆ. ಅಲ್ಲೂ ಮೇವಿನ ಬೆಳೆ ಬರಬಹುದೆಂಬ ನಿರೀಕ್ಷೆ ಇದೆ.

**

ನೀರು ಪೂರೈಕೆ ಮಾಡದಿರುವುದರಿಂದ ಮಣ್ಣಿನಲ್ಲಿ ತೇವಾಂಶದ ಕೊರತೆಯಾಗಿ ಕೆರೆಯಂಗಳದಲ್ಲಿ ಬಿತ್ತಿದ ಮೇವಿನ ಬೀಜ ಮೊಳಕೆ ಒಡೆದಿಲ್ಲ.
– ಡಾ. ಪ್ರಸನ್ನ ಕುಮಾರ್, ಉಪನಿರ್ದೇಶಕರು, ಪಶುವೈದ್ಯಕೀಯ ಇಲಾಖೆ

**

–ಬೋರೇಶ ಎಂ.ಜೆ. ಬಚ್ಚಬೋರನಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT