ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ಕೊರತೆ; ವಿದ್ಯಾರ್ಥಿಗಳ ಪರದಾಟ

ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳ ಕಥೆ ವ್ಯಥೆ
Last Updated 20 ಮಾರ್ಚ್ 2017, 5:09 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ  ವಿದ್ಯಾರ್ಥಿನಿಲಯಗಳಲ್ಲಿ ಸಿಬ್ಬಂದಿ, ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ ಕಾಡುತ್ತಿದೆ.

ತಾಲ್ಲೂಕಿನಲ್ಲಿ ಸಮಾಜಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ 4 ಹಾಗೂ ಮೆಟ್ರಿಕ್‌ ಪೂರ್ವ 13 ಸೇರಿ ಒಟ್ಟು 17 ವಿದ್ಯಾರ್ಥಿನಿಲಯಗಳಿವೆ. 1400ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿಲಯಗಳಲ್ಲಿ ವಾಸವಾಗಿದ್ದಾರೆ. ಬಹುತೇಕ ವಿದ್ಯಾರ್ಥಿ ನಿಲಯಗಳಲ್ಲಿ ಸಿಬ್ಬಂದಿಯ ಕೊರತೆ ಸಮಸ್ಯೆಯಾಗಿದೆ.

ವಾರ್ಡನ್‌, ಅಡುಗೆಯವರು, ಅಡುಗೆ ಸಹಾಯಕರು, ಕಾವಲುಗಾರರು ಸೇರಿದಂತೆ ಬಹುತೇಕ ಹುದ್ದೆಗಳು ಖಾಲಿ ಇವೆ. ಅದರಲ್ಲೂ ಮುಖ್ಯವಾಗಿ ಅಡುಗೆ ಮಾಡುವವರು, ಅಡುಗೆ ಸಹಾಯಕರು, ಕಾವಲುಗಾರರ ಹುದ್ದೆಗಳು ಹೆಚ್ಚಿನ ಸಂಖ್ಯೆಯಲ್ಲಿ ಖಾಲಿ ಇವೆ.

ತಾಲ್ಲೂಕಿನ 17 ವಿದ್ಯಾರ್ಥಿನಿಲಯಗಳಿಗೆ 17 ಮಂದಿ ಮೇಲ್ವಿಚಾರಕರು ಇರಬೇಕಿತ್ತು. 9 ಮಂದಿ ಮಾತ್ರ ಇದ್ದು 8 ಹುದ್ದೆಗಳು ಖಾಲಿ ಇವೆ. ಅಡುಗೆ ತಯಾರಿಸಲು 59 ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 16 ಮಂದಿ ಕಾರ್ಯನಿರ್ವಹಿಸುತ್ತಿದ್ದು 43 ಹುದ್ದೆಗಳು ಖಾಲಿ. ಅಡುಗೆ ಸಹಾಯಕರಾಗಿ 34 ಹುದ್ದೆಗಳು ಮಂಜೂರಾಗಿದ್ದು ಕೇವಲ 4 ಮಂದಿ ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ.

ಕಾವಲುಗಾರರ 17 ಹುದ್ದೆಗಳು ಮಂಜೂರಾಗಿದ್ದು 17 ಖಾಲಿ ಇವೆ. ಒಟ್ಟು 127 ಮಂಜೂರಾತಿ ಹುದ್ದೆಗಳಲ್ಲಿ 29 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು 98 ಹುದ್ದೆಗಳು ಖಾಲಿ ಇವೆ. ಇದರಿಂದ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಳ್ಳಬಹುದು.

ಕಾಯಂ ಅಡಿಗೆಯವರು ಇಲ್ಲದ ಕಾರಣ 24 ಮಂದಿ ಅಡುಗೆಯವರು ಹಾಗೂ 52 ಮಂದಿ ಸಹಾಯಕರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿ (ಹಂಗಾಮಿ) ಸಿದ್ದನಾರಾಯಣಸ್ವಾಮಿ.

ಸರ್ಕಾರ ಸಮಾಜ ಕಲ್ಯಾಣ ಇಲಾಖೆಗೆ  ಸಾವಿರಾರು ಕೋಟಿ ಹಣವನ್ನು ನೀಡುತ್ತದೆ. ಹಣ ಖರ್ಚಾಗದೆ ವಾಪಸ್‌ ಹೋಗುತ್ತದೆ ಎನ್ನುವ ವರದಿಗಳು ಅನೇಕ ಬಾರಿ ಪ್ರಕಟವಾಗುತ್ತವೆ. ಈ ಮೇಲಿನ ಅಂಕಿ ಅಂಶಗಳು ಸಮಾಜಕಲ್ಯಾಣ ಇಲಾಖೆಯ ವಾಸ್ತವ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿವೆ.

ಒಬ್ಬ ಮೇಲ್ವಿಚಾರಕರಿಗೆ 2–3 ವಿದ್ಯಾರ್ಥಿನಿಲಯಗಳನ್ನು ವಹಿಸುವುದರಿಂದ  ಅವರು ಎಲ್ಲೂ ಇರುವುದಿಲ್ಲ. ಮೇಲ್ವಿಚಾರಕರು ಇಲ್ಲದಿದ್ದರೆ ಕೇಳುವವರೇ ಇಲ್ಲ, ಸಂಪೂರ್ಣವಾಗಿ ಅಡಿಗೆಯವರೇ ನೋಡಿಕೊಳ್ಳುವಂತಾಗಿದೆ.

ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಕಾವಲುಗಾರರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ತಾಲ್ಲೂಕಿನ ಯಾವ ವಿದ್ಯಾರ್ಥಿ ನಿಲಯಗಳಲ್ಲೂ ಕಾವಲುಗಾರರು ಇಲ್ಲದಿರುವುದರಿಂದ ಅಡುಗೆ ಸಹಾಯಕರೇ ಕಾವಲುಗಾರರ ಕೆಲಸವನ್ನು ಮಾಡಬೇಕಾಗಿದೆ. ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡವರಿಗೆ ಯಾವ ಜವಾಬ್ದಾರಿಯು ಇರುವುದಿಲ್ಲ.

ಅಧಿಕಾರಿಗಳಿಗೂ ಅವರ ಮೇಲೆ ಹಿಡಿತ ಇರುವುದಿಲ್ಲ. ಹೊರಗುತ್ತಿಗೆಯವರಿಗೆ ಅತ್ಯಂತ ಕಡಿಮೆ ವೇತನ, ಅದನ್ನೂ ಪ್ರತಿ ತಿಂಗಳು ನೀಡುವುದಿಲ್ಲ. 6 ತಿಂಗಳಿಗೋ, ವರ್ಷಕ್ಕೊಮ್ಮೆ ವೇತನವನ್ನು ನೀಡುತ್ತಾರೆ. ಬಹುತೇಕ ವಿದ್ಯಾರ್ಥಿನಿಲಯಗಳು ಸಿಬ್ಬಂದಿ ಕೊರತೆಯಿಂದ ಬಳಲುತ್ತಿವೆ.
-ಎಂ.ರಾಮಕೃಷ್ಣಪ್ಪ

ಆಶ್ರಮ ಶಾಲೆ ಖಾಲಿ ಖಾಲಿ
ಸಮಾಜಕಲ್ಯಾಣ ಇಲಾಖೆಯಿಂದ ತಾಲ್ಲೂಕಿನ ಕಂಗಾನಹಳ್ಳಿಯಲ್ಲಿ ಆಶ್ರಮಶಾಲೆ ನಡೆಯುತ್ತಿದೆ. ಶಿಕ್ಷಕರ 5 ಹುದ್ದೆಗಳು ಮಂಜೂರು ಮಾಡಲಾಗಿದೆ. 5 ಹುದ್ದೆಗಳು ಖಾಲಿ ಇವೆ. ಅಡುಗೆಯವರ 2 ಹುದ್ದೆ ಮಂಜೂರಾಗಿದ್ದು 2 ಖಾಲಿ, ಅಡುಗೆ ಸಹಾಯಕರ 2 ಹುದ್ದೆಗಳಲ್ಲಿ 2 ಖಾಲಿ, ಕಾವಲುಗಾರ 1 ಹುದ್ದೆ ಮಂಜೂರಾಗಿದ್ದು ಅದೂ ಖಾಲಿಯಾಗಿದೆ. ಹೀಗಾಗಿ ಆಶ್ರಯ ಶಾಲೆಯ ಎಲ್ಲ ಹುದ್ದೆಗಳು ಖಾಲಿ ಖಾಲಿ.  ಸಮಾಜ ಕಲ್ಯಾಣ ಇಲಾಖೆಯ ವಾಸ್ತವ ಪರಿಸ್ಥಿತಿಯಾಗಿದೆ.

ಮಂಜೂರಾಗಿರುವ ಹುದ್ದೆಗಳನ್ನು ಭರ್ತಿ ಮಾಡಿದರೆ ಕೆಲವರಿಗೆ ಉದ್ಯೋಗ ದೊರೆತು ಜೀವನೋಪಾಯಕ್ಕೆ ಮಾರ್ಗವಾಗುತ್ತದೆ. ವಿದ್ಯಾರ್ಥಿಗಳಿಗೂ ಅನುಕೂಲವಾಗುತ್ತದೆ ದಲಿತ ಸಂಘರ್ಷ ಸಮಿತಿಯ ಮುಖಂಡ ಜಿ.ನಾರಾಯಣಸ್ವಾಮಿ ತಿಳಿಸಿದರು.

*
ಸರ್ಕಾರಕ್ಕೆ ಪರಿಶಿಷ್ಟ ಜಾತಿ/ ಪಂಗಡದ ವಿದ್ಯಾರ್ಥಿಗಳ ಬಗ್ಗೆ ನಿಜವಾದ ಕಾಳಜಿ, ಅಭಿವೃದ್ಧಿಯ ಆಸಕ್ತಿ ಇದ್ದರೆ ಶೀಘ್ರವಾಗಿ ವಿದ್ಯಾರ್ಥಿನಿಲಯಗಳ ಸಿಬ್ಬಂದಿ ಕೊರತೆಯ ಸಮಸ್ಯೆಯನ್ನು ಪರಿಹರಿಸಬೇಕು.
-ಎನ್‌.ವೆಂಕಟೇಶ್‌,
ಡಿಎಸ್‌ಎಸ್‌ ಹಿರಿಯ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT