ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ಎಕರೆ– 140 ಭತ್ತದ ತಳಿ

Last Updated 20 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಆಳುಗಳ ಸಮಸ್ಯೆಯ ಕಾರಣದಿಂದ ಭತ್ತ ಕೃಷಿಯಿಂದ ದೂರ ಸರಿಯುತ್ತಿರುವವರೇ ಅಧಿಕ. ಆದರೆ ಯಾವ ಸಮಸ್ಯೆಯೂ ಇಲ್ಲದೆಯೇ 50 ವರ್ಷಗಳಿಂದಲೂ ಭತ್ತದ ಕೃಷಿಯಲ್ಲಿ ಸೈ ಎನಿಸಿಕೊಂಡವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಬಂಗಾಡಿ ಸಮೀಪದ ಮಿತ್ತಬಾಗಿಲಿನ ಅಮೈ ನಿವಾಸಿ ಬಿ.ಕೆ. ದೇವರಾವ್. ತಮ್ಮ ಐದು ಎಕರೆ ಗದ್ದೆಯಲ್ಲಿ 140ಕ್ಕೂ ಅಧಿಕ ತಳಿಗಳನ್ನು ಇವರು ವರ್ಷಕ್ಕೆ ಎರಡು ಬೆಳೆಗಳ ರೂಪದಲ್ಲಿ ಪಡೆಯುತ್ತಿದ್ದಾರೆ. ಪ್ರತಿಸಲವೂ 50 ಕಿಂಟಲ್‌ಗಿಂತ ಅಧಿಕ ಇಳುವರಿ ಅವರಿಗೆ ಸಿಗುತ್ತಿದೆ.

ತಮ್ಮ ವಯಸ್ಸನ್ನೂ ಲೆಕ್ಕಿಸದೇ ದೇವರಾವ್‌ ಖುದ್ದಾಗಿ ಗದ್ದೆಯಲ್ಲಿ ಕೆಲಸ ಮಾಡುತ್ತಾರೆ. ಬೆಳಿಗ್ಗೆ ಐದು ಗಂಟೆಗೆ ತಮ್ಮ ಕಾಯಕ ಶುರುವಿಟ್ಟುಕೊಂಡರೆ ಸಂಜೆಯವರೆಗೂ ಕೃಷಿಯದ್ದೇ ಧ್ಯಾನ. ಜಿಲ್ಲೆಯ ಜೀವನದಿ ನೇತ್ರಾವತಿಗೆ ಸೇರುವ ಸಣ್ಣ ತೊರೆಯ ನೀರೇ ಇವರ ಕೃಷಿಗೆ ಆಸರೆ.

ಹಿಂದೆ ಏಳು ಜೋಡು ಎತ್ತುಗಳಿಂದ ಗದ್ದೆಯನ್ನು ಉತ್ತು ಕೃಷಿ ಮಾಡುತ್ತಿದ್ದರು. 25 ವರ್ಷಗಳಿಂದ ಟಿಲ್ಲರ್ ಉಪಯೋಗಿಸಿಕೊಂಡು ಗದ್ದೆಯನ್ನು ಉಳುತ್ತಿದ್ದಾರೆ. ಹಾರೆ ಹಿಡಿದು ಗದ್ದೆಯ ಹುಣಿಯನ್ನು ಓರಣ ಮಾಡುತ್ತಾರೆ. ಕೆಲವೊಂದು ಅಪರೂಪದ ತಳಿಗಳನ್ನು ತಳಿ ಸಂರಕ್ಷಣೆಯ ಉದ್ದೇಶದಿಂದಲೇ  ಬೆಳೆಸುತ್ತಿದ್ದಾರೆ. ಒಂದೇ ಗದ್ದೆಯಲ್ಲಿ ಅನೇಕ ಬಗೆಯ ತಳಿಗಳನ್ನು ನಾಟಿ ಮಾಡುತ್ತಾರೆ. ಯಾವ ತಳಿ ಎಂಬುದನ್ನು ನೋಡಿ ಗುರುತಿಸುವಷ್ಟು ಸೂಕ್ಷ್ಮತೆ ಅವರಲ್ಲಿದೆ. ಅಲ್ಲದೆ ಪ್ರತೀ ತಳಿಗಳಿಗೆ ಸಂಖ್ಯೆಗಳನ್ನು ನಮೂದಿಸಿ, ಅದರ ಹೆಸರನ್ನು ಟ್ಯಾಗ್ ಮಾಡಿದ್ದಾರೆ.

(ವಿವಿಧ ತಳಿಗಳ ಭತ್ತದ ಗದ್ದೆಯಲ್ಲಿ ದೇವರಾವ್)

ನಾಲ್ಕು ವಿಧದ ಭತ್ತದ ಕೃಷಿ
ಭತ್ತದ ಕೃಷಿಯಲ್ಲಿ ನಾಲ್ಕು ವಿಧ. ಕಾಲಕ್ಕನುಗುಣವಾಗಿ ಏಣೆಲು, ಪಟ್ಲ,  ಸುಗ್ಗಿ, ಕೊಳೆಕೆ ಎಂದು ವಿಂಗಡಿಸಿ ಭತ್ತವನ್ನು ಬೆಳೆಯಲಾಗುತ್ತಿದೆ. ಹಿಂದೆ ನಾಲ್ಕು ಬೆಳೆಯನ್ನು ಬೆಳೆಯುತ್ತಿದ್ದ ದೇವರಾವ್ ಅವರು, ಕೆಲ ವರ್ಷಗಳಿಂದ  ಎಣೆಲು ಮತ್ತು ಸುಗ್ಗಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಭತ್ತದ ವಿವಿಧ ತಳಿಗಳಲ್ಲೂ ದೀರ್ಘಾವಧಿ ಬೆಳೆ ಹಾಗೂ ಅಲ್ಪಾವಧಿ ಬೆಳೆಯನ್ನು ಮಾಡುತ್ತಿದ್ದಾರೆ. ಒಂದನೇ ಬೆಳೆ ದೀರ್ಘಾವಧಿಯದ್ದು. ಇದರಲ್ಲಿ ಬೆಳೆಯುವುದು ಹಳೆಯ ತಳಿಗಳು. ಮೇ ಮೊದಲ ವಾರದಲ್ಲಿ ಬಿತ್ತನೆ ಮಾಡಲಾಗುತ್ತದೆ. ಸುಮಾರು 25 ತಳಿಗಳನ್ನು ಬೆಳೆಸಲಾಗುತ್ತದೆ. ಎರಡನೇ ಬೆಳೆ ಅಲ್ಪಾವಧಿಯದ್ದು. ಜೂನ್ ಮೊದಲವಾರ ಬಿತ್ತನೆ ಮಾಡಿ ಬೇಗ ಫಸಲು ತೆಗೆಯಲಾಗುತ್ತದೆ. 95ಕ್ಕಿಂತಲೂ ಹೆಚ್ಚು ತಳಿಗಳನ್ನು ಬೆಳೆಯಲಾಗುತ್ತದೆ.

1988 ರಿಂದ ರಾಸಾಯನಿಕ ಬಳಕೆಗೆ ಸಂಪೂರ್ಣ ವಿದಾಯ ಹೇಳಿದ್ದಾರೆ. ಹಟ್ಟಿಯ ಗೊಬ್ಬರವೇ ಭತ್ತದ ಜೀವಾಳ. ಭತ್ತವನ್ನು ಮನೆಯಲ್ಲಿಯೇ ಒಣಗಿಸಿ ಸ್ವಂತ ಹಲ್ಲರಿನಲ್ಲಿ ಅಕ್ಕಿ ಮಾಡುತ್ತಾರೆ. ಇವರ ಮನೆಗೇ ಬಂದು ಜನರು ಖರೀದಿಸುತ್ತಾರೆ. 

‘ದಶಕಗಳ ಹಿಂದೆ ನಿತ್ಯ ಅಡುಗೆಯ ಅನ್ನಕ್ಕೊಂದು, ಔತಣದ ಭೋಜನಕ್ಕೊಂದು, ದೋಸೆ ಮಾಡಲು ಮಗದೊಂದು, ಅವಲಕ್ಕಿ ಮಾಡಲು ಇನ್ನೊಂದು ಹೀಗೆ ಅನೇಕ ತಳಿಗಳಿದ್ದವು. ಈಗ ಅವು ನಶಿಸಿ ಹೋಗುತ್ತಿವೆ. ಆದರೆ ತಮ್ಮಲ್ಲಿ ಇವೆಲ್ಲಾ ತಳಿಗಳೂ ಇವೆ’ ಎನ್ನುತ್ತಾರೆ ದೇವರಾವ್.

‘ಪಿಯುಸಿ ಬಳಿಕ ಉದ್ಯೋಗಕ್ಕೆ ಸೇರುವ ಆಲೋಚನೆ ಬಂದಿತ್ತು. ಆದರೆ ನಮ್ಮ ಭೂಮಿಯಲ್ಲೇ ದುಡಿಯೋಣ ಎಂದು ಹೊಲದಲ್ಲಿ ಉಳಿದೆ. ನನ್ನ ನಿರ್ಧಾರದ ಬಗ್ಗೆ ಈಗ ಹೆಮ್ಮೆ ಇದೆ. ನಮ್ಮದು ನೆಮ್ಮದಿಯ ಜೀವನ. ವರ್ಷವಿಡೀ ಉಣ್ಣಲು ನನ್ನಲ್ಲಿ ಅಕ್ಕಿಯಿದೆ. ಕುಟುಂಬದವರೆಲ್ಲಾ  ತೊಡಗಿಸಿಕೊಂಡಿದ್ದರಿಂದ ಆಳುಗಳ ಸಮಸ್ಯೆ ಆಗಿಲ್ಲ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ದೇವರಾವ್.

2003ರಲ್ಲಿ ಆವಿಷ್ಕಾರವಾದ ರಕ್ತಶಾಲಿ ಎಂಬ ಭತ್ತದ ಅಕ್ಕಿ ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿತ್ತು. ಕೇರಳದಲ್ಲಿ ಇದನ್ನು ಬೆಳೆಯಲಾಗುತ್ತಿದೆ ಎಂದು ತಿಳಿದ ಇವರು ಈ ತಳಿಯನ್ನು ಬಹಳಷ್ಟು ಕಷ್ಟಪಟ್ಟು ಈ ವರ್ಷ ತಂದು ತಮ್ಮ ಗದ್ದೆಯಲ್ಲಿ ಬೆಳೆಸಿದ್ದಾರೆ. 90ರ ದಶಕದಲ್ಲಿ ಜೀರ್‌ಸಾಲೆ ತಳಿ ನಿಂತಿದೆ ಎಂಬ ಮಾತಿತ್ತು. ಆದರೆ ಇಲ್ಲಿ ಇದರ ತಳಿಯನ್ನು ಬೆಳೆಸಲಾಗುತ್ತಿದೆ. ಈ ಬಾರಿಯ ಏಣೆಲು ಬೆಳೆಯಲ್ಲಿ ಸುಮಾರು 95ಕ್ಕೂ ಹೆಚ್ಚು ತಳಿ ಬೆಳೆಸಿದ್ದಾರೆ. ಇದೀಗ ಬೆಳೆದು ನಿಂತ ಪೈರು ಒಂದಕ್ಕೊಂದು ಆಕರ್ಷಣೀಯವಾಗಿ ಕಾಣುತ್ತಿವೆ. ಗದ್ದೆಗಿಳಿದರೆ ಒಂದೆಡೆ ಹಸಿರು, ಬಂಗಾರದ ಬಣ್ಣ, ನೇರಳೆ ಬಣ್ಣ ಹೀಗೆ ವಿವಿಧ ತಳಿಗಳು ತಮ್ಮದೇ ಬಣ್ಣದಿಂದ ಕಂಗೊಳಿಸುತ್ತಿವೆ.

ಮಸೂರಿ, ರಾಜಕಾಯಮೆ, ಶಕ್ತಿ, ಮೈಸೂರು ಮಲ್ಲಿಗೆ, ಗಂಧಸಾಲೆ, ಅದೇನುಕೇಳ್ತೆ, ಜೀರಿಗೆ ಸಣ್ಣ, ನಾಗಭತ್ತ, ಸಬಿತ, ಸೇಲಂ ಸಣ್ಣ, ಗಿಡ್ಡ ಭತ್ತ, ಕರಿದಡಿ, ಥಾಲಾಂಡ್, ಗುಲ್ವಾಡಿಸಣ್ಣ, ಕಾಯಮೆ, ಕಜೆಜಯ, ಹಲ್ಲಿಂಗ, ಮಣಿಪುರ ಭತ್ತ, ಮಸ್ಕಲೆ, ಕುರುವ, ಕಳಮೆ, ಉದ್ದಬಾಸ್ಮತಿ, ನವರ, ಜೀರ್‌ಸಾಲೆ, ಅಜಿಪ, ಅಜಿಪತ್ತೈನ್, ಸೋಮಸಾಲೆ, ಚಿಕ್ಕಸಾಲೆ, ಸುಮತಿ, ಮಣಿಪುರ, ಮದ್ರಾಸ್ ಸಣ್ಣ, ಬರ್ಮಾ, ಹಳಿಂಗ, ಘನಶಾಲಿ, ಪಿಂಗಾರ, ಮೀಸೆ ಭತ್ತ, ರತನ್ ಸಾಗರ್, ದಿಲ್ಲಿ ಬಾಸ್ಮತಿ... ಹೀಗೆ ಭತ್ತದ ತಳಿಗಳ ಹೆಸರು ಮುಂದುವರಿಯುತ್ತದೆ.

ಭತ್ತ ಬೆಳೆಯುವ ಕೃಷಿಕರಿಗೆ ತಳಿಗಳನ್ನು ನೀಡುತ್ತಾರೆ. ಮಾರಾಟದ ಉದ್ದೇಶವಿಲ್ಲ. ಸ್ಥಳೀಯವಾಗಿ ಅಭಿವೃದ್ಧಿಯಾಗಬೇಕು ಎಂಬುದು ಇವರ ಉದ್ದೇಶ. ನೇಜಿ ನಾಟಿ ಮಾಡಿ ಪೈರು ಬೆಳೆಯುವ ಹೊತ್ತಿಗೆ ನವಿಲು, ಮೊಲ, ಕಡವೆ, ಹಂದಿ, ಮಂಗಗಳ ಉಪದ್ರವ ಆರಂಭವಾಗುತ್ತದೆ. ಅವುಗಳನ್ನು ಎಷ್ಟೇ ಕಾದರೂ ಅವುಗಳು ತಮ್ಮ ಪಾಲಿನದನ್ನು ತಿಂದು ಹೋಗುತ್ತದೆ. ಅವುಗಳನ್ನು ಭಯಪಡಿಸಲು ಮರಗಳಿಗೆ ಖಾಲಿ ಬಾಟಲ್ ಕಟ್ಟಿದ್ದಾರೆ. ಅದರಿಂದ ಉಂಟಾಗುವ ಶಬ್ದದಿಂದ ಬರುವುದಿಲ್ಲ ಎಂಬುದು ದೇವರಾವ್‌ ಅವರ ಆವಿಷ್ಕಾರ.

ಇವರ ಈ ಕಾರ್ಯಕ್ಕಾಗಿ ‘ತಳಿ ತಪಸ್ವಿ’ ಎಂಬ ಬಿರುದು ಸಿಕ್ಕಿದೆ. ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ‘ಸೃಷ್ಟಿ ಸಮ್ಮಾನ್‌’ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT