ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಪತ್ರ ಸಲ್ಲಿಕೆ: ರಂಗೇರಿದ ಚುನಾವಣೆ

ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆ l ಅಭ್ಯರ್ಥಿಗಳಿಗೆ ಮುಖಂಡರ ಸಾಥ್‌
Last Updated 20 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಮೈಸೂರು:  ನಂಜನಗೂಡು ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್‌ನಿಂದ ಕಳಲೆ ಎನ್‌.ಕೇಶವಮೂರ್ತಿ ಹಾಗೂ ಬಿಜೆಪಿಯಿಂದ ವಿ.ಶ್ರೀನಿವಾಸಪ್ರಸಾದ್ ಸೋಮವಾರ ನಾಮಪತ್ರ ಸಲ್ಲಿಸುವುದರೊಂದಿಗೆ ಚುನಾವಣಾ ಕಣ ರಂಗೇರಿದೆ. ಜೆಡಿಎಸ್ ಸ್ಪರ್ಧಿಸುತ್ತಿಲ್ಲ.
 
ಎರಡು ಪಕ್ಷಗಳು ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ನಾಮಪತ್ರ ಸಲ್ಲಿಕೆಗೂ ಮುನ್ನ ಶಕ್ತಿ ಪ್ರದರ್ಶನ ನಡೆಸಿದವು. ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆಯದಿನ. ಸೋಮವಾರ ಒಳ್ಳೆಯ ದಿನ ಎಂಬ ಕಾರಣಕ್ಕೆ ಇಬ್ಬರೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
 
ಗುಂಡ್ಲುಪೇಟೆ ರಸ್ತೆಯಲ್ಲಿನ ಚಿರಂತನ ಗಣಪತಿ ದೇವಾಲಯದಿಂದ ಇಬ್ಬರೂ ಮುಖಂಡರು ಸಾವಿರಾರು ಜನರೊಂದಿಗೆ ಮೆರವಣಿಗೆ ಮೂಲಕ ಎಂ.ಜಿ.ರಸ್ತೆಯ ಚುನಾವಣಾಧಿಕಾರಿ ಕಚೇರಿ ತಲುಪಿ ನಾಮಪತ್ರ ಸಲ್ಲಿಸಿದರು.
 
ಸಾಕಷ್ಟು ಸಂಖ್ಯೆಯ ಬಸ್‌ಗಳಲ್ಲಿ ಬಂದಿದ್ದ 5 ಸಾವಿರದಷ್ಟು ಜನರು ಕಾಂಗ್ರೆಸ್‌ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್, ಸಂಸದ ಆರ್‌.ಧ್ರುವನಾರಾಯಣ, ಮುಖಂಡರಾದ ಸತೀಶ್‌ ಜಾರಕಿಹೊಳಿ, ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್ ಸೇರಿದಂತೆ ಅನೇಕ ಮುಖಂಡರು ಇದ್ದರು.
 
ಸುಮಾರು 2 ಸಾವಿರಕ್ಕೂ ಅಧಿಕ ಬೆಂಬಲಿಗರೊಂದಿಗೆ ಬಂದ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮುಖಂಡರಾದ ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಮೊದಲಾದ ನಾಯಕರು ಜತೆಯಾದರು.
 
ದೇವೇಗೌಡ ನಮ್ಮ ನಾಯಕ: ಮಹದೇವಪ್ಪ: ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಹದೇವಪ್ಪ, ‘ಒಂದರ್ಥದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನಮ್ಮ ನಾಯಕರು. ಅವರೊಬ್ಬ ಮುತ್ಸದ್ದಿ ರಾಜಕಾರಣಿ’ ಎಂದು ಶ್ಲಾಘಿಸಿದರು.
 
ಭೀಕರ ಬರದ ಸಂದರ್ಭದಲ್ಲಿ ಇದೊಂದು ಬೇಡವಾದ ಉಪಚುನಾವಣೆ. ಸ್ವಾರ್ಥ ರಾಜಕಾರಣಕ್ಕೆ ನಡೆಯುತ್ತಿರುವ ಚುನಾವಣೆಗೆ ಬೆಂಬಲ ನೀಡದಿರಲು ನಿರ್ಧರಿಸಿ, ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಕೋಮುವಾದಿ ಶಕ್ತಿಗಳಿಗೆ ಉತ್ತರ ನೀಡಿದ್ದಾರೆ. ನಂಜನಗೂಡು ತಾಲ್ಲೂಕಿನ ಜೆಡಿಎಸ್ ಮುಖಂಡರೆಲ್ಲರೂ ಕಾಂಗ್ರೆಸ್ ಪರ ಪ್ರಚಾರ ಮಾಡಲು ಒಪ್ಪಿದ್ದಾರೆ ಎಂದು ತಿಳಿಸಿದರು.
 
ಉತ್ತರಪ್ರದೇಶ ಮುಖ್ಯಮಂತ್ರಿ ಅವಹೇಳನ ಸರಿಯಲ್ಲ: ಉತ್ತರಪ್ರದೇಶ ನೂತನ ಮುಖ್ಯಮಂತ್ರಿ ಅದಿತ್ಯನಾಥ್ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಏಕವಚನ ಪ್ರಯೋಗಿಸಿರುವುದು ಸರಿಯಲ್ಲ ಎಂದು ನಾಮಪತ್ರ ಸಲ್ಲಿಸಿದ ಬಳಿಕ ವಿ.ಶ್ರೀನಿವಾಸಪ್ರಸಾದ್ ಕಿಡಿಕಾರಿದರು.
 
ಆದಿತ್ಯನಾಥ್ 5 ಬಾರಿ ಸಂಸದರಾಗಿದ್ದಾರೆ. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ 10 ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಅಂತಹವರ ಬಗ್ಗೆ ಲಘುವಾಗಿ ಮಾತನಾಡುವುದು ಸಿದ್ದರಾಮಯ್ಯ ಅವರ ದುರಹಂಕಾರವನ್ನು ತೋರಿಸುತ್ತದೆ. ಈ ಉಪಚುನಾವಣೆ ಸ್ವಾಭಿಮಾನ ಹಾಗೂ ದುರಹಂಕಾರದ ನಡುವೆ ನಡೆಯುತ್ತದೆ ಎಂದು ಹೇಳಿದರು.
 
ಕೇಶವಮೂರ್ತಿ ಬಳಿ ಪಾನ್‌ ಕಾರ್ಡ್‌ ಇಲ್ಲ
ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕಳಲೆ ಎನ್.ಕೇಶವಮೂರ್ತಿ ಅವರ ಬಳಿ ಪಾನ್ ಕಾರ್ಡ್ ಇಲ್ಲ. ಆದಾಯ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿಲ್ಲ. ಆದರೆ, ಇವರ ಬಳಿ ₹ 34.31 ಲಕ್ಷ ಚರಾಸ್ತಿ ಹಾಗೂ ₹ 90 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಚುನಾವಣಾಧಿಕಾರಿಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.
 
ವಿವಿಧ ಬ್ಯಾಂಕ್‌ ಹಾಗೂ ಸಹಕಾರ ಸಂಘಗಳಿಂದ ₹ 12.25 ಲಕ್ಷ ಸಾಲವನ್ನೂ ಪಡೆದಿದ್ದಾರೆ. ಆಟೊಮೊಬೈಲ್ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಯಾವುದೇ ಮೇಲ್ ಐಡಿ ಹೊಂದಿಲ್ಲ.

ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಬಳಿ ₹ 3.33 ಕೋಟಿ ಹಾಗೂ ಪತ್ನಿಯ ಬಳಿ ₹ 10.60 ಲಕ್ಷ ಮೌಲ್ಯದ ಚರಾಸ್ತಿ ಇದೆ. ಪ್ರಸಾದ್ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕೇಶವಮೂರ್ತಿ ವೃತ್ತಿ ವ್ಯವಸಾಯವಾದರೆ, ಶ್ರೀನಿವಾಸಪ್ರಸಾದ್ ಅವರು ಅಡುಗೆ ಅನಿಲ ವಿತರಕರಾಗಿದ್ದಾರೆ.

ಗುಂಡ್ಲುಪೇಟೆ: ಕಣದಲ್ಲಿ ಕೋಟ್ಯಧೀಶರು ಸ್ಪರ್ಧೆ(ಚಾಮರಾಜನಗರ):
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್‌ ಅಭ್ಯರ್ಥಿ ಎಂ.ಸಿ.ಮೋಹನ್‌ ಕುಮಾರಿ (ಗೀತಾ) ಮತ್ತು ಬಿಜೆಪಿ ಅಭ್ಯರ್ಥಿ ಸಿ.ಎಸ್‌.ನಿರಂಜನ್‌ಕುಮಾರ್‌ ಕೋಟ್ಯಧಿಪತಿಗಳಾಗಿದ್ದಾರೆ.

ಗೀತಾ ಅವರಿಗೆ 56 ವರ್ಷ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನೋವಿಜ್ಞಾನ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್‌.ಡಿ ಪಡೆದಿದ್ದಾರೆ. 43 ವರ್ಷದ ನಿರಂಜನ್‌ಕುಮಾರ್ ಬಿ.ಕಾಂ ಪದವೀಧರ.

ಗೀತಾ ವೃತ್ತಿಯಲ್ಲಿ ಕೃಷಿಕರು. ಒಟ್ಟು ₹ 1.53 ಕೋಟಿ ಆಸ್ತಿ ಹೊಂದಿದ್ದಾರೆ. ನಿರಂಜನ್‌ಕುಮಾರ್ ವ್ಯವಸಾಯ ಮಾಡುತ್ತಿದ್ದು, ₹ 2.86 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಮಹದೇವಪ್ರಸಾದ್‌ ಆಸ್ತಿ ದ್ವಿಗುಣ: ಸಹಕಾರ ಮತ್ತು ಸಕ್ಕರೆ ಸಚಿವರಾಗಿದ್ದು ನಿಧನ ಹೊಂದಿದ ಎಚ್‌.ಎಸ್‌.ಮಹದೇವಪ್ರಸಾದ್ ಆಸ್ತಿ 4 ವರ್ಷದಲ್ಲಿ ದ್ವಿಗುಣಗೊಂಡಿದೆ. ಮಹದೇವಪ್ರಸಾದ್‌ ಪತ್ನಿ ಗೀತಾ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಚರ ಮತ್ತು ಸ್ಥಿರಾಸ್ತಿಯು ದ್ವಿಗುಣಗೊಂಡಿರುವ ಅಂಶ ಬಯಲಾಗಿದೆ.

2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮಹದೇವಪ್ರಸಾದ್‌₹ 1.54 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದರು. ₹ 2.06 ಕೋಟಿ ಮೌಲ್ಯದ ಸ್ಥಿರಾಸ್ತಿ ಇತ್ತು.

ಗೀತಾ ಅವರು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಮಹದೇವಪ್ರಸಾದ್‌ ಹೆಸರಿನಲ್ಲಿ ₹ 2.75 ಕೋಟಿ ಮೌಲ್ಯದ ಚರಾಸ್ತಿ, ₹ 4.70 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ ಎಂದು ನಮೂದಿಸಿದ್ದಾರೆ. ಜತೆಗೆ ಅವರ ಹೆಸರಿನಲ್ಲಿ ₹ 1.18 ಕೋಟಿ ಸಾಲವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT