ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಹೊಂಡದಿಂದ ಖುಷಿ ತಂದ ಬೇಸಿಗೆ ಕೃಷಿ

ತೀವ್ರ ಬರಗಾಲದಲ್ಲೂ ನೀರಿನ ಯಶಸ್ವಿ ನಿರ್ವಹಣೆ
Last Updated 22 ಮಾರ್ಚ್ 2017, 6:40 IST
ಅಕ್ಷರ ಗಾತ್ರ

ದಾವಣಗೆರೆ: ಬಿಸಿಲಿನ ಝಳಕ್ಕೆ ಕರಟಿದ ಅಡಿಕೆ ಗರಿಗಳ ತೋಟ, ಒಣಗಿದ ಮಾವಿನ ತೋಟಗಳು... ಮೆಕ್ಕೆಜೋಳ ಬೆಳೆದಿದ್ದ ಗದ್ದೆಗಳಲ್ಲಿ ಒಣಮಣ್ಣು. ಸಣ್ಣ ಗಾಳಿ ಬಂದರೂ ಕಣ್ಣಿಗೆ ರಾಚುವ ದೂಳು... ಇನ್ನೆಷ್ಟು ದೂರ ಎಂದುಕೊಂಡು ಹೋಗುತ್ತಿದ್ದಂತೆ ಒಂದೆಡೆ ಕಬ್ಬಿನ ಗದ್ದೆ ಮತ್ತೊಂದೆಡೆ ನಳನಳಿಸುವ ತೋಟದ ಆಹ್ಲಾದಕರ ವಾತಾವರಣ.

ದಾವಣಗೆರೆಯಿಂದ ಜಗಳೂರು ರಸ್ತೆಯಲ್ಲಿ ಸುಮಾರು ಎಂಟು ಕಿ.ಮೀ. ಸಾಗಿ ಎಡಕ್ಕೆ ತಿರುಗಿ ಹತ್ತಾರು ಮನೆಗಳ ಮುಂದೆ ಕಾಂಕ್ರೀಟ್ ರಸ್ತೆಯಲ್ಲಿ ಹೋದಾಗ ಸಿಗುವ ಮಲ್ಲಾಪುರದ ಕೊನೆ ಭಾಗ ಕೃಷಿ ಆಸಕ್ತರಿಗೆ ಚಿರಪರಿಚಿತ.

‘ನೋಡಿ ಸರ್, ಈ ಬಾರಿ ಬರಗಾಲ ತೀವ್ರವಾಗಿದೆ. ಆದರೆ, ನನ್ನ ತೋಟಕ್ಕೆ ಅದರಿಂದ ಅಷ್ಟೊಂದಾಗಿ ತೊಂದರೆಯಾಗಿಲ್ಲ’ ಎನ್ನುತ್ತಾ ಹೆಮ್ಮೆ
ಯಿಂದ ಹೇಳಿದವರು ಇಲ್ಲಿನ ರೈತ ಪಿ.ಯು.ಅಶೋಕ್.

ಕೃಷಿ ಇಲಾಖೆ ನೀಡುವ ಅನುದಾನವನ್ನು ಬಳಸಿಕೊಂಡು ‘ಕೃಷಿ ಹೊಂಡ’ ನಿರ್ಮಿಸಿಕೊಂಡು ನೀರಿನ ಯಶಸ್ವಿ ನಿರ್ವಹಣೆ ಮಾಡುತ್ತಿರುವುದೇ ಅವರ ಸಂತಸಕ್ಕೆ ಕಾರಣ.

ಅವರ ಆರು ಎಕರೆ ಗದ್ದೆ ಹಾಗೂ ತೋಟ ಈ ಬಾರಿಯ ಭೀಕರ ಬರಗಾಲದಲ್ಲೂ ಹಸಿರಾಗಿವೆ. ನಾಲ್ಕು ವರ್ಷಗಳ ಹಿಂದೆ ತಮ್ಮ ಜಮೀನಿನಲ್ಲಿ ಮೂರು ಕೊಳವೆಬಾವಿಗಳನ್ನು ಕೊರೆಯಿಸಿದ್ದ ಅವರು, ಕೃಷಿಗೆ ಪಂಪ್‌ ಮೂಲಕ ನೀರು ಹಾಯಿಸುತ್ತಿದ್ದರು.

ಆದರೆ, ಬರಬರುತ್ತಾ ಅಂತರ್ಜಲ ಪಾತಾಳಕ್ಕೆ ಇಳಿದು ಪಂಪ್‌ಗೆ ನೀರನ್ನು ಮೇಲಕ್ಕೆತ್ತುವುದು ಕಷ್ಟವಾಗತೊಡಗಿತು. ಇಡೀ ಜಮೀನಿಗೆ ನೀರು ಸಿಗದಂತಹ ಪರಿಸ್ಥಿತಿ ಉಂಟಾಯಿತು. ಇದರಿಂದ ಚಿಂತೆಗೀಡಾದ ಅವರಿಗೆ ನೆರವಾಗಿದ್ದು ಕೃಷಿ ಹೊಂಡವೆಂಬ ನೀರಿನ ಬ್ಯಾಂಕ್!

ತಮ್ಮ ಜಮೀನಿನಲ್ಲಿ ತಲಾ 21 ಮೀ. ಉದ್ದ, ಅಗಲ ಹಾಗೂ ಮೂರು ಮೀ. ಆಳದ ತೊಟ್ಟಿಯನ್ನು ನಿರ್ಮಿಸಿದ ಅಶೋಕ್, ಈಗ ಅದರಲ್ಲಿ ಸಂಗ್ರಹಿಸಿದ ನೀರನ್ನು ಬೆಳೆಗೆ ಅಗತ್ಯವಿದ್ದಾಗ ಹಾಯಿಸುತ್ತಾರೆ. ಇದರಿಂದ ಅವರ ಇಡೀ ಜಮೀನು ತಣ್ಣಗಿದೆ.

ಮಳೆಗಾಲದ ನೀರಿನ ಸಂಗ್ರಹ
ನೀರಿನ ಸಂಗ್ರಹ ಹಾಗೂ ಉಳಿತಾಯದ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಮಳೆಗಾಲದಲ್ಲಿ ನಾವು ಬೆಳೆಗಳಿಗೆ ಬಾಹ್ಯವಾಗಿ ನೀರು ನೀಡುವ ಅಗತ್ಯವಿಲ್ಲ. ಬದಲಾಗಿ, ಎಲ್ಲೆಡೆ ವ್ಯರ್ಥವಾಗಿ ಹರಿಯುವ ನೀರನ್ನು ತೊಟ್ಟಿಗಳಿಗೆ ಹರಿಸಬೇಕು. ಒಂದು ವಾರದಿಂದ 10 ದಿನಗಳ ಕಾಲ ಸಂಗ್ರಹಿಸಿಟ್ಟುಕೊಂಡರೆ ಬೇಸಿಗೆ ದಿನಗಳಲ್ಲಿ ಚಿಂತೆಯಿರುವುದಿಲ್ಲ’ ಎನ್ನುತ್ತಾರೆ.

‘ಡೀಸೆಲ್ ಮೋಟಾರ್ ಪಂಪ್ ಅಳವಡಿಸಿರುವ ಕಾರಣ ವಿದ್ಯುತ್‌ಗಾಗಿ ಕಾದು ಕೂರುವ ಪ್ರಮೇಯವೇ ಬರುವುದಿಲ್ಲ. ಅಲ್ಲದೇ, ತೊಟ್ಟಿಯಲ್ಲಿ ನೀರು ಸಾಕಷ್ಟು ಮೇಲ್ಭಾಗದಲ್ಲೇ ಸಂಗ್ರಹವಿದ್ದು, ಪಂಪ್‌ನಿಂದ ಹೊರ ಬರುವ ನೀರಿನ ಒತ್ತಡ ಕೂಡ ಹೆಚ್ಚಿರುತ್ತದೆ. ಹೀಗಾಗಿ ಕಡಿಮೆ ಪ್ರಮಾಣದಲ್ಲಿ ಹೆಚ್ಚು ಪ್ರದೇಶಕ್ಕೆ ನೀರುಣಿಸಲು ಸಾಧ್ಯವಾಗುತ್ತದೆ. ಈ ಮೂಲಕ ಕಾರ್ಮಿಕರಿಗೆ ಕೊಡುವ ಕೂಲಿಯ ಹಣವೂ ಉಳಿತಾಯವಾಗುತ್ತದೆ’ ಎಂದು ಲೆಕ್ಕಾಚಾರ ಮುಂದಿಟ್ಟರು.

240 ಚೀಲ ಮಕ್ಕೆಜೋಳ!
‘ಕೃಷಿ ಹೊಂಡ ಇದ್ದ ಕಾರಣವೇ ನಾನು ಈ ಬಾರಿ ಏಳು ಎಕರೆ ಜಮೀನಿನಲ್ಲಿ ಸುಮಾರು 240 ಚೀಲಗಳಷ್ಟು ಮೆಕ್ಕೆಜೋಳ ಬೆಳೆಯಲು ಸಾಧ್ಯವಾಯಿತು. ಇಷ್ಟೊಂದು ಬೆಳೆ ಸುತ್ತಮುತ್ತ ಬೇರೆ ಯಾವ ರೈತರಿಗೂ ಸಿಕ್ಕಿಲ್ಲ. ಇದು ಎಲ್ಲರಿಗೂ ಆಶ್ಚರ್ಯ ತಂದಿದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಅವರು. ಜಮೀನಿನಲ್ಲಿರುವ ಮೂರು ಕೊಳವೆಬಾವಿಗಳಿಂದ ಬೇಸಿಗೆಯಲ್ಲಿ ಸಿಗುತ್ತಿರುವ ನೀರಿನ ಪ್ರಮಾಣ ಕೇವಲ ಒಂದೂವರೆ ಇಂಚಿನಷ್ಟು ಮಾತ್ರ ಎಂಬುದು ಇಲ್ಲಿ ಗಮನಾರ್ಹ.

ಚರಂಡಿ ನೀರು ಮರು ಬಳಕೆ!
ಅಂತರ್ಜಲ ಬಳಕೆ ಮಾಡಿಕೊಳ್ಳುವ ಅಶೋಕ್, ಮಳೆಗಾಲದಲ್ಲಿ ಮತ್ತೆ ಭೂಮಿಗೆ ನೀರು ಸೇರಿಸುವ ಕಾರ್ಯ ಮಾಡುತ್ತಾರೆ. ಊರ ಬೀದಿಯಿಂದ ಚರಂಡಿಯಲ್ಲಿ ಹರಿದು ಬರುವ ನೀರು ಅವರ ಜಮೀನಿನ ಸಮೀಪದಲ್ಲೇ ವ್ಯರ್ಥವಾಗಿ ಬಯಲು ಸೇರುತ್ತಿತ್ತು. ಆ ನೀರಿನ ಒಂದು ಭಾಗವನ್ನು ತಮ್ಮ ಕೊಳವೆಬಾವಿಯ ಸಮೀಪದ ಬಾವಿಗೆ ಹರಿಸಿದರು. ಇದರ ನೇರ ಪರಿಣಾಮ ಅವರ ಕೊಳವೆಬಾವಿಗಳ ಮೇಲಾಗಿದೆ.

ಕೆಲವು ವರ್ಷಗಳ ಹಿಂದಿನವರೆಗೆ ಬೇಸಿಗೆಯಲ್ಲಿ ಸಂಪೂರ್ಣ ಒಣಗುತ್ತಿದ್ದ  ಕೊಳವೆಬಾವಿಗಳಲ್ಲಿ, ಇಂದಿನ ತೀವ್ರ ಬರದ ದಿನಗಳಲ್ಲೂ ಒಂದಿಷ್ಟು ನೀರು ಉಳಿದಿದೆ. ಅವರ ಜಮೀನಿನ ಸಮೀಪದಲ್ಲಿ ಸಂಬಂಧಿಕರೊಬ್ಬರ ಕೊಳವೆಬಾವಿಯು ಈ  ಹಿಂದಿನ ಬೇಸಿಗೆ ದಿನಗಳಲ್ಲಿ ನೀರು ಕೊಡುತ್ತಿತ್ತು. ಆದರೆ, ಈ ಬಾರಿ ಚಿತ್ರಣ ಹಾಗಿಲ್ಲ.

ಸುತ್ತಮುತ್ತ ಬಹುತೇಕ ಕೊಳವೆಬಾವಿಗಳು ಬತ್ತಿ ಹೋಗಿದ್ದು, ಅಡಿಕೆ ತೋಟಗಳಿಗೆ ಟ್ಯಾಂಕರ್ ಮೂಲಕ ನೀರು ತಂದು ಹಾಯಿಸಿ ಗಿಡಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅಶೋಕ್‌ಗೆ ಅದರ ಅವಶ್ಯಕತೆ ಬಂದಿಲ್ಲ.

ಆರಂಭದಲ್ಲಿ ಅಪಸ್ವರ
‘ಜಮೀನಿನಲ್ಲಿ ತೊಟ್ಟಿ ಮಾಡಿ ನೀರು ಸಂಗ್ರಹಿಸಿಕೊಂಡು ಬೇಸಿಗೆಯಲ್ಲಿ ಉಪಯೋಗಿಸಿ’ ಎಂದು ಆರಂಭದ ದಿನಗಳಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಹೇಳಿದಾಗ ಹೆಚ್ಚಿನ ರೈತರು ಅಷ್ಟೊಂದು ಗಮನ ಕೊಡಲಿಲ್ಲ. ಅಶೋಕ್ ತಮ್ಮ ಜಮೀನಿನಲ್ಲಿ ತೊಟ್ಟಿ ಮಾಡಿಕೊಂಡಾಗ, ‘ಆ ಹೊಂಡ ಮಾಡುವ ಬದಲು ಅಲ್ಲೇ ಮತ್ತೊಂದಷ್ಟು ಬೆಳೆ ತೆಗೀಬಹುದಿತ್ತಲ್ಲ’ ಎಂದು ಕೆಲವರು ಟೀಕೆ ಮಾಡಿದರಂತೆ.

ಆದರೆ, ಅದಕ್ಕೆ ತಲೆಕೆಡಿಸಿಕೊಳ್ಳದೇ ನಾಲ್ಕು ವರ್ಷಗಳ ಹಿಂದೆ ತೊಟ್ಟಿ ಮಾಡಿಸಿಕೊಂಡು ಬೇಸಿಗೆಯ ಕೃಷಿಯಲ್ಲೂ ಯಶಸ್ವಿಯಾದರು. ಇದರಿಂದ ಪ್ರೇರಣೆಗೊಂಡ ಹಲವು ರೈತರು ಜಮೀನು ವೀಕ್ಷಿಸಿ ಹೋಗುತ್ತಿದ್ದಾರೆ. ತಮ್ಮ ಜಮೀನಿನಲ್ಲೂ ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ.

ಇದೇ ಊರಿನ ಎಂ.ಜಿ.ಗೌಡಪ್ಪ ತಮ್ಮ ಜಮೀನಿನಲ್ಲಿ ಈಚೆಗೆ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಭದ್ರಾ ಕಾಲುವೆಯಿಂದ ಟ್ಯಾಂಕರ್‌ನಲ್ಲಿ ನೀರು ತಂದು ಹೊಂಡಕ್ಕೆ ತುಂಬಿಸಿಕೊಂಡು ಐದು ಎಕರೆ ಅಡಿಕೆ ತೋಟಕ್ಕೆ ಹನಿ ನೀರಾವರಿ ಮಾಡುತ್ತಿದ್ದಾರೆ. ಮತ್ತೊಬ್ಬ ರೈತ ಎಚ್. ರೇವಣಸಿದ್ದಪ್ಪ ಕೂಡ ತೊಟ್ಟಿ ನಿರ್ಮಿಸಿಕೊಂಡಿದ್ದು, ನೀರು ಶೇಖರಿಸಿಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT