ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈತೋಟದಲ್ಲಿ ನೀರು ಮರುಬಳಕೆ

Last Updated 22 ಮಾರ್ಚ್ 2017, 8:00 IST
ಅಕ್ಷರ ಗಾತ್ರ

ಕಾರವಾರ: ಬಳಕೆ ಮಾಡಿದ ನೀರು ಗಟಾರ ಸೇರುವುದು ಸಹಜ. ಆದರೆ ಇಲ್ಲಿನ ಮನೆಯೊಂದರಲ್ಲಿ ಬಳಕೆಯಾದ ನೀರನ್ನು ತೋಟಕ್ಕೆ ಹಾಯಿಸುವ ಮೂಲಕ ಯಶಸ್ವಿಯಾಗಿ ಮರುಬಳಕೆ ಮಾಡಲಾಗುತ್ತಿದೆ. ಅಲ್ಲದೇ ಇದರಿಂದ ಅಂಗಳದಲ್ಲಿನ ಗಿಡ, ಮರಗಳು ಹಸಿರಿನಿಂದ ನಳನಳಿಸುತ್ತಿವೆ.

ವಿಜಯನಗರದ ದಂಪತಿ ರಾಮಾನಾಯಕ ಹಾಗೂ ವಿದ್ಯಾ ತಮ್ಮ ಮನೆಯಲ್ಲಿ ವಿನೂತನ ಪ್ರಯೋಗ ಮಾಡಿ ಸೈ ಎನಿಸಿಕೊಂಡಿದ್ದಾರೆ. ಮನೆಯ ಹಿತ್ತಲಿನ ಸುಮಾರು ಎರಡೂವರೆ ಗುಂಟೆ ಜಾಗದಲ್ಲಿ ಚಿಕ್ಕ ಹಾಗೂ ಚೊಕ್ಕವಾದ ತೋಟ ಮಾಡಿದ್ದಾರೆ. ಇಲ್ಲಿ ತೆಂಗಿನ ಮರಗಳು, ಸಪೋಟ, ಹಲಸು, ನೀರು ಹಲಸು, ಅಡಕೆ, ಮಾವು ಹಾಗೂ ತರಹೇವಾರಿ ಹೂವಿನ ಗಿಡಗಳು ಕಂಗೊಳಿಸುತ್ತಿದೆ. ಇದರ ಬಳಿಯಲ್ಲಿಯೇ ಒಂದು ಬಾವಿ ಕೂಡ ಇದೆ.

ಸ್ನಾನ ಮಾಡಿದ ನೀರು, ಪಾತ್ರೆ, ಬಟ್ಟೆ ತೊಳೆದ ನೀರು ಗಟಾರ ಸೇರುವುದನ್ನು ತಪ್ಪಿಸಿ, ಪೈಪ್‌ ಮೂಲಕ ಗಿಡ ಮರಗಳಿಗೆ 10 ವರ್ಷದಿಂದ ಹಾಯಿಸುತ್ತಿದ್ದಾರೆ.

‘ಸಿಂಕ್‌ನಲ್ಲಿ ಕೈ ಹಾಗೂ ಪಾತ್ರೆ ತೊಳೆದ ನೀರು ನೇರ ತೆಂಗಿನ ಮರದ ಬುಡಕ್ಕೆ ತಲುಪುವಂತೆ ಪೈಪನ್ನು ಅಳವಡಿಸಿದ್ದೇವೆ. ತೋಟದಲ್ಲಿ 11 ತೆಂಗಿನ ಮರಗಳಿದ್ದು, ಒಂದೊಂದು ಮರದ ಸುತ್ತಲೂ ಸಿಮೆಂಟ್‌ನಿಂದ ಸಣ್ಣ ಕಟ್ಟೆಯನ್ನು ನಿರ್ಮಿಸಿದ್ದೇವೆ. ಇದರಲ್ಲಿ ಭರ್ತಿಯಾದ ನೀರು ನಂತರ ಪಕ್ಕದಲ್ಲಿನ ಮರಕ್ಕೆ ಹರಿದು ಹೋಗುವಂತೆ

ಸಹ ವ್ಯವಸ್ಥೆ ಮಾಡಿದ್ದೇವೆ. ಅಲ್ಲದೇ ತೆಂಗಿನ ಮರದಡಿಯೇ ಬಟ್ಟೆ ಒಗೆಯಲು ಕಲ್ಲನ್ನು ಹಾಕಲಾಗಿದ್ದು, ಬಟ್ಟೆ ತೊಳೆದ ನೀರು ಸಹ ತೆಂಗಿನ ಮರಕ್ಕೆ ಸೇರುತ್ತದೆ. ಕಟ್ಟಡದಲ್ಲಿ ನಮ್ಮದು ಸೇರಿ ಒಟ್ಟು ನಾಲ್ಕು ಕುಟುಂಬಗಳಿದ್ದು, ಎಲ್ಲರೂ ಬಳಸಿದ ನೀರನ್ನು ಹೀಗೆ ಗಿಡ, ಮರಗಳಿಗೆ ಸೇರುವಂತೆ ಮಾಡಿದ್ದೇವೆ. ವಾರಕ್ಕೆ ಒಂದೆರಡು ದಿನಗಳು ಮಾತ್ರ ಬಾವಿಯಿಂದ ನೀರನ್ನು ಹಾಯಿಸುತ್ತೇವೆ. ಇದರಿಂದ ಸಾಕಷ್ಟು ನೀರು ಉಳಿತಾಯ ಆಗುತ್ತದೆ’ ಎನ್ನುತ್ತಾರೆ ವಿದ್ಯಾ.­­

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT