ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೇರಳ ಮಾದರಿ ಅಬಕಾರಿ ನೀತಿಗೆ ಶಿಫಾರಸು’

Last Updated 23 ಮಾರ್ಚ್ 2017, 5:13 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಕೇರಳ ಮಾದರಿ ಅಬಕಾರಿ ನೀತಿ ಅಳವಡಿಸಬೇಕು ಎಂದು ಮದ್ಯಪಾನ ಸಂಯಮ ಮಂಡಳಿ ಸರ್ಕಾರಕ್ಕೆ ಶಿಫಾರಸು ಮಾಡುತ್ತಿದೆ’ ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಎಚ್.ಸಿ.ರುದ್ರಪ್ಪ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಪೊಲೀಸ್ ಇಲಾಖೆ, ಅಬಕಾರಿ, ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿನ  ಎಂಎಸ್ಐಎಲ್ ಮಳಿಗೆ ರೀತಿಯಲ್ಲಿ ಕೇರಳದಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಅದೂ  ಸೀಮಿತ ಸಮಯ ಮತ್ತು ಸ್ಥಳಗಳಲ್ಲಿ ಮಾರಾಟ ನಡೆಯುತ್ತದೆ. ಇದರಿಂದ ಮದ್ಯಪಾನದಿಂದ ಆಗುವ ದುಷ್ಪರಿ ಣಾಮ ಸ್ವಲ್ಪ ಪ್ರಮಾಣದಲ್ಲಿ  ನಿಯಂತ್ರಿ ಸಲು ಸಾಧ್ಯವಾಗಲಿದೆ ಎಂದರು.

‘ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಾಗೂ ಮದ್ಯಪಾನ ಸಂಯಮ ಮಂಡಳಿ ಸಹಯೋಗದಲ್ಲಿ ಹಲವು ಕಡೆ ಮದ್ಯ ವರ್ಜನಾ ಶಿಬಿರಗಳನ್ನು ನಡೆಸಲಾ ಗುತ್ತಿದೆ. ಹಳ್ಳಿಗಳಲ್ಲಿ ಜನರಿಗೆ ಮದ್ಯಪಾನ ದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಬೀದಿನಾಟಕ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತದೆ.  ವಿದ್ಯಾರ್ಥಿಗಳಲ್ಲಿ  ಜಾಗೃತಿ ಮೂಡಿಸಲು ನವೆಂಬರ್‌ನಿಂದ ಶಾಲೆ, ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

‘ಕಾಲೇಜುಗಳ ಸುತ್ತ ಮಾದಕ ವಸ್ತುಗಳು ಮಾರಾಟವಾಗುತ್ತಿರುವ ಕುರಿತು ದೂರುಗಳು ಬರುತ್ತಿದ್ದು, ಈ ಕುರಿತು ಎಚ್ಚರವಹಿಸಿ, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

‘ವಿದ್ಯಾರ್ಥಿಗಳು ಮಾದಕ ಉತ್ಪನ್ನಗಳ ಸೇವನೆಯ ಅಭ್ಯಾಸ ಮಾಡಿ ಕೊಂಡರೆ, ಭವಿಷ್ಯ ಹಾಳಾಗುತ್ತದೆ. ಅವರ ಕುಟುಂಬವು ಸಂಕಷ್ಟಕ್ಕೆ ಒಳಗಾಗುತ್ತವೆ. ಈ ನಿಟ್ಟಿನಲ್ಲಿ ಇಂಥ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಣಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಮದ್ಯ ಸೇವನೆಯಿಂದಲೂ ಆರೋಗ್ಯಕ್ಕೆ ಹಾನಿಯಾಗಲಿದೆ. ಈ ಬಗ್ಗೆ  ಮದ್ಯಪಾನ ಸಂಯಮ ಮಂಡಳಿ ಜನರಲ್ಲಿ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮ ಹಾಕಿಕೊಂಡಿದೆ. ಶಾಲಾ, ಕಾಲೇಜುಗಳ ಸುತ್ತ  ಮದ್ಯದ ಅಂಗಡಿಗಳಿಗೆ ಅನುಮತಿ ನೀಡ ಬಾರದು. ಜನವಸತಿ ಪ್ರದೇಶಗಳಲ್ಲಿ ಮದ್ಯದ ಅಂಗಡಿಗಳಿಗೆ ಅನುಮತಿ ನೀಡುವಾಗ ಮಾರ್ಗಸೂಚಿ ಪಾಲನೆ ಮಾಡಬೇಕು’ ಎಂದು ಸೂಚಿಸಿದರು.

‘ಕೆಲವು ಕಡೆ ಬಸ್ ನಿಲ್ದಾಣಗಳಲ್ಲೇ ಮದ್ಯದಂಗಡಿಗಳಿದ್ದು ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗಿದೆ ಎಂಬ ದೂರುಗಳಿವೆ. ಇದನ್ನೂ  ಅಬಕಾರಿ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು’ ಎಂದರು.

‘ಮದ್ಯ ಮತ್ತು ಮಾದಕ ವಸ್ತುಗಳಿಂದಾಗುವ ಪರಿಣಾಮಗಳ ತಡೆಗಟ್ಟಲು ಮಂಡಳಿಯಿಂದ ಕೈಗೊಳ್ಳಬೇಕಾದ  ಕ್ರಮಗಳ ಕುರಿತು ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಲಾಗುತ್ತಿದೆ. ಅದರಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ರವೀಂದ್ರ, ಮದ್ಯಪಾನ ಸಂಯಮ ಮಂಡಳಿ ಸದಸ್ಯ ಬನಸಿಹಳ್ಳಿ ಅಜ್ಜಪ್ಪ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಬಸವರಾಜಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ಪರಮೇಶ್ವರಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರೇಣುಪ್ರಸಾದ್, ವಾರ್ತಾಧಿಕಾರಿ ಧನಂಜಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT