ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ತಟಸ್ಥ ನಿಲುವು

Last Updated 23 ಮಾರ್ಚ್ 2017, 6:41 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ದಶಕದ ಹಿಂದೆ ಅಸ್ತಿತ್ವ ಉಳಿಸಿಕೊಂಡಿದ್ದ ಜೆಡಿಎಸ್‌ ಮತ್ತೆ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲು ಹೆಣಗಾಡುತ್ತಿದೆ.

ಗುಂಡ್ಲುಪೇಟೆ ಮತ್ತು ಹನೂರು ವಿಧಾನಸಭಾ ಕ್ಷೇತ್ರದಲ್ಲಿ 2004ರ ಚುನಾವಣೆಯಲ್ಲಿ ಜೆಡಿಎಸ್‌ ಗೆಲುವಿನ ನಗೆ ಬೀರಿತ್ತು. ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಈಗ ಮತಗಳಿಕೆ ಹೆಚ್ಚಿಸಿಕೊಳ್ಳುವಲ್ಲಿಯೂ ಹಿಂದೆ ಬಿದ್ದಿದೆ. ಈ ನಡುವೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಯಲ್ಲಿಯೂ ಅಖಾಡಕ್ಕೆ ಇಳಿಯದೆ ತಟಸ್ಥ ನಿಲುವಿಗೆ ಜಾರಿದೆ.

ಉಪ ಚುನಾವಣಾ ಪೂರ್ವದಲ್ಲಿ ಗುಂಡ್ಲುಪೇಟೆ ಕ್ಷೇತ್ರಕ್ಕೆ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು ಎಂದು ಜೆಡಿಎಸ್‌ ವರಿಷ್ಠರು ಘೋಷಿಸಿದ್ದರು. ಆದರೆ, ಚುನಾವಣೆ ಘೋಷಣೆಯಾದ ಬಳಿಕ ಪಕ್ಷದಿಂದ ಅಧಿಕೃತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ವರಿಷ್ಠರು ಮುಂದಾಗಿಲ್ಲ.

1999ರ ಚುನಾವಣೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಜೆಡಿಎಸ್‌ ಸ್ಪರ್ಧೆಗೆ ಇಳಿಯಿತು. ಈ ಚುನಾವಣೆಯಲ್ಲಿ ಬಿ.ಎಂ. ಮುನಿರಾಜು ಜೆಡಿಎಸ್‌ನಿಂದ ಅದೃಷ್ಟ ಪರೀಕ್ಷೆಗೆ ಇಳಿದರು. ಆದರೆ, ಅವರು ಪಡೆದಿದ್ದು ಕೇವಲ ಶೇ 12.63ರಷ್ಟು (13,049 ಮತ) ಮತ. ಈ ಚುನಾವಣೆಯಲ್ಲಿ ಎಚ್‌. ಎಸ್‌. ಮಹದೇವಪ್ರಸಾದ್‌ ಜೆಡಿಯುನಿಂದ ಸ್ಪರ್ಧಿಸಿ ಗೆದ್ದಿದ್ದರು.

2004ರ ಚುನಾವಣೆ ವೇಳೆಗೆ ಮಹದೇವಪ್ರಸಾದ್‌ ಅವರ ಚಿತ್ತ ಜೆಡಿಎಸ್‌ನತ್ತ ಹೊರಳಿತ್ತು. ಜೆಡಿಎಸ್‌ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದ ಅವರು ಶೇ 45.56ರಷ್ಟು ಮತ (55,076 ಮತ) ಪಡೆಯುವ ಮೂಲಕ ಮೊದಲ ಬಾರಿಗೆ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಜೆಡಿಎಸ್‌ಗೆ ನೆಲೆ ಒದಗಿಸಿದರು. ಈ ಅವಧಿಯಲ್ಲಿ ಕ್ಷೇತ್ರದಲ್ಲಿ ಜೆಡಿಎಸ್‌ ಉಚ್ಛ್ರಾಯ ಸ್ಥಿತಿಯಲ್ಲಿತ್ತು. 2008ರ ಚುನಾವಣೆ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಸ್ಥಿತ್ಯಂತರ ಕಾಣಿಸಿಕೊಂಡಿತು.

ಜನತಾ ಪರಿವಾರದ ಹಲವು ಮುಖಂಡರು ‘ಕೈ’ ಹಿಡಿಯಲು ಸಜ್ಜಾದರು. ಮಹದೇವಪ್ರಸಾದ್‌ ಕೂಡ ಕೈಪಾಳಯಕ್ಕೆ ಜಿಗಿದರು. ಈ ಚುನಾವಣೆಯಲ್ಲಿ ಜೆಡಿಎಸ್‌ನ ಮತ ಬ್ಯಾಂಕ್‌ ಕೂಡ ಮಹದೇವಪ್ರಸಾದ್‌ ಜತೆ ಯಲ್ಲಿಯೇ ಕಾಂಗ್ರೆಸ್‌ನೊಂದಿಗೆ ವಿಲೀನಗೊಂಡಿತು ಎಂದರೆ ಅಚ್ಚರಿಪಡಬೇಕಿಲ್ಲ.

ಈ ಚುನಾವಣೆಯಲ್ಲಿ ಮಹದೇವಪ್ರಸಾದ್‌ ಶೇ 45.15ರಷ್ಟು ಮತ (64,824 ಮತ) ಪಡೆದು ಜಯಗಳಿಸಿದರು. ಜೆಡಿಎಸ್‌ ನಿಂದ ಅಖಾಡಕ್ಕೆ ಇಳಿದಿದ್ದ ಎಸ್‌. ಶಿವಬಸಪ್ಪ ಕೇವಲ ಶೇ 2.90ರಷ್ಟು ಮತ (4,156 ಮತ) ಪಡೆದರು. ಹಿಂದಿನ ಚುನಾವಣೆಯಲ್ಲಿ ಜೆಡಿಎಸ್‌ ಬುಟ್ಟಿಯಲ್ಲಿದ್ದ ಮತಗಳ ಪೈಕಿ ಶೇ 42.66ರಷ್ಟು ಮತಗಳು ಕಾಂಗ್ರೆಸ್‌ ಪಾಲಾಗಿದ್ದವು.

2013ರ ಚುನಾವಣೆಯಲ್ಲೂ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಜೆಡಿಎಸ್‌ ತನ್ನ ಅಸ್ತಿತ್ವಕ್ಕಾಗಿ ನಡೆಸಿದ ಹೋರಾಟ ಫಲ ಕೊಡ ಲಿಲ್ಲ. ಆ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ಪಿ. ಮುದ್ದುಮಲ್ಲು ಶೇ 2.47ರಷ್ಟು ಮತಕ್ಕೆ (4,017 ಮತ) ತೃಪ್ತಿಪಟ್ಟರು.

‘ಜೆಡಿಎಸ್‌ನಲ್ಲಿ ಸಮರ್ಥ ಅಭ್ಯರ್ಥಿಗಳಿದ್ದಾರೆ. ಗುಂಡ್ಲುಪೇಟೆ ಉಪ ಚುನಾವಣೆಗೆ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ನಿರ್ಧರಿಸಲಾಗಿತ್ತು. ಆದರೆ, ಮುಂದಿನ ವರ್ಷ ವಿಧಾನ ಸಭೆಗೆ ನಡೆಯುವ ಸಾರ್ವತ್ರಿಕ ಚುನಾವಣೆ ಮೇಲೆ ಕಣ್ಣಿಟ್ಟಿರುವ ವರಿಷ್ಠರು ಉಪ ಚುನಾವಣೆಗೆ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಮುಂದಾಗಿಲ್ಲ’ ಎನ್ನುತ್ತಾರೆ ಗುಂಡ್ಲುಪೇಟೆ ತಾಲ್ಲೂಕಿನ ಜೆಡಿಎಸ್‌ ಮುಖಂಡರು.

*
ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯತ್ತ ಪಕ್ಷದ ವರಿಷ್ಠರು ಗಮನ ಕೇಂದ್ರೀಕರಿಸಿ ದ್ದಾರೆ. ಉಪ ಚುನಾವಣೆಯಲ್ಲಿ ತಟಸ್ಥ ನಿಲುವು ತಳೆಯುವಂತೆ ಸೂಚಿಸಿದ್ದಾರೆ. ಹಾಗಾಗಿ, ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ.
-ಎಚ್‌.ಪಿ.ಕುಮಾರ್,
ಅಧ್ಯಕ್ಷ, ಜೆಡಿಎಸ್‌ ಗುಂಡ್ಲುಪೇಟೆ  ತಾಲ್ಲೂಕು ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT