ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ರಾಜಕುಮಾರ್, ಪುನೀತ್ ರಾಜಕುಮಾರ್...

Last Updated 23 ಮಾರ್ಚ್ 2017, 19:30 IST
ಅಕ್ಷರ ಗಾತ್ರ

* ‘ರಾಜಕುಮಾರ’ ಭಾರೀ ನಿರೀಕ್ಷೆ ಹುಟ್ಟಿಸಿದೆ. ಏನನ್ನಿಸುತ್ತಿದೆ?

ಸಿನಿಮಾ ಬಗ್ಗೆ ನಿರೀಕ್ಷೆಗಳನ್ನು ಹುಟ್ಟುಹಾಕಲೆಂದೇ ಹಾಡು–ಟ್ರೈಲರ್ ಬಿಡುಗಡೆ ಮಾಡುತ್ತೇವೆ. ಆದರೆ ಎಲ್ಲೋ ಒಮ್ಮೊಮ್ಮೆ ಅದು ಕೂಡಿಬರುತ್ತದೆ. ಈ ಸಿನಿಮಾಕ್ಕೆ ಅದು ಆಗಿದೆ. ‘ಬೊಂಬೆ ಹೇಳುತೈತೆ’ ಹಾಡನ್ನು ಸಿನಿಮಾದ ಕೊನೆಯ ಹಂತದಲ್ಲಿ ಮಾಡಿದ್ದು. ಅದು ತುಂಬಾ ಚೆನ್ನಾಗಿ ಮೂಡಿಬಂದಿದೆ. ಆ ಗೀತೆಯಿಂದ ನೋಡುಗರ ನಿರೀಕ್ಷೆಗಳು ಇಮ್ಮಡಿಯಾಗಿವೆ. ಹರಿಕೃಷ್ಣ ಸಂಗೀತ, ಸಂತೋಷ್ ಸಾಹಿತ್ಯ ಮತ್ತು ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿದ ಈ ಹಾಡು ನನಗೆ ಅಪ್ಪಾಜಿಯ ನೆನಪು ತರುತ್ತದೆ.

ನಾನು ಮೊದಲ ಸಿನಿಮಾದಿಂದಲೂ ಹೇಳುತ್ತ ಬಂದಿದ್ದು ಒಂದೇ. ಚಿತ್ರವೊಂದರ ಬಗ್ಗೆ ಪ್ರೇಕ್ಷಕನಲ್ಲಿ ನಿರೀಕ್ಷೆ ಖಂಡಿತಾ ಇರಬೇಕು. ಪ್ರತಿಯೊಬ್ಬರಿಗೂ ಅವರದೇ ಆದ ಕಲ್ಪನೆಗಳು ಇರುತ್ತವೆ. ಅದನ್ನು ಬಿಟ್ಟು ಚಿತ್ರಮಂದಿರಕ್ಕೆ ಬಂದಾಗ ಅದೊಂದು ಸಿನಿಮಾ ಆಗಿ ಕಾಣುತ್ತದೆ. ವೈಯಕ್ತಿಕವಾಗಿ ನಾನೊಬ್ಬ ನಟನಾಗಿ ಕೇಳಿಕೊಳ್ಳುವುದೇನೆಂದರೆ, ‘ಹೆಚ್ಚಾಗಿ ನಿರೀಕ್ಷೆ ಇಟ್ಟುಕೊಂಡು ಬರಬೇಡಿ’.

* ಒಂದಷ್ಟು ನಿರೀಕ್ಷೆಗಳಂತೂ ಇದ್ದೇ ಇರುತ್ತದೆ. ಅದನ್ನು ತೃಪ್ತಿಪಡಿಸುವಂಥದ್ದು ಸಿನಿಮಾದಲ್ಲಿ ಏನಿದೆ?

ಸಿನಿಮಾ ನೋಡಿದ ನಂತರವೇ ಎಲ್ಲರಿಗೂ ಗೊತ್ತಾಗುತ್ತದೆ. ನನಗೆ ಮೊದಲಿನಿಂದಲೂ ಸಿನಿಮಾದಲ್ಲಿ ‘ಹಾಗೆ ಮಾಡಿದ್ದೇವೆ, ಹೀಗೆ ಮಾಡಿದ್ದೇವೆ’ ಎಂದು ಹೇಳುವ ಅಭ್ಯಾಸವಿಲ್ಲ. ಒಂದಷ್ಟು ಸಿನಿಮಾ ತುಣುಕು, ಹಾಡುಗಳನ್ನು ಬಿಟ್ಟಿದ್ದಾರೆ. ಅದರ ಮೂಲಕ ಸಿನಿಮಾದಲ್ಲಿ ಏನಿದೆ ಎಂದು ಕಲ್ಪಿಸಿಕೊಳ್ಳಬಹುದು.

* ‘ರಾಜಕುಮಾರ’ ಎಂದಾಕ್ಷಣ ಒಂದು ಹೈಪ್ ಸೃಷ್ಟಿಯಾಗುತ್ತದೆ. ಅದನ್ನು ಹೇಗೆ ನಿಭಾಯಿಸಿದ್ದೀರಿ?

ತೀರಾ ಸಿದ್ಧತೆ ನಡೆಸಿಕೊಂಡು ಹೋಗುವ ‘ಅವಾರ್ಡ್ ನಟ’ ನಾನಲ್ಲ. ಒಂದು ಸಿನಿಮಾ ಒಪ್ಪಿಕೊಂಡ ನಂತರ ನಿಭಾಯಿಸುವುದೆಲ್ಲ ಇದ್ದೇ ಇರುತ್ತದೆ. ನನ್ನ ಹತ್ತಿರ ಏನು ಸಾಧ್ಯವೋ ಅಷ್ಟು ಮಾಡಿದ್ದೇನೆ. ಅದು ಎಷ್ಟರ ಮಟ್ಟಿಗೆ ಸಾಧ್ಯವಾಗಿದೆ ಎಂಬುದು ಸಿನಿಮಾದಲ್ಲಿ ಗೊತ್ತಾಗುತ್ತದೆ.

* ಒಂದು ಯಶಸ್ವೀ ಸಿನಿಮಾ ಕೊಟ್ಟ ನಿರ್ದೇಶಕ ಸಂತೋಷ್ ಆನಂದರಾಮ್ ಬಂದಾಗ ನಿಮ್ಮ ತಲೆಯಲ್ಲಿ ಏನಿತ್ತು?

ಏನೇ ಹಿಟ್ ಕೊಡಲಿ, ಏನೇ ಇರಲಿ–ನನಗೆ ಮೊದಲು ಕಥೆ ಇಷ್ಟ ಆಗಬೇಕಷ್ಟೆ. ಸಂತೋಷ್ ಒಂದು ಒಳ್ಳೆಯ ಸಿನಿಮಾ ಕೊಟ್ಟವರು, ಇನ್ನೊಂದು ಒಳ್ಳೆಯ ಸಿನಿಮಾವನ್ನೇ ಮಾಡುತ್ತಾರೆ ಎಂಬ ಕಾರಣಕ್ಕೆ ಕಥೆ ಕೇಳಿದೆ. ಅವರು ಹೇಳಿದ ಕಥೆ ಇಷ್ಟವಾಯಿತು.

* ನೀವು ಕೇಳಿದ ಕಥೆ ದೃಶ್ಯರೂಪದಲ್ಲಿ ಅಷ್ಟೇ ಚೆನ್ನಾಗಿ ಮೂಡಿಬಂದಿದೆಯೇ?

ನಮಗೆ ಎಲ್ಲವೂ ಚೆನ್ನಾಗಿಯೇ ಕಾಣಿಸುತ್ತದೆ. ನಾವು ಸಿನಿಮಾ ಮಾಡುವುದು ಜನರಿಗಾಗಿ. ಅವರಿಗೆ ಚೆನ್ನಾಗಿ ಕಾಣಬೇಕಷ್ಟೇ. ಒಂದೆಡೆ ಖುಷಿ ಇದೆ, ಮತ್ತೊಂದೆಡೆ ಭಯ ಎರಡೂ ಇದೆ.

* ‘ರಾಜಕುಮಾರ’ ಹೆಸರಲ್ಲಿನ ವರ್ಚಸ್ಸು ಸಿನಿಮಾಕ್ಕೆ ಎಷ್ಟು ಪೂರಕವಾಗಿದೆ?

ಆ ಹೆಸರಿನಲ್ಲಿರುವ ಶಕ್ತಿಯ ಬಗ್ಗೆ ಮಾತನಾಡುವ ಸಾಮರ್ಥ್ಯ ನಮಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಇಡೀ ಕರ್ನಾಟಕಕ್ಕೆ ಅದರ ತಾಕತ್ತು ಗೊತ್ತು. ಅಂಥ ಚೈತನ್ಯ ಇರುವ ಶೀರ್ಷಿಕೆಯನ್ನು ಈ ಸಿನಿಮಾಕ್ಕೆ ಯಾಕೆ ಬಳಸಿದ್ದಾರೆಂದು ನಿರ್ದೇಶಕರೇ ಹೇಳಬೇಕು. ಆದರೆ ಅಪ್ಪಾಜಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದು ‘ರಾಜಕುಮಾರ್’. ನಟಿಸಿರುವುದು ಪುನೀತ್ ರಾಜಕುಮಾರ್.

* ‘ರಾಜಕುಮಾರ’ ಆರಂಭವಾಗಿದ್ದು ಒಂದೊಳ್ಳೆ ಸಿನಿಮಾ ಮಾಡೋಣ ಎಂಬ ಉದ್ದೇಶದಿಂದಲೋ ಅಥವಾ ಹಿಟ್ ಸಿನಿಮಾ ಕೊಡಬೇಕು ಎಂತಲೋ?

ಒಬ್ಬ ನಟ ಪ್ರತಿ ಸಿನಿಮಾ ಮಾಡುವಾಗಲೂ ಅದು ಹಿಟ್ ಆಗಬೇಕು ಎಂಬ ನಿರೀಕ್ಷೆಯಿಂದಲೇ ಮಾಡುವುದು. ನಾನೂ ಹಾಗೇ ಮಾಡಿರುವುದು.

* ನಾಯಕಿ ಪ್ರಿಯಾ ಆನಂದ್ ಬಗ್ಗೆ?

ತುಂಬಾ ಒಳ್ಳೆಯ ನಟಿ. ಒಳ್ಳೆಯ ಹುಡುಗಿ. ಅವರ ಸಿನಿಮಾ ನೋಡಿ ನಾನು ಇಷ್ಟಪಟ್ಟಿದ್ದೇನೆ. ನಮ್ಮ ಸಿನಿಮಾದಲ್ಲಿ ಎಲ್ಲೂ ಏನೂ ತೊಂದರೆ ಆಗದಂತೆ ಅಚ್ಚುಕಟ್ಟಾಗಿ ಚೆನ್ನಾಗಿ ಕೆಲಸ ಮಾಡಿದರು. ಅವರು ಕನ್ನಡದಲ್ಲಿ ಇನ್ನಷ್ಟು ಸಿನಿಮಾ ಮಾಡಬೇಕು.

* ತಾರಾಗಣದಲ್ಲಿ ಹಿರಿಯ ಮತ್ತು ಜನಪ್ರಿಯ ಕಲಾವಿದರ ದಂಡೇ ಇದೆ. ಸೆಟ್‌ನಲ್ಲಿ ಆ ವಾತಾವರಣ ಹೇಗಿತ್ತು?

‘ರಾಮ್’, ‘ಪವರ್’ ಚಿತ್ರಗಳಲ್ಲೂ ದೊಡ್ಡ ತಾರಾಗಣ ಇತ್ತು. ಆದರೆ ಇಲ್ಲಿ ಅದಕ್ಕಿಂತ ಹೆಚ್ಚು ಕಲಾವಿದರಿದ್ದಾರೆ. ಅವರೆಲ್ಲರೂ ನನ್ನ ಈವರೆಗಿನ ಒಂದಲ್ಲ ಒಂದು ಸಿನಿಮಾದಲ್ಲಿ ಸಿಕ್ಕೇ ಇರುತ್ತಾರೆ. ಆದರೂ ಮಾತನಾಡಲು ಇನ್ನೂ ಸಾಕಷ್ಟು ವಿಚಾರಗಳಿರುತ್ತವೆ. ಎಲ್ಲರೂ ಒಟ್ಟಿಗೆ ಸೇರಿದಾಗ ಸಿನಿಮಾ, ದಿನನಿತ್ಯದ ಜೀವನ ಎಲ್ಲದರ ಬಗ್ಗೆಯೂ ಒಳ್ಳೆಯ ಮಾತುಕತೆ ನಡೆಯುತ್ತದೆ. ಅದೊಂದು ಸಂತೋಷದ ವಾತಾವರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT