ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸ್ತ್ರವಿನ್ಯಾಸಕಿಯ ಸಿನಿಮಾ ಪ್ರೀತಿ

Last Updated 24 ಮಾರ್ಚ್ 2017, 8:46 IST
ಅಕ್ಷರ ಗಾತ್ರ

* ನಿಮ್ಮ ಶಿಕ್ಷಣ?

ನನ್ನೂರು ಬಾಗಲಕೋಟೆ. ಅಲ್ಲಿಯೇ ಬಿಬಿಎಯಲ್ಲಿ ಪದವಿ ಮಾಡಿದ್ದೇನೆ. ನಂತರ ಬೆಂಗಳೂರಿನಲ್ಲಿ ಫ್ಯಾಷನ್‌ ಡಿಸೈನಿಂಗ್‌ ಕೋರ್ಸ್ ಮಾಡಿಕೊಂಡೆ.

* ಸಿನಿಮಾ ಪಯಣದ ಬಗ್ಗೆ ತಿಳಿಸಿ?

ಟಿ.ಎನ್‌.ಸೀತಾರಾಮ್‌ ಅವರ ‘ಕಾಫಿತೋಟ’ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದೇನೆ. ದೇವರಾಜ್‌ ಪೂಜಾರಿ ಅವರ ‘ಕಿನಾರೆ’ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ರವಿತೇಜ ನಿರ್ದೇಶನದ ಕುಂದಾಪುರ ಕನ್ನಡದ ‘ಕಾಣದ ಕಡಲಿಗೆ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದೇನೆ. ತಮಿಳು, ತೆಲುಗು ಸಿನಿಮಾದಲ್ಲಿ ಸಾಕಷ್ಟು ಅವಕಾಶ ಬರುತ್ತಿದೆ. ಆದರೆ ನನಗೆ ಕನ್ನಡ ಹೊರತಾಗಿ ಬೇರೆ ಭಾಷೆಗಳಲ್ಲಿ ನಟಿಸಲು ಇಷ್ಟವಿಲ್ಲ.  

* ಸಿನಿಮಾ, ಕಿರುತೆರೆ ಎರಡರಲ್ಲಿಯೂ ನಟಿಸಲು ಕಾರಣವೇನು?

ನಾನು ಈ ಕ್ಷೇತ್ರವನ್ನು ಪ್ರವೇಶಿಸಿದ್ದೇ ‘ಶ್ರೀಮತಿ ಭಾಗ್ಯಲಕ್ಷ್ಮೀ’ ಧಾರಾವಾಹಿಯ ಮೂಲಕ. ನಂತರ ಸಿನಿಮಾಗಳಲ್ಲಿ ಅವಕಾಶ ದೊರಕಿತು. ಸಿನಿಮಾ ಮಾಡುವಾಗ  ಒಳ್ಳೆಯ ಧಾರಾವಾಹಿ ತಂಡದಿಂದ ಕರೆ ಬಂದಾಗ ನನಗೆ ಇಲ್ಲ ಎನ್ನಲು ಆಗಲಿಲ್ಲ. ಅಲ್ಲದೆ ನಾನು ನಾಯಕಿ ಆಗಬೇಕು ಎಂದು ಇಲ್ಲಿಗೆ ಬರಲಿಲ್ಲ. ನಟಿಯಾಗಬೇಕು ಎಂದುಕೊಂಡು  ಬಂದವಳು. ನಟನೆ ವೃತ್ತಿ ಎಂದುಕೊಂಡಾಗ ಕಿರುತೆರೆ, ಹಿರಿತೆರೆ ಎಂಬ ಬೇಧ ಮಾಡುವುದು ಸರಿಯಲ್ಲ. ನನಗೆ ನಟಿಸುವುದು ಇಷ್ಟ. ಹಾಗಾಗಿ ಒಳ್ಳೆಯ ಅವಕಾಶ ಬಂದಾಗ ಒಪ್ಪಿಕೊಳ್ಳುತ್ತೇನೆ. ಜೊತೆಗೆ ಈಗ ಧಾರಾವಾಹಿ ಕೂಡ ಪ್ರಾಮುಖ್ಯ ಪಡೆದುಕೊಳ್ಳುತ್ತಿದೆ.

* ಮೊದಲ ಅವಕಾಶ ದೊರಕಿದ್ದು ಹೇಗೆ?

ನನಗೆ ಬಾಲ್ಯದಿಂದಲೂ ನೃತ್ಯವೆಂದರೆ ತುಂಬಾ ಇಷ್ಟ.  ಕಲಿಯಲು ಅವಕಾಶ ದೊರಕಿರಲಿಲ್ಲ. ಬೆಂಗಳೂರಿಗೆ ಬಂದ ನಂತರ ‘ಶ್ಯಾಡೊ’ ನೃತ್ಯ ತಂಡ ಸೇರಿಕೊಂಡೆ. ಹಲವೆಡೆ ಕಾರ್ಯಕ್ರಮಗಳನ್ನು ನೀಡುತ್ತಿದ್ದೆವು. ಆಗ ‘ಶ್ರೀಮತಿ ಭಾಗ್ಯಲಕ್ಷ್ಮೀ’ ಧಾರಾವಾಹಿಯ ನಿರ್ದೇಶಕರು ನೋಡಿ ಅವಕಾಶ ನೀಡಿದರು.

* ಜನ ಈಗಲೂ ನಿಮ್ಮನ್ನು ಭಾಗ್ಯ ಎನ್ನುತ್ತಾರಂತೆ?

ಹೌದು, ತುಂಬಾ ಹೆಸರು ತಂದುಕೊಟ್ಟ ಧಾರಾವಾಹಿ ಅದು. ‘ನೀವು ಭಾಗ್ಯ ಅಲ್ವಾ’ ಎಂದು ಸಾಕಷ್ಟು ಮಂದಿ ಕೇಳಿದ್ದಾರೆ. ಸಾಂಪ್ರದಾಯಿಕ ಪಾತ್ರವದು. ಅಳುವ ಸನ್ನಿವೇಶವೇ ಹೆಚ್ಚಿತ್ತು. ಬಹುಶಃ ಆ ಕಾರಣಕ್ಕೆ ಜನರ ಮನಸ್ಸಿಗೆ ಹತ್ತಿರವಾಗಿದ್ದೆ ಅನಿಸುತ್ತದೆ.

* ನಟನೆಯ ತರಬೇತಿ ಪಡೆದಿದ್ದೀರಾ?

ಎಲ್ಲಿಯೂ ತರಬೇತಿ ಪಡೆದಿಲ್ಲ. ಮೊದಲ ಬಾರಿಗೆ ಕ್ಯಾಮೆರಾ ಎದುರಿಸುವಾಗ ಭಯವಾಗುತ್ತಿತ್ತು. ಆದರೆ ಧಾರಾವಾಹಿಯಲ್ಲಿದ್ದ ಹಿರಿಯರ ನಟನೆಯನ್ನು ಗಮನಿಸುತ್ತಿದ್ದೆ. ಅವರಿಂದಲೇ ಸಾಕಷ್ಟು ಕಲಿತಿದ್ದೇನೆ.

* ನಟನಾ ಪ್ರೀತಿ ಬೆಳೆದಿದ್ದು ಹೇಗೆ?

ನಟಿಯಾಗಬೇಕು ಎಂದು ನಾನು ಅಂದುಕೊಂಡಿರಲಿಲ್ಲ. ಆದರೆ ಮನೆಯಲ್ಲಿ ಕನ್ನಡಿ ಮುಂದೆ ಇಷ್ಟಪಟ್ಟು ನಟಿಸುತ್ತಿದ್ದೆ. ಚಿಕ್ಕ ವಯಸ್ಸಿನಿಂದಲೂ ಅದೊಂದು ಅಭ್ಯಾಸವಾಗಿಯೇ ಬಿಟ್ಟಿತ್ತು. ಟೀವಿಯಲ್ಲಿ ಕಂಡ ನಟಿಯರನ್ನು ಅನುಕರಿಸುತ್ತಿದ್ದೆ. ಶ್ರುತಿಯಂತೆ ಅಳುತ್ತಿದ್ದೆ. ಸುಪ್ತ ಪ್ರತಿಭೆ ನಗರಕ್ಕೆ ಬಂದ ನಂತರ ಅನಾವರಣಗೊಂಡಿತು.

* ಎಂತಹ ಪಾತ್ರಗಳಲ್ಲಿ ಮಾಡುವ ಆಸೆಯಿದೆ?

ಇಲ್ಲಿಯವರೆಗೂ ಮಾಡಿರುವ ಎಲ್ಲಾ ಪಾತ್ರಗಳು ಒಂದಕ್ಕಿಂತ ಮತ್ತೊಂದು ವಿಭಿನ್ನವಾಗಿವೆ. ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆಯಿತ್ತು. ಅದು ‘ಕಾಫಿ ತೋಟ’ದ ಮೂಲಕ ಈಡೇರಿದೆ. ಸಾಂಪ್ರದಾಯಿಕ ಪಾತ್ರಗಳನ್ನು ಮಾಡಿದ್ದೇನೆ. ಹೀಗೆ ಸವಾಲು ಎನ್ನಿಸುವ ಹೊಸ ಪಾತ್ರ ಮಾಡಬೇಕು ಎನ್ನುವ ಆಸೆಯಿದೆ. ಮಾಡರ್ನ್‌ ಪಾತ್ರ ಹೆಚ್ಚು ಇಷ್ಟವಾಗುತ್ತದೆ.

* ವಸ್ತ್ರವಿನ್ಯಾಸ ಕೂಡಾ ಮಾಡುತ್ತೀರಂತೆ...

ಹೌದು. ಬಿಡುವು ಸಿಕ್ಕಿದರೆ ಅದೇ ಕೆಲಸ. ಹಲವು ಗ್ರಾಹಕರಿದ್ದಾರೆ. ಇದು ನನ್ನ ಇಷ್ಟದ ವೃತ್ತಿ.

* ನಟನೆ ಹೊರತಾಗಿ ನಿಮ್ಮ ಹವ್ಯಾಸ?

ಹಿಂದೂಸ್ತಾನಿ ಸಂಗೀತ ಕಲಿಯುತ್ತಿದ್ದೇನೆ. ಮುಂದೆ ಗಾಯಕಿಯಾಗುವ ಆಸೆಯಿದೆ.

* ಜನರ ಪ್ರತಿಕ್ರಿಯೆ ಹೇಗಿದೆ?

ಉತ್ತರ ಕರ್ನಾಟಕದ ಮಂದಿ ನನ್ನನ್ನು ಮನೆಮಗಳಂತೆ ನೋಡುತ್ತಾರೆ. ಅಲ್ಲೆಲ್ಲ ಕಾರ್ಯಕ್ರಮಕ್ಕೆ ಹೋದಾಗ ಜನರು ಪ್ರೀತಿಯಿಂದ ಮಾತನಾಡಿಸುತ್ತಾರೆ. ‘ನಮ್ಮ ಹುಡುಗಿಯ ಸಿನಿಮಾ ಬರುತ್ತಿದೆ’ ಎನ್ನುವ ಅವರ ಮಾತುಗಳೇ ನನಗೆ ಪ್ರೇರಣೆ.

* ‘ತ್ರಿವೇಣಿ ಸಂಗಮ’ ಒಪ್ಪಿಕೊಳ್ಳಲು ಕಾರಣ?

ಸಿನಿಮಾದ ಶೂಟಿಂಗ್‌ ನಡೆಯುವಾಗ ‘ತ್ರಿವೇಣಿ ಸಂಗಮ’ ಧಾರಾವಾಹಿಗೆ ಕರೆ ಬಂತು. ಕಥೆ ಕೇಳಿದ ನಂತರ ಇಷ್ಟವಾಯಿತು. ಸಾಮಾನ್ಯವಾಗಿ ಎಲ್ಲಾ ಧಾರಾವಾಹಿಗಳಲ್ಲಿ ಅತ್ತೆ, ಸೊಸೆ, ಅಳು... ಇದೇ ಕಥೆ ಇರುತ್ತದೆ. ಆದರೆ ಈ ಕಥೆ ಹೊಸದೇನೊ ಹೇಳುತ್ತದೆ ಎನಿಸಿತು. ಹಾಗಾಗಿ ಒಪ್ಪಿಕೊಂಡೆ.

* ಫಿಟ್‌ನೆಸ್‌, ಹೊಳೆಯುವ ಚರ್ಮಕ್ಕೆ ಏನು ಮಾಡುತ್ತೀರಿ?

ನನಗೆ ತಿನ್ನುವುದೆಂದರೆ ತುಂಬಾ ಇಷ್ಟ. ಹಾಗಾಗಿ ಚೆನ್ನಾಗಿ ತಿನ್ನುತ್ತೇನೆ. ವಾಕಿಂಗ್‌, ನೃತ್ಯ ಮಾಡುವುದರಿಂದ ಸಪೂರವಾಗಿಯೇ ಇದ್ದೇನೆ. ಜಿಮ್‌ಗೆ ಹೋಗುವುದೆಂದರೆ  ಆಗುವುದಿಲ್ಲ.  ಚರ್ಮದ ರಕ್ಷಣೆಗೆ  ನೈಸರ್ಗಿಕ ಉತ್ಪನ್ನಗಳನ್ನಷ್ಟೇ ಬಳಸುತ್ತೇನೆ.

***

‘ಆತ್ಮವಿಶ್ವಾಸ ಮತ್ತು ಸಂತೋಷವಾಗಿರುವ ಕಾರಣಕ್ಕೆ ನಾನು ಸುಂದರವಾಗಿ ಕಾಣುತ್ತೇನೆ.  ನಗುವೇ ನನ್ನ ಬಲ’

-ಅಪೇಕ್ಷಾ ಪುರೋಹಿತ, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT