ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಡನ್‌ ದಾಳಿ: ಮತ್ತಿಬ್ಬರ ಬಂಧನ

Last Updated 24 ಮಾರ್ಚ್ 2017, 19:14 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ/ಐಎಎನ್‌ಎಸ್‌): ಬ್ರಿಟನ್‌ ಸಂಸತ್‌ ಬಳಿ ನಡೆದ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಇನ್ನಿಬ್ಬರನ್ನು ಬಂಧಿಸಲಾಗಿದೆ ಎಂದು ಸ್ಕಾಟ್ಲೆಂಡ್‌ ಯಾರ್ಡ್‌ ಪೊಲೀಸರು ತಿಳಿಸಿದ್ದಾರೆ.

‘ಎರಡು ದಿನಗಳಲ್ಲಿ ಒಟ್ಟು ಹತ್ತು ಮಂದಿಯನ್ನು ಬಂಧಿಸಲಾಗಿದೆ. ಒಂಬತ್ತು ಮಂದಿ ಪೊಲೀಸ್‌ ಕಸ್ಟಡಿಯಲ್ಲಿದ್ದು, ಒಬ್ಬ ಮಹಿಳೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ’ ಎಂದು ಸ್ಕಾಟ್ಲೆಂಡ್‌ ಯಾರ್ಡ್‌ ಪೊಲೀಸ್‌ನ ಹಂಗಾಮಿ ಉಪ ಕಮಿಷನರ್‌ ಮತ್ತು ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಮಾರ್ಕ್‌ ರೌಲಿ ಹೇಳಿದ್ದಾರೆ.

ದಾಳಿಕೋರ ಖಾಲಿದ್‌ ಮಸೂದ್‌ನ ಹಿನ್ನೆಲೆ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಪೊಲೀಸರಿಗೆ ತಿಳಿಸುವಂತೆ ಅವರು ಸಾರ್ವಜನಿಕರಲ್ಲಿ ಕೇಳಿಕೊಂಡಿದ್ದಾರೆ. ಡಾರ್ಟ್‌ಫೋರ್ಡ್‌ನಲ್ಲಿ ಜನಿಸಿದ್ದ ಖಾಲಿದ್‌ನ ಮೊದಲ ಹೆಸರು ಅಡ್ರಿಯಾನ್‌ ರಸೆಲ್‌ ಅಜಾವೊ ಎಂದಾಗಿತ್ತು. ಆತ ಇಸ್ಲಾಂಗೆ ಮತಾಂತರಗೊಂಡಿದ್ದ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಆತ (ಮಸೂದ್‌) ಒಬ್ಬಂಟಿಯಾಗಿ ಈ ದಾಳಿ ನಡೆಸಿದ್ದಾನೆಯೇ ಅಥವಾ ಇತರರು ನೆರವು ನೀಡಿದ್ದರೇ ಎಂಬುದನ್ನು ತಿಳಿಯಬೇಕಿದೆ. ಆ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ. ಗುರುವಾರ ರಾತ್ರಿ ವೆಸ್ಟ್‌ ಮಿಡ್‌ಲ್ಯಾಂಡ್ಸ್‌ ಮತ್ತು ವಾಯವ್ಯ ಲಂಡನ್‌ನಲ್ಲಿ ತಲಾ ಒಬ್ಬರನ್ನು ಬಂಧಿಸಲಾಗಿದೆ’ ಎಂದು ರೌಲಿ ವಿವರಿಸಿದ್ದಾರೆ.

‘ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಬ್ರಿಟನ್‌ನ ಐದು ಕಡೆ ದಾಳಿ ನಡೆಸಿದ್ದಾರೆ. ಭಾರಿ ಪ್ರಮಾಣದ ಕಂಪ್ಯೂಟರ್‌ ಡಾಟಾ ಸೇರಿದಂತೆ 2,700 ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 3,500 ಸಾಕ್ಷಿಗಳ ಹೇಳಿಕೆ ಪಡೆಯಲಾಗಿದೆ’ ಎಂದಿದ್ದಾರೆ.

ಗಾಯಾಳು ಸಾವು: ದಾಳಿಕೋರ ಮಸೂದ್‌ ವೆಸ್ಟ್‌ಮಿನಿಸ್ಟರ್‌ ಸೇತುವೆಯಲ್ಲಿ ಪಾದಚಾರಿ ಮಾರ್ಗದ ಮೇಲೆ ಕಾರು ನುಗ್ಗಿಸಿದ್ದಾಗ ಗಾಯಗೊಂಡಿದ್ದ  ವ್ಯಕ್ತಿಯೊಬ್ಬರು ಗುರುವಾರ ಮೃತಪಟ್ಟಿದ್ದಾರೆ. ಅವರನ್ನು ದಕ್ಷಿಣ ಲಂಡನ್‌ನ ನಿವಾಸಿ ಲೆಸ್ಲಿ ರೋಡ್ಸ್‌ (75) ಎಂದು ಗುರುತಿಸಲಾಗಿದೆ. ಇದರಿಂದ ದಾಳಿಯಲ್ಲಿ ಸತ್ತವರ ಸಂಖ್ಯೆ ಐದಕ್ಕೆ ಏರಿದೆ. ಲಂಡನ್‌ ಪೊಲೀಸ್‌ ಅಧಿಕಾರಿ ಕೀತ್‌ ಪಾಲ್ಮೆರ್‌, ಅಮೆರಿಕದ ಪ್ರವಾಸಿ ಕರ್ಟ್‌ ಕೊಹ್ರೇನ್‌ ಮತ್ತು ಸ್ಪೇನ್‌ನ ಪ್ರಜೆ ಆಯೆಷಾ ಫ್ರೇಡ್‌ ಅವರು ದಾಳಿಯಲ್ಲಿ ಬಲಿಯಾಗಿದ್ದರು. ಮಸೂದ್‌ನನ್ನು ಪೊಲೀಸರು ಗುಂಡಿಟ್ಟು ಸಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT