ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸಕ್ತ ವರ್ಷ ₹7,590 ಕೋಟಿ ಹೆಚ್ಚುವರಿ ವೆಚ್ಚ

ಪೂರಕ ಅಂದಾಜುಗಳ ಅಂತಿಮ ಕಂತು ವಿಧಾನ ಮಂಡಲದಲ್ಲಿ ಮಂಡನೆ
Last Updated 24 ಮಾರ್ಚ್ 2017, 20:05 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮೆಟ್ರೊ ಎರಡನೇ ಹಂತದ ಯೋಜನೆಯ ಭೂ ಸ್ವಾಧೀನಕ್ಕೆ ₹357 ಕೋಟಿ ಸೇರಿದಂತೆ ಪ್ರಸಕ್ತ ಹಣಕಾಸು ವರ್ಷದ ₹7,590 ಕೋಟಿ ಮೊತ್ತದ ಹೆಚ್ಚುವರಿ ಪೂರಕ ಅಂದಾಜುಗಳನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಶುಕ್ರವಾರ ಮಂಡಿಸಲಾಯಿತು.

ಬೆಂಗಳೂರು ಉಪನಗರ (ಸಬ್‌ ಅರ್ಬನ್‌) ರೈಲು ಒಂದನೇ ಹಂತದ ಯೋಜನೆಯ ವಿಸ್ತೃತ ವರದಿ (ಡಿಪಿಆರ್) ತಯಾರಿಸಲು ₹ 2 ಕೋಟಿ ಮಂಜೂರು ಮಾಡಲಾಗಿದೆ.

ಇಂಧನ ಸಹಾಯಧನಕ್ಕೆ ₹1,449 ಕೋಟಿ  ವೆಚ್ಚ ಆಗಿದೆ. ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಫಲಾನುಭವಿಗಳಿಗೆ ಮತ್ತು ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್‌ ಪೂರೈಸಲು ಈ ಹಣ ವೆಚ್ಚವಾಗಿದೆ. ಈ ವರ್ಷ ₹7,199 ಕೋಟಿಯನ್ನು ವಿದ್ಯುತ್‌ ಪೂರೈಕೆಗಾಗಿ ವೆಚ್ಚ ಮಾಡಲಾಗುತ್ತಿದೆ.

ಬಾಕಿ ಇರುವ ಬಿಲ್‌ಗಳನ್ನು ಚುಕ್ತಾ ಮಾಡಲು ಲೋಕೋಪಯೋಗಿ ಇಲಾಖೆಗೆ ಹೆಚ್ಚುವರಿಯಾಗಿ  ₹1383 ಕೋಟಿ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಗೆ ಹೆಚ್ಚುವರಿಯಾಗಿ ₹1,243 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಅದರಲ್ಲಿ ನರೇಗಾ ಯೋಜನೆಗೆ ನೀಡಿದ ₹ 525 ಕೋಟಿ ಮತ್ತು ಬರ ಪರಿಹಾರ ಕಾಮಗಾರಿಗೆ ವಿಶೇಷ ಅನುದಾನವಾಗಿ ನೀಡಿದ ₹ 100 ಕೋಟಿ ಸೇರಿದೆ.

ಉಪ ಚುನಾವಣೆ ನಡೆಯಲಿರುವ ನಂಜನಗೂಡು ವಿಧಾನಸಭಾ ಕ್ಷೇತ್ರದ ಚಾಮಲಾಪುರದಲ್ಲಿ ಬಸವ ಭವನ ನಿರ್ಮಿಸಲು  ₹2 ಕೋಟಿ ಅನುದಾನ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಪರಿಷ್ಕೃತ ಅಂದಾಜು ವೆಚ್ಚದ ಪ್ರಕಾರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಒಟ್ಟು ₹ 1,64,479 ಕೋಟಿ ವೆಚ್ಚವಾಗಿದೆ.

ಯಾವುದಕ್ಕೆ ಎಷ್ಟು ವೆಚ್ಚ...
* ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಸರ್ಕಾರದ ಮುಖ್ಯ ಸಚೇತಕರ ಮತ್ತು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕನ ಪ್ರಯಾಣ ವೆಚ್ಚ ₹ 50 ಲಕ್ಷ

* ವಿಧಾನ ಪರಿಷತ್ತಿನ ಸಭಾಪತಿ ಮತ್ತು ಉಪಸಭಾಪತಿಯ ಒಟ್ಟು ಪ್ರಯಾಣ ವೆಚ್ಚ ₹ 34 ಲಕ್ಷ 

* ವಿಧಾನ ಪರಿಷತ್ತಿನ ಮಾಜಿ ಸದಸ್ಯರ ವೈದ್ಯಕೀಯ ವೆಚ್ಚ ₹ 20 ಲಕ್ಷ

* ಮಂಡಳಿ ಮತ್ತು ನಿಗಮಗಳ ಅಧಿಕಾರೇತರ ಸದಸ್ಯರ ತರಬೇತಿಗೆ ₹ 92 ಲಕ್ಷ

* ಅಲ್ಪಸಂಖ್ಯಾತರ ಕಾಲೊನಿಗಳಲ್ಲಿ ಮೂಲಸೌಲಭ್ಯ ಮೇಲ್ದರ್ಜೆಗೇರಿಸಲು ತಗುಲಿದ ವೆಚ್ಚ ₹ 25 ಕೋಟಿ

* ವಕ್ಫ್‌ ಆಸ್ತಿ ರಕ್ಷಣೆಗೆ ₹ 5 ಕೋಟಿ

* ಶ್ರವಣಬೆಳಗೊಳದಲ್ಲಿ ಮುಂದಿನ ವರ್ಷ ನಡೆಯಲಿರುವ ಮಹಾಮಸ್ತಾಭಿಷೇಕದ ಸಿದ್ಧತೆಗಾಗಿ ₹ 5 ಕೋಟಿ

* ಕಳೆದ ವರ್ಷ ಮೈಸೂರಿನ ಟಿ. ನರಸೀಪುರದಲ್ಲಿ ನಡೆದ ಕುಂಭಮೇಳಕ್ಕೆ ₹ 4 ಕೋಟಿ

* ನೆಹರೂ ಚಿಂತನ ಕೇಂದ್ರಕ್ಕೆ ₹ 3 ಕೋಟಿ

* ಅನುದಾನಿತ ಸಂಸ್ಕೃತ ಪಾಠಶಾಲೆಗೆ ₹ 1.59 ಕೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT