ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸಕ್ಕೆ ಕ್ಯಾಮೆರಾ ಕಣ್ಣು...

Last Updated 31 ಮಾರ್ಚ್ 2017, 19:30 IST
ಅಕ್ಷರ ಗಾತ್ರ

*ಛಾಯಾಗ್ರಹಣದ ಆಸಕ್ತಿ ಹೇಗೆ ಮೂಡಿತು?
ಎಂಜಿನಿಯರ್ ಆದ ಕಾರಣ ಕಂಪೆನಿ ಕೆಲಸಕ್ಕಾಗಿ ಹಲವು ದೇಶಗಳಿಗೆ ಪ್ರವಾಸ ಹೋಗುತ್ತಿದ್ದೆ. ಆಗೆಲ್ಲಾ ಫೋಟೊ ತೆಗೆಯುತ್ತಿದ್ದೆ. ಒಂದು ವಸ್ತುವನ್ನು ಪ್ರತಿಯೊಬ್ಬರು ವಿಭಿನ್ನವಾಗಿ ನೋಡುತ್ತಾರೆ. ಕಲ್ಪನೆಯ ವಿಸ್ತರಣಾ ಸಾಮರ್ಥ್ಯ ಛಾಯಾಗ್ರಹಣಕ್ಕೆ ಅಗತ್ಯ.

ಆರಂಭದ ದಿನಗಳಲ್ಲಿ ಕ್ಯಾಮೆರಾ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ವಿಭಿನ್ನ ದೃಷ್ಟಿಕೋನದಲ್ಲಿ ತೆಗೆದ ಫೋಟೊಗಳು ಉತ್ತಮವಾಗಿ ಮೂಡಿಬಂದವು. 17 ವರ್ಷದ ಹಿಂದೆ ಕೆಲಸ ಬಿಟ್ಟು ಛಾಯಾಗ್ರಹಣದಲ್ಲಿ ತೊಡಗಿಸಿಕೊಂಡೆ.

2005ರಲ್ಲಿ ಆರು ಛಾಯಾಗ್ರಾಹಕರ ಜೊತೆಗೂಡಿ ರಾಜ್ಯದ ಪ್ರಮುಖ ಸ್ಮಾರಕಗಳ ವಿಭಿನ್ನ ಛಾಯಾಚಿತ್ರ ತೆಗೆದೆ. ಈ ಪ್ರಾಜೆಕ್ಟ್‌ ನನ್ನ ಆತ್ಮವಿಶ್ವಾಸ ಹೆಚ್ಚಿಸಿತು. ಪ್ರಾಯೋಗಿಕ ಅನುಭವನ್ನು ನೀಡಿತು.

*ಯಾವ ಬಗೆಯ ಛಾಯಾಚಿತ್ರ ಸೆರೆಹಿಡಿಯಲು ನಿಮಗೆ ಇಷ್ಟ?
ಸ್ಟ್ರೀಟ್‌, ಪಿಕ್ಟೋರಿಯಲ್, ವೈಲ್ಡ್‌ಲೈಫ್, ವ್ಯಕ್ತಿ ಚಿತ್ರ, ಪ್ರಾಚೀನ ಸ್ಮಾರಕ, ಜಾತ್ರೆ, ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಆಚರಣೆಗಳು, ವಾಸ್ತುಶಿಲ್ಪ, ಲ್ಯಾಂಡ್‌ಸ್ಕೇಪ್, ಲೋಲೈಟ್, ಲೈಫ್‌ಸ್ಟೈಲ್, ಒಳಾಂಗಣ... ಹೀಗೆ ಎಲ್ಲಾ ಬಗೆಯ ಛಾಯಾಗ್ರಾಹಣ ಶೈಲಿಯಲ್ಲೂ ಕೆಲಸ ಮಾಡಿದ್ದೇನೆ. ‘ಟೂರಿಸಂ ಫೋಟೊಗ್ರಫಿ’ ನನಗಿಷ್ಟ. ಈಗ ಆಸ್ಟ್ರೊ ಫೋಟೊಗ್ರಫಿಯಲ್ಲಿ ಹಲವು ಪ್ರಯೋಗಗಳನ್ನು ಮಾಡುತ್ತಿದ್ದೇನೆ. ಫ್ಯಾಷನ್ ಫೋಟೊಗ್ರಫಿಗೆ ಈವರೆಗೆ ಪ್ರಯತ್ನಿಸಿಲ್ಲ.

*ಆಸ್ಟ್ರೊ ಫೋಟೊಗ್ರಫಿ ಬಗ್ಗೆ ಹೇಳಿ?
ಆಸ್ಟ್ರೊ ಫೋಟೊಗ್ರಫಿಗೆ ನೈಟ್‌ ಸ್ಕೈ ಫೋಟೊಗ್ರಫಿ ಎಂಬ ಹೆಸರೂ ಇದೆ. ರಾತ್ರಿ ಹೊತ್ತು ಆಕಾಶದಲ್ಲಿ ಕಾಣುವ ನಕ್ಷತ್ರಪುಂಜ, ಮಿಲ್ಕಿವೇ ಗ್ಯಾಲಕ್ಸಿ ಹಾಗೂ ಅನಿಲದ ಚಲನೆಯನ್ನು ಸೆರೆಹಿಡಿಯುವುದು ಈ ಶೈಲಿಯ ಮುಖ್ಯ ಉದ್ದೇಶ.

ಭೂಮಿಯ ಚಲನೆಗೆ ತಕ್ಕಂತೆ ನಕ್ಷತ್ರದ ಮಾದರಿ (ಪ್ಯಾಟರ್ನ್) ಬದಲಾಗುವಂತೆ ಕಾಣುತ್ತದೆ. ಒಂದು ನಿರ್ದಿಷ್ಟ ಕಾಲದವರೆಗೆ ಕ್ಯಾಮೆರಾವನ್ನು ಚಿತ್ರೀಕರಣಕ್ಕೆ ತೆರೆದಿಟ್ಟು ನಂತರ ಆ ಎಲ್ಲಾ ಛಾಯಾಚಿತ್ರಗಳನ್ನು ಒಟ್ಟಿಗೆ ಸ್ಯಾಕ್ (ಒಂದುಗೂಡಿಸುವುದು) ಮಾಡಿದರೆ ನಕ್ಷತ್ರದ ಪ್ಯಾಟರ್ನ್‌ ವೃತ್ತಾಕಾರ ಅಥವಾ ಅರ್ಧ ವೃತ್ತಾಕಾರದಲ್ಲಿ ಮೂಡಿರುತ್ತದೆ. ಅದು ಮಿಂಚುಕೋಲಿನಂತೆ ಕಾಣುತ್ತದೆ.

*ಆಸ್ಟ್ರೊ ಫೋಟೊಗ್ರಫಿಗೆ ಎಂಥ ಲೆನ್ಸ್ ಬಳಸುವಿರಿ...
ಈ ಬಗೆಯ ಫೋಟೊಗ್ರಫಿಗೆ ಟೆಲಿ ಫೋಟೊ ಲೆನ್ಸ್‌ ಬಳಸುತ್ತೇವೆ. ‘ಇಂಟರ್‌ ವೆಲ್ಲೊ ಮೀಟರ್’ ಎಂಬ ಸಾಧನವನ್ನು ಕ್ಯಾಮೆರಾಗೆ ಅಳವಡಿಸಿ, ನಿಮಿಷಕ್ಕೆ ಒಂದು ಬಾರಿ ಫೋಟೊ ತೆಗೆಯುವಂತೆ ಪ್ರೋಗ್ರಾಂ ಮಾಡಿ ಸುಮಾರು ಮೂರು ಗಂಟೆ ಕಾಯುತ್ತೇವೆ. ಈ ಅವಧಿಯಲ್ಲಿ ತೆಗೆದ ನೂರಾರು ಫೋಟೊಗಳನ್ನು ಒಗ್ಗೂಡಿಸಲು ಸ್ಟಾರ್‌ ಸ್ಟ್ಯಾಕಿಂಗ್, ಸ್ಟಾರ್‌ ಗೇಜಿಂಗ್ ಇತ್ಯಾದಿ ಸಾಫ್ಟ್‌ವೇರ್‌ಗಳು ನೆರವಾಗುತ್ತವೆ. ಅಂತಿಮ ಚಿತ್ರದಲ್ಲಿ ನಕ್ಷತ್ರಗಳ ಪ್ಯಾಟರ್ನ್‌ ಚಲಿಸಿರುವುದು ಗೋಚರಿಸಿರುತ್ತದೆ.

*ಆಸ್ಟ್ರೊ ಫೋಟೊಗ್ರಫಿಗೆ ಸೂಕ್ತ ಸ್ಥಳ ಯಾವುದು?
ಆಸ್ಟ್ರೊ ಫೋಟೊಗ್ರಫಿಯನ್ನು ಎಲ್ಲೆಡೆ ಮಾಡಲು ಸಾಧ್ಯವಿಲ್ಲ. ಕೃತಕ ಬೆಳಕಿಲ್ಲದ, ವಾಯುಮಾಲಿನ್ಯವಿಲ್ಲದ, ಮೋಡವಿಲ್ಲದ, ಸ್ಪಚ್ಛ ಆಕಾಶವಿರುವ ಕಡೆ ನಕ್ಷತ್ರದ ಪ್ಯಾಟರ್ನ್‌ ಉತ್ತಮವಾಗಿ ಗೋಚರಿಸುತ್ತದೆ. ಗಿರಿಶಿಖರ ಆಯ್ದುಕೊಂಡರೆ ಉತ್ತಮ.

*ಅಸ್ಟ್ರೊ ಫೋಟೊಗ್ರಫಿಯ ಸವಾಲುಗಳೇನು?
ಈ ಫೋಟೊಗ್ರಫಿ ಮನುಷ್ಯ ಪ್ರಯತ್ನಕ್ಕೂ ಮೀರಿದ್ದು ಅಂತ ಅನೇಕ ಬಾರಿ ನನಗೆ ಅನಿಸಿದೆ. ನಾನು  ಲಡಾಕ್ ಪ್ರವಾಸದ ಸಂದರ್ಭದಲ್ಲಿ ‘ಮದರ್ ಆಫ್ ಪರ್ಲ್‌’ ಅನ್ನೋ ಸೂರ್ಯನ ಬೆಳಕಲ್ಲಿ ಹೊಳೆಯುವ, ಬಣ್ಣದಿಂದ ಕೂಡಿದ ಮೋಡದ ಫೋಟೊ ತೆಗೆದೆ. ಇದು ಹಗಲಿನಲ್ಲಿ ತೆಗೆದಿದ್ದು.
ಆ ಮೋಡ ಗೋಚರಿಸಿದ್ದು ಕೇವಲ 15 ನಿಮಿಷ. ಆ ಸಂದರ್ಭದಲ್ಲಿ ತಕ್ಷಣಕ್ಕೆ ನಮ್ಮ ಕೈಲಿ ಕ್ಯಾಮೆರಾ ಇರಬೇಕು. ತೆಗೆದ ಶಾಟ್ಸ್‌ ಸರಿಯಾಗಿ ಬಂದಿರಬೇಕು. ಮ್ಯಾನ್ಯುಯಲ್ ಕಂಪೋಸಿಷನ್ ಸ್ವಲ್ಪ ಹೆಚ್ಚು ಕಡಿಮೆಯಾದರೂ ಪರಿಶ್ರಮ ವ್ಯರ್ಥವಾಗುತ್ತದೆ.

*ಆಸ್ಟ್ರೊ ಫೋಟೊಗ್ರಫಿಗೆ ಬೇಕಾದ ಸಿದ್ಧತೆಗಳೇನು?
ಆಸ್ಟ್ರೊ ಫೋಟೊಗ್ರಫಿ ಮಾಡಲು ಒಂದಿಷ್ಟು ಪೂರ್ವ ತಯಾರಿಬೇಕು. ಅದಕ್ಕೆ ಟೆಲಿ ಲೆನ್ಸ್‌, ಇಂಟರ್‌ ವೆಲ್ಲೊ ಮೀಟರ್ ಹೀಗೆ ಹಲವು ಸಲಕರಣೆಗಳೂ ಬೇಕು. ಆಸ್ಟ್ರೊ ಫೋಟೊಗ್ರಫಿ ಮಾಡುವ ಮೊದಲು ನೈಟ್‌ ಲೈಟ್‌ ಫೋಟೊಗ್ರಫಿ ರೂಢಿಸಿಕೊಳ್ಳುವುದು ಒಳಿತು. ಇದರಿಂದ ಆಸ್ಟ್ರೊ ಫೋಟೊಗ್ರಫಿ ಬೇಗ ಹಿಡಿತಕ್ಕೆ ಸಿಗುತ್ತದೆ.

ನೀವೂ ಪ್ರತಿಕ್ರಿಯಿಸಿ: ಇಮೇಲ್– metropv@prajavani.co.in, ವಾಟ್ಸ್‌ಆ್ಯಪ್– 9513322931,
ಫೇಸ್‌ಬುಕ್–facebook.com/prajavanimetro, ವೆಬ್‌ಸೈಟ್– prajavani.net/metro

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT