ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧು ಮುಡಿಗೆ ಇಂಡಿಯಾ ಸೂಪರ್ ಕಿರೀಟ

ರಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದ ಸ್ಪೇನ್ ಆಟಗಾರ್ತಿ ಕ್ಯಾರೊಲಿನಾ ಮರಿನ್‌ಗೆ ನಿರಾಸೆ
Last Updated 2 ಏಪ್ರಿಲ್ 2017, 20:29 IST
ಅಕ್ಷರ ಗಾತ್ರ

ನವದೆಹಲಿ: ‘ಹೈದಾರಾಬಾದ್ ಹುಡುಗಿ’ ಪುಸರ್ಲಾ ವೆಂಕಟ ಸಿಂಧು ಅವರು ಭಾನುವಾರ  ಇಂಡಿಯಾ ಓಪನ್ ಸೂಪರ್ ಸರಣಿಯ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡರು.

ಸಿರಿಪೋರ್ಟ್‌ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಪಿ.ವಿ. ಸಿಂಧು ಅವರು 21–19, 21–16ರ ನೇರ ಗೇಮ್‌ಗಳಿಂದ ಸ್ಪೇನ್‌ನ ಕ್ಯಾರೊಲಿನಾ ಮರಿನ್ ಅವರ ವಿರುದ್ಧ ಜಯಿಸಿದರು. 

ಸಿಂಧು ಅವರು ಏಳು ತಿಂಗಳ ಹಿಂದೆ ರಿಯೊ ಒಲಿಂಪಿಕ್ಸ್‌ ಫೈನಲ್‌ನಲ್ಲಿ ಮರಿನ್ ವಿರುದ್ಧ ಸೋತಿದ್ದರು. ಅದರ ನಂತರ ಹೋದ ವರ್ಷ ದುಬೈನಲ್ಲಿ ನಡೆದಿದ ಬಿಡಬ್ಲ್ಯುಎಫ್ ಸೂಪರ್ ಸರಣಿಯಲ್ಲಿ ಸಿಂಧು ಅವರು ಸ್ಪೇನ್ ಆಟಗಾರ್ತಿಯನ್ನು ಮಣಿಸಿದ್ದರು. ಈಗ ಎರಡನೇ ಬಾರಿ ಅವರನ್ನು ಹಣಿದರು.

ಎರಡು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಮರಿನ್ ಅವರ ಯಾವುದೇ ತಂತ್ರವೂ ಇಲ್ಲಿ ಫಲಿಸಲಿಲ್ಲ. 22 ವರ್ಷದ ಸಿಂಧು ಅವರ ಛಲದ ಹೋರಾಟವೇ ಮೇಲುಗೈ ಪಡೆಯಿತು. ಇದೇ ಮೊದಲ ಬಾರಿ ಟೂರ್ನಿಯಲ್ಲಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ಸಿಂಧು ಸಂಭ್ರಮಿಸಿದರು.

ಒಳಾಂಗಣದಲ್ಲಿ ಸೇರಿದ್ದ  ಅಪಾರ ಸಂಖ್ಯೆಯ ಅಭಿಮಾನಿಗಳು ಇಬ್ಬರು ಶ್ರೇಷ್ಠ ಆಟಗಾರ್ತಿಯರ ನಡುವಣ  46 ನಿಮಿಷಗಳ ಕಾಲ ನಡೆದ ಹಣಾಹಣಿಯನ್ನು ಕಣ್ತುಂಬಿಕೊಂಡರು.

ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ನಲ್ಲಿ  ಸೈನಾ ನೆಹ್ವಾಲ್ ಮತ್ತು ಸೆಮಿಫೈನಲ್‌ನಲ್ಲಿ ಕೊರಿಯಾದ ಸಂಗ್ ಜಿ ಯೂನ್ ಅವರನ್ನು ಪರಾಭವಗೊಳಿಸಿದ್ದ ಸಿಂಧು ಫೈನಲ್‌ ಪ್ರವೇಶಿಸಿದ್ದರು.

ಪಟ್ಟು ಬಿಡದ ಸಿಂಧು
ಇತ್ತೀಚೆಗೆ  ಆಲ್‌ ಇಂಗ್ಲೆಂಡ್ ಚಾಂಪಿ ಯನ್‌ಷಿಪ್‌ನಲ್ಲಿ ನಿರಾಸೆ ಅನುಭವಿಸಿದ್ದ ಸಿಂಧು ತವರಿನಲ್ಲಿ ಎಡವಲಿಲ್ಲ. ಮೊದಲ ಗೇಮ್‌ನ ಆರಂಭದಿಂದಲೂ ಇಬ್ಬರೂ ಆಟಗಾರ್ತಿಯರು ಸಮಬಲದ ಹೋರಾಟ ನಡೆಸಿದರು.

ಕೇವಲ ಒಂದು ಪಾಯಿಂಟ್ ಅಂತರದ ಮುನ್ನಡೆಯನ್ನು  ಕೆಲವು ಬಾರಿ ಸಿಂಧು, ಉಳಿದಂತೆ ಮರಿನ್ ಅವರು ಮುನ್ನಡೆಗಾಗಿ ಪೈಪೋಟಿ ನಡೆಸಿದರು.  20 ನಿಮಿಷಗಳಿಗೂ ಹೆಚ್ಚು ಅವಧಿಯ ಗೇಮ್‌ನಲ್ಲಿ 19 ಅಂಕಗಳ ವರೆಗೂ ಇಬ್ಬರೂ ಸಮಬಲದಲ್ಲಿಯೇ ಸಾಗಿದರು. ಆದರೆ, ಒಂದು ಡ್ರಾಪ್ ಮೂಲಕ ಪಾಯಿಂಟ್ ಗಳಿಸಿದ ಸಿಂಧು 20ಕ್ಕೇರಿದರು. ನೆಟ್‌ಬಳಿ ಆಡುವ ಭರದಲ್ಲಿ ತಪ್ಪೆಸಗಿದ ಮರಿನ್ ಅವರು ಗೇಮ್ ಕಳೆದುಕೊಂಡರು.

ಉತ್ತಮ ಫಿಟ್‌ನೆಸ್ ಹೊಂದಿರುವ ಸಿಂಧು ಅವರು ಮರಿನ್ ಅವರ ಶಾರ್ಟ್‌ ಸರ್ವಿಸ್‌ ತಂತ್ರಗಳನ್ನು ಯಶಸ್ವಿಯಾಗಿ ಎದುರಿಸಿದರು. ಎರಡನೇ ಗೇಮ್‌ನಲ್ಲಿ ಇನ್ನೂ ಹೆಚ್ಚು ಆತ್ಮವಿಶ್ವಾಸದಿಂದ ಆಡಿದ ಸಿಂಧು ಏಳನೇ ಅಂಕದಿಂದಲೇ ಅಂತರ ಸಾಧಿಸುತ್ತ ನಡೆದರು.

ಬಿರುಸಿನ ಸ್ಮ್ಯಾಷ್‌ಗಳನ್ನೂ ಸಿಡಿಸಿದ ಸಿಂಧು ಅವರ ಎದುರು ಎಡಗೈ ಆಟಗಾರ್ತಿ ಮರಿನ್ ಒತ್ತಡಕ್ಕೆ ಸಿಲುಕಿದರು. ಇದರ ಲಾಭ ಪಡೆದ ಭಾರತದ ಆಟಗಾರ್ತಿ ಐದು ಅಂಕಗಳ ಅಂತರದಲ್ಲಿ ಗೆದ್ದು ಬೀಗಿದರು.



ವಿಕ್ಟರ್‌ಗೆ ಪ್ರಶಸ್ತಿ
ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಡೆನ್ಮಾರ್ಕಿನ ವಿಕ್ಟರ್ ಅಕ್ಸೆಲ್ಸನ್ 21–13, 21–10 ನೇರ ಗೇಮ್‌ಗಳಿಂದ ಚೈನಿಸ್ ತೈಪೆಯ ಟೀನ್ ಚೆನ್ ಚೌ ಅವರನ್ನು ಸೋಲಿಸಿದರು. 36 ನಿಮಿಷಗಳ ಪಂದ್ಯದಲ್ಲಿ ಆರಂಭ ದಿಂದಲೂ ಪಟ್ಟು ಸಡಿಲಿಸದೇ ಆಡಿದ ವಿಕ್ಟರ್ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾದರು.

ಡಬಲ್ಸ್‌ ಪ್ರಶಸ್ತಿ
ಪುರುಷರ ಡಬಲ್ಸ್‌ನಲ್ಲಿ ಇಂಡೋನೆಷ್ಯಾದ ಜೋಡಿ ಮಾರ್ಕಸ್ ಫರ್ನಾಲ್ಡಿ ಗಿಡಾನ್ ಮತ್ತು ಕೆವಿನ್ ಸಂಜಯಾ ಸುಕಾಮುಲ್ಜೊ 21–11, 21–15ರಿಂದ ಆರನೇ ಶ್ರೇಯಾಂಕದ ರಿಕಿ ಕರುಂದಾಸುವಾರ್ಡಿ ಮತ್ತು ಅಂಗಾ ಪ್ರತಾಮಾ ವಿರುದ್ಧ ಜಯ ಗಳಿಸಿದರು.

ಮಹಿಳೆಯರ ಡಬಲ್ಸ್‌ ಫೈನಲ್‌ನಲ್ಲಿ ಜಪಾನ್‌ ಜೋಡಿ ಶಿಹೊ ತನಾಕಾ ಮತ್ತು ಕೊಹರು ಯೊನೆಮೊಟೊ 16–21, 21–19, 21–10ರಿಂದ ಮೂರನೇ ಶ್ರೇಯಾಂಕದ ಫುಕುಮನ್ ಮತ್ತು ಕುರುಮಿ ಯೊನಾವೊ ವಿರುದ್ಧ ಗೆದ್ದರು.

ಮಿಶ್ರ ಡಬಲ್ಸ್‌ ಫೈನಲ್‌ನಲ್ಲಿ ಚೀನಾದ  ಸೀವಿ ಝೆಂಗ್ ಮತ್ತು ಕಿಂಗ್‌ಚೆನ್ ಚೆನ್ ಅವರು 22–24, 21–14, 21–17 ರಿಂದ ತಮ್ಮದೇ ದೇಶದ ಲೂ ಕೈ ಮತ್ತು ಹುವಾಂಗ್ ಯಾಕಿಯಾಂಗ್ ವಿರುದ್ಧ ಗೆದ್ದರು.

ವಿಶ್ವಾಸ ಹೆಚ್ಚಿಸಿದ ಮೊದಲ ಗೇಮ್ ಜಯ
‘ಪಂದ್ಯದ ಮೊದಲ ಗೇಮ್‌ನಲ್ಲಿ ಗೆದ್ದಿದ್ದು ಆತ್ಮವಿಶ್ವಾಸ ಹೆಚ್ಚಿಸಿತು. ಆದ್ದರಿಂದ ಜಯದ ಹಾದಿ ಸುಲಭವಾಯಿತು’ ಎಂದು ಪಿ.ವಿ. ಸಿಂಧು ಹೇಳಿದರು.

ಪಂದ್ಯದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಇಂದಿನ ಆಟವು ನನಗೆ ಸಂತೃಪ್ತಿ ನೀಡಿದೆ.  ಮರಿನ್ ಕೂಡ ಕಠಿಣ ಸ್ಪರ್ಧೆ ಒಡ್ಡಿದರು’ ಎಂದರು.

‘ವರ್ಷದ ಆರಂಭದಲ್ಲಿಯೇ ಜಯಿಸಿದ್ದು ಅಪಾರ ಸಂತಸವಾಗಿದೆ. ಹೋದ ವರ್ಷದ ಚೀನಾ ಓಪನ್ ಪ್ರಶಸ್ತಿ ನಂತರ ಇಂಡಿಯಾ ಸೂಪರ್ ಪ್ರಶಸ್ತಿ ಒಲಿದಿದೆ. ಈ ಕ್ರೀಡಾಂಗಣದಲ್ಲಿ ಸೇರಿದ್ದ ಪ್ರೇಕ್ಷಕರ ಪ್ರೋತ್ಸಾಹವು ಅಮೋಘವಾಗಿತ್ತು. ಅದರಿಂದ ನನ್ನ ಆತ್ಮವಿಶ್ವಾಸ ಹೆಚ್ಚಿತು’ ಎಂದರು.

‘ಕ್ರೀಡೆಯಲ್ಲಿ ಸೋಲು ಅಥವಾ ಗೆಲುವು ಮಾತ್ರ ಮುಖ್ಯವಲ್ಲ. ಪಂದ್ಯದ ಸಂದರ್ಭದಲ್ಲಿ ನಮ್ಮ ಕ್ಷಮತೆಯನ್ನು ಯಾವ ರೀತಿ ವಿನಿಯೋಗಿಸುತ್ತೇವೆ. ಎಷ್ಟು ಪರಿಶ್ರಮಪಡುತ್ತೇವೆಂಬುದು ಮುಖ್ಯ. ಏಕೆಂದರೆ ಯಶಸ್ಸಿಗೆ ಯಾವುದೇ ವಾಮಮಾರ್ಗವಿಲ್ಲ’ ಎಂದು ಸಿಂಧು ಹೇಳಿದರು.

ಸಿಂಧು ಸಾಧನೆಯ ಪಥ
* 2016ರ ರಿಯೊ ಒಲಿಂಪಿಕ್ಸ್‌ ಫೈನಲ್‌ನಲ್ಲಿ  ಮರಿನ್ ಎದುರು ಸೋತಿದ್ದ ಸಿಂಧು.
* 09 ಬಾರಿ ಉಭಯ ಆಟಗಾರ್ತಿಯರು ಮುಖಾಮುಖಿಯಾಗಿದ್ದಾರೆ.
* 04 ಸಲ ಸಿಂಧು  ಮೇಲುಗೈ ಸಾಧಿಸಿದ್ದಾರೆ.
* 02 ವಿಶ್ವಕಪ್ ಚಾಂಪಿಯನ್‌ಷಿಪ್‌ಗಳಲ್ಲಿ (2013, 2014) ಕಂಚಿನ ಪದಕ ಗಳಿಸಿದ್ದಾರೆ.
* 2016ರಲ್ಲಿ ಚೀನಾ ಓಪನ್ ಪ್ರಶಸ್ತಿ.
* 46 ನಿಮಿಷ ನಡೆದ ಇಂಡಿಯಾ ಸೂಪರ್ ಸರಣಿ ಫೈನಲ್‌.

*
ಯಶಸ್ಸಿಗೆ ವಾಮಮಾರ್ಗಗಳಿಲ್ಲ. ಕಠಿಣ ಪರಿಶ್ರಮ, ಅಭ್ಯಾಸ ಮತ್ತು ಆತ್ಮವಿಶ್ವಾಸದಿಂದ ಮಾತ್ರ ಜಯ ಸಾಧ್ಯ.
–ಪಿ.ವಿ. ಸಿಂಧು,
ಭಾರತದ ಆಟಗಾರ್ತಿ

*
ಕಳೆದ ಜನವರಿಯಲ್ಲಿ ಗಾಯಗೊಂಡಿದ್ದೆ. ಇದೀಗ ಚೇತರಿಸಿಕೊಳ್ಳುತ್ತಿದ್ದೇನೆ. ಈ ಟೂರ್ನಿಯಲ್ಲಿ ಸೋತರೂ ಆತ್ಮವಿಶ್ವಾಸ ವೃದ್ಧಿಸಿದೆ.
–ಕ್ಯಾರೊಲಿನಾ ಮರಿನ್
ಸ್ಪೇನ್ ಆಟಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT