ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿಗಾಗಿ ಅನುಕಂಪದ ಅಸ್ತ್ರ ಪ್ರಯೋಗ

Last Updated 6 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವಿಗಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಎಚ್‌.ಎಸ್‌.ಮಹದೇವಪ್ರಸಾದ್‌ ಪತ್ನಿ ಕಾಂಗ್ರೆಸ್‌ ಅಭ್ಯರ್ಥಿ ಎಂ.ಸಿ.ಮೋಹನ್‌ಕುಮಾರಿ ಅವರು ಗೆಲುವಿಗಾಗಿ ಅನುಕಂಪದ ಮೊರೆ ಹೋಗಿದ್ದಾರೆ. 2 ಬಾರಿ ಮಹದೇವಪ್ರಸಾದ್‌ ವಿರುದ್ಧವೇ ಸೋತಿರುವ ಬಿಜೆಪಿ ಅಭ್ಯರ್ಥಿ ಸಿ.ಎಸ್‌.ನಿರಂಜನ್‌ಕುಮಾರ್‌ ಕೂಡ ಗೆಲುವಿಗಾಗಿ ಅನುಕಂಪದ ಅಸ್ತ್ರ ಪ್ರಯೋಗಿಸಿದ್ದಾರೆ.
ನಿರಂಜನ್‌ಕುಮಾರ್‌ ತಂದೆ ಸಿ.ಎಂ.ಶಿವಮಲ್ಲಪ್ಪ ಕೂಡ 2 ಬಾರಿ ಮಹದೇವಪ್ರಸಾದ್‌ ವಿರುದ್ಧವೇ ಸೋತಿದ್ದರು. ಹಾಗಾಗಿ, ನಿರಂಜನ್‌ಕುಮಾರ್‌ ಪಾಲಿಗೆ ಈ ಉಪ ಚುನಾವಣೆಯು ಅಗ್ನಿಪರೀಕ್ಷೆಯಾಗಿದೆ.

1952ರಲ್ಲಿ ಈ ಕ್ಷೇತ್ರವು ದ್ವಿಸದಸ್ಯ ಕ್ಷೇತ್ರವಾಗಿ (ಎಚ್.ಡಿ.ಕೋಟೆ ಒಳಗೊಂಡಂತೆ) ಅಸ್ತಿತ್ವಕ್ಕೆ ಬಂದಿತು. 14 ಚುನಾವಣೆ ಕಂಡಿರುವ ಈ ಕ್ಷೇತ್ರದಲ್ಲಿ ಜನತಾದಳ, ಜೆಡಿಯು, ಜೆಡಿಎಸ್‌ ತಲಾ ಒಂದು ಬಾರಿ ಗೆದ್ದಿವೆ. 4 ಬಾರಿ ಪಕ್ಷೇತರರು ಗೆಲುವಿನ ನಗೆ ಬೀರಿದ್ದಾರೆ. ಉಳಿದಂತೆ ಕಾಂಗ್ರೆಸ್‌ ಪಾರಮ್ಯ ಮೆರೆದಿದೆ.

ಉಪ ಚುನಾವಣೆಯಲ್ಲಿ ‘ಕೈ’ ಕೋಟೆಗೆ ಲಗ್ಗೆ ಹಾಕಲು ಬಿಜೆಪಿ ಜಿದ್ದಾಜಿದ್ದಿಗೆ ಬಿದ್ದಿದೆ. ಮಹದೇವಪ್ರಸಾದ್‌ 2008 ಮತ್ತು 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಜಯಭೇರಿ ಬಾರಿಸಿದ್ದರು. ಹಾಗಾಗಿ, ಕ್ಷೇತ್ರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಡಿ ಸಚಿವರ ದಂಡು ರಣತಂತ್ರ ರೂಪಿಸುತ್ತಿದೆ.

ಕಮಲ ಪಾಳಯದ ವರಿಷ್ಠರು ಉಪ ಚುನಾವಣೆಯನ್ನು ಮುಂದಿನ ವರ್ಷ ವಿಧಾನಸಭೆಗೆ ನಡೆಯುವ ಚುನಾವಣೆಗೆ ದಿಕ್ಸೂಚಿ ಎಂದು ಬಿಂಬಿಸುತ್ತಿದ್ದಾರೆ. ಮಹದೇವಪ್ರಸಾದ್‌ ಅವರು ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದರು. ಹಾಗಾಗಿ, ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸುವುದು ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯಾಗಿದೆ.

ವಾಸ್ತವವಾಗಿ ಕ್ಷೇತ್ರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆಗಳ ಅಲೆಯಿಲ್ಲ. ಆದರೆ, ಸಿದ್ದರಾಮಯ್ಯ ಮತ್ತು ಬಿ.ಎಸ್‌.ಯಡಿಯೂರಪ್ಪ ಅವರ ಪ್ರತಿಷ್ಠೆಯ ಅಲೆ ಎದ್ದಿರುವುದು ಸ್ಪಷ್ಟ. ಇನ್ನೊಂದೆಡೆ ಮತದಾರರು ಅಭ್ಯರ್ಥಿಗಳ ವರ್ಚಸ್ಸು ಅಳೆದು ಮತ ನೀಡುವ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಪಕ್ಷಗಳಿಗಿಂತ ಅಭ್ಯರ್ಥಿಗಳ ವ್ಯಕ್ತಿತ್ವವೇ ಅಳತೆಗೋಲಾಗಿರುವುದು ಈ ಚುನಾವಣೆಯ ವೈಶಿಷ್ಟ್ಯ.

ಪ್ರಸ್ತುತ ಅಖಾಡದಲ್ಲಿ 7 ಅಭ್ಯರ್ಥಿಗಳಿದ್ದಾರೆ. ಮಹದೇವಪ್ರಸಾದ್‌ ಅವರು 5 ಬಾರಿ ಈ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಈ ಅವಧಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಜತೆಗೆ, ಗುಂಡ್ಲುಪೇಟೆ ತಾಲ್ಲೂಕು ಮತ್ತು 5 ಜಿಲ್ಲಾ ಪಂಚಾಯಿತಿ ಕ್ಷೇತ್ರ, ಪುರಸಭೆಯಲ್ಲಿ ಕಾಂಗ್ರೆಸ್‌ ಆಧಿಪತ್ಯವಿದೆ. ಇದು ಮೋಹನ್‌ಕುಮಾರಿ ಅವರಿಗೆ ಧನಾತ್ಮಕ ಅಂಶ.

ಜತೆಗೆ, ಸಿದ್ದರಾಮಯ್ಯ ಅವರ ನೇತೃತ್ವದಡಿ 20 ಸಚಿವರ ದಂಡು ಪಕ್ಷದ ಗೆಲುವಿಗಾಗಿ ಟೊಂಕಕಟ್ಟಿ ನಿಂತಿರುವುದು ಮೋಹನ್‌ಕುಮಾರಿ ಅವರಿಗೆ ಹೆಚ್ಚಿನ ಬಲ ಸಿಕ್ಕಿದಂತಾಗಿದೆ.

ಕ್ಷೇತ್ರದಲ್ಲಿ ಲಿಂಗಾಯತ ಮತದಾರರ ಸಂಖ್ಯೆ ಹೆಚ್ಚಿದೆ. ತಾವೇ ರಾಜ್ಯದ ಮುಂದಿನ ಮುಖ್ಯಮಂತ್ರಿಯೆಂದು ಘೋಷಿಸಿಕೊಂಡು ಯಡಿಯೂರಪ್ಪ ಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿಯತ್ತ ಲಿಂಗಾಯತ ಸಮುದಾಯದವನ್ನು ಸೆಳೆಯಲು ತಂತ್ರಗಾರಿಕೆ ನಡೆಸುತ್ತಿದ್ದಾರೆ.

ಕ್ಷೇತ್ರದಲ್ಲಿ ಲಿಂಗಾಯತರನ್ನು ಹೊರತುಪಡಿಸಿದರೆ ಪರಿಶಿಷ್ಟ ಜಾತಿಯ ಜನಸಂಖ್ಯೆ ಹೆಚ್ಚಿದೆ. ಅದರಲ್ಲೂ ‘ಬಲಗೈ’ ಸಮುದಾಯದವರು ಹೆಚ್ಚಿದ್ದಾರೆ.  ಸಿದ್ದರಾಮಯ್ಯ ಅವರು ಪರಿಶಿಷ್ಟ ಜಾತಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ್ದಾರೆ ಎಂದು ದಲಿತರ ಕಾಲೊನಿಗಳಲ್ಲಿ ಬಿಜೆಪಿ ಮುಖಂಡರು ಪ್ರಚಾರ ನಡೆಸುತ್ತಿದ್ದಾರೆ.

ಕ್ಷೇತ್ರದಲ್ಲಿ ಉಪ್ಪಾರ, ನಾಯಕ, ಕುರುಬ ಮತ್ತು ಅಲ್ಪಸಂಖ್ಯಾತ ಮತದಾರರು ನಿರ್ಣಾಯಕರಾಗಿದ್ದಾರೆ. ಮಹದೇವಪ್ರಸಾದ್‌ ಅವರಿಗೆ ಈ ಸಮುದಾಯದ ಮತಗಳ ಮೇಲೆ ಹಿಡಿತವಿತ್ತು. ಆದರೆ, ಅವರ ಪ್ರಭೆಯಲ್ಲಿ ಎರಡನೇ ಹಂತದ ನಾಯಕರು ಬೆಳೆದಿಲ್ಲ ಇದು ಕಾಂಗ್ರೆಸ್‌ ಪಾಲಿಗೆ ನುಂಗಲಾರದ ಬಿಸಿತುಪ್ಪವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT