ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ರಕ್ಷಣೆಗೆ ಸಮಗ್ರ ಚರ್ಚೆ ಅಗತ್ಯ

Last Updated 8 ಏಪ್ರಿಲ್ 2017, 5:16 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಪರಿಸರ ಸಂರಕ್ಷಣೆ, ಜೀವ ವೈವಿಧ್ಯ ಪ್ರಶ್ನೆ ಮಾನವ ಕೇಂದ್ರಿತವಾಗಿದೆ. ಆದರೆ, ಪರಿಸರ ಉಳಿಸಲು ಸಮಗ್ರ ದೃಷ್ಟಿಕೋನದ ಚರ್ಚೆ ಅಗತ್ಯ’ ಎಂದು ಪರಿಸರತಜ್ಞ ಅಖಿಲೇಶ್ ಚಿಪ್ಪಳಿ ಪ್ರತಿಪಾದಿಸಿದರು.

ಪತ್ರಿಕಾ ಭವನದಲ್ಲಿ ಶುಕ್ರವಾರ ‘ಶಿವಮೊಗ್ಗ ಪ್ರೆಸ್ ಟ್ರಸ್ಟ್’ ಆಯೋಜಿಸಿದ್ದ ‘ಡಾ.ಕಸ್ತೂರಿರಂಗನ್ ವರದಿ ಏನು? -ಎತ್ತ?’ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ‘ಮಲೆನಾಡಿನ ಭವಿಷ್ಯಕ್ಕೆ ಕಸ್ತೂರಿರಂಗನ್ ವರದಿ ಏಕೆ ಬೇಕು?’  ಕುರಿತು ಅವರು ಮಾತನಾಡಿದರು.

‘ನೆಲ-ಜಲ ಉಳಿಸುವುದು ಪ್ರತಿ ಯೊಬ್ಬರ ಕರ್ತವ್ಯ ಎಂದು ದೇಶದ ಸಂವಿಧಾನದಲ್ಲೇ ಪ್ರಸ್ತಾಪಿಸಲಾಗಿದೆ. ಮೂಲಭೂತ ಹಕ್ಕುಗಳಿಗೆ ಆದ್ಯತೆ ನೀಡುವಂತೆ ಪ್ರತಿಯೊಬ್ಬರೂ ಕರ್ತವ್ಯ ನಿಭಾಯಿಸಬೇಕು’ ಎಂದರು.

‘ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಸರ್ಕಾರದ ದೂರಾಲೋಚನೆ ಕೊರತೆಯ ಅಡ್ಡ ಪರಿಣಾಮಗಳು ಹೆಚ್ಚು ಕಾಣುತ್ತಿವೆ. ಕಸ್ತೂರಿರಂಗನ್ ವರದಿಯಲ್ಲಿ ಜನರ ಬದುಕಿಗೆ ಮಾರಕವಾಗುವಂತಹ  ಅಂಶಗಳು ಇಲ್ಲ. ಜೀವಚರಗಳ ಭವಿಷ್ಯದ ದೃಷ್ಟಿ ಯಿಂದಲೂ ಕೆಲವು ನಿಯಂತ್ರಣ ಸೂಚಿಸಲಾಗಿದೆ. ಹೀಗಾಗಿ, ಇದರ ಅನುಷ್ಠಾನಕ್ಕೆ ಸಂಪೂರ್ಣ ವಿರೋಧ ಸರಿಯಲ್ಲ. ಕಸ್ತೂರಿರಂಗನ್‌ ವರದಿ ಕೈಬಿಟ್ಟರೂ ಗಾಡ್ಗೀಳ್ ವರದಿ ಜಾರಿಗಾದರೂ ಒತ್ತಾಯಿಸಬೇಕು ಎಂದು ಸಲಹೆ ನೀಡಿದರು.

‘ಕಸ್ತೂರಿ ರಂಗನ್ ವರದಿ ಏಕೆ ಬೇಡ?’ ವಿಷಯ ಕುರಿತು ಮಾತನಾಡಿದ ಪತ್ರಕರ್ತ ರಾಮಸ್ವಾಮಿ ಹುಲ್ಕೋಡು, ‘ಮಲೆನಾಡಿನ ಜನರು ಹಂತ ಹಂತವಾಗಿ ಮಲೆನಾಡಿನಿಂದ ದೂರಮಾಡುವ ಸಂಚು ಕಸ್ತೂರಿರಂಗನ್ ವರದಿ ಮೂಲಕ ಮಾಡಲಾಗುತ್ತಿದೆ’ ಎಂದು ದೂರಿದರು.

‘ಈ ವರದಿ ರೂಪಿಸಿರುವುದರಲ್ಲೇ ದೋಷವಿದೆ. ಇದು ಜನ ಸಮುದಾಯದ ಬೇಡಿಕೆಯಲ್ಲ. ವರದಿ ಸಿದ್ಧಪಡಿಸುವಾಗ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕಸ್ತೂರಿರಂಗನ್‌ ವರದಿ ವಿದೇಶಿ ಸಂಸ್ಥೆ ಪ್ರಾಯೋಜಿತ ವರದಿ. ಈ ವರದಿ ಅನುಷ್ಠಾನಗೊಂಡರೆ ಪರಿಸರ ಸಂರಕ್ಷಣೆ ಅಸಾಧ್ಯ. ಹಾಗಾಗಿ, ಕಸ್ತೂರಿರಂಗನ್‌ ಹಾಗೂ ಗಾಡ್ಗೀಳ್ ವರದಿಗಳನ್ನು ಸಂಪೂರ್ಣ ವಿರೋಧಿಸಬೇಕು ಎಂದರು. ಪ್ರಸ್ತುತ ಜಾರಿಯಲ್ಲಿ ಇರುವ ವಿವಿಧ ಕಾನೂನುಗಳ ಮೂಲಕವೇ ಅರಣ್ಯ ಸಂರಕ್ಷಣೆ ಮಾಡಬಹುದು. ಪಶ್ಚಿಮ ಘಟ್ಟ ಉಳಿಸಬೇಕು ಎಂಬ ಕೂಗೆಬ್ಬಿಸಿ, ಅದಕ್ಕಾಗಿ ಹೋರಾಡಿ ದವರೇ ಮಲೆನಾಡಿಗರು. ಇಂದಿಗೂ ಅರಣ್ಯ ಉಳಿದಿರುವುದು ಅರಣ್ಯವಾಸಿಗ ಳಿಂದಲೇ ಹೊರತು ಅಧಿಕಾರಿಗಳು, ಸರ್ಕಾರಗಳಿಂದ ಅಲ್ಲ’ ಎಂದರು.

ಶಾಸಕಿ ಶಾರದಾ ಪೂರ್‍ಯಾನಾಯ್ಕ್ ಮಾತನಾಡಿ, ನಾಡಿಗೆ ಬೆಳಕು ನೀಡಿದ ಶರಾವತಿ ಸಂತ್ರಸ್ತರಿಗೆ ಬೆಳಕು ನೀಡುವ ಹಂತದಲ್ಲಿ ಈ ವರದಿ ಪ್ರಚಲಿತಕ್ಕೆ ಬಂದಿದೆ. ಇದು ಅವರ ಬದುಕಿಗೆ ಮಾರಕವಾಗಿದೆ. ಇರುವ  ಕಾನೂನು ಗಳನ್ನೇ ಬಿಗಿಗೊಳಿಸಿ ಅರಣ್ಯ ರಕ್ಷಿಸುವ ಕೆಲಸ ಮಾಡಬೇಕು. ಅದಕ್ಕಾಗಿ ಪ್ರತ್ಯೇಕ ವರದಿ ಜಾರಿಗೊಳಿಸುವ ಅಗತ್ಯ ಇಲ್ಲ ಎಂದು ಪ್ರತಿಪಾದಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ  ಮಾತನಾಡಿ, ಸ್ಥಳೀಯರಿಂದಾಗಿ ಅರಣ್ಯ ಉಳಿದಿದೆಯೇ ಹೊರತು ಅರಣ್ಯ ಇಲಾಖೆ ಶ್ರಮದ ಫಲವಲ್ಲ. ಹಾಗಾಗಿ, ಕಸ್ತೂರಿ ರಂಗನ್ ವರದಿ ಹೆಸರಿನಲ್ಲಿ ಮಲೆನಾಡಿನ ಜನರನ್ನು ಒಕ್ಕಲೆಬ್ಬಿಸುವುದು ಸಲ್ಲದು ಎಂದರು.

ಪರಿಸರತಜ್ಞ ಶ್ರೀಪತಿ ಮಾತನಾಡಿ, ಕಸ್ತೂರಿರಂಗನ್ ವರದಿ ಕುರಿತು ಸ್ಥಳೀಯರಲ್ಲಿ ತಪ್ಪು ಕಲ್ಪನೆ, ಮಾಹಿತಿ ಕೊರತೆ ಇದೆ’ ಎಂದು ಹೇಳಿದರು.

ಡಿಸಿಸಿ ಅಧ್ಯಕ್ಷ ತೀ.ನ.ಶ್ರೀನಿವಾಸ್, ರಮೇಶ್ ಹೆಗ್ಡೆ, ರೈತ ಮುಖಂಡ ಎಚ್.ಆರ್. ಬಸವರಾಜಪ್ಪ, ಪರಿಸರ ವಾದಿ ಶೇಖರ್ ಗೌಳೇರ್ ಮಾತ ನಾಡಿದರು. ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಮಲೆನಾಡು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪದ್ಮನಾಭ್ ಭಟ್‌, ಪತ್ರಕರ್ತ ಶಶಿ ಸಂಪಳ್ಳಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT