ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ ಮತದಾನ ಇಂದು; ಕ್ಷೇತ್ರಗಳಲ್ಲಿ ಕಟ್ಟೆಚ್ಚರ

Last Updated 8 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಮೈಸೂರು/ ಚಾಮರಾಜನಗರ: ಪ್ರತಿಷ್ಠೆಯ ಕಣವಾಗಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆಯ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಭಾನುವಾರ ಮತದಾನ ನಡೆಯಲಿದ್ದು, ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿವೆ.

ಎರಡೂ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದ್ದು, ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಕೇಂದ್ರೀಯ ಅರೆ ಮೀಸಲು ಪೊಲೀಸ್‌ ಪಡೆಯ ತುಕಡಿಗಳು ಸೇರಿದಂತೆ ಸುಮಾರು 2,000 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ನಂಜನಗೂಡು ಕ್ಷೇತ್ರದಲ್ಲಿ ಒಟ್ಟು 11 ಅಭ್ಯರ್ಥಿಗಳಿದ್ದರೂ ಕಾಂಗ್ರೆಸ್‌ನ ಕಳಲೆ ಕೇಶವಮೂರ್ತಿ ಹಾಗೂ ಬಿಜೆಪಿ ವಿ.ಶ್ರೀನಿವಾಸಪ್ರಸಾದ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕಾಂಗ್ರೆಸ್‌ನಲ್ಲಿದ್ದ ಶ್ರೀನಿವಾಸಪ್ರಸಾದ್‌ ಅವರು ಡಿಸೆಂಬರ್‌ನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ನಡೆಯುತ್ತಿದೆ.

ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎಂ.ಸಿ.ಮೋಹನಕುಮಾರಿ (ಗೀತಾ) ಹಾಗೂ ಬಿಜೆಪಿ ಸಿ.ಎಸ್‌.ನಿರಂಜಕುಮಾರ್‌ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಎಚ್‌.ಎಸ್‌.ಮಹದೇವಪ್ರಸಾದ್‌ ಅಕಾಲಿಕ ನಿಧನದಿಂದಾಗಿ ಉಪಚುನಾವಣೆ ನಡೆಯುತ್ತಿದೆ.

ಉಪಚುನಾವಣಾ ಕರ್ತವ್ಯಕ್ಕೆ 1,375 ಸಿಬ್ಬಂದಿ ನಿಯೋಜಿಸಲಾಗಿದೆ. ಮತದಾನ ಮಾಡುವವರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿ ಹಾಕಲಾಗುತ್ತದೆ. ಮತದಾನಕ್ಕೆ ಅನುವು ಮಾಡಿಕೊಡಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಖಾನೆಗಳಿಗೆ ಹಾಗೂ ಇತರ ಖಾಸಗಿ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

ಉಪಚುನಾವಣೆಯು ಬಿಜೆಪಿ ಹಾಗೂ ಕಾಂಗ್ರೆಸ್‌ ಪಾಲಿಗೆ ಸತ್ವಪರೀಕ್ಷೆಯಾಗಿದ್ದು, ತನ್ನ ತೆಕ್ಕೆಯಲ್ಲಿರುವ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಅನಿವಾರ್ಯ ಕಾಂಗ್ರೆಸ್‌ಗೆ ಎದುರಾಗಿದೆ. ಚೊಚ್ಚಲ ಗೆಲುವಿನ ತವಕದಲ್ಲಿ ಬಿಜೆಪಿ ಇದೆ.

ಉಪಚುನಾವಣೆ ಘೋಷಣೆ ಆದಾಗಿನಿಂದ ಉಭಯ ಪಕ್ಷಗಳ ಘಟಾನುಘಟಿ ನಾಯಕರು ಅಖಾಡಕ್ಕಿಳಿದು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಇದರ ನಡುವೆ ಹಣ, ಮದ್ಯವೂ ಹರಿದಾಡಿದ ಆರೋಪವಿದೆ. ಅಭ್ಯರ್ಥಿಗಳು ಶನಿವಾರ ಮನೆಮನೆಗೆ ತೆರಳಿ ಮತಯಾಚಿಸುವ ಮೂಲಕ ಕೊನೆಯ ಹಂತದ ಕಸರತ್ತು ನಡೆಸಿದರು.

ಮತ ಖಾತರಿ ವ್ಯವಸ್ಥೆ: ಪಾರದರ್ಶಕವಾಗಿ ಉಪಚುನಾವಣೆ ನಡೆಸುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಇದೇ ಮೊದಲ ಬಾರಿ ಮತ ಖಾತರಿ ಸೌಲಭ್ಯವಿರುವ ವಿವಿ ಪ್ಯಾಟ್‌ ಯಂತ್ರ ಬಳಸಲಾಗುತ್ತಿದೆ. ಏ. 13ರಂದು ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ.

* ನಂಜನಗೂಡು ಕ್ಷೇತ್ರದ 154 ಹಳ್ಳಿಗಳಲ್ಲಿ ಪೊಲೀಸರು ಕಾವಲು ಇರುತ್ತಾರೆ. ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ
–ರವಿ ಡಿ.ಚನ್ನಣ್ಣನವರ, ಎಸ್ಪಿ, ಮೈಸೂರು

* ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ವಿವಿ ಪ್ಯಾಟ್‌, ವಿದ್ಯುನ್ಮಾನ ಮತಯಂತ್ರಗಳನ್ನು ಹಲವು ಸುತ್ತುಗಳಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ
–ಡಿ.ರಂದೀಪ್‌, ಜಿಲ್ಲಾಧಿಕಾರಿ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT