ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಸಿಸ್ಟ್ ಧೋರಣೆ ವಿರುದ್ಧ ದಕ್ಷಿಣಾಯನ ಚಳವಳಿ

Last Updated 9 ಏಪ್ರಿಲ್ 2017, 6:06 IST
ಅಕ್ಷರ ಗಾತ್ರ

ಶಿವಮೊಗ್ಗ:  ‘ದಕ್ಷಿಣಾಯನ ಹಮ್ಮಿಕೊಂಡ ಅಭಿವ್ಯಕ್ತಿ ಸಮಾವೇಶ ಪ್ರಯೋಗವಲ್ಲ. ಅದು ಚಲನಶೀಲ ಪ್ರಕ್ರಿಯೆ. ಅದು ರಾಜಕೀಯದಿಂದಲೂ ದೂರ ಉಳಿದು ಕಾರ್ಯನಿರ್ವಹಿಸುತ್ತದೆ’ ಎಂದು ಚಿಂತಕ ಗಣೇಶ್ ಎನ್‌.ದೇವಿ ಮಾಹಿತಿ ನೀಡಿದರು.ಸರ್ಕಾರಿ ನೌಕರರ ಸಭಾಂಗಣದಲ್ಲಿ ದಕ್ಷಿಣಾಯನ ಕರ್ನಾಟಕ ಚಳವಳಿ ಆಯೋಜಿಸಿದ್ದ ಶನಿವಾರ ‘ಅಭಿವ್ಯಕ್ತಿ ಬರಹಗಾರರ ಸಮಾವೇಶ’ ಉದ್ಘಾಟಿಸಿ ಮಾತನಾಡಿದರು.

‘ದಕ್ಷಿಣಾಯನಕ್ಕೆ ಹೆಚ್ಚು ಸಾಂಸ್ಕೃತಿಕ ಚಳವಳಿಗಳ ಅಗತ್ಯವಿದೆ. ಮಾನವಹಕ್ಕುಗಳ ಮೇಲಿನ ದಾಳಿ ತಡೆಯಲು, ಮೂಲಭೂತ ಹಕ್ಕು ಸಂರಕ್ಷಿಸಲು, ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಫ್ಯಾಸಿಸಂ ಎದುರಿಸಲು ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು’ ಎಂದು ಮನವಿ ಮಾಡಿದರು.

ಜನರ ಮತ ಪಡೆದು ಅಧಿಕಾರಕ್ಕೆ ಬಂದ ಸರ್ಕಾರಗಳು ಇಂದು  ಸರ್ವಾಧಿಕಾರ ರೂಪ ಪಡೆದಿವೆ. ಎಲ್ಲರನ್ನೂ ಒಳಗೊಳ್ಳುವಿಕೆ ಪ್ರಕ್ರಿಯೆಯಿಂದ ವಿಮುಖ ಗೊಳ್ಳುತ್ತಿವೆ.  ದೇಶದ ಅಲ್ಪಸಂಖ್ಯಾತ ಸಮುದಾಯವನ್ನು ತುಳಿಯುವ ಪ್ರಯತ್ನಗಳೂ ನಡೆಯುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸರ್ವಾಧಿಕಾರಿ ಪ್ರಭುತ್ವದ ಪ್ರಕ್ರಿಯೆ ಭಾರತದಲ್ಲೂ ಆರಂಭವಾಗಿದೆ. ಗುಜರಾತ್‌ನಲ್ಲಿ ಫ್ಯಾಸಿಸಂ ಶಕ್ತಿಗಳು ಬಂಡವಾಳಶಾಹಿಗಳ ಜತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿವೆ. ಈ ವ್ಯವಸ್ಥೆ ದೇಶದ ಇತರೆ ಭಾಗಗಳಿಗೂ  ವಿಸ್ತಾರವಾಗುತ್ತಿದೆ. ಇಂತಹ ಪ್ರಭುತ್ವ ಮೂರು ತಂತ್ರ ಅನುಸರಿಸುತ್ತಿವೆ. ಜನರಲ್ಲಿ ಭಯ ಮೂಡಿಸುವುದು. ಸುಳ್ಳು ಸುದ್ದಿಗಳನ್ನು ಸತ್ಯ ಎಂದು ಬಿಂಬಿಸುವುದು, ನಕಲಿ ಅಭಿವೃದ್ಧಿಯನ್ನೇ ನೈಜ ಎಂದು ಒಪ್ಪಿಕೊಳ್ಳುವಂತೆ ಮಾಡುವುದು’ ಎಂದು ವಿಶ್ಲೇಷಿಸಿದರು.

‘ದೇಶದ 12 ರಾಜ್ಯಗಳಲ್ಲಿ ದಕ್ಷಿಣಾಯನ ಚಳವಳಿ ಸಕ್ರಿಯವಾಗಿದೆ. ಸಾಂಸ್ಕೃತಿಕ ಚಳವಳಿಯಾಗಿ ಮುಂದುವರಿಯುತ್ತದೆ.  ಎಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಯಾಗುತ್ತೋ ಅಲ್ಲಿ ಪ್ರತಿರೋಧ ಒಡ್ಡುವುದು ಚಳವಳಿಯ ಪ್ರಮುಖ ಉದ್ದೇಶ’ಎಂದರು.

ಸಾಹಿತಿ ಚಂದ್ರಶೇಖರ ಪಾಟೀಲ್ ಮಾತನಾಡಿ, ‘ವರ್ತಮಾನದ ಬಿಕ್ಕಟ್ಟು ಅರ್ಥಮಾಡಿಕೊಂಡು ಹೊಸ ದಾರಿ ಕಂಡು ಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಆತ್ಮಾವಲೋಕನ ಮಾಡಿ ಕೊಳ್ಳಬೇಕು. ಚಳವಳಿಗಳು ಸತ್ತುಹೋಗಿದೆ ಎನ್ನುವುದು ನಿಜವಲ್ಲ. ಯಾವುದೇ ಚಳವಳಿ ಭೂಮಿಯ ಒಳಗಿನ ನದಿಯಂತೆ ಗುಪ್ತಗಾಮಿನಿಯಾಗಿ  ಹರಿಯುತ್ತಿರುತ್ತವೆ. ಒಂದಿಷ್ಟು ದುಗುಡ, ಸಂಕಟ, ಅನು ಮಾನಗಳ ನಡುವೆ  ಕಣ್ಣಮುಂದೆ ಬೆಳಕು ಕಾಣಿಸುತ್ತಿದೆ’ ಎಂದರು.

‘ಚಳವಳಿಗಳು ದೇಶದ ಎಲ್ಲ ಭಾಗಕ್ಕೂ ಪಸರಿಸಬೇಕು. ಇಲ್ಲವಾದರೆ ನಮಗೆ ಉಳಿಗಾಲವಿಲ್ಲ. ಎಲ್ಲ ಪಕ್ಷಗಳು ಕುಲಗೆಟ್ಟಿವೆ. ಈಗ ಇರುವುದು ರಾಜಕೀಯ  ಗುಂಪುಗಳು ಮಾತ್ರ. ಅವುಗಳಲ್ಲೇ ಒಳ ಗುಂಪುಗಳಿವೆ. 1974ರಲ್ಲಿ ಬರಹಗಾರರ ಒಕ್ಕೂಟ, 1979ರಲ್ಲಿ ಬಂಡಾಯ ಸಾಹಿತ್ಯ, ಈಗ 2017ರಲ್ಲಿ ದಕ್ಷಿಣಾಯನ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಭೂತ, ವರ್ತಮಾನಗಳ ನಡುವೆ ನಾಳೆಗಳನ್ನು ಹುಡುಕಬೇಕಾಗಿದೆ’ ಎಂದು ಪ್ರತಿಪಾದಿಸಿದರು.

ಸಮಾವೇಶದ ಸಂಚಾಲಕ ರಾಜೇಂದ್ರ ಚೆನ್ನಿ, ‘ಇಂದು ಬಹುತ್ವದ ಕಲ್ಪನೆ ಬದಲಾಗುತ್ತಿದೆ. ಬಹುತ್ವದ ಹತ್ಯೆ ಯಾಗುತ್ತಿದೆ. ಎಲ್ಲ ಬರಹಗಾರರೂ ಸೇರಿ ಬಹುತ್ವ ಹತ್ಯೆ ತಡೆಗಟ್ಟಬೇಕು. ದುಷ್ಟ ಶಕ್ತಿಗಳ ವಿರುದ್ಧ  ಹೋರಾಡಬೇಕು. ಸಾಂಸ್ಕೃತಿಕವಾಗಿ ಪ್ರತಿರೋಧ ಒಡ್ಡಬೇಕು.  ಪ್ರಭುತ್ವವನ್ನು  ಪ್ರಶ್ನೆ ಮಾಡುವ ವಿವೇಕ ಕಟ್ಟಿಕೊಡಬೇಕು’ ಎಂದು ಕರೆ ನೀಡಿದರು.

ಸಮಾವೇಶದಲ್ಲಿ  ನಟ ಚೇತನ್, ಲೇಖಕರಾದ  ಅನುಪಮಾ, ಜಿ.ಕೆ. ಗೋವಿಂದ ರಾವ್‌,  ಬಿ.ಟಿ.ಲಲಿತಾ ನಾಯಕ್‌, ರಂಜಾನ್ ದರ್ಗಾ, ರಾಜಪ್ಪ ದಳವಾಯಿ, ಕೆ.ವಿ. ನಾರಾಯಣಸ್ವಾಮಿ, ನಟರಾಜ್, ಗಣೇಶ್ ಅಮೀನಗಡ,  ಶ್ರೀಕಂಠ ಕೂಡಿಗೆ, ಡಿ.ಎಸ್.ನಾಗಭೂಷಣ್, ಸವಿತಾ ನಾಗಭೂಷಣ್, ಸವಿತಾ ಬನ್ನಾಡಿ, ಶರೀಫಾ, ಕೆ.ಅನುಸೂಯ, ಶೂದ್ರ ಶ್ರೀನಿವಾಸ್, ನಗರಿ ಬಾಬಯ್ಯ,  ಮುನೀರ್ ಕಾಟಿಪಳ್ಳ, ಕೆ. ಮರುಳಸಿದ್ದಪ್ಪ, ಕೇಶವ ಶರ್ಮ, ಕುಮಾರ ಚಲ್ಯಾ,  ಅರುಣ್ ಜೋಳದ ಕೂಡ್ಲಿಗೆ,  ಬಿ.ಎಂ.ಪುಟ್ಟಯ್ಯ, ಬಿ.ಎಂ.ಬಷೀರ್, ಜಿ.ಪಿ. ಬಸವರಾಜು, ಅಗ್ರಹಾರ ಕೃಷ್ಣಮೂರ್ತಿ, ಕಡಿದಾಳು ಶಾಮಣ್ಣ, ಕೆ.ಟಿ.ಗಂಗಾಧರ್, ಪ್ರಕಾಶ್ ಮಂಟೇರ್, ಪ್ರಭಾಕರ್, ಮಲ್ಲಿಕಾರ್ಜುನ ಮೇಟಿ, ವಡ್ಡಗೆರೆ ನಾಗರಾಜಯ್ಯ, ಕೆ.ಬಿ. ಪ್ರಸನ್ನಕುಮಾರ್, ಕುಂಸಿ ಉಮೇಶ್, ಷಣ್ಮುಖಸ್ವಾಮಿ, ಶೃಂಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT