ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಡ್ಲ ಎಕ್ಸ್‌ಪ್ರೆಸ್’ಗೆ ಚಾಲನೆ

Last Updated 9 ಏಪ್ರಿಲ್ 2017, 20:03 IST
ಅಕ್ಷರ ಗಾತ್ರ

ಮಂಗಳೂರು: ಬೆಂಗಳೂರು– ಮಂಗಳೂರು ನಡುವೆ ವಾರದಲ್ಲಿ ಮೂರು ದಿನ ಹಗಲು ಹೊತ್ತಿನಲ್ಲಿ ಸಂಚರಿಸಲಿರುವ ‘ಕುಡ್ಲ ಎಕ್ಸ್‌ಪ್ರೆಸ್’ ರೈಲು ಭಾನುವಾರದಿಂದ ಸಂಚಾರ ಆರಂಭಿಸಿದೆ.  ಮಂಗಳೂರು ಜಂಕ್ಷನ್‌– ಯಶವಂತಪುರ ನಿಲ್ದಾಣಗಳ ನಡುವೆ ಈ ರೈಲು ಸಂಚರಿಸಲಿದೆ.

ಗೋವಾದ ಮಡಗಾಂವ್‌ನಲ್ಲಿ ರೈಲ್ವೆ ಇಲಾಖೆಯಿಂದ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೇಂದ್ರ ರೈಲ್ವೆ ಸಚಿವ ಸುರೇಶ್ ಪಿ. ಪ್ರಭು ಅವರು ವಿಡಿಯೊ ಕಾನ್ಪರೆನ್ಸ್‌ ಮೂಲಕ ಮಂಗಳೂರು ಜಂಕ್ಷನ್‌ನಿಂದ ಹೊಸ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.

ಮಂಗಳೂರು– ಚೆರ್ವತ್ತೂರು ವಿದ್ಯುದ್ದೀಕರಣಗೊಂಡಿರುವ ರೈಲ್ವೆ ಮಾರ್ಗ, ಪಣಂಬೂರು– ಜೋಕಟ್ಟೆ ನಡುವಣ ಜೋಡಿ ಮಾರ್ಗ ಮತ್ತು ತೋಕೂರು ರೈಲು ನಿಲ್ದಾಣದಲ್ಲಿ ನಿರ್ಮಿಸಿರುವ ರೈಲ್ವೆ ಸೈಡಿಂಗ್‌ಗಳನ್ನು ಇದೇ ಸಂದರ್ಭದಲ್ಲಿ ರೈಲ್ವೆ ಸಚಿವರು ಸೇವೆಗೆ ಅರ್ಪಿಸಿದರು.

ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್‌ಕುಮಾರ್ ಕಟೀಲ್, ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಐವನ್ ಡಿಸೋಜ, ಶಾಸಕ ಜೆ.ಆರ್‌,ಲೋಬೊ, ಜಿಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್ ಕವಿತಾ ಸನಿಲ್‌ ಮತ್ತು ಪಾಲ್ಘಾಟ್‌ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ನರೇಶ್ ಲಾಲ್ವಾನಿ ನೂತನ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.

ಡಿ.ವಿ.ಸದಾನಂದ ಗೌಡ ಅವರು ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಮಂಡಿಸಿದ್ದ ರೈಲ್ವೆ ಬಜೆಟ್‌ನಲ್ಲಿ ‘ಕುಡ್ಲ ಎಕ್ಸ್‌ಪ್ರೆಸ್’ ಹೊಸ ರೈಲನ್ನು ಪ್ರಕಟಿಸಿದ್ದರು. ಆದರೆ, ಈವರೆಗೂ ಅದು ಸಂಚಾರ ಆರಂಭಿಸಿರಲಿಲ್ಲ. ಎರಡು ವರ್ಷಗಳ ಬಳಿಕ ಹೊಸ ರೈಲು ಸಂಚಾರ ಆರಂಭಿಸಿದೆ.

ಶ್ರವಣಬೆಳಗೊಳ ಮಾರ್ಗ: ಹೊಸ ರೈಲು ಮಂಗಳೂರು ಜಂಕ್ಷನ್‌ನಿಂದ ಹೊರಟು ಸಕಲೇಶಪುರ, ಹಾಸನ, ಶ್ರವಣಬೆಳಗೊಳ, ಕುಣಿಗಲ್‌ ಮಾರ್ಗವಾಗಿ ಯಶವಂತಪುರ ನಿಲ್ದಾಣ ತಲುಪಲಿದೆ. ಅದೇ ಮಾರ್ಗವಾಗಿ ಮಂಗಳೂರಿಗೆ ಹಿಂದಿರುಗುತ್ತದೆ. ಭಾನುವಾರ, ಮಂಗಳವಾರ ಮತ್ತು ಗುರುವಾರ ಬೆಳಿಗ್ಗೆ 7.50ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಡುವ ರೈಲು ಸಂಜೆ 5.30ಕ್ಕೆ ಮಂಗಳೂರು ಜಂಕ್ಷನ್‌ ತಲುಪುತ್ತದೆ.


ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಬೆಳಿಗ್ಗೆ 11.30ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡುವ ರೈಲು, ರಾತ್ರಿ 8.30ಕ್ಕೆ ಯಶವಂತಪುರ ನಿಲ್ದಾಣ ತಲುಪುತ್ತದೆ.

ಈ ರೈಲು 14 ಬೋಗಿಗಳನ್ನು ಹೊಂದಿರುತ್ತದೆ. ಅವುಗಳಲ್ಲಿ ಏಳು ಎರಡನೇ ದರ್ಜೆ (ಕಾಯ್ದಿರಿಸಿದ ಸೀಟುಗಳು), ಐದು ಎರಡನೇ ದರ್ಜೆ ಸಾಮಾನ್ಯ ಬೋಗಿಗಳು ಮತ್ತು ಎರಡು ಲಗ್ಗೇಜು ಸಾಗಣೆ ಬೋಗಿಗಳನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT