ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿದ ಹಣದ ಹೊಳೆ; ಗೆಲುವಿನ ಲೆಕ್ಕಾಚಾರ

Last Updated 10 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಮೈಸೂರು: ನಂಜನಗೂಡು ತಾಲ್ಲೂಕಿನ ಕಸಬಾ ಹೋಬಳಿಯ ಗ್ರಾಮವೊಂದರ ಜನರು ಮತದಾನ ಮಾಡಲು ಮುಂದಾಗಲಿಲ್ಲ. ಬೆಳಿಗ್ಗೆ ಬೆರಳೆಣಿಕೆಯಷ್ಟು ಮಂದಿ ಓಟು ಹಾಕಿದ್ದರು. ಮಧ್ಯಾಹ್ನವಾದರೂ ಯಾವ ಪಕ್ಷದವರೂ ಇತ್ತ ಸುಳಿಯದಿರುವುದನ್ನು ನೋಡಿ ಗ್ರಾಮಸ್ಥರು ಗದ್ದಲವನ್ನೇ ನಡೆಸಿದರು.
 
‘ಆ ಹಳ್ಳಿಯಲ್ಲಿ ಹಣ ಕೊಟ್ಟಿದ್ದಾರೆ. ನಮಗೆ ಈವರೆಗೂ ಹಣ ತಲುಪಿಲ್ಲ. ನಾವೆಂಗೆ ಓಟು ಹಾಕುವುದು’ ಎಂದು ಮತದಾನ ಮಾಡದೆ ದೂರವೇ ಉಳಿದಿದ್ದರು.
 
‘ಪಕ್ಕದೂರಿನವರಿಗೆ ಹಣ ನೀಡದಿದ್ದರೆ ನಾವೂ ಕೇಳುತ್ತಿರಲಿಲ್ಲ. ಅಲ್ಲಿ ಹಣ ಕೊಟ್ಟು ನಮಗೆ ಕೊಡದಿರುವುದು ಯಾವ ನ್ಯಾಯ?’ ಎಂದು ಬಹಿರಂಗವಾಗಿಯೇ ಜೋರು ಮಾಡಿದರು. ಕೊನೆಗೆ ವಿಷಯ ತಿಳಿದು ಸ್ಥಳಕ್ಕೆ ಬಂದ ಮುಖಂಡರೊಬ್ಬರು ಎಲ್ಲವನ್ನೂ ‘ಸರಿಮಾಡಿದ’ ಮೇಲೆ ಮತದಾನಕ್ಕೆ ಮುಂದಾದರು.

ಗ್ರಾಮಸ್ಥರು ಸಂಜೆ ಮೇಲೆ ಒಮ್ಮೆಲೆ ಮತದಾನಕ್ಕೆ ಬಂದಿದ್ದರಿಂದ ರಾತ್ರಿ 7 ಗಂಟೆಯವರೆಗೂ ಮತದಾನ ನಡೆಯಿತು. ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಹಣದ ಹೊಳೆ ಹರಿದಿರುವುದಕ್ಕೆ ಇದೊಂದು ಸಣ್ಣ ಉದಾಹರಣೆ.
 
‘ನಾನು ಸಾಕಷ್ಟು ಚುನಾವಣೆಗಳನ್ನು ನೋಡಿದ್ದೇನೆ. ಇಷ್ಟೊಂದು ಹಣ– ಮದ್ಯ ಹರಿಸಿದ ಚುನಾವಣೆ ಕಂಡಿಲ್ಲ. ಅದೂ ರಾಜಾರೋಷವಾಗಿ ಹಣ ಹಂಚಿಕೆ ಮಾಡಿದ್ದು ಅಸಹ್ಯ ಹುಟ್ಟಿಸಿತ್ತು’ ಎಂದು ನಂಜನಗೂಡು ಪಟ್ಟಣದ ಅಶೋಕಪುರಂ ನಿವಾಸಿ ರಾಜಾರಾವ್ ಹೇಳಿದ್ದು ಹಣ ಹಂಚಿಕೆಗೆ ಕನ್ನಡಿ ಹಿಡಿದಂತಿತ್ತು.
 
‘ಎರಡೂ ಕ್ಷೇತ್ರಗಳಲ್ಲೂ ಹಣದ ಹೊಳೆಯಂತೂ ಹರಿದಿದೆ. ವ್ಯವಸ್ಥಿತವಾಗಿ ತಲುಪಿಸಿದ್ದೇವೆ. ಮತದಾರರನ್ನು ‘ಚೆನ್ನಾಗಿ ಗೌರವಿಸಿದ್ದೇವೆ’. ಚುನಾವಣೆಯಲ್ಲಿ ಶೇ 50ರಷ್ಟು ಹಣ ಕೆಲಸ ಮಾಡುತ್ತದೆ.
 
ಈಗಿನ ಉಪಚುನಾವಣೆಯಲ್ಲಿ ಹಣ ಖರ್ಚು ಮಾಡಿರುವುದನ್ನು ನೋಡಿದರೆ ಮುಂದೆ ಉಪ ಚುನಾವಣೆಯನ್ನೇ ರದ್ದು ಮಾಡಬೇಕು ಎನಿಸುತ್ತದೆ. ಎಲ್ಲಿಂದ ಹಣ ತರುವುದು’ ಎಂದು ರಾಜಕೀಯ ಪಕ್ಷದ ಮುಖಂಡರೊಬ್ಬರು ಹಣ ಹಂಚಿಕೆ ವಿಚಾರವನ್ನು ಬಿಚ್ಚಿಟ್ಟರು.
 
ಒಂದು ಅಂದಾಜಿನ ಪ್ರಕಾರ ಎರಡೂ ಕ್ಷೇತ್ರಗಳಿಗೆ ರಾಜಕೀಯ ಪಕ್ಷವೊಂದು ಸುಮಾರು ₹ 80 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಆ ಪಕ್ಷದ ಮುಖಂಡರನ್ನು ಕೇಳಿದರೆ ‘ಅಷ್ಟು ಆಗಿರಬಹುದು. ಸ್ವಲ್ಪ ಹೆಚ್ಚೇ ಇರಬಹುದು’ ಎಂಬ ಸತ್ಯವನ್ನು ಒಪ್ಪಿಕೊಳ್ಳುತ್ತಾರೆ. ‘ಹಣ ಕೆಲಸ ಮಾಡಿದರೆ ಎರಡೂ ಕ್ಷೇತ್ರಗಳಲ್ಲೂ ಗೆಲುವು ನಮ್ಮದೇ. ಹಣ ಗೆಲುವು ತಂದುಕೊಡುತ್ತದೆ’ ಎಂದು ವಿಶ್ಲೇಷಿಸಿದರು.
 
ಹಣ ಹಂಚಿಕೆಯಲ್ಲಿ ಮತ್ತೊಂದು ಪಕ್ಷದವರೂ ಹಿಂದೆ ಬಿದ್ದಿಲ್ಲ. ‘ನಾವು ಅಷ್ಟೊಂದು ಹಣ ಖರ್ಚು ಮಾಡಿಲ್ಲ. ಅವರು ಮನೆಗೆ ನಾಲ್ಕೈದು ಸಾವಿರ ನೀಡಿದ್ದರೆ, ನಾವು ಅದರಲ್ಲಿ ಅರ್ಧದಷ್ಟು ಕೊಟ್ಟಿದ್ದೇವೆ. ಹಿಂದೆ ಕುಟುಂಬದ ಮುಖಂಡರಿಗೆ ಹಣ ಕೊಡಲಾಗುತ್ತಿತ್ತು. ಈ ಸಲ ಒಂದು ಮನೆಯಲ್ಲಿ ಇರುವ ಮತದಾರರ ಸಂಖ್ಯೆಯನ್ನು ಲೆಕ್ಕಹಾಕಿ, ಓಟಿನ ಆಧಾರದಲ್ಲಿ ಹಣ ನೀಡಲಾಗಿದೆ’ ಎಂದು ಮತ್ತೊಂದು ಪಕ್ಷದ ಮುಖಂಡರು ಹೇಳುತ್ತಾರೆ.
 
ಗುಂಡ್ಲುಪೇಟೆ, ನಂಜನಗೂಡು ಕ್ಷೇತ್ರದಲ್ಲಿ ಹಣ, ಜಾತಿ ಪ್ರಭಾವ ಕೆಲಸ ಮಾಡಿದೆ. ಈ ಎರಡು ವಿಚಾರಗಳು ಗೆಲುವು ತಂದುಕೊಡುತ್ತದೆ. ಚುನಾವಣೆಯಲ್ಲಿ ಹಣ ಬಿಟ್ಟರೆ ಬೇರೆ ವಿಷಯ ಕೆಲಸ ಮಾಡುವುದಿಲ್ಲ ಎಂದು ರಾಜಕೀಯ ಪಕ್ಷಗಳ ಮುಖಂಡರು ನೇರವಾಗಿಯೇ ಪ್ರಸ್ತಾಪಿಸುತ್ತಾರೆ.
 
ದಾಖಲೆ ಮತದಾನ: ಎರಡೂ ಕ್ಷೇತ್ರಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮಾತದಾನವಾಗಿರುವುದು ರಾಜಕೀಯ ಪಕ್ಷಗಳ ಗೆಲುವಿನ ಲೆಕ್ಕಾಚಾರದ ಸೂತ್ರವನ್ನು ಬದಲಿಸಿದೆ. (ನಂಜನಗೂಡು ಶೇ 77.45, ಗುಂಡ್ಲುಪೇಟೆ ಶೇ 87.10) ಮತದಾನದ ಪ್ರಮಾಣ ಹೆಚ್ಚಾಗಿರುವುದು ನಮಗೇ ಅನುಕೂಲ ಆಗಲಿದೆ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ.
 
ಶೇ 50ರಷ್ಟು ಹಾಗೂ ಅದಕ್ಕಿಂತ ಕಡಿಮೆ ಮತದಾನವಾದ ಸಾಕಷ್ಟು ಸಂದರ್ಭಗಳಲ್ಲಿ ಬಿಜೆಪಿ ಗೆಲ್ಲುತ್ತಿರಲಿಲ್ಲ. ಈಗ ಹೆಚ್ಚು ಮತದಾನ ಆಗಿರುವುದನ್ನು ನೋಡಿದರೆ ಗೆಲುವು ನಮ್ಮ ಕಡೆಗೆ ಇರಬಹುದು ಎನಿಸುತ್ತದೆ ಎಂದು ತಮ್ಮದೇ ವ್ಯಾಖ್ಯಾನ ಮುಂದಿಡುತ್ತಾರೆ.
 
ಕಾಂಗ್ರೆಸ್ ಮುಖಂಡರು ಇದಕ್ಕಿಂತ ಭಿನ್ನವಾದ ಲೆಕ್ಕಾಚಾರ ಮಂಡಿಸುತ್ತಾರೆ. ನಂಜನಗೂಡು ಕ್ಷೇತ್ರದಲ್ಲಿ 2013ರ ವಿಧಾನಸಭೆ ಚುನಾವಣೆಯಲ್ಲಿ ಶೇ 76.18, 2008ರಲ್ಲಿ ಶೇ 71.9ರಷ್ಟು, ಗುಂಡ್ಲಪೇಟೆ ಕ್ಷೇತ್ರದಲ್ಲಿ 2013ರಲ್ಲಿ ಶೇ 85.25, 2008ರಲ್ಲಿ ಶೇ 81.27ರಷ್ಟು ಮತದಾನವಾಗಿತ್ತು.

ಈ ಎರಡೂ ಕ್ಷೇತ್ರದ ಮಟ್ಟಿಗೆ ಮತದಾನ ಅಧಿಕವಾಗಿದ್ದಾಗ ಹಾಗೂ ಕಳೆದ ಎರಡು ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾ ಬಂದಿದ್ದಾರೆ. ಹಿಂದಿನ ಫಲಿತಾಂಶ ಗಮನಿಸಿದರೆ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲ್ಲುತ್ತಾರೆ. ಮತದಾನ ಹೆಚ್ಚಾಗಿರುವುದು ಕಾಂಗ್ರೆಸ್‌ಗೆ ಲಾಭ ತಂದುಕೊಡಲಿದೆ ಎಂದು ವಿವರಣೆ ನೀಡುತ್ತಾರೆ.
***
ಮೈಸೂರು: ನಂಜನಗೂಡು, ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನವರು ₹ 100 ಕೋಟಿ ಹಣ ಹಂಚಿದ್ದಾರೆ ಎಂದು ನಂಜನಗೂಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್‌ ಇಲ್ಲಿ ಸೋಮವಾರ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಉಪಚುನಾವಣೆಯ ಅಕ್ರಮಗಳಲ್ಲಿ ಗಿನ್ನಿಸ್‌ ದಾಖಲೆ ಬರೆದಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಹಣದ ಹೊಳೆ ಹರಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಜರುಗಿದ ಉಪಚುನಾವಣೆಗಿಂತ ಈ ಬಾರಿ ಹೆಚ್ಚು ಅಕ್ರಮ ನಡೆದಿದೆ’ ಎಂದು ದೂರಿದರು.
***
ಮತ ವ್ಯಾಪಾರದ ಕತೆ...
ಗುಂಡ್ಲುಪೇಟೆ ಕ್ಷೇತ್ರದ ಹಳ್ಳಿಯೊಂದರ ಕುಟುಂಬವೊಂದರಲ್ಲಿ ಮೂರು ಮತಗಳು ಇವೆ. ಪ್ರತಿ ಓಟಿಗೆ ₹ 1,000ದಂತೆ ₹ 3,000 ಹಣವನ್ನು ರಾಜಕೀಯ ಪಕ್ಷವೊಂದರ ಮುಖಂಡರು ನೀಡುತ್ತಾರೆ.

ಸ್ವಲ್ಪ ಸಮಯ ಬಿಟ್ಟು ಮತ್ತೊಂದು ಪಕ್ಷದ ಮುಖಂಡರು ಆ ಮನೆಗೆ ಹೋಗಿ ಪ್ರತಿ ಓಟಿಗೆ ₹ 500ರಂತೆ ₹ 1500 ಹಣ ಕೊಡುತ್ತಾರೆ. ಆ ಪಕ್ಷದವರು ತಲಾ ಓಟಿಗೆ ಸಾವಿರ ಕೊಟ್ಟಿದ್ದಾರೆ. ನೀವು ಕಡಿಮೆ ನೀಡಿದ್ದೀರಿ ಎಂದು ತಕರಾರು ತೆಗೆಯುತ್ತಾರೆ. ಆಗ ಈ ಪಕ್ಷದವರೂ ತಲಾ ಓಟಿಗೆ ₹ 1,000 ದಂತೆ ಹಣ ಕೊಡುತ್ತಾರೆ.

ಮತದಾನ ನಡೆದ ನಂತರ ಯಾರಿಗೆ ಓಟು ಹಾಕಿದ್ದೀರಿ ಎಂದು ಕೇಳಿದರೆ, ಮೊದಲು ಹಣ ಕೊಟ್ಟವರಿಗೆ ಎರಡು ಮತ, ನಂತರ ಹಣ ಕೊಟ್ಟವರಿಗೆ ಒಂದು ಮತ ಹಾಕಿದ್ದೇವೆ. ಇಬ್ಬರಿಗೂ ಓಟು ಕೊಟ್ಟಿದ್ದೇವೆ ಎಂದರಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT