ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಅಭಿಯಾನ ಡೋಲಾಯಮಾನ

Last Updated 11 ಏಪ್ರಿಲ್ 2017, 10:44 IST
ಅಕ್ಷರ ಗಾತ್ರ

ಕೋಲಾರ:  ಇಲಾಖೆ ಪುನರ್‌ ರಚನೆ ಸಂಬಂಧ ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ಮಾಡಿರುವ ಬಗ್ಗೆ ಅಂತಿಮ ಅಧಿಸೂಚನೆ ಹೊರಡಿಸುವಂತೆ ಪಟ್ಟು ಹಿಡಿದಿರುವ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಿಬ್ಬಂದಿಯು ಜಿಲ್ಲೆಯಲ್ಲಿ ಕಾಲುಬಾಯಿ ಜ್ವರ ಲಸಿಕೆ ಅಭಿಯಾನವನ್ನು ಬಹಿಷ್ಕರಿಸಿದ್ದಾರೆ. ಇದರಿಂದ ಅಭಿಯಾನ ಡೋಲಾಯಮಾನವಾಗಿದೆ.

ಹೈನುಗಾರಿಕೆಯೇ ಜಿಲ್ಲೆಯ ಬೆನ್ನೆಲುಬಾಗಿದೆ. ಬಹುಪಾಲು ರೈತ ಕುಟುಂಬಗಳು ಹಾಲನ್ನು ಡೇರಿಗಳಿಗೆ ಹಾಕಿ ಬದುಕು ಸಾಗಿಸುತ್ತಿವೆ. ಜಾನುವಾರುಗಳಿಗೆ ಸಾಮಾನ್ಯವಾಗಿ  ಮಾರ್ಚ್‌ ಮತ್ತು ಏಪ್ರಿಲ್‌ ಅವಧಿಯಲ್ಲಿ ಕಾಲುಬಾಯಿ ಜ್ವರ ಬರುತ್ತದೆ.

ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಹಾಕಿ ಜಿಲ್ಲೆಯನ್ನು ಕಾಲುಬಾಯಿ ಜ್ವರ ಮುಕ್ತ ವಾಗಿಸುವ  ಉದ್ದೇಶದಿಂದ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು ಏ.7ರಿಂದ ಏ.29ರವರೆಗೆ ಲಸಿಕೆ ಅಭಿಯಾನ ಹಮ್ಮಿಕೊಂಡಿದೆ. ಆದರೆ, ಅಭಿಯಾನದ ಆರಂಭದ ದಿನ ಮಾತ್ರ ಕೆಲ ಗ್ರಾಮಗಳಲ್ಲಿ ಲಸಿಕೆ ಹಾಕಿದ ಸಿಬ್ಬಂದಿ ನಂತರ ಅಭಿಯಾನ ದಿಂದ ದೂರ ಉಳಿದಿದ್ದಾರೆ.

ಸಮಿತಿ ಶಿಫಾರಸು: ಬಿ.ಎಸ್‌.ಯಡಿ ಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಮಂಡಿಸಿದ ಕೃಷಿ ಬಜೆಟ್‌ನಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯನ್ನು ಪುನರ್‌ ರಚನೆ ಮಾಡುವುದಾಗಿ ಪ್ರಕಟಿಸಿದ್ದರು. ಈ ಸಂಬಂಧ ಅಧ್ಯಯನ ನಡೆಸಲು ಮೀರಾ ಸಕ್ಸೇನಾ (ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದರು) ನೇತೃತ್ವದ ಸಮಿತಿ ರಚಿಸಿದ್ದರು. ನಂತರ ಸಕ್ಸೇನಾ ಸಮಿತಿಯು ಐದು ಪ್ರಮುಖ ಶಿಫಾರಸು ಗಳನ್ನು ಒಳಗೊಂಡ ವರದಿಯನ್ನು 2012ರಲ್ಲಿ ಸರ್ಕಾರಕ್ಕೆ ಸಲ್ಲಿಸಿತ್ತು.

ಆರೋಗ್ಯ ಇಲಾಖೆ ವೈದ್ಯರು ಮತ್ತು ಸಿಬ್ಬಂದಿಯ ವೇತನ, ಬಡ್ತಿ ಹಾಗೂ ಕೆಲಸಗಳಿಗೆ ಸರಿ ಸಮನಾಗಿ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಿಬ್ಬಂದಿಗೂ ಸವಲತ್ತು ನೀಡ ಬೇಕು. ಜಿಲ್ಲಾ ಮಟ್ಟದಲ್ಲಿ ಸಕಲ ಸೌಲಭ್ಯ ಗಳ ಪಾಲಿ ಕ್ಲಿನಿಕ್‌ಗಳನ್ನು ಸ್ಥಾಪಿಸ ಬೇಕು. ತಾಲ್ಲೂಕು ಮಟ್ಟದಲ್ಲಿ ಸಹಾಯಕ ನಿರ್ದೇಶಕರು ಮತ್ತು ಜಿಲ್ಲಾ ಮಟ್ಟದಲ್ಲಿ ಜಂಟಿ ನಿರ್ದೇಶಕರ ಹುದ್ದೆ  ಸೃಜಿಸಬೇಕು.  ಹೋಬಳಿ ಮಟ್ಟದ ಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು ಎಂಬುದು ಸಮಿತಿ ಶಿಫಾರಸು ಗಳಾಗಿವೆ.

ಬಿಜೆಪಿ ಆಡಳಿತದ ಅವಧಿಯಲ್ಲಿ ಈ ವರದಿ ಜಾರಿಗೆ ಆಗ್ರಹಿಸಿ ರಾಜ್ಯದಾದ್ಯಂತ ಪಶು ವೈದ್ಯಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದರು. ನಂತರ ಸರ್ಕಾರ ವರದಿ ಅನುಷ್ಠಾನದ ಭರವಸೆ ನೀಡಿ ರಾಜೀನಾಮೆ ಹಿಂಪಡೆಯುವಂತೆ  ಮನವೊಲಿಸಿತ್ತು. ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ 2016ರಲ್ಲಿ ಸಕ್ಸೆನಾ ಸಮಿತಿ ವರದಿಯನ್ನು ಅಂಗೀಕರಿಸಿತು. ಆದರೆ, ವರದಿ ಜಾರಿ ಸಂಬಂಧ ಗೆಜೆಟ್‌ನಲ್ಲಿ ಈವರೆಗೂ ಅಂತಿಮ ಅಧಿಸೂಚನೆ ಹೊರಡಿಸಿಲ್ಲ.

ಜಿಲ್ಲೆಯಾದ್ಯಂತ ಗೈರು:  ಪಶು ವೈದ್ಯಾಧಿಕಾರಿಗಳು, ಪಶು ವೈದ್ಯಕೀಯ ಪರಿವೀಕ್ಷಕರು, ಸಹಾಯಕರು ಹಾಗೂ ಜಾನುವಾರು ಅಧಿಕಾರಿಗಳು ಸೇರಿದಂತೆ ಇಲಾಖೆಯ ಸುಮಾರು 200 ಸಿಬ್ಬಂದಿ ಜಿಲ್ಲೆಯಾದ್ಯಂತ ಕಾಲುಬಾಯಿ ಜ್ವರ ಲಸಿಕೆ ಅಭಿಯಾನಕ್ಕೆ ಗೈರಾಗಿದ್ದಾರೆ.ಇದರಿಂದ  ಲಸಿಕೆ ಹಾಕುವ ಕಾರ್ಯಕ್ಕೆ ಹಿನ್ನಡೆ ಯಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳು ಸಿಬ್ಬಂದಿಯ ಮನವೊಲಿಕೆಗೆ ಪ್ರಯತ್ನ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT