ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾರ್ವರ್ಡ್‌ ಆಟಗಾರ ರಾಜ್ಯದ ಸುನಿಲ್‌ಗೆ ಸ್ಥಾನ

ಅಜ್ಲನ್‌ ಷಾ ಕಪ್ ಹಾಕಿ ಟೂರ್ನಿ: ಗೋಲ್‌ಕೀಪರ್‌ ಶ್ರೀಜೇಶ್‌ಗೆ ನಾಯಕತ್ವ
Last Updated 11 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು:   ಮಲೇಷ್ಯಾದ ಇಪೊದಲ್ಲಿ ಆಯೋಜನೆಯಾಗಿರುವ ಸುಲ್ತಾನ್‌ ಅಜ್ಲನ್‌ ಷಾ ಕಪ್‌ ಹಾಕಿ ಟೂರ್ನಿಗೆ ಮಂಗಳವಾರ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಫಾರ್ವರ್ಡ್‌ ಆಟಗಾರ ಕರ್ನಾಟಕದ ಎಸ್‌.ವಿ. ಸುನಿಲ್ ಸ್ಥಾನ ಪಡೆದುಕೊಂಡಿದ್ದಾರೆ. ಗೋಲ್‌ಕೀಪರ್‌ ಪಿ.ಆರ್‌. ಶ್ರೀಜೇಶ್ ಅವರನ್ನು ನಾಯಕರನ್ನಾಗಿ ಮುಂದುವರಿಸಲಾಗಿದೆ.

ಟೂರ್ನಿಯು ಏಪ್ರಿಲ್‌ 29ರಂದು ಆರಂಭವಾಗಲಿದೆ. ಮನಪ್ರೀತ್ ಸಿಂಗ್ ಅವರಿಗೆ ಉಪನಾಯಕ ಸ್ಥಾನದ ಜವಾಬ್ದಾರಿ ಲಭಿಸಿದೆ. ಜೂನಿಯರ್ ವಿಶ್ವಕಪ್‌ ಹಾಕಿ ಟೂರ್ನಿಯಲ್ಲಿ ಚಾಂಪಿ ಯನ್‌ ಆದ ಭಾರತ ತಂಡದಲ್ಲಿದ್ದ ಡಿಫೆಂಡರ್‌ ಗುರಿಂದರ್‌ ಸಿಂಗ್‌, ಮಿಡ್‌ಫೀಲ್ಡರ್‌ಗಳಾದ ಸುಮಿತ್‌ ಮತ್ತು ಮನಪ್ರೀತ್‌ ಅವರಿಗೂ ತಂಡದಲ್ಲಿ ಸ್ಥಾನ ಸಿಕ್ಕಿದೆ.

ಹೋದ ವರ್ಷ ಭಾರತ ಜೂನಿಯರ್‌ ತಂಡ  ಸರಣಿ ಆಡಲು ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಆಗ ತಂಡದ ಗೋಲ್‌ಕೀಪರ್ ಆಗಿದ್ದ  ಸೂರಜ್‌ ಕರ್ಕೇರಾ ಮೊದಲ ಬಾರಿಗೆ ಸೀನಿಯರ್‌ ತಂಡದಲ್ಲಿ ಅವಕಾಶ ಗಿಟ್ಟಿಸಿದ್ದಾರೆ. ರಷ್ಯಾದಲ್ಲಿ ನಡೆದ ಯೂರೊ ಏಷ್ಯಾ ಕಪ್ ಮತ್ತು ಹೋದ ವರ್ಷ ಜರುಗಿದ ನಾಲ್ಕು ರಾಷ್ಟ್ರಗಳ ನಡುವಣದ ಸರಣಿಯಲ್ಲಿ ಸೂರಜ್ ದೇಶವನ್ನು ಪ್ರತಿನಿಧಿಸಿದ್ದರು.

ಅಜ್ಲನ್ ಷಾ ಕಪ್‌  ಸೇರಿದಂತೆ ಇನ್ನಿತರ ಅಂತರರಾಷ್ಟ್ರೀಯ ಟೂರ್ನಿಗಳಿಗೆ ಭಾರತ ತಂಡವನ್ನು ಆಯ್ಕೆ ಮಾಡಲು ನಗರದಲ್ಲಿ  ತರಬೇತಿ ಶಿಬಿರ ನಡೆಯುತ್ತಿದೆ. ಜೂನಿಯರ್ ತಂಡದ ಪ್ರಮುಖ ಆಟಗಾರರೂ ಶಿಬಿರದಲ್ಲಿ ದ್ದಾರೆ. 2018ರಲ್ಲಿ ನಡೆಯಲಿರುವ ವಿಶ್ವಕಪ್‌ ಮತ್ತು 2020ರ ಟೋಕಿಯೊ ಒಲಿಂಪಿಕ್ಸ್‌ ಗಮನದಲ್ಲಿಟ್ಟುಕೊಂಡು ಭಾರತ ತಂಡದ ಮುಖ್ಯ ಕೋಚ್‌ ರೋಲಂಟ್‌ ಓಲ್ಟಮಸ್‌ ಅವರು ಬಲಿಷ್ಠ ತಂಡ ಕಟ್ಟಲು ಈಗಿನಿಂದಲೇ ಯೋಜನೆ ಗಳನ್ನು ರೂಪಿಸುತ್ತಿದ್ದಾರೆ. ಆದ್ದರಿಂದ ಅಜ್ಲನ್‌ ಷಾ ಕಪ್ ಟೂರ್ನಿಗೆ ಜೂನಿ ಯರ್ ತಂಡದ  ನಾಲ್ವರು ಆಟಗಾರರಿಗೆ ಅವಕಾಶ ನೀಡಿದ್ದಾರೆ.

‘ವಿಶ್ವ ಹಾಕಿ ಲೀಗ್ ಸೆಮಿಫೈನಲ್, ಏಷ್ಯಾ ಕಪ್‌ ಮತ್ತು ಹಾಕಿ ಲೀಗ್ ಫೈನಲ್‌ ಟೂರ್ನಿಗಳು ಇದೇ ವರ್ಷ    ನಡೆಯಲಿವೆ.    ಈ ಟೂರ್ನಿಗಳಿಗೂ ಮೊದಲು ನಮ್ಮ ತಂಡ  ಬೆಲ್ಜಿಯಂ ಮತ್ತು ಜರ್ಮನಿ ಎದುರು ಆಡಲಿದೆ. ಕಠಿಣ ತಂಡಗಳ ವಿರುದ್ಧ ಆಡಲಿರುವುದರಿಂದ ದೊಡ್ಡ ಟೂರ್ನಿಗಳಲ್ಲಿ ಉತ್ತಮ ಸಾಮರ್ಥ್ಯ ನೀಡಲು ಸಾಧ್ಯವಾಗುತ್ತದೆ’ ಎಂದು ಓಲ್ಟಮಸ್‌ ಅಭಿಪ್ರಾಯಪಟ್ಟಿದ್ದಾರೆ.

ತಂಡ ಇಂತಿದೆ: ಗೋಲ್‌ ಕೀಪರ್‌ಗಳು: ಪಿ.ಆರ್‌. ಶ್ರೀಜೇಶ್‌ (ನಾಯಕ),  ಸೂರಜ್‌ ಕರ್ಕೇರಾ. ಡಿಫೆಂಡರ್ಸ್‌: ಪ್ರದೀಪ್‌ ಮೋರ್‌, ಸುರೇಂದರ್ ಕುಮಾರ್‌, ರೂಪಿಂದರ್‌ಪಾಲ್‌ ಸಿಂಗ್, ಹರ್ಮನಪ್ರೀತ್ ಸಿಂಗ್, ಗುರೀಂದರ್‌ ಸಿಂಗ್‌. ಮಿಡ್‌ಫೀಲ್ಡರ್ಸ್‌: ಚಿಂಗ್ಲೆನ್‌ಸನಾ ಸಿಂಗ್‌, ಸುಮಿತ್‌, ಸರ್ದಾರ್ ಸಿಂಗ್‌, ಮನಪ್ರೀತ್‌ ಸಿಂಗ್ (ಉಪನಾಯಕ), ಹರ್ಜಿತ್‌ ಸಿಂಗ್‌, ಮನಪ್ರೀತ್‌. ಫಾರ್ವರ್ಡ್ಸ್‌್: ಎಸ್‌.ವಿ. ಸುನಿಲ್‌, ತಲ್ವಿಂದರ್‌ ಸಿಂಗ್‌, ಮನದೀಪ್‌ ಸಿಂಗ್,  ಅಫಾನ್‌ ಯೂಸುಫ್‌ ಮತ್ತು ಆಕಾಶದೀಪ್‌ ಸಿಂಗ್.

ಆಯ್ಕೆ ಅಚ್ಚರಿ ತಂದಿದೆ: ಸೂರಜ್‌
ತಂಡದಲ್ಲಿ ಸ್ಥಾನ ಲಭಿಸಿರುವುದಕ್ಕೆ ಯುವ ಆಟಗಾರ ಸೂರಜ್ ಕರ್ಕೇರಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ‘ಸೀನಿಯರ್ ತಂಡದಲ್ಲಿ ಸ್ಥಾನ ಲಭಿಸುತ್ತದೆ ಎಂದು ನಿರೀಕ್ಷೆಯೇ ಮಾಡಿರಲಿಲ್ಲ. ಮೊದಲ ಬಾರಿಗೆ ಸೀನಿಯರ್ ತಂಡದ ಶಿಬಿರಕ್ಕೆ ಪಡೆಯಲು ಆಯ್ಕೆಯಾಗಿದ್ದೆ. ಈ ಅವಕಾಶದಲ್ಲಿಯೇ ಸೀನಿಯರ್‌ ತಂಡದಲ್ಲಿ  ಸ್ಥಾನ ಸಿಕ್ಕಿದ್ದರಿಂದ ಈ ಆಯ್ಕೆ ಅಚ್ಚರಿ ಮೂಡಿಸಿದೆ’ ಎಂದು ಮುಂಬೈನ ಸೂರಜ್‌ ಹೇಳಿದ್ದಾರೆ.

‘ನಿನಗೆ ಈಗಷ್ಟೇ 21 ವರ್ಷ ವಯಸ್ಸು. ಹೆಚ್ಚು ಒತ್ತಡಕ್ಕೆ ಒಳಗಾಗಬೇಡ. ಸದಾ ನಗು ಮೊಗದೊಂದಿಗೆ ಕಠಿಣ ಪರಿಶ್ರಮ ಪಡು. ಸೀನಿಯರ್ ಮತ್ತು ಜೂನಿಯರ್ ವಿಭಾಗದ ಹಾಕಿಗೆ ಸಾಕಷ್ಟು ವ್ಯತ್ಯಾಸವಿದೆ.  ಸೀನಿಯರ್ ತಂಡದಲ್ಲಿ ತುಂಬಾ ಒಳ್ಳೆಯ ಅನುಭವವಾಗುತ್ತದೆ ಎಂದು ಶ್ರೀಜೇಶ್ ಅಣ್ಣ ಹೇಳಿದ್ದಾರೆ. ಅವರ ಜೊತೆಗೆ ತಂಡದಲ್ಲಿ ಸ್ಥಾನ ಲಭಿಸಿದ್ದರಿಂದ ಖುಷಿ ಹೆಚ್ಚಾಗಿದೆ’ ಎಂದು ಸೂರಜ್‌ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT