ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ತಾಲ್ಲೂಕಿನಲ್ಲೂ ಮೇವು ಬ್ಯಾಂಕ್‌ ಸ್ಥಾಪನೆ

ಒಣ ಮೇವಿನ ಸಮಸ್ಯೆ ನೀಗಿಸಲು ಜಿಲ್ಲಾಡಳಿತ ಕ್ರಮ: ತಮಿಳುನಾಡಿನಿಂದ ಹುಲ್ಲು
Last Updated 12 ಏಪ್ರಿಲ್ 2017, 5:06 IST
ಅಕ್ಷರ ಗಾತ್ರ

ಕೋಲಾರ:  ಜಿಲ್ಲೆಯಲ್ಲಿ ಬರದ ಬಿಸಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗದಂತೆ ಜಿಲ್ಲಾಡಳಿತವು ಪ್ರತಿ ತಾಲ್ಲೂಕಿನಲ್ಲೂ ಮೇವು ಬ್ಯಾಂಕ್‌ ತೆರೆಯುವ ನಿರ್ಧಾರ ಕೈಗೊಂಡಿದೆ.

ಹೈನುಗಾರಿಕೆಯೇ ಜಿಲ್ಲೆಯ ಜೀವನಾಡಿಯಾಗಿದ್ದು, ಬಹುಪಾಲು ರೈತ ಕುಟುಂಬಗಳು ಕೃಷಿಯ ಜತೆಗೆ ಹೈನೋದ್ಯಮದಲ್ಲಿ ತೊಡಗಿಸಿಕೊಂಡಿವೆ.  ರೈತರು ಡೇರಿಗಳಿಗೆ ಹಾಲು ಹಾಕಿ ಜೀವನ ನಿರ್ವಹಿಸುತ್ತಿದ್ದಾರೆ.

2011–12ರಿಂದ ಬರಕ್ಕೆ ತುತ್ತಾಗಿರುವ ಜಿಲ್ಲೆಯಲ್ಲಿ ಹೈನೋದ್ಯಮವು ಬಿಕ್ಕಟ್ಟು ಎದುರಿಸುತ್ತಿದೆ. ಮೇವು ಹಾಗೂ ಕುಡಿಯುವ ನೀರು ಸಿಗುವುದು ಕಷ್ಟವಾಗಿದೆ. ಹಲವೆಡೆ ರಾಸುಗಳನ್ನು ಕಸಾಯಿಖಾನೆಗಳಿಗೆ ಮಾರುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

ಜಿಲ್ಲಾಡಳಿತ ಕೋಲಾರ ತಾಲ್ಲೂಕಿನ ಸೀತಿ ಗ್ರಾಮದಲ್ಲಿ 2016ರ ನವೆಂಬರ್‌ನಲ್ಲಿ ಗೋಶಾಲೆ ತೆರೆದಿತ್ತು. ಸರ್ಕಾರದ ನಿಯಮದ ಪ್ರಕಾರ 90 ದಿನಗಳವರೆಗೆ ಮಾತ್ರ ಗೋಶಾಲೆ ನಡೆಸಲು ಅವಕಾಶವಿದೆ. ಫೆಬ್ರುವರಿಯಲ್ಲಿ ಗೋಶಾಲೆ ಬಂದ್‌ ಮಾಡಲಾಯಿತು. ನಂತರ ಸೀತಿ ಗ್ರಾಮದಲ್ಲೇ ಮೇವು ಬ್ಯಾಂಕ್‌ ಆರಂಭಿಸಿ ಕೆಲ ದಿನಗಳವರೆಗೆ ಸುತ್ತಮುತ್ತಲ ಗ್ರಾಮಗಳ ರೈತರಿಗೆ ಮೇವು ಪೂರೈಸಲಾಯಿತು.

ಆದರೆ, ಒಣ ಮೇವಿನ ಸಮಸ್ಯೆ ಎದುರಾಗಿದ್ದರಿಂದ ಮೇವು ಬ್ಯಾಂಕ್ ಅನ್ನು ಸಹ ಮುಚ್ಚಲಾಯಿತು. ಇದೀಗ ಜಿಲ್ಲಾಡಳಿತವು ಪೂರ್ವಸಿದ್ಧತೆ ಮಾಡಿ ಕೊಂಡು ಐದು ತಾಲ್ಲೂಕುಗಳಲ್ಲೂ (ಕೆಜಿಎಫ್‌ ಹೊರತುಪಡಿಸಿ) ತಲಾ ಒಂದೊಂದು ಮೇವು ಬ್ಯಾಂಕ್‌ ತೆರೆ ಯುವ ತೀರ್ಮಾನಿಸಿದೆ. ಭತ್ತದ ಹುಲ್ಲು ಖರೀದಿಗೆ ಟೆಂಡರ್‌ ಪ್ರಕ್ರಿಯೆ ಪೂರ್ಣ ಗೊಳಿಸಿದೆ.

ತಮಿಳುನಾಡಿನ ಹುಲ್ಲು: ಟೆಂಡರ್‌ ಪಡೆದಿರುವ ಗುತ್ತಿಗೆದಾರರು ತಮಿಳುನಾಡಿನ ತಂಜಾವೂರು, ಕುಂಭಕೋಣಂ, ಮನ್ನಾರ್‌ಗುಡಿ ಸುತ್ತಮುತ್ತಲ ಪ್ರದೇಶದಿಂದ ಸುಮಾರು 50 ಟನ್‌ ಭತ್ತದ ಹುಲ್ಲನ್ನು ಪೂರೈಕೆ ಮಾಡಿದ್ದಾರೆ. ಗುತ್ತಿಗೆದಾರರಿಗೆ ಸಾಗಣೆ ವೆಚ್ಚ ಸೇರಿ ಪ್ರತಿ ಟನ್‌ ಭತ್ತದ ಹುಲ್ಲಿಗೆ ₹ 13,400 ಪಾವತಿಸಲಾಗಿದೆ.

ಕೋಲಾರ ತಾಲ್ಲೂಕಿನ ವೇಮಗಲ್‌ ತಾಲ್ಲೂಕು ಕ್ರೀಡಾಂಗಣದಲ್ಲಿ ಸೋಮವಾರದಿಂದ (ಏ.10) ಪ್ರಾಯೋಗಿಕವಾಗಿ ಮೇವು ಬ್ಯಾಂಕ್‌ ಆರಂಭಿಸಲಾಗಿದೆ. ಇಲ್ಲಿಯೇ ಭತ್ತದ ಹುಲ್ಲು ದಾಸ್ತಾನು ಮಾಡಿಕೊಂಡು ಪ್ರತಿ ಜಾನುವಾರಿಗೆ ದಿನಕ್ಕೆ ಐದು ಕೆ.ಜಿ ಹುಲ್ಲು ವಿತರಿಸಲಾ ಗುತ್ತದೆ. ವೇಮಗಲ್‌ ಹಾಗೂ ಸುತ್ತ ಮುತ್ತಲ ಗ್ರಾಮಗಳಲ್ಲಿನ ಜಾನುವಾರು ಗಳ ಮಾಲೀಕರು ಕೆ.ಜಿಗೆ ₹ 2 ಕೊಟ್ಟು ಹುಲ್ಲು ಖರೀದಿಸುತ್ತಿದ್ದಾರೆ.

ಮೇವು ಆಂದೋಲನ: ಮತ್ತೊಂದೆಡೆ ಜಿಲ್ಲಾಡಳಿತವು ಹಸಿರು ಮೇವು ಆಂದೋಲನ ಕೈಗೊಂಡಿದೆ. ಕೊಳವೆ ಬಾವಿ ನೀರು ಲಭ್ಯವಿರುವ ರೈತರ ಜಮೀನುಗಳನ್ನು ಬಾಡಿಗೆಗೆ ಪಡೆದು ಹಾಗೂ ಕೆಲವೆಡೆ ಸರ್ಕಾರಿ ಜಮೀನುಗಳಲ್ಲಿ ಹಸಿರು ಮೇವು ಬೆಳೆಸಲಾಗಿದೆ. ಈ ರೀತಿ ಸುಮಾರು 11,000 ಎಕರೆಯಲ್ಲಿ ಹಸಿರು ಮೇವು ಬೆಳೆಯಲಾಗಿದೆ.

ಕೋಲಾರ– ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ವ್ಯಾಪ್ತಿಯ ಪ್ರಾಥಮಿಕ ಹಾಲು ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿರುವ ನೀರಾವರಿ ಸೌಲಭ್ಯವುಳ್ಳ ರೈತರಿಗೆ ಮೇವು ಬೆಳೆಯಲು ಉಚಿತವಾಗಿ ಆಫ್ರಿಕನ್‌ ಟಾಲ್‌ ಮತ್ತು ಕೆಂಪು ಮುಸುಕಿನ ಜೋಳದ ಬಿತ್ತನೆ ಬೀಜ ವಿತರಿಸಲಾಗಿದೆ.

ಮೇವು ಬೆಳೆದು ಕೊಡುವ ರೈತರಿಗೆ ಪ್ರತಿ ಎಕರೆಗೆ ₹ 3 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ. ಈ ಮೇವನ್ನು ಭೂರಹಿತ ಹೈನುದಾರರಿಗೆ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

*
ಬೇಡಿಕೆ ಆಧರಿಸಿ ಸ್ಥಳ ಗುರುತು
ಒಣ ಮೇವಿನ ಸಮಸ್ಯೆಯಾಗದಂತೆ 5 ತಾಲ್ಲೂಕುಗಳಲ್ಲೂ ಮೇವು ಬ್ಯಾಂಕ್‌ ತೆರೆಯಲಾಗುತ್ತದೆ. ಬೇಡಿಕೆ ಹಾಗೂ ಜಾನುವಾರುಗಳ ಸಂಖ್ಯೆ ಆಧರಿಸಿ ಮೇವು ಬ್ಯಾಂಕ್‌ ಸ್ಥಾಪನೆಗೆ ಸ್ಥಳ ಗುರುತು ಮಾಡಲಾಗುತ್ತದೆ. ಪ್ರತಿ ಮೇವು ಬ್ಯಾಂಕ್‌ಗೆ 50 ಟನ್‌ ಒಣ ಮೇವು ಒದಗಿಸಲಾಗುತ್ತದೆ.
–ಡಾ.ಕೆ.ವಿ.ತ್ರಿಲೋಕಚಂದ್ರ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT