ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿ ಮತ್ತು ರಾಜಕಾರಣಿಗಳ ವಿಕೃತಿ

ರಾಜ್ಯದಲ್ಲಿನ ನೀರಿನ ಹಾಹಾಕಾರಕ್ಕೆ ಪ್ರಕೃತಿಯಷ್ಟೇ ರಾಜಕಾರಣಿಗಳ ವಿಕೃತ ಮನಸ್ಸುಗಳೂ ಕಾರಣ
Last Updated 12 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
l ಎಚ್.ಡಿ. ದೇವೇಗೌಡ
‘ನೀರ ನೆಮ್ಮದಿಯ ನಾಳೆ’ ಎಂಬ ಶೀರ್ಷಿಕೆಯಡಿ,  ಜಲಜಾಗೃತಿ ಬಗ್ಗೆ ಜನಜಾಗೃತಿ ಮೂಡಿಸುವ ವಿಶಿಷ್ಟ ಅಭಿಯಾನವನ್ನೇ ‘ಪ್ರಜಾವಾಣಿ’ ಆರಂಭಿಸಿದೆ. ಅದಕ್ಕೆ ಬಂದ ಸಕಾರಾತ್ಮಕ ಮತ್ತು ಸ್ಪಂದನಶೀಲ ಪ್ರತಿಕ್ರಿಯೆಗಳನ್ನೂ ಆಸಕ್ತಿಯಿಂದ ಗಮನಿಸಿದೆ. 
 
ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರದ ಜೊತೆಗೆ, ನಾಡಿನ ಶೇಕಡ 90ರಷ್ಟು ಪ್ರದೇಶಗಳು ತೀವ್ರ ಬರಕ್ಕೆ ತುತ್ತಾಗಿ ಜನ-ಜಾನುವಾರುಗಳ ಪರಿಸ್ಥಿತಿ ಶೋಚನೀಯವಾಗಿರುವುದು ನನ್ನನ್ನು ಚಿಂತಿತನನ್ನಾಗಿಸಿದೆ.

ಈ ಪರಿಸ್ಥಿತಿಗೆ ಪ್ರಕೃತಿ ಒಂದು ಕಾರಣವಾದರೆ ನಮ್ಮಂತಹ ರಾಜಕಾರಣಿಗಳ ಪಾತ್ರ ಅದಕ್ಕೂ ಮಿಗಿಲಾಗಿದೆ. ಹಾಗಾಗಿ ಸಾರ್ವಜನಿಕ ಬದುಕಿನಲ್ಲಿರುವ ನನ್ನಂತಹವರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. 
 
ಉದಾಹರಣೆಗೆ, ಬೆಂಗಳೂರಿನ ಸಮಸ್ಯೆಯನ್ನೇ ತೆಗೆದುಕೊಂಡರೆ, ಕುಡಿಯುವ ನೀರಿಗೆ ಹಳೆಯ ತಿಪ್ಪಗೊಂಡನಹಳ್ಳಿ ಜಲಾಶಯ ಕಿರಿದಾಗಿ, ಕಾವೇರಿ ಹಿರಿದಾಗಿ ಹರಿದಿದೆ.  ಆದರೂ ಚಾಮುಂಡಿ ನಗರದಲ್ಲಿ ಟ್ಯಾಂಕರ್ ನೀರನ್ನು ತುಂಬಿಸಿಕೊಳ್ಳಲು ಮುಗಿಬಿದ್ದಿದ್ದ ಜನರ ಚಿತ್ರ (ಪ್ರ.ವಾ., ಏ. 4) ನಮ್ಮಂತಹ ಜನಪ್ರತಿನಿಧಿಗಳು ಮುಖಮುಚ್ಚಿಕೊಳ್ಳುವಂತಿದೆ.
 
ನಗರದ ಕೇಂದ್ರ ಹಾಗೂ ಸಿ.ಎಂ.ಸಿ. ಪ್ರದೇಶದ ವ್ಯಾಪ್ತಿಯಲ್ಲಿ ಬರುವ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಕೆ ಆಗುತ್ತಿಲ್ಲ ಎಂದು ಜಲಮಂಡಳಿಯೇ ಹೇಳಿದೆ. ಅಂದರೆ ಕಾವೇರಿ ನಾಲ್ಕನೇ ಹಂತದ ಯೋಜನೆ ಅನುಷ್ಠಾನವಾಗಿ ಮುಂದಿನ ಹಂತಗಳ ಪ್ರಗತಿಯ ನಂತರವೂ  ಅವುಗಳಿಗೆ ಕಾವೇರಿ ನೀರು ಸಿಕ್ಕಿಲ್ಲ. 
 
ಈ ಮಧ್ಯೆ ಕಾವೇರಿ  ನ್ಯಾಯಮಂಡಳಿಯ ಐತೀರ್ಪು ಬಂದು ಬೆಂಗಳೂರಿನ  ಮೂರನೇ ಎರಡು ಭಾಗದ ಪ್ರದೇಶಗಳಿಗೆ ಕಾವೇರಿ ನೀರು ಬಳಸುವಂತಿಲ್ಲ ಎಂಬ ನಿಬಂಧನೆ ಹೇರಿದೆ ಎಂಬುದೂ ಇಲ್ಲಿನ ನಾಗರಿಕರ  ತಲೆಕೆಡಿಸಿಲ್ಲ.  ಅಷ್ಟರಮಟ್ಟಿಗೆ  ಜನ  ಇದು ತಮಗೆ ಸಂಬಂಧಿಸಿದ ವಿಷಯವಲ್ಲ ಎಂಬಂತೆ  ಇದ್ದಾರೆ. ಕೆಲವು ರಾಜಕೀಯ ನಿರ್ಧಾರಗಳು ಹೇಗೆ ಇಂದಿನ ಪರಿಸ್ಥಿತಿಗೆ ಕಾರಣ ಎಂಬುದನ್ನು ಹಂಚಿಕೊಳ್ಳ ಬಯಸುತ್ತೇನೆ. 
 
1962ರಲ್ಲಿ ನಾನು  ಪಕ್ಷೇತರ ಸದಸ್ಯನಾಗಿ ವಿಧಾನಸಭೆಗೆ  ಆರಿಸಿ ಬಂದ ಮೊದಲ 5 ವರ್ಷಗಳಲ್ಲೇ ಕಾವೇರಿ ಕೊಳ್ಳದ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರ ಬಗ್ಗೆ ಹೋರಾಟ ಮಾಡಿದ್ದೆ.
 
ಖಾಸಗಿ ನಿರ್ಣಯ ತಂದು ಅದು ಸದನದಲ್ಲಿ ಸರ್ವಾನುಮತದಿಂದ ಒಪ್ಪಿತವಾಗುವಂತೆಯೂ ಮಾಡಿದ್ದೆ. ಅದರ ಮುಂದಿನ ಭಾಗವಾಗಿ ಕಾವೇರಿ ಕೊಳ್ಳದ ಹಾರಂಗಿ, ಹೇಮಾವತಿ, ಜಲಾಶಯಗಳು ಎದ್ದು ನಿಂತಿರುವುದು ಸತ್ಯ.  ಅವು ಈಗ ಬರಿದಾಗಿರುವುದು ನನ್ನನ್ನು ಭಾವುಕನನ್ನಾಗಿಸಿದೆ.
 
ನಾನು 1985ರಲ್ಲಿ ಲೋಕೋಪಯೋಗಿ ಸಚಿವನಾಗಿದ್ದಾಗ,  ಬೆಂಗಳೂರು ಮೆಟ್ರೊಪಾಲಿಟನ್ ವ್ಯಾಪ್ತಿಯಲ್ಲಿನ ಕೆರೆಗಳನ್ನು ರಕ್ಷಿಸಲೇಬೇಕೆಂಬ ದಿಟ್ಟ ತೀರ್ಮಾನ ತೆಗೆದುಕೊಂಡೆ. ಇದಕ್ಕಾಗಿ ಈ ಕೆರೆಗಳು, ಅವುಗಳ ಅಚ್ಚುಕಟ್ಟು ಪ್ರದೇಶಗಳಿಗೆ ಎದುರಾಗಿರುವ ಅಪಾಯದ ಬಗ್ಗೆ ಕೂಲಂಕಷವಾಗಿ ವರದಿ ಸಲ್ಲಿಸಲು  ಪರಿಣತ ಸಮಿತಿಯನ್ನು ಎನ್.ಲಕ್ಷ್ಮಣರಾವ್ ನೇತೃತ್ವದಲ್ಲಿ  ರಚಿಸಿದೆ.
 
ಈ  ಸಮಿತಿ ವರದಿ ಸಲ್ಲಿಸಿ 262 ಕೆರೆಗಳ  ಪಟ್ಟಿ ನೀಡಿತು.  ತಕ್ಷಣವೇ  ನಾನು ಅದರ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲು ರಾಜ್ಯ ಗೆಜೆಟ್‌ನಲ್ಲಿ ಅಧಿಕೃತ ಪ್ರಕಟಣೆಯನ್ನೂ, ಬಳಿಕ ಸರ್ಕಾರಿ ಆದೇಶವನ್ನೂ ಹೊರಡಿಸಿದೆ. ಆಮೇಲೆ ನಾನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ಮುಂದೆ ಬಂದದ್ದು ಕಾಂಗ್ರೆಸ್ ಸರ್ಕಾರ. ಆ ನನ್ನ ಆದೇಶ ಕಸದ ಬುಟ್ಟಿ ಸೇರಿತು. ಮತ್ತೆ ನಾನು ಮುಖ್ಯಮಂತ್ರಿಯಾದದ್ದು 1994ರ ಡಿಸೆಂಬರ್‌ನಲ್ಲಿ.

1995ರ ಆಗಸ್ಟ್ 22ರಂದು ಹೈಕೋರ್ಟ್‌, ಸಾರ್ವಜನಿಕ ಹಿತಾಸಕ್ತಿ ದಾವೆ ಸಂಬಂಧದಲ್ಲಿ ಒಂದು ಮಧ್ಯಂತರ ಆದೇಶ ನೀಡಿತು. ಬೆಂಗಳೂರಿನಲ್ಲಿ ಕೆರೆಗಳು ಬರೀ ಒತ್ತುವರಿ ಅಲ್ಲ, ವಿಲೇವಾರಿ  ಆಗುತ್ತಿರುವ ಬಗ್ಗೆ ನ್ಯಾಯಮೂರ್ತಿ ಜೆ.ಈಶ್ವರ ಪ್ರಸಾದ್ ಆತಂಕ ವ್ಯಕ್ತಪಡಿಸಿದ್ದರು.  
 
ತಕ್ಷಣವೇ  ನಾನು ಬೆಂಗಳೂರಿನ ಕೆರೆಗಳು, ಸಾರ್ವಜನಿಕ ಆಸ್ತಿಪಾಸ್ತಿಗಳ ಒತ್ತುವರಿ ತಡೆಗಟ್ಟಿ ಅವುಗಳನ್ನು ಸಂರಕ್ಷಿಸುವುದಕ್ಕಾಗಿಯೇ ಐಜಿಪಿ ಮಟ್ಟದ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಬೆಂಗಳೂರು ಮೆಟ್ರೊಪಾಲಿಟನ್ ಟಾಸ್ಕ್‌ಫೋರ್ಸ್ (ಬಿಎಂಟಿಎಫ್) ರಚಿಸಿದೆ.  
 
ಅದು 1996ರಿಂದ ಎಷ್ಟು ಸಕ್ರಿಯವಾಗಿತ್ತೆಂದರೆ, ಕಾರ್ಯಾಚರಣೆ ನಡೆಸಿ ಸುಮಾರು ₹ 1,092 ಕೋಟಿ  ಮೌಲ್ಯದ  1.69 ಕೋಟಿ  ಚದರಡಿಯಷ್ಟು ಪ್ರದೇಶವನ್ನು ಒತ್ತುವರಿದಾರರಿಂದ ಬಿಡುಗಡೆಗೊಳಿಸಿ ವಾಪಸ್‌ ಮಹಾನಗರ ಪಾಲಿಕೆ ಸುಪರ್ದಿಗೆ ತಂದಿತು.
 
ಆದರೆ ನಂತರ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಬಿಎಂಟಿಎಫ್ ಎಷ್ಟು ನಿಷ್ಕ್ರಿಯವಾಗಿತ್ತೆಂದರೆ ಆ ಐದು ವರ್ಷಗಳಲ್ಲಿ ಕೇವಲ ₹ 285 ಕೋಟಿ  ಮೌಲ್ಯದ ಒತ್ತುವರಿ ಪ್ರದೇಶವನ್ನು  ವಶಪಡಿಸಿಕೊಂಡಿತು.
 
ರಾಜಕೀಯವಾದ ಪಲ್ಲಟಗಳು ಮತ್ತು ತಪ್ಪು ನಿರ್ಧಾರಗಳು ಹೇಗೆ ಇಂದಿನ ಸಮಸ್ಯೆಗೆ ಕಾರಣವಾದವು ಎಂಬುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. ಬೆಂಗಳೂರಿನ ಮೂರನೇ ಎರಡು ಭಾಗಕ್ಕೆ ಕಾವೇರಿ ನೀರು ಲಭ್ಯವಿಲ್ಲ ಎಂಬ ಐತೀರ್ಪನ್ನು ಕಾವೇರಿ ನ್ಯಾಯಮಂಡಳಿ 2007ರಲ್ಲಿ ನೀಡಿತಷ್ಟೆ.
 
ಅದಕ್ಕೂ ಮುಂಚೆ 2005ರಲ್ಲಿ ಕಾವೇರಿ ನ್ಯಾಯಮಂಡಳಿಯ  ಅಧ್ಯಕ್ಷರು ಮತ್ತು ಸದಸ್ಯರಾದ ನ್ಯಾಯಮೂರ್ತಿಗಳಲ್ಲೇ  ಜಟಾಪಟಿ ನಡೆಯಿತು. ಒಬ್ಬರಿಗೊಬ್ಬರು ಬಹಿರಂಗವಾಗಿ ಟೀಕೆಟಿಪ್ಪಣಿ ಮಾಡಿಕೊಳ್ಳುತ್ತಾ ನ್ಯಾಯಮಂಡಳಿಯೇ ಒಡೆದ ಮನೆ ಎಂಬುದನ್ನು ಜಗಜ್ಜಾಹೀರುಪಡಿಸಿಕೊಂಡಿದ್ದರು.

ಇಂತಹ ನ್ಯಾಯಮಂಡಳಿಯಿಂದ ಕರ್ನಾಟಕಕ್ಕೆ ನ್ಯಾಯ ಸಿಗಲಾರದು, ಇದನ್ನು ರದ್ದುಗೊಳಿಸಿ ಹೊಸ ನ್ಯಾಯಮಂಡಳಿ ರಚಿಸಬೇಕೆಂದು ಒತ್ತಾಯಿಸಿದಲ್ಲಿ ರಾಜ್ಯದ  ತಲೆ ಮೇಲೆ ತೂಗುತ್ತಿದ್ದ ಬೀಸುಗತ್ತಿಯ ಅಪಾಯದಿಂದ ಪಾರಾಗಬಹುದೆಂಬ ಅಭಿಪ್ರಾಯ ನನ್ನದಾಗಿತ್ತು.
 
ಆಗ  ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರವೇ ರಾಜ್ಯದಲ್ಲಿದ್ದುದು ನನ್ನ ಆಸೆಗೆ ಮತ್ತಷ್ಟು ಕಾರಣವಾಗಿತ್ತು. ಈ ಸಂಬಂಧ ಹಿರಿಯ ನ್ಯಾಯಮೂರ್ತಿಗಳೊಬ್ಬರು  ಕೊಟ್ಟ ಸಲಹೆಯನ್ನು ತಲೆಗೆ ಹಚ್ಚಿಕೊಂಡೆ.  
 
ಒಡೆದ ಮನೆಯಂತಾಗಿರುವ ಕಾವೇರಿ ನ್ಯಾಯಮಂಡಳಿಯನ್ನು ರದ್ದುಗೊಳಿಸಬೇಕೆಂದು ಸುಪ್ರೀಂ ಕೋರ್ಟ್‌ಗೆ ದೂರು ತೆಗೆದುಕೊಂಡು ಹೋಗಬಹುದು, ಆದರೆ  ಅದನ್ನು ರಾಜಕೀಯೇತರ ದೃಷ್ಟಿಯಿಂದ ಮಾಡಿದಲ್ಲಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬಹುದು ಎಂಬುದು ಅವರ ಅಭಿಪ್ರಾಯವಾಗಿತ್ತು.
 
ಇದನ್ನು ನಾನು, ನನ್ನ ಕಿರಿಯ ಮಿತ್ರ ವೈ.ಎಸ್.ವಿ.ದತ್ತಾ ಅವರೊಂದಿಗೆ ಹಂಚಿಕೊಂಡಾಗ, ಆ ಹುಡುಗ ಅದರ ಜವಾಬ್ದಾರಿ ತೆಗೆದುಕೊಂಡ. ನಗರದ ಗಾಂಧಿ ಸಾಹಿತ್ಯ ಸಂಘದ ಅಧ್ಯಕ್ಷರಾಗಿದ್ದ ಹೋ.ಶ್ರೀನಿವಾಸಯ್ಯ ಅವರ ಮನವೊಲಿಸಿದ. ನಾನೂ ಅವರನ್ನು ಪ್ರಾರ್ಥಿಸಿಕೊಂಡೆ.  

ಪರಿಣಾಮವಾಗಿ ಗಾಂಧಿ ಸಾಹಿತ್ಯ ಸಂಘದ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ  ಸಾರ್ವಜನಿಕ ಹಿತಾಸಕ್ತಿಯ ದಾವೆ ದಾಖಲಾಯಿತು. ವಿಚಾರಣೆಗೂ ಬಂತು.  ಆಗ ನಾನು ರಾಜ್ಯ ಸರ್ಕಾರದ ಆಡಳಿತಗಾರರನ್ನು ಕಂಡು ‘ಈಗ ಸಂಘದ ದಾವೆಗೆ ಪೂರಕವಾಗಿ ರಾಜ್ಯ ಸರ್ಕಾರವೂ ಇಂಪ್ಲೀಡ್ ಆದಲ್ಲಿ ಒಳ್ಳೆಯದಾಗುತ್ತದೆ’ ಎಂದು ತಿಳಿಸಿದೆ.
 
ಸರ್ಕಾರ ಸುಪ್ರೀಂ ಕೋರ್ಟ್‌ ಮುಂದೆ ಹಾಕುವ ದಾವೆಯ ಕರಡನ್ನೂ ನುರಿತವರಿಂದ ಮಾಡಿಸಿ ಸರ್ಕಾರಕ್ಕೆ ಕಳುಹಿಸಿದೆ. ಆದರೆ ಸರ್ಕಾರ ಆ ಸಮಯವನ್ನು ಸದುಪಯೋಗಪಡಿಸಿಕೊಳ್ಳದೆ ಕೈಚೆಲ್ಲಿತು. ದಾವೆಯ ಬಗ್ಗೆ ತೀರ್ಪು ನೀಡಿದ ನ್ಯಾಯಾಲಯ, ನ್ಯಾಯಮಂಡಳಿಯ ನ್ಯಾಯಮೂರ್ತಿಗಳ ವರ್ತನೆ ನ್ಯಾಯಾಂಗಕ್ಕೆ ಖಂಡಿತಾ ಗೌರವ ತರುವಂತಹುದಲ್ಲ.
 
ಆದರೆ  ಇದರಿಂದ  ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಆತಂಕ ಸರ್ಕಾರಕ್ಕೆ ಇದ್ದಿದ್ದಲ್ಲಿ ಅದು ಇದರೊಳಗೆ ಪ್ರವೇಶಿಸಬಹುದಾಗಿತ್ತು. ಹಾಗೆ ಮಾಡಿಲ್ಲದೇ ಇರುವುದರಿಂದ ದಾವೆಯನ್ನು ವಜಾಗೊಳಿಸುತ್ತಿದ್ದೇವೆ ಎಂಬರ್ಥದಲ್ಲಿ ತೀರ್ಪು ನೀಡಿತು.
 
ಅಂದು ಮಾಡಿಕೊಂಡ ಪ್ರಮಾದದ ಫಲವಾಗಿ ಅದೇ ಮುರಿದ ಮನೆಯ ನ್ಯಾಯಮಂಡಳಿ ಕೊಟ್ಟ ಐತೀರ್ಪು ಇಂದು ನಮ್ಮೆಲ್ಲರ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಹಾಗಾಗಿ ಇಂದು ರಾಜ್ಯ ಎದುರಿಸುತ್ತಿರುವ ನೀರಿನ ಹಾಹಾಕಾರಕ್ಕೆ ಪ್ರಕೃತಿಯಷ್ಟೇ ಕಾರಣವಲ್ಲ, ನಮ್ಮ ರಾಜಕಾರಣಿಗಳ ವಿಕೃತ ಮನಸ್ಸುಗಳೂ ಕಾರಣ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT