ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗೆ ಜನರ ಪರದಾಟ

ಹಿರೇಮನ್ನಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವಲಹಳ್ಳಿ ಗ್ರಾಮ
Last Updated 14 ಏಪ್ರಿಲ್ 2017, 9:42 IST
ಅಕ್ಷರ ಗಾತ್ರ

ತಾವರಗೇರಾ: ಸಮೀಪದ ನವಲಹಳ್ಳಿ ಗ್ರಾಮದಲ್ಲಿ ಕಳೆದ ಎರಡು ತಿಂಗಳಿಂದ ಸಮರ್ಪಕ ಕುಡಿವ ನೀರು ಸರಬರಾಜು ಆಗದೆ ಜನರು ಪರದಾಡುತ್ತಿದ್ದಾರೆ.
ಸಮೀಪದ ಹಂಚಿನಾಳ ಗ್ರಾಮಕ್ಕೆ ಹೋಗಿ ಕುಡಿವ ನೀರು ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮದ 4 ಕಿರು ನೀರು ಸರಬರಾಜು ಟ್ಯಾಂಕ್‌ಗಳಿಗೆ ಸಹ ಪ್ರತಿನಿತ್ಯ ನೀರು ಬಿಡುತ್ತಿಲ್ಲ. ಬೇಸಿಗೆ ಬಂದರೂ ಸಾರ್ವಜನಿಕರಿಗೆ ಸಮರ್ಪಕ ನೀರು ಪೂರೈಸುವಲ್ಲಿ ಗ್ರಾಮ ಪಂಚಾಯತಿ ಆಡಳಿತ ನಿಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಳೆದ ಎರಡು ತಿಂಗಳಿಂದ ಗ್ರಾಮದ ನಂದಾಪುರ ರಸ್ತೆ ಓಣಿಯ ಕುಟುಂಬಗಳು ನೀರಿಗಾಗಿ ಪರದಾಡುತ್ತಿವೆ. ನೀರಿನ ಸಮಸ್ಯೆ  ಇದ್ದರೂ ಸಹ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ. ನೂತನ ನೀರು ಶುದ್ಧಿಕರಣ ಘಟಕ ಉದ್ಘಾಟನೆ ನಂತರ ವಾರದಲ್ಲಿ ಒಂದು ಅಥವಾ ಎರಡು ದಿನ ಮಾತ್ರ ಚಾಲ್ತಿ ಇರುತ್ತದೆ.

ಉಳಿದ ದಿನಗಳು ನೀರು ಇಲ್ಲದೆ ಸ್ಥಗಿತಗೊಂಡಿರುತ್ತದೆ. ಈಗಾಗಲೇ ಎರಡು ವಾರದಿಂದ ನೀರು ಪೂರೈಕೆ ಇಲ್ಲದ ಕಾರಣ ಸಮೀಪದ ಹಂಚಿನಾಳ ಗ್ರಾಮಕ್ಕೆ ಹೋಗಿ ನೀರು ತರಲಾಗುತ್ತಿದೆ.

ಜಲ ನಿರ್ಮಲ ಯೋಜನೆಯ ಅಡಿ  ನಿರ್ಮಿಸಿರುವ ಟ್ಯಾಂಕ್ ಮೂಲಕ ಗ್ರಾಮದ ವಿವಿಧ ಬೀದಿಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಅದೆ ಟ್ಯಾಂಕಗಳಿಗೆ ಬೋರವೆಲ್ ನೀರು ಸರಬರಾಜು ಆಗುತ್ತಿಲ್ಲ. ಈ ಸಮಸ್ಯೆಯಿಂದ ಇಡಿ ಗ್ರಾಮಕ್ಕೆ ನೀರು ಪೂರೈಕೆ ಸ್ಥಗಿತಗೊಂಡಿದೆ. ಜಾನುವಾರುಗಳ ನೀರಿನ ದಾಹ ನೀಗಿಸಲು ಅಲೆದಾಡಬೇಕಿದೆ ಎನ್ನುತ್ತಾರೆ ಗ್ರಾಮಸ್ಥ ಮಲ್ಲಪ್ಪ ಬಿ ಬಂಡೇರ.

ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಹಲವು ಬಾರಿ ಮನವಿ ಮಾಡಲಾಗಿದೆ.  ಆದರೆ ಎರಡು ತಿಂಗಳು ಕಳೆದರೂ ಸೂಕ್ತ ಪರಿಹಾರಕ್ಕೆ ಮುಂದಾಗಿಲ್ಲ. ಎರಡು ವಾರದಿಂದ ಸೈಕಲ್ ಮತ್ತು ಎತ್ತಿನ ಬಂಡಿ ಮೂಲಕ ಹಂಚಿನಾಳ ಗ್ರಾಮದಿಂದ ಜನರು ನೀರು ತರುತ್ತಿದ್ದಾರೆ. ಆದರೆ ಬೇಸಿಗೆ ವೇಳೆಯಲ್ಲಿ ನೀರು ಪೂರೈಕೆಗೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.

ಸರ್ಕಾರ ಸಾರ್ವಜನಿಕರಿಗೆ ಕುಡಿವ ನೀರು ಪೂರೈಸಲು ಹೆಚ್ಚುವರಿ ಹಣ ಬಿಡುಗಡೆ ಮಾಡಿದೆ. ಆದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾತ್ರ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ.

ಎರಡು ದಿನಗಳಲ್ಲಿ ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳದಿದ್ದರೆ ಗ್ರಾಮ ಪಂಚಾಯಿತಿ ಕಚೇರಿ ಮುಂದೆ  ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮದ ವಿರುಪಣ್ಣ ಕಡೆಕೊಪ್ಪ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT