ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷರ ಕ್ಷೇತ್ರಕ್ಕೆ ನುಗ್ಗಿ ಗೆದ್ದ ಸಂತಸ ಇದೆ

Last Updated 15 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಅಮೆರಿಕದಲ್ಲಿ ವರ್ಷಕ್ಕೆ ಒಂದು ಸಾವಿರದಷ್ಟು ಕೊರೊನರಿ ಇಂಟರ್‌ವೆನ್ಷನ್‌ ಶಸ್ತ್ರಚಿಕಿತ್ಸೆ (ಹೃದಯ ರಕ್ತನಾಳ ಶಸ್ತ್ರಚಿಕಿತ್ಸೆ) ನಡೆಸುವ ಏಕೈಕ ವೈದ್ಯೆ ಎಂಬ ಹೆಗ್ಗಳಿಕೆ ಗಳಿಸಿಕೊಂಡಿರುವ ಹಾಗೂ ಅದೇ ಕಾರಣಕ್ಕೆ ಅಮೆರಿಕದ ಪ್ರತಿಷ್ಠಿತ ‘ಎಲ್ಲಿಸ್‌ ಐಲ್ಯಾಂಡ್‌ ಮೆಡಲ್‌ ಆಫ್‌ ಆನರ್‌‘ ಪ್ರಶಸ್ತಿಗೆ ಪಾತ್ರರಾಗಿರುವ 
ಡಾ. ಅನ್ನಪೂರ್ಣ ಎಸ್‌. ಕಿಣಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದವರು.
 
ಎರಡು ದಶಕಗಳಿಂದ ನ್ಯೂಯಾರ್ಕ್‌ನ ‘ಮೌಂಟ್ ಸಿನಾಯ್‌ ಸ್ಕೂಲ್‌ ಆಫ್‌ ಮೆಡಿಸಿನ್‌’ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರು, ಕೊರೊನರಿ ಇಂಟರ್‌ವೆನ್ಷನ್‌ ವಿಷಯದಲ್ಲಿ ಪರಿಣತಿ ಪಡೆದವರು. ಅತ್ಯಂತ ಸೂಕ್ಷ್ಮ ಶಸ್ತ್ರಚಿಕಿತ್ಸೆ ಎಂದೇ ಪರಿಗಣಿಸಲಾಗಿರುವ ಈ ಕ್ಷೇತ್ರದಲ್ಲಿ ಇರುವವರು ಬಹುತೇಕ ಪುರುಷ ವೈದ್ಯರು.
 
ಮಹಿಳೆಯೂ ಈ ಕ್ಷೇತ್ರದಲ್ಲಿ ಕೆಲಸ ಮಾಡಬಹುದು ಎಂದು ತೋರಿಸಿಕೊಟ್ಟ ಡಾ. ಅನ್ನಪೂರ್ಣ ಅವರು ಸುರಕ್ಷಿತ ಶಸ್ತ್ರಚಿಕಿತ್ಸೆಗೆ ಹೆಸರಾದವರು. ಮೇ13ರಂದು ಎಲ್ಲಿಸ್‌ ಐಲ್ಯಾಂಡ್‌ ಪ್ರಶಸ್ತಿ ಪಡೆಯುತ್ತಿರುವ ಅವರ ಜೊತೆ ‘ಪ್ರಜಾವಾಣಿ‘ ದೂರವಾಣಿ ಮೂಲಕ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ:
 
l ಭಾರತ ಮೂಲದ ನಿಮಗೆ ಅಮೆರಿಕದ ಶ್ರೇಷ್ಠ ನಾಗರಿಕ ಪ್ರಶಸ್ತಿ ಲಭಿಸಿದಾಗ ಅನಿಸಿದ್ದೇನು?
ಅಮೆರಿಕದಲ್ಲಿ ನನ್ನನ್ನು ಜನ ಗುರುತಿಸಿದ್ದು ನನ್ನ ಕೆಲಸದಿಂದ. ನಾನು ಮಾಡುವ ಹೃದಯ ಶಸ್ತ್ರಚಿಕಿತ್ಸೆಯಿಂದ ಸಮಸ್ಯೆ ಆಗುವುದಿಲ್ಲ, ನನ್ನ ಕೆಲಸದಲ್ಲಿ ಪರಿಪೂರ್ಣತೆ ಇದೆ ಎಂಬ ಏಕೈಕ ಕಾರಣದಿಂದ ನನಗೆ ಇಂತಹ ಗೌರವ ಹುಡುಕಿಕೊಂಡು ಬಂದಿದೆ. ಇಲ್ಲಿ ಪ್ರತಿಭೆಗಷ್ಟೇ ಮಣೆ. ಪ್ರಶಸ್ತಿ ಬಗ್ಗೆ ತಿಳಿದಾಗ ನನ್ನ ಪ್ರತಿಭೆಯನ್ನು ಅಮೆರಿಕ ಗುರುತಿಸಿದೆ ಎಂಬ ಅಭಿಮಾನ ಉಂಟಾಯಿತು. ಒಬ್ಬ ವ್ಯಕ್ತಿಗೆ ಇದಕ್ಕಿಂತ ಹೆಚ್ಚೇನು ಬೇಕು?
 
l ಅಮೆರಿಕದಲ್ಲಿ ಪ್ರತಿಭೆಗಳಿಗೇನೂ ಅಭಾವವಿಲ್ಲ, ಹೃದ್ರೋಗ ತಜ್ಞರಿಗೂ ಕೊರತೆ ಇಲ್ಲ. ನಿಮ್ಮನ್ನು ವಿಶೇಷವಾಗಿ ಗುರುತಿಸಿದ್ದು ಏಕೆ?
ಬಹುತೇಕ ಪುರುಷ ವೈದ್ಯರಷ್ಟೇ ಮಾಡುವ ಅತ್ಯಂತ ಸೂಕ್ಷ್ಮ ಕೊರೊನರಿ ಇಂಟರ್‌ವೆನ್ಷನ್‌ ಶಸ್ತ್ರಚಿಕಿತ್ಸೆಯನ್ನು ಒಬ್ಬ ಮಹಿಳೆಯಾಗಿ ನಾನು ಮಾಡುತ್ತಿದ್ದೇನೆ. ನನ್ನ ಈ ಶಸ್ತ್ರಚಿಕಿತ್ಸೆಗಳು ಬಹುತೇಕ ಯಶಸ್ವಿಯಾಗಿವೆ. ವರ್ಷಕ್ಕೆ ಸಾವಿರದಷ್ಟು ಕೊರೊನರಿ ಇಂಟರ್‌ವೆನ್ಷನ್‌ ಶಸ್ತ್ರಚಿಕಿತ್ಸೆ ಮಾಡುವ ವೈದ್ಯೆಯರು ಬೇರೆ ಇಲ್ಲ ಎಂಬ ಕಾರಣಕ್ಕೇ ನನಗೊಂದು ಬೆಲೆ ಸಿಕ್ಕಿದೆ. 
 
l ಹೃದಯದ ಕಾಯಿಲೆ ಇರುವವರಿಗೆ ನಡೆಸುವ ಸೂಕ್ಷ್ಮ ಶಸ್ತ್ರಚಿಕಿತ್ಸೆಯಲ್ಲೂ ನಿಮ್ಮಿಂದ ಅತ್ಯಂತ ಸುರಕ್ಷಿತ ಶಸ್ತ್ರಚಿಕಿತ್ಸೆ ನಡೆಸುವುದು ಹೇಗೆ ಸಾಧ್ಯವಾಗಿದೆ?
ಕೆಲಸದಲ್ಲಿ ಇರುವ ಬದ್ಧತೆಯೇ ಇದಕ್ಕೆ ಕಾರಣ ಎಂದು ನಾನು ಭಾವಿಸಿರುವೆ. ನಾನು ಮಾತ್ರವಲ್ಲ ಯಾರೇ ಆಗಲಿ, ಅವರವರ ಕ್ಷೇತ್ರದಲ್ಲಿ ಶ್ರದ್ಧೆಯಿಂದ ಕೆಲಸ ಮಾಡುವುದರಿಂದಾಗುವ ಪರಿಣಾಮ ಅದ್ಭುತ. ನಾನು ನಡೆಸುವ ಶಸ್ತ್ರಚಿಕಿತ್ಸೆಗಳಲ್ಲಿ ವೈಫಲ್ಯದ ಪ್ರಮಾಣ ತೀರಾ ಕಡಿಮೆ. ನನ್ನ ವೈಫಲ್ಯದ ಪ್ರಮಾಣ 0.3ರಷ್ಟು ಮಾತ್ರ ಎಂಬುದು ಈಗಾಗಲೇ ಸಾಬೀತಾಗಿದೆ. ನ್ಯೂಯಾರ್ಕ್‌ನಲ್ಲಿ ಅತ್ಯಂತ ಸುರಕ್ಷಿತ ಶಸ್ತ್ರಚಿಕಿತ್ಸೆ ನಡೆಸುವ 350 ವೈದ್ಯರ ಸಾಲಿನಲ್ಲಿ ನಾನೂ ಇದ್ದೇನೆ. ನಾನು ಸೇವೆ ಸಲ್ಲಿಸುತ್ತಿರುವ ಸಂಸ್ಥೆ ಕಳೆದ 17 ವರ್ಷಗಳಿಂದ ಸತತವಾಗಿ ನ್ಯೂಯಾರ್ಕ್‌ ರಾಜ್ಯದ ಆರೋಗ್ಯ ಇಲಾಖೆಯ ‘2 ಸ್ಟಾರ್‌ ರೇಟಿಂಗ್‌’ ಗಳಿಸುತ್ತಲೇ ಬಂದಿದೆ. 
 
l ಹೃದಯದ ಒಳಗೆ ಸ್ಟೆಂಟ್‌ ಅಳವಡಿಸುವ ಪ್ರಮುಖ ಕೆಲಸವನ್ನು ನೀವು ಮಾಡುತ್ತಿದ್ದೀರಿ? ಭಾರತದಲ್ಲಿ ಇದೀಗ ಅದೇ ಸ್ಟೆಂಟ್‌ ವಿಚಾರ ಭಾರಿ ಬಿರುಗಾಳಿ ಎಬ್ಬಿಸುತ್ತಿದೆಯಲ್ಲ?
ಭಾರತದಲ್ಲಿ ಎಲ್ಲಾ ಸ್ಟೆಂಟ್‌ಗಳಿಗೆ ₹ 30 ಸಾವಿರ ದರ ನಿಗದಿಪಡಿಸಿರುವುದನ್ನು ನಾನು ಕೇಳಿ ಬಲ್ಲೆ. ಎಫ್‌ಡಿಎನಿಂದ ಅನುಮೋದನೆಗೊಂಡ ಸ್ಟೆಂಟ್‌ಗಳು ಅತ್ಯಂತ ಕಠಿಣ ಪರೀಕ್ಷೆಗೆ ಒಳಗಾದ ಸ್ಟೆಂಟ್‌ಗಳಾಗಿದ್ದು, ಅವುಗಳಿಗೆ ಹೆಚ್ಚಿನ ದರ ನಿಗದಿಪಡಿಸಲೇಬೇಕು. ಅಗ್ಗದ ದರದಲ್ಲಿ ಸ್ಟೆಂಟ್‌ಗಳು ಜನರಿಗೆ ಸಿಗುವಂತಾಗಬೇಕು ಎಂಬ ನಿಟ್ಟಿನಲ್ಲಿ ಭಾರತ ಸರ್ಕಾರ ಕೈಗೊಂಡಿರುವ ನಿರ್ಧಾರ ದಿಟ್ಟತನದ್ದು ಮತ್ತು ಅದು ಆಗಲೇಬೇಕಿದ್ದ ಕೆಲಸವಾಗಿತ್ತು. ಆದರೆ ಸ್ಟೆಂಟ್‌ಗಳ ಸಾಮರ್ಥ್ಯ, ಗುಣಮಟ್ಟದ ಆಧಾರದಲ್ಲಿ ಒಂದು ಶ್ರೇಣಿ ವ್ಯವಸ್ಥೆಯನ್ನು ರೂಪಿಸಿ ಅದಕ್ಕೆ ತಕ್ಕಂತೆ ದರ ನಿಗದಿಪಡಿಸಬೇಕು.
 
l ನಿಮ್ಮ ಜ್ಞಾನವನ್ನು ಇತರರಿಗೆ ಹಂಚುವ ನಿಟ್ಟಿನಲ್ಲಿ ನಿಮ್ಮಿಂದ ಎಂತಹ ಕೆಲಸವಾಗಿದೆ?
ಈ ವಿಷಯದಲ್ಲಿ ನಾನು ಅದೆಷ್ಟೋ ತಜ್ಞರ ಸಾಲಿನಲ್ಲಿ ನಿಲ್ಲುವವಳಲ್ಲ. ತಜ್ಞರು ತಮ್ಮ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಎಂಬುದು ನಿಮಗೆ ತಿಳಿದಿರಬಹುದು. ನನಗೆ ತಿಳಿದ ಮಾಹಿತಿಯನ್ನು, ನಾನು ಕಂಡುಕೊಂಡ ಶೋಧನೆಯನ್ನು ಇತರರೊಂದಿಗೆ ಹಂಚಿಕೊಳ್ಳುವುದು ನನ್ನ ಮೂಲ ಸ್ವಭಾವಗಳಲ್ಲಿ ಒಂದು.
 
ಹೀಗಾಗಿಯೇ ನಾನು ಕೆಲಸ ಮಾಡುತ್ತಿರುವ ಮೌಂಟ್‌ ಸಿನಾಯ್‌ ಆಸ್ಪತ್ರೆ ಇಂದು ಅತ್ಯಂತ ಹೆಚ್ಚು ಫೆಲೋಶಿಪ್‌ಗಳನ್ನು ನೀಡುವ ಸಂಸ್ಥೆಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ. ಒಂದು ವರ್ಷದಲ್ಲಿ ಅಮೆರಿಕ ಮತ್ತು ವಿದೇಶಗಳ ಆರರಿಂದ ಏಳು ಮಂದಿ ಫೆಲೋಗಳು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. 1998ರಲ್ಲಿ ನಾನು ಡಾ. ಸಮಿನ್‌ ಕೆ. ಶರ್ಮಾ ಅವರೊಂದಿಗೆ ಸಂಕೀರ್ಣ ಕೊರೊನರಿ ಪ್ರಕರಣಗಳ ಬಗ್ಗೆ ನೇರ ಪ್ರಾತ್ಯಕ್ಷಿಕೆ ನೀಡುವ ಕೆಲಸ ಆರಂಭಿಸಿದೆ. ಇದಕ್ಕೆ ಭಾರಿ ಸ್ಪಂದನವೂ ದೊರೆಯಿತು. ಮುಂದೆ ಪ್ರತಿ ವರ್ಷವೂ ಅದು ನಡೆಯುತ್ತಲೇ ಬಂದಿದೆ. ಸಂಕೀರ್ಣ ಕೊರೊನರಿ ಪ್ರಕರಣಗಳ ಬಗ್ಗೆ ವೆಬ್‌ಕಾಸ್ಟ್‌ ಸರಣಿಗಳನ್ನೂ ಹೊರತರುತ್ತಿದ್ದು, 131 ದೇಶಗಳಲ್ಲಿ ಅದು ಪ್ರಸಾರವಾಗಿದೆ.
 
l ಹಾಗಿದ್ದರೆ ಭಾರತದ ಶಿಕ್ಷಣ ಸಂಸ್ಥೆಯೊಂದಿಗೆ ನಿಮ್ಮ ಸಹಯೋಗ ಇಲ್ಲವೇ?
ಮೌಂಟ್‌ ಸಿನಾಯ್‌ ಆಸ್ಪತ್ರೆ ಭಾರತದ ಹಲವಾರು ಶಿಕ್ಷಣ ಸಂಸ್ಥೆಗಳೊಂದಿಗೆ ಸಹಯೋಗ ಹೊಂದುವ ಪ್ರಯತ್ನದಲ್ಲಿದೆ. ಸದ್ಯ ರಾಜಸ್ತಾನದ ಜೈಪುರದಲ್ಲಿರುವ ಎಟರ್ನಲ್‌ ಹಾರ್ಟ್‌ ಹಾಸ್ಟಿಟಲ್‌ಗೆ ಮಾತ್ರ ನಮ್ಮ ಸಂಸ್ಥೆಯ ಮಾನ್ಯತೆ ದೊರೆತಿದೆ.  ಅಮೆರಿಕದಲ್ಲಿ ತರಬೇತಿ ಪಡೆದ ಭಾರತೀಯ ವೈದ್ಯರು ಭಾರತದಲ್ಲಿ ಅತ್ಯಾಧುನಿಕ ಕ್ಲಿನಿಕಲ್‌ ಮತ್ತು ಸಂಶೋಧನಾ ಸೇವೆಗಳನ್ನು ನೀಡುವಂತಾಗಬೇಕು ಎಂಬ ಉದ್ದೇಶದೊಂದಿಗೆ ಇಂತಹ ಮಾನ್ಯತೆ ನೀಡುವ ಕೆಲಸ ನಡೆಯುತ್ತಿದೆ. 
 
l ಪುತ್ತೂರು, ಮಂಗಳೂರಿನಲ್ಲಿ ಓದಿ ಸಾಗರೋಲ್ಲಂಘನ ಮಾಡಿ ಹೋಗಿ  ಅಮೆರಿಕದಲ್ಲಿ ಗಮನ ಸೆಳೆದಿದ್ದೀರಿ. ಈ ಯಶಸ್ಸಿನ ಹಾದಿಯ ಹಿಂದಿನ ಕಥನ ಹೇಳಿ.
ಎಲ್ಲದಕ್ಕೂ ಮೂಲ ಕಾರಣ ನನ್ನ ಅಪ್ಪ ಕಲಿಸಿದ ಜೀವನ ಪಾಠ. ಪುತ್ತೂರಿನಲ್ಲಿ ನಾನು ವಿವೇಕಾನಂದ ಕಾಲೇಜಿಗೆ ಹೋಗುತ್ತಿದ್ದಾಗಲೇ ಸ್ವಂತ ಕಾಲ ಮೇಲೆ ನಿಲ್ಲಲು ಕಲಿಯಬೇಕು ಎಂಬ ಬಹುದೊಡ್ಡ ಪಾಠವನ್ನು ಅವರು ಬೋಧಿಸಿದ್ದರು. ವಾಹನ ಚಾಲನಾ ಕಲಿಕೆಯಿಂದ ಆರಂಭಿಸಿ, ಎಂಬಿಬಿಎಸ್‌ ಶಿಕ್ಷಣ ಕೊನೆಗೊಳಿಸಿ, ಹೃದಯ ಚಿಕಿತ್ಸೆಗೆ ಸಂಬಂಧಿಸಿದಂತೆ ಉನ್ನತ ಅಧ್ಯಯನ ಕೈಗೊಳ್ಳುವವರೆಗೆ ನನಗೆ ಸದಾ ಸ್ಫೂರ್ತಿಯಾಗಿದ್ದು ಅಪ್ಪ ಹೇಳಿಕೊಟ್ಟ ಪಾಠ, ಅಮ್ಮ ತೋರಿಸಿದ ಸಮಾಜ ಸೇವೆಯ ಹಾದಿ.
 
ಅದು ಇಲ್ಲಿಯವರೆಗೂ ನನ್ನನ್ನು ತಂದು ನಿಲ್ಲಿಸಿದೆ. ಅಪ್ಪ ಹೃದಯದ ಕಾಯಿಲೆಯಿಂದ, ಸೂಕ್ತ ಚಿಕಿತ್ಸೆ ಲಭಿಸದೆ ಮೃತಪಟ್ಟಾಗ ನಾನು ಮಂಗಳೂರಿನ ಕೆಎಂಸಿಯಲ್ಲಿ ಆಗಷ್ಟೇ ಎಂಬಿಬಿಎಸ್‌ ಮುಗಿಸಿದ ವೈದ್ಯೆಯಷ್ಟೇ ಆಗಿದ್ದೆ. ನನ್ನ ಅಪ್ಪನಂತೆ ಜಗತ್ತಿನಲ್ಲಿ ಅದೆಷ್ಟೋ ಮಂದಿ ಹೃದಯದ ತೊಂದರೆಯಿಂದ ಬಳಲುತ್ತಿರಬಹುದು, ಅವರಿಗೆ ನನ್ನ ಕೈಲಾದ ಸೇವೆ ದೊರಕುವಂತಾದರೆ ನನ್ನ ಅಪ್ಪನ ಸೇವೆಯನ್ನು ಮಾಡಿದಂತೆಯೇ ಎಂಬ ಭಾವನೆ ನನಗೆ ಮೂಡಿದ್ದರಿಂದಲೇ ನಾನು ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಉನ್ನತ ಅಧ್ಯಯನ ನಡೆಸುವ ವಿಚಾರ ಮಾಡುವಂತಾಯಿತು. ಅಂತೆಯೇ ಇಂಗ್ಲೆಂಡ್‌ನಲ್ಲಿ ಉನ್ನತ ಅಧ್ಯಯನ ನಡೆಸಿ ಬಳಿಕ ಅಮೆರಿಕಕ್ಕೆ ಬಂದೆ.
 
l ಹೆಣ್ಣಿಗೆ ಬಂಧನಗಳೇ ಅಧಿಕ, ಆಕೆಯ ಸಾಧನೆಗೆ ಬೇರೆಲ್ಲಕ್ಕಿಂತ ಕುಟುಂಬದ ಅಡ್ಡಿಯೇ ಜಾಸ್ತಿ ಎಂಬ ಮಾತನ್ನು ನೀವು ಒಪ್ಪುತ್ತೀರಾ?
ಹೆಣ್ಣಿಗೆ ಇಂದು ಆಯ್ಕೆಯ ಅವಕಾಶ ಹೆಚ್ಚಿದೆ. ತನ್ನ ವೃತ್ತಿಯನ್ನು ಗೌರವಿಸುವ, ವೃತ್ತಿ ಜೀವನಕ್ಕೆ ಪೂರಕವಾಗಿ ಇರುವಂತಹ ವ್ಯಕ್ತಿಯನ್ನೇ ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡಾಗ ಯಾವ ಅಡ್ಡಿಯೂ ಆಗಲಾರದು. ಪರಸ್ಪರ ತಿಳಿವಳಿಕೆ, ಗೌರವ ಇಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ.
 
l ಅಮೆರಿಕದಲ್ಲಿ ಆಡಳಿತ ಬದಲಾದಂತೆ ವೀಸಾ ನಿಯಮಗಳು ಬದಲಾಗುತ್ತಿವೆ. ಟ್ರಂಪ್‌ ಆಡಳಿತದಿಂದ ಭಾರತೀಯ ಟೆಕ್ಕಿಗಳಿಗೆ ಅಂಕುಶ ಬೀಳುವ ಲಕ್ಷಣ ಇದೆ. ಒಟ್ಟಾರೆ ಚಿತ್ರಣದ ಬಗ್ಗೆ ಏನಂತೀರಿ?
ನಿಮ್ಮಲ್ಲಿ ನಿಜವಾಗಿಯೂ ಪ್ರತಿಭೆ ಇದೆ ಎಂದಾದರೆ ನೀವು ಹೆದರುವ ಅಗತ್ಯವೇ ಇಲ್ಲ. ಅಮೆರಿಕದಲ್ಲಿ ಅದೆಷ್ಟೋ ದೇಶಗಳಿಂದ ಬಂದ ವಿವಿಧ ಕ್ಷೇತ್ರಗಳ ತಜ್ಞರು ದುಡಿಯುತ್ತಿದ್ದಾರೆ. ಟ್ರಂಪ್‌ ಆಡಳಿತದ ಅವಧಿಯಲ್ಲೂ ನಿಜವಾದ ಪ್ರತಿಭೆಗಳಿಗೆ ಖಂಡಿತ ಹೊಡೆತ ಬೀಳುವುದಿಲ್ಲ ಎಂದು ನಾನು ಭಾವಿಸಿದ್ದೇನೆ.
 
l ನೀವು ಭಾರತಕ್ಕೆ ಮರಳಿ ಬರುವ ಸಾಧ್ಯತೆ ಇದೆಯೇ? ನೀವು ಸಂಪಾದಿಸಿದ ಜ್ಞಾನ ಭಾರತಕ್ಕೂ ದೊರೆಯಬೇಕಲ್ಲವೇ?
ನನ್ನ ಪತಿ ಡಾ. ಯು.ಸುಭಾಷ್‌ ಕಿಣಿ ನ್ಯೂಯಾರ್ಕ್‌ನಲ್ಲಿ ಜನರಲ್ ಫಿಸಿಷಿಯನ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನನಗೆ ಇಬ್ಬರು ಗಂಡು ಮಕ್ಕಳು. ಅವರು ಇನ್ನೂ ಚಿಕ್ಕವರು. ಅವರ ಶಿಕ್ಷಣ ಪೂರ್ಣಗೊಳ್ಳುವ ತನಕ ಭಾರತಕ್ಕೆ ಮರಳುವ ವಿಚಾರ ಇಲ್ಲ. ಮುಂದೆ ಯಾವತ್ತಾದರೂ ನಾನು ಭಾರತಕ್ಕೆ ಮರಳಿ ಬರುವವಳೇ. ನಾನು ಸಂಪಾದಿಸಿದ ಜ್ಞಾನವನ್ನು ನನ್ನ ತಾಯ್ನೆಲಕ್ಕೆ ನೀಡಬೇಕು ಎಂಬ ತುಡಿತ ನನಗೆ ಇದ್ದೇ ಇದೆ. ಅದನ್ನು ಖಂಡಿತ ಈಡೇರಿಸಲು ಪ್ರಯತ್ನಿಸುತ್ತೇನೆ. 
 
l ಕೊನೆಯಲ್ಲಿ, ನೀವು ಭಾರತೀಯರಿಗೆ ನೀಡುವ ಸಂದೇಶ ಏನು?
ನಿಮ್ಮ ಮೂಲ ಶಿಕ್ಷಣದ ಬಗ್ಗೆ ಗಮನಹರಿಸಿ. ನೀವು ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ, ಆದರೆ ಆ ಕ್ಷೇತ್ರದಲ್ಲಿ ಪರಿಪೂರ್ಣತೆ ಗಳಿಸುವುದಕ್ಕಾಗಿ ಕಠಿಣವಾಗಿ ಶ್ರಮಿಸಿ. ಕುಟುಂಬ ಮತ್ತು ವೃತ್ತಿಜೀವನದ ನಡುವೆ ಸಮತೋಲನ ಇದ್ದರೆ ಜೀವನದಲ್ಲಿ ಏನನ್ನೇ ಆದರೂ ಸಾಧಿಸಲು ಸಾಧ್ಯ. ಉತ್ತಮವಾದ ಆಹಾರ ಪದ್ಧತಿ ಮತ್ತು ವ್ಯಾಯಾಮದ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಆರೋಗ್ಯವೇ ನಿಮ್ಮ ಯಶಸ್ಸಿನ ಅವಿಭಾಜ್ಯ ಅಂಗ ಎಂಬುದನ್ನು ಮರೆಯದಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT