ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿಕಾಡಿನಲ್ಲಿ ಹುಲಿಯಮ್ಮ ದೇವಸ್ಥಾನ ನಿರ್ಮಾಣ!

Last Updated 16 ಏಪ್ರಿಲ್ 2017, 20:16 IST
ಅಕ್ಷರ ಗಾತ್ರ

ಬೆಂಗಳೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಬರುವ ಕೆಬ್ಬೆಪುರ ಗ್ರಾಮದ ಹುಲಿಯಮ್ಮ ದೇವಿಯ ಸಣ್ಣ ಗುಡಿಯನ್ನು  ಗೋಪುರವುಳ್ಳ ದೊಡ್ಡ ದೇವಸ್ಥಾನವಾಗಿ  ಅಭಿವೃದ್ಧಿಗೊಳಿಸಲಾಗಿದೆ.

‘ಹುಲಿಕಾಡಿನ ಕುಂದಕೆರೆ ವಲಯದ ಆಡಳಿತ  ವ್ಯಾಪ್ತಿಗೆ ಬರುವ ಕೆಬ್ಬೆಪುರ ಗ್ರಾಮದಲ್ಲಿ   ಕಂದಾಯ  ಜಮೀನಿನಲ್ಲಿ  ಅಕ್ರಮವಾಗಿ ದೇವಸ್ಥಾನ ನಿರ್ಮಿಸಲಾಗಿದೆ. ಈ ಜಾಗವು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿದ್ದರೂ,  ಅರಣ್ಯಾಧಿಕಾರಿಗಳು ನಿರ್ಮಾಣ ಚಟುವಟಿಕೆಯನ್ನು ತಡೆದಿಲ್ಲ’ ಎಂದು ವನ್ಯಜೀವಿ ಕಾರ್ಯಕರ್ತರು ಆರೋಪಿಸಿದ್ದಾರೆ.

‘2014 ಸಾಲಿನಲ್ಲಿ ಕೇವಲ 30 ಚದರ ಅಡಿ  ಜಾಗದಲ್ಲಿ ಚಿಕ್ಕಗುಡಿ ಇತ್ತು. ಆಗ ನಾಲ್ಕು ಮೂಲೆಗಳಲ್ಲಿ ಕಲ್ಲುಕಂಬಗಳ  ಮೇಲೆ ಶೀಟುಗಳನ್ನು ಅಳವಡಿಸಿ ಗುಡಿಯನ್ನು ನಿರ್ಮಿಸಲಾಗಿತ್ತು.   2015ರಲ್ಲಿ ಅದರ ಗಾತ್ರ 100 ಚದರ ಅಡಿಗೆ ಹೆಚ್ಚಿತ್ತು. ಇಲ್ಲಿ ಇತ್ತೀಚೆಗೆ    ದೊಡ್ಡ  ದೇವಸ್ಥಾನ ನಿರ್ಮಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ವನ್ಯಜೀವಿಗಳಿಗೆ ಸಂಕಟ: ‘ದೇವಸ್ಥಾನಕ್ಕೆ ಬರುವ ಜನಜಂಗುಳಿ  ವನ್ಯಜೀವಿಗಳ ಸ್ವಚ್ಛಂದ ಬದುಕಿಗೆ ಮಾರಕವಾಗಿದೆ.   ಇಲ್ಲಿ ವಾಹನ ಸಂಚಾರ, ಪ್ಲಾಸ್ಟಿಕ್‌ ಮಾಲಿನ್ಯ  ಹೆಚ್ಚುತ್ತಿದೆ.  ಇದರಿಂದಾಗಿ ವನ್ಯಜೀವಿಗಳ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ಅವು ನೀರಿನ ಕೆರೆಗಳನ್ನು ತಲುಪುವುದಕ್ಕೂ ಸಮಸ್ಯೆ ಎದುರಾಗುತ್ತದೆ. ವನ್ಯಜೀವಿಗಳಿಗೆ ಮೇವು ಒದಗಿಸುವ  ಹುಲ್ಲುಗಾವಲುಗಳಿಗೂ ಧಕ್ಕೆ ಉಂಟಾಗುತ್ತಿದೆ.  ಇದು ಈ ಪ್ರದೇಶದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗಲು ಕಾರಣವಾಗಬಹುದು’ ಎಂದು ಅವರು ಆತಂಕ ತೋಡಿಕೊಂಡರು.

‘ಸೂಕ್ಷ್ಮವಲಯದಲ್ಲಿ ಹೊಸ ಕಟ್ಟಡ ನಿರ್ಮಾಣ ಹಾಗೂ ವಿಸ್ತರಣೆಯನ್ನು ಆರಂಭದಲ್ಲೇ ತಡೆಯಬೇಕಾದ ಅರಣ್ಯ ಇಲಾಖೆ   ಕಣ್ಣುಮುಚ್ಚಿ ಕುಳಿತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಅಕ್ರಮ ವಿದ್ಯುತ್‌ ಸಂಪರ್ಕ:  ಗುಡಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು  12 ಕಂಬಗಳನ್ನು ನೆಟ್ಟು ತಂತಿಗಳನ್ನು ಸಹ ಎಳೆಯಲಾಗಿತ್ತು. ವಿದ್ಯುತ್‌ ಸಂಪರ್ಕ ನೀಡುವುದಕ್ಕೂ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿ  (ಚೆಸ್ಕಾಂ) ಮುಂದಾಗಿತ್ತು.  ಈ ನಿರ್ಮಾಣ ಕಾರ್ಯದ ವಿರುದ್ಧ ವನ್ಯಜೀವಿ ಪ್ರೇಮಿಗಳು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ 2016 ರಲ್ಲಿ ದೂರನ್ನು ಸಲ್ಲಿಸಿದ್ದರು. 

ಸ್ಥಳ ಪರಿಶೀಲನೆ ನಡೆಸಿದ್ದ  ಹುಲಿ ಯೋಜನೆಯ ಕ್ಷೇತ್ರ ನಿರ್ದೇಶಕರು   ವಿದ್ಯುತ್‌ ಕಾಮಗಾರಿಯು ಕಾನೂನುಬಾಹಿರ ಎಂದು   ಅಭಿಪ್ರಾಯಪಟ್ಟಿದ್ದರು. ತಕ್ಷಣ  ಕಾಮಗಾರಿಯನ್ನು ಸ್ಥಗಿತ ಗೊಳಿಸುವಂತೆ ಆದೇಶಿಸಿದ್ದರು.  ಭವಿಷ್ಯದಲ್ಲಿ   ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಗುಂಡ್ಲುಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ಹಾಗೂ ಕುಂದಕೆರೆ ವಲಯ ಅರಣಾಧಿಕಾರಿಗಳಿಗೆ ಸೂಚನೆ ನೀಡಿದ್ದರು.

ನೋಟಿಸ್‌ ಪಡೆದ ಎರಡು ದಿನಗಳ ಒಳಗೆ ಕಂಬಗಳನ್ನು ತೆರವುಗೊಳಿಸುತ್ತೇವೆ ಎಂದು ಎಸಿಎಫ್‌ ಅವರು ವರದಿಯಲ್ಲಿ  ಸ್ಪಷ್ಟವಾಗಿ ಉಲ್ಲೇಖಿಸಿದ್ದರು. ಆದರೆ ವರ್ಷ ಕಳೆದರೂ ಕಂಬಗಳು ತೆರವುಗೊಂಡಿಲ್ಲ ಎಂಬುದು ವನ್ಯಜೀವಿ ಪ್ರೇಮಿಗಳ ಆರೋಪ.  

ವರದಿಯಲ್ಲೂ ಲೋಪ: ‘ಒಂದು ಸಂರಕ್ಷಿತ ಪ್ರದೇಶದಿಂದ ಮತ್ತೊಂದು ಸಂರಕ್ಷಿತ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರದೇಶದಲ್ಲೂ ಪರಿಸರಕ್ಕೆ ಮಾರಕವಾಗುವ ಕಾಮಗಾರಿ ನಡೆಸುವಂತಿಲ್ಲ. ಸಾರ್ವಜನಿಕ ಹಿತಾಸಕ್ತಿ ಗಾಗಿ ಈ ಪ್ರದೇಶವನ್ನು ಬಳಸಿಕೊಳ್ಳುವುದಾದರೂ ಅದಕ್ಕೆ  ರಾಷ್ಟೀಯ ವನ್ಯಜೀವಿ ಮಂಡಳಿ ಮತ್ತು ರಾಷ್ಟೀಯ ಹುಲಿ ಸಂರಕ್ಷಣ ಪ್ರಾಧಿಕಾರದ ಅನುಮತಿ ಅಗತ್ಯ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದ್ದರೂ,  ಎಸಿಎಫ್‌ ಅವರು ವರದಿಯಲ್ಲಿ ಉಲ್ಲೇಖಿಸಿಲ್ಲ’ ಎಂದು  ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT