ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಗಾಳಿ ಮಳೆ: ಮರ, ವಿದ್ಯುತ್‌ ಕಂಬ ಧರೆಗೆ

ಭಾನುವಾರ ಸಂಜೆ ಏಕಾಏಕಿ ಸುರಿದ ಮಳೆ, ಬಿಸಲ ಬೇಗೆಯಿಂದ ತತ್ತರಿಸಿದವರಿಗೆ ತುಸು ನೆಮ್ಮದಿ
Last Updated 17 ಏಪ್ರಿಲ್ 2017, 6:49 IST
ಅಕ್ಷರ ಗಾತ್ರ
ಮಂಡ್ಯ: ನಗರ ಹಾಗೂ ಜಿಲ್ಲೆಯ ವಿವಿಧೆಡೆ ಭಾನುವಾರ ಸಂಜೆ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಿತು. ಗಾಳಿಯ ರಭಸಕ್ಕೆ ನಗರದಲ್ಲಿ ವಿದ್ಯುತ್‌ ಕಂಬ ಹಾಗೂ ಮರದ ರೆಂಬೆಗಳು ಮುರಿದು ಬಿದ್ದಿವೆ.
 
ಶ್ರೀರಂಗಪಟ್ಟಣ, ಕೆರಗೋಡು, ಕೊಪ್ಪ ಪಟ್ಟಣ ಸೇರಿದಂತೆ ಬಹುಪಾಲು ಕಡೆ ಸಿಡಿಲಿನಿಂದ ಕೂಡಿದ ಮಳೆ ಸುರಿಯಿತು. ಕೆರಗೋಡು ಸುತ್ತಲಿನ  ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಜೋರು ಮಳೆಯಾಗಿದೆ. ಹಲವರ ಮನೆಗಳ ಶೀಟ್‌ ಹಾರಿಹೋಗಿದ್ದು, ಅಪಾರ ನಷ್ಟ ಸಂಭವಿಸಿದೆ.
 
ನಗರದ ವರದಿ: ನಗರದಲ್ಲಿ ಭಾನುವಾರ ಸಂಜೆ ಸುರಿದ ಬಿರುಗಾಳಿ ಹಾಗೂ ಮಳೆಗೆ ನಗರದ ಹೌಸಿಂಗ್ ಬೋರ್ಡ್‌ನಲ್ಲಿ ವಿದ್ಯುತ್‌ ಕಂಬ ಉರುಳಿ ಬಿದ್ದಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
 
ಅಶೋಕನಗರ, ರೈಲ್ವೆ ನಿಲ್ದಾಣದ ಬಳಿ ಹಾಗೂ ಮೈಸೂರು– ಬೆಂಗಳೂರು ಹೆದ್ದಾರಿಯಲ್ಲಿ ಮರದ ರೆಂಬೆಗಳು ಬಿದ್ದಿರುವ ಘಟನೆ ನಡೆದಿದೆ. ರಸ್ತೆಯಲ್ಲಿ ಬಿದ್ದ ಮರದ ರೆಂಬೆಗಳಿಗೆ ವಾಹನ ಚಾಲಕರು ಹಾಗೂ ಪಾದಚಾರಿಗಳಿಗೆ ಕೆಲಕಾಲ ಕಿರಿಕಿರಿ ಉಂಟಾಯಿತು.
 
ಭಾನುವಾರ ಸಂಜೆ ವೇಳೆಗೆ ಬಾರಿ ಬಿರುಗಾಳಿ ಹಾಗೂ ಸಿಡಿಲು ಸಹಿತ ಕೆಲಕಾಲ ಮಳೆ ಸುರಿಯಿತು. ಇದರಿಂದ ಕೆಲವು ಕಡೆ ಮರ ಹಾಗೂ ವಿದ್ಯುತ್‌ ಕಂಬಗಳು ಬಿದ್ದವು. ಯಾವುದೇ ಪ್ರಾಣಾಪಾಯ ಘಟನೆ ವರದಿಯಾಗಿಲ್ಲ.
 
ಮನೆಗೆ ಹಾನಿ
ಕೊಪ್ಪ: ಸಮೀಪದ ಹರಳಕೆರೆ ಗ್ರಾಮದ ಸಿ. ಚನ್ನಯ್ಯ, ರತ್ಮಮ್ಮ, ಜಯಮ್ಮ, ರಾಮು, ಸಣ್ಣೇಗೌಡ, ಪಾಪಣ್ಣ ಅವರಿಗೆ ಸೇರಿದ ಮನೆಯ ಹೆಂಚುಗಳು, ಶೀಟ್‌ಗಳು ಮಳೆ ಗಾಳಿಗೆ ಹಾರಿಹೋಗಿವೆ. ಅಂದಾಜು ₹ 3 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. 
 
ಅಲ್ಲದೆ ಕೆಲವು ಮರಗಳು ಧರೆಗೆ ಉರುಳಿವೆ. ಜಿಲ್ಲಾಧಿಕಾರಿಗಳು ಗಮನ ಹರಿಸಿ ಹಾನಿಯಾಗಿರುವ ಮನೆಗಳಿಗೆ ಪರಿಹಾರ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹರಳಕೆರೆ ಕರಿಯಪ್ಪ ಒತ್ತಾಯಿಸಿದ್ದಾರೆ. 
 
ಅಪಾರ ನಷ್ಟ
ಕೆರಗೋಡು: ಹೋಬಳಿಯ ಹಲವು ಗ್ರಾಮಗಳಲ್ಲಿ ಭಾನುವಾರ ಸಂಜೆ ಗುಡುಗು ಬಿರುಗಾಳಿ ಸಹಿತ ಮಳೆಯಾಗಿದೆ. ಕೆರಗೋಡು ಸೇರಿದಂತೆ ಕೀಲಾರ, ಈಚಗೆರೆ, ಹೊಡಾಘಟ್ಟ, ಮಾರಗೌಡನಹಳ್ಳಿ, ಹುಲಿವಾನ, ಜಿ.ಕೆಬ್ಬಹಳ್ಳಿ, ಅಂಕಣ್ಣನದೊಡ್ಡಿ, ಉಪ್ಪುರಕನಹಳ್ಳಿ, ಶಿವಳ್ಳಿ, ಹೊಳಲು ಸೇರಿದಂತೆ ಹಲವು ಗ್ರಾಮಗಳಲ್ಲಿ ಬಿರು ಗಾಳಿ ಸಹಿತ ಜೋರು ಮಳೆಯಾಗಿದೆ.
 
ಅಂಕಣ್ಣನದೊಡ್ಡಿ ಗ್ರಾಮದಲ್ಲಿ  ಭಾನುವಾರ ಬೀಸಿದ ಬಿರುಗಾಳಿ ಮಳೆಗೆ ರೈತರ ಮನೆಯ ಶೀಟ್‌ಗಳು, ಹುಲ್ಲುಮೆದೆಗಳು ಹಾರಿಹೋಗಿವೆ. ಮರಗಳು ಬಿದ್ದು ಅಪಾರ ನಷ್ಟವಾಗಿದೆ. ಗ್ರಾಮದ ಅಣ್ಣಯ್ಯ, ಜಗದೀಶ್ ಅವರ ಅಂಗಡಿಯ ಶೀಟ್ ಹಾರಿ ಹೋಗಿ ನಷ್ಟವಾಗಿದೆ.
 
ಪಂಚಲಿಂಗಯ್ಯ 2 ಹುಲ್ಲಿನ ಮೆದೆಗಳು, ಕುಮಾರ ಅವರ 1, ಪಂಚಲಿಂಗಯ್ಯ 1, ಪುಟ್ಟಸ್ವಾಮಿ 1, ನಿಂಗೇಗೌಡ ಅವರ 1 ಮೆದೆ ನಾಶವಾಗಿದೆ. 
ರಾಜೀವ್‌ಗಾಂಧಿ ಬಡಾವಣೆಯ ನರಸಿಂಹ ಎಂಬುವವರ ಮನೆಯ ಮೇಲೆ ತೆಂಗಿನಮರ ಬಿದ್ದು ಮನೆ ಜಖಂಗೊಂಡಿದೆ. ಜತೆಗೆ 3 ನೀಲಗಿರಿ ಮರಗಳು ಬಿದ್ದಿವೆ. 
 
ಮೈಸೂರು ಜಿಲ್ಲಾ ವರದಿ:  ನಗರದಲ್ಲಿ ಭಾನುವಾರ ಸಂಜೆ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಮೂರು ಮರಗಳು ನೆಲಕ್ಕುರುಳಿದೆ. ಘಟನೆಯಲ್ಲಿ ಕಾರೊಂದು ಜಖಂಗೊಂಡಿದ್ದರೆ, ತೆಂಗಿನಮರವೊಂದಕ್ಕೆ ಬೆಂಕಿ ತಗುಲಿದೆ.
 
ಪಡುವಾರಹಳ್ಳಿಯ ವಾಲ್ಮೀಕಿ ರಸ್ತೆಯ ಶ್ರೀರಾಮಮಂದಿರದ ಬಳಿ ಮರವೊಂದು ಕಾರಿನ ಮೇಲೆ ಉರುಳಿ ಬಿದ್ದು, ಕಾರು ಸಂಪೂರ್ಣ ಜಖಂಗೊಂಡಿತು. ಕಾರಿನಲ್ಲಿ ಯಾರೂ ಇಲ್ಲದೇ ಇದ್ದುದ್ದರಿಂದ ಅನಾಹುತ ಸಂಭವಿಸಿಲ್ಲ.
 
ಜಯಲಕ್ಷ್ಮಿಪುರಂನಲ್ಲಿ ದೊಡ್ಡ ಮರ ಉರುಳಿ ಬಿದ್ದಿತು. ಮರ ಉರುಳುವ ಸದ್ದಿಗೆ ಸ್ಥಳದಲ್ಲಿದ್ದ ಜನರು ಚಿಲ್ಲಾಪಿಲ್ಲಿಯಾಗಿ ಓಡಿದ್ದರಿಂದ ಯಾರಿಗೂ ಗಾಯಗಳಾಗಿಲ್ಲ. 
 
ಕಾಳಿದಾಸ ರಸ್ತೆಯ ಚಂದ್ರಕಲಾ ಆಸ್ಪತ್ರೆ ಬಳಿ ತೆಂಗಿನಮರವೊಂದು ರಸ್ತೆಗೆ ಉರುಳಿತು. ಇದರಿಂದ ಕೆಲ ಹೊತ್ತು ಸಂಚಾರಕ್ಕೆ ಅಡಚಣೆಯಾಯಿತು. ಇಲ್ಲೆಲ್ಲ ಅಭಯ–2 ತಂಡ ಸ್ಥಳಕ್ಕೆ ಭೇಟಿ ನೀಡಿ ಉರುಳಿ ಬಿದ್ದ ಮರಗಳನ್ನು ತೆರವುಗೊಳಿಸಿತು. ಮಳೆಗಿಂತ ಗಾಳಿಯ ಆರ್ಭಟವೇ ಹೆಚ್ಚಿತ್ತು. ನಗರ ವ್ಯಾಪ್ತಿಯಲ್ಲಿ 8 ಮಿ.ಮೀ ಮಳೆಯಷ್ಟೇ ಸುರಿದಿದೆ.
 
ತೆಂಗಿನಮರಕ್ಕೆ ಬೆಂಕಿ: ಶ್ರೀರಾಂಪುರದ ಮುಖ್ಯರಸ್ತೆಯ ಶಾಂತರಾಜು ಎಂಬುವವರ ಮನೆಯ ಮುಂದೆ ಬಿರುಗಾಳಿಗೆ ಸಿಲುಕಿದ ತೆಂಗಿನಮರದ ಗರಿಗಳು ವಿದ್ಯುತ್ ತಂತಿಗೆ ತಗುಲಿ ಇಡೀ ಮರಕ್ಕೆ ಬೆಂಕಿ ವ್ಯಾಪಿಸಿತು. ಇದರಿಂದ ಭಯಗೊಂಡ ಸುತ್ತಮುತ್ತಲ ನಿವಾಸಿಗಳು ಅಗ್ನಿಶಾಮಕ ಪಡೆಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಬಂದ ಅಗ್ನಿಶಾಮಕಪಡೆಯ ಸಿಬ್ಬಂದಿ ತೆಂಗಿನಮರಕ್ಕೆ ಹೊತ್ತಿದ್ದ ಬೆಂಕಿ ನಂದಿಸುವಲ್ಲಿ ಸಫಲರಾದರು.
 
ಗ್ರಾಮಾಂತರ ಭಾಗದಲ್ಲಿ ಭರ್ಜರಿ ಮಳೆ: ಮೈಸೂರು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಭರ್ಜರಿ ಮಳೆಯಾಗಿದೆ. ಬೆಳಿಗ್ಗೆಯಿಂದ ವಿಪರೀತ ಬಿಸಿಲು ಹಾಗೂ ಹೆಚ್ಚಿನ ಉಷ್ಣಾಂಶ ಇತ್ತು. ಮಧ್ಯಾಹ್ನ 3 ಗಂಟೆಯ ನಂತರ ವಾತಾವರಣದಲ್ಲಿ ಬದಲಾವಣೆಯಾಗುತ್ತಾ ಬಂದಿತು. ಸಂಜೆ 6ರ ನಂತರ ಗ್ರಾಮಾಂತರ ಪ್ರದೇಶಗಳಲ್ಲಿ ಮಳೆ ಬೀಳಲಾರಂಭಿಸಿತು.
 
ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ 93 ಮಿ.ಮೀ, ಹಂಪಾಪುರದಲ್ಲಿ 57, ನಂಜನಗೂಡು ಹಾಗೂ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ತಲಾ 56.5, ಕೆ.ಆರ್.ನಗರದಲ್ಲಿ 44.5, ಹಾರೋಹಳ್ಳಿಯಲ್ಲಿ 41.8, ಇಲವಾಲದಲ್ಲಿ 36, ತಿ.ನರಸೀಪುರದಲ್ಲಿ 36.5 ಮಿ.ಮೀ ಮಳೆ ಸುರಿದಿದೆ. ಹಲವೆಡೆ ಭಾರಿ ಗಾಳಿ ಬೀಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT