ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋರಟಾ ಗ್ರಾಮ ಘೋಷಣೆಗಷ್ಟೇ ಸೀಮಿತ

Last Updated 17 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಕ್ರಿ.ಶ.10ನೇ ಶತಮಾನದಿಂದ 14ನೇ ಶತಮಾನದವರೆಗೂ ಸಾಂಸ್ಕೃತಿಕ ವೈಭವ ಮೆರೆದ ಊರು ಗೋರಟಾ. ಈ ಐತಿಹಾಸಿಕ ಗ್ರಾಮವನ್ನು ಪ್ರವೇಶಿಸಿದರೆ ಸಾಕು ಕಲ್ಲು, ಮಣ್ಣಿನಿಂದ ನಿರ್ಮಿಸಿರುವ ಹಳೆಯ ಮನೆಗಳೇ ಕಣ್ಣಿಗೆ ಬೀಳುತ್ತವೆ. ಮಣ್ಣಿನ ಮನೆಗಳು ಹಾಗೂ ತಗಡಿನ ಚಾವಣಿಗಳು ಗ್ರಾಮದ ಸ್ಥಿತಿಯ ನೈಜ ಚಿತ್ರಣ ನೀಡುತ್ತವೆ.

ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕು ಕೇಂದ್ರದಿಂದ 20 ಕಿ.ಮೀ. ಅಂತರದಲ್ಲಿರುವ ಗೋರಟಾ ಗ್ರಾಮದ ಇತಿಹಾಸದ ಗಮನಿಸಿದರೆ ರಾಜಕೀಯ ದಾಳಿಯಿಂದಾಗಿಯೇ ಗ್ರಾಮದ ವೈಭವ ಕಳೆಗುಂದಿರುವುದು ಗಮನಕ್ಕೆ ಬರುತ್ತದೆ.

ರಾಜೇಂದ್ರ ವರ್ಮಾ ಹುಲಸೂರು ಶಾಸಕರಾಗಿದ್ದ ಅವಧಿಯಲ್ಲಿ ಗ್ರಾಮದಲ್ಲಿ ಒಂದಿಷ್ಟು ಕಾಮಗಾರಿಗಳು ಆಗಿವೆ. 2006–2007ರಲ್ಲಿ ಜಿಲ್ಲಾ ಪಂಚಾಯಿತಿ ಮೂಲಕ ಸುವರ್ಣ ಗ್ರಾಮ ಯೋಜನೆಯ ಅಡಿಯಲ್ಲಿ ಗ್ರಾಮದ ಕೆಲ ಓಣಿಗಳಲ್ಲಿ ಸಿಮೆಂಟ್‌ ರಸ್ತೆ ಹಾಗೂ ಗಟಾರ ನಿರ್ಮಿಸಲಾಗಿದೆ.

ಆದರೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲ. ಗ್ರಾಮದ ಕೆಲ ಓಣಿಗಳಲ್ಲಿ ಮನೆಗಳ  ಬಚ್ಚಲು ನೀರು ರಸ್ತೆ ಮಧ್ಯದಲ್ಲಿ ಹರಿಯುತ್ತಿದೆ. ಜನರಿಗೆ ನೈರ್ಮಲ್ಯದ ಪ್ರಾಮುಖ್ಯ ತಿಳಿದಿಲ್ಲ.


2014 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬೀದರ್‌ ಕ್ಷೇತ್ರದಿಂದ ನರೇಂದ್ರ ಮೋದಿ ಅಲೆಯಲ್ಲಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಅವರನ್ನು ಪರಾಭವಗೊಳಿಸಿ ಭಗವಂತ ಖೂಬಾ  ಚುನಾಯಿತರಾಗಿದ್ದಾರೆ. ಖೂಬಾ ಅವರು ಜಿಲ್ಲೆಯ ಗೋರಟಾ ಗ್ರಾಮವನ್ನು ದತ್ತು ಪಡೆದು  ‘ಆದರ್ಶ ಗ್ರಾಮ’ವನ್ನಾಗಿ ರೂಪಿಸುವ ಘೋಷಣೆ ಮಾಡಿದಾಗ ಊರಿನ ಜನರು ಅಭಿವೃದ್ಧಿಯ ಪರ್ವ ಶುರು ಆಯಿತೆಂದು ಭಾವಿಸಿದ್ದರು.

ಆದರ್ಶ ಗ್ರಾಮ ಘೋಷಣೆಯಾಗಿ ಎರಡು ವರ್ಷ ಕಳೆದರೂ ಗ್ರಾಮದಲ್ಲಿ ಒಂದು ಪೈಸೆಯಷ್ಟೂ ಕೆಲಸ ಆಗಿಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಪರದಾಟ ತಪ್ಪಿಲ್ಲ. ಮೊದಲಿದ್ದ ಪಂಚಾಯಿತಿ ಅಭಿವೃದ್ಧಿ  ಅಧಿಕಾರಿ ವರ್ಗವಾಗಿ ಹೋಗಿದ್ದಾರೆ. ನಾಲ್ಕು ತಿಂಗಳ ಹಿಂದೆ ಬೇರೊಬ್ಬರು ಅಧಿಕಾರ ವಹಿಸಿಕೊಂಡಿದ್ದಾರೆ.

ಸಂಸದರು ಈವರೆಗೆ ಸುಮಾರು ಮೂರು ಸಭೆ ನಡೆಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಅಡಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ್ದನ್ನು ಬಿಟ್ಟರೆ ಏನೂ ಮಾಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಜೆಡಿಎಸ್‌ನ ಮಲ್ಲಿಕಾರ್ಜುನ ಖೂಬಾ ಅವರು ಸಹ ಊರಿನ ಅಭಿವೃದ್ಧಿಗೆ ನೆರವಾಗಿಲ್ಲ. ಸಂಸದ ಭಗವಂತ ಖೂಬಾ ನಮ್ಮ ಪಕ್ಷದವರೇ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ. ಆದರ್ಶ ಗ್ರಾಮ ಘೋಷಣೆ ಮಾಡಿ ಬೀದರ್‌ನಲ್ಲಿ ಕುಳಿತರ ಏನು ಪ್ರಯೋಜನ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಅರುಣ ತೆಲಂಗ.

ಕುಡಿಯುವ ನೀರಿಗೆ ತೊಂದರೆ: ಮೂರು ವರ್ಷ ಜಿಲ್ಲೆಯಲ್ಲಿ ಬರ ಇತ್ತು. ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ಉಂಟಾಗಿತ್ತು. ಕಳೆದ ವರ್ಷ ಚೆನ್ನಾಗಿ ಮಳೆ ಸುರಿದಿದೆ. ಕಳೆದ ವರ್ಷದಷ್ಟು ಈ ವರ್ಷ ಕುಡಿಯುವ ನೀರಿನ ತೀವ್ರ ಸಮಸ್ಯೆ ಉದ್ಭವಿಸಿಲ್ಲ. ಹೆಚ್ಚಿನ ಮನೆಗಳಿಗೆ ನಳದ ಸಂಪರ್ಕ ಇದೆ.

ಗ್ರಾಮದಲ್ಲಿ ಅಲ್ಲಲ್ಲಿ ಕೊಳವೆಬಾವಿ ಕೊರೆಯಿಸಲಾಗಿದೆ. ಗ್ರಾಮದ ಹೊರ ವಲಯದಲ್ಲಿರುವ ಹಳ್ಳದ ದಂಡೆ ಮೇಲೆ ಒಂದು ತೆರೆದ ಬಾವಿ ಇದೆ. ಈ ಬಾವಿಯ ನೀರನ್ನು  ಬಳಸಲಾಗುತ್ತಿದೆ. ಗ್ರಾಮದಲ್ಲಿ   ಕುಡಿಯುವ ನೀರಿನ ಘಟಕ ಇದ್ದರೂ ಕಾರ್ಯಾರಂಭ ಮಾಡಿಲ್ಲ. 15 ವರ್ಷಗಳ ಹಿಂದೆ ಗ್ರಾಮದ ಹೊರವಲಯದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ. ಅದರಲ್ಲಿ ಒಮ್ಮೆಯೂ ನೀರು ಸಂಗ್ರಹಿಸಿಲ್ಲ.

ಓವರ್‌ಹೆಡ್‌ ಟ್ಯಾಂಕ್‌ ಬಳಸದೇ ಹಾಳಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಬೇಕು ಎಂಬುದು ಜನರ ಬಹುದಿನಗಳ ಬೇಡಿಕೆಯಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಗೋರಟಾದ ಬಸ್ ತಂಗುದಾಣ ಹಾಳು ಬಿದ್ದಿದೆ. ತಂಗುದಾಣದ ಒಳಗಿನ ಆಸನಗಳು ಕಿತ್ತುಹೋಗಿದ್ದು, ಸಂಪೂರ್ಣ ಕೆಂದೂಳು ಆವರಿಸಿಕೊಂಡಿದೆ. ಪ್ರಯಾಣಿಕರು ಬಿಸಿಲು ಅಥವಾ ಮಳೆಯಲ್ಲಿ ಆಶ್ರಯ ಪಡೆಯುವಷ್ಟೂ ಸುರಕ್ಷಿತವಾಗಿಲ್ಲ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಎಂಜಿಎನ್‌ಆರ್‌ಇಜಿ ಯೋಜನೆ ಅಡಿ ಗ್ರಾಮದಲ್ಲಿ ತೆರೆದ ಬಾವಿ, ಕೆಲ ಓಣಿಗಳಲ್ಲಿ ಸಿ.ಸಿ ರಸ್ತೆ ಹಾಗೂ ಗಟಾರ ನಿರ್ಮಿಸಲಾಗಿದೆ.

ಕೆಲವು ಕಡೆ ಕಾಮಗಾರಿಗಳು ಅಪೂರ್ಣವಾಗಿವೆ. ಗಟಾರ ನೀರು ಹರಿದು ಹೋಗಲು ಗ್ರಾಮ ಪಂಚಾಯಿತಿ ಸರಿಯಾಗಿ ದಾರಿ ಸಹ ಮಾಡಿಕೊಟ್ಟಿಲ್ಲ. ಹೀಗಾಗಿ ಅಲ್ಲಲ್ಲಿ ನೀರು ಸಂಗ್ರಹವಾಗಿದೆ.

ಒಂದು ರೂಪಾಯಿ ಸಹ ಕೊಟ್ಟಿಲ್ಲ?: ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಸಾಕಾರಗೊಳಿಸುವ ದಿಸೆಯಲ್ಲಿ ಆದರ್ಶ ಗ್ರಾಮ ಯೋಜನೆಯನ್ನು ಕೇಂದ್ರ ಸರ್ಕಾರ ಆನುಷ್ಠಾನಗೊಳಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಜತೆಗೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ಇದಕ್ಕೆ ಬಳಕೆ ಮಾಡಿಕೊಳ್ಳಬೇಕು. ಆದರೆ ಸಂಸದರ ನಿಧಿಯಿಂದ ಈವರೆಗೆ ಒಂದು ರೂಪಾಯಿ ಸಹ ಬಿಡುಗಡೆಯಾಗಿಲ್ಲ.

ಸಂಸದ ಭಗವಂತ ಖೂಬಾ ಅವರು ಹಿಂದೆ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಪವನಕುಮಾರ ಮಾಲಪಾಟಿ ಹಾಗೂ ಕೆಲ ಇಲಾಖೆಗಳ ಅಧಿಕಾರಿಗಳನ್ನು ಗೋರಟಾಕ್ಕೆ ಕರೆಸಿ ಸಭೆ ನಡೆಸಿದ್ದರು. ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಿದ್ದರು.

ಗೋರಟಾ ಗ್ರಾಮ ಪಂಚಾಯಿತಿಯು ಗ್ರಾಮೀಣ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯ ಮೂಲಕ ₹ 90 ಲಕ್ಷ ವೆಚ್ಚದ ಯೋಜನೆ ಸಿದ್ಧಪಡಿಸಿ ತಾಲ್ಲೂಕು ಪಂಚಾಯಿತಿ ಮೂಲಕ ಜಿಲ್ಲಾ ಪಂಚಾಯಿತಿಗೆ ಅನುಮೋದನೆಗಾಗಿ ಕಳಿಸಿದೆ. ಜಿಲ್ಲಾ ಪಂಚಾಯಿತಿ ಅದಕ್ಕೆ ಅನುಮೋದನೆ ನೀಡಿಲ್ಲ. ಭಾರಿ ಮೊತ್ತದ ಅನುದಾನವನ್ನು ಒಂದೇ ಗ್ರಾಮಕ್ಕೆ ವಿನಿಯೋಗಿಸಲು ಜಿಲ್ಲಾಪಂಚಾಯಿತಿ ಸದಸ್ಯರು ಒಪ್ಪುತ್ತಿಲ್ಲ.

2011ರ ಜನಗಣತಿ ಪ್ರಕಾರ ಗ್ರಾಮದ ಜನಸಂಖ್ಯೆ 3,395 ಇದೆ. ಗ್ರಾಮದಲ್ಲಿ 300 ಜನರ ಬಳಿ ಜಾಬ್‌ ಕಾರ್ಡ್‌ಗಳಿವೆ. ಉದ್ಯೋಗ ಖಾತರಿ ಯೋಜನೆಯಲ್ಲಿ ₹ 70 ಲಕ್ಷದ ವರೆಗೂ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬಹುದು. ಕೃಷಿ ಹೊಂಡ ನಿರ್ಮಾಣಕ್ಕೆ ಮಾತ್ರ ಗ್ರಾಮಸ್ಥರು ಆಸಕ್ತಿವಹಿಸುತ್ತಾರೆ. ಇದೇ ಯೋಜನೆಯಲ್ಲಿ ಇತರೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದಾದರೆ ಕೆಲಸ ಮಾಡಲು ಯಾರೂ ಮುಂದೆ ಬರುತ್ತಿಲ್ಲ ಎನ್ನುತ್ತಾರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ರೂಗಿ.

ಸಾರ್ವಜನಿಕರ ಸಹಭಾಗಿತ್ವ ಇದ್ದರೆ ಎಂಜಿಎನ್‌ಆರ್‌ಇಜಿ ಅಡಿಯಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಬಹುದು. ಜನ ನಿರಾಸಕ್ತಿ ತೋರಿಸಿದರೆ ಕಾಮಗಾರಿ ಪೂರ್ಣಗೊಳಿಸುವುದು ಕಷ್ಟವಾಗುತ್ತದೆ ಎಂದು ಹೇಳುತ್ತಾರೆ ಅವರು.

ಪ್ರತ್ಯೇಕ ಅನುದಾನ ಒದಗಿಸಿಲ್ಲ: ಕೇಂದ್ರ ಸರ್ಕಾರವು ಆದರ್ಶ ಗ್ರಾಮಕ್ಕೆ ಪ್ರತ್ಯೇಕವಾಗಿ ಅನುದಾನ ಒದಗಿಸಿಲ್ಲ. ಈಗಾಗಲೇ ಅಸ್ತಿತ್ವದಲ್ಲಿರುವ ಯೋಜನೆಗಳ ಹಣ ಬಳಸಿಕೊಂಡು ಕಾಮಗಾರಿ ಕೈಗೊಳ್ಳಬೇಕಾಗಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ ಆರ್.ಸೆಲ್ವಮಣಿ.

ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ತಮ್ಮ ಕ್ಷೇತ್ರದ ಅನುಕೂಲಕ್ಕೆ ತಕ್ಕಂತೆ ಕಾಮಗಾರಿ ಕೈಗೊಳ್ಳಲು ಇಷ್ಟಪಡುತ್ತಾರೆ. ತಮ್ಮ  ಕ್ಷೇತ್ರದಲ್ಲೇ ಹೆಚ್ಚು ಕಾಮಗಾರಿಗಳು ನಡೆಯಬೇಕು ಎಂದು ಬಯಸುತ್ತಾರೆ. ಹೀಗಾಗಿ ಅನುದಾನವನ್ನು ಒಂದೇ ಕಡೆಗೆ ವಿನಿಯೋಗಿಸಲು ಆಗುವುದಿಲ್ಲ. ಸದಸ್ಯರು ಆಕ್ಷೇಪ ವ್ಯಕ್ತಪಡಿಸುವುದರಿಂದ ಗೊಂದಲ ಸೃಷ್ಟಿಯಾಗುತ್ತಿದೆ. ತಾಂತ್ರಿಕ ಸಮಸ್ಯೆಗಳೂ  ಎದುರಾಗುತ್ತಿವೆ.

ಆದರ್ಶ ಗ್ರಾಮ ಘೋಷಣೆ ಮಾಡಿದರೂ ಎಲ್ಲ ಅನುದಾನವನ್ನು ಒಂದೇ ಗ್ರಾಮಕ್ಕೆ ಡೈವರ್ಟ್‌ ಮಾಡಲು ಆಗುವುದಿಲ್ಲ. ಲಭ್ಯ ಅನುದಾನದಲ್ಲೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕಾಗಿದೆ. ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಹಣ ಒದಗಿಸಿದರೆ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಅವರು. 

ಆದರ್ಶ ಗ್ರಾಮ ಸರಣಿ–6 ಶಾಸನಗಳ ಊರು
ಗೋರಟಾದಲ್ಲಿ ಒಟ್ಟು ಏಳು ಜೈನ ಶಾಸನಗಳು ದೊರೆತಿವೆ.  ಸಮಾಜೋಧಾರ್ಮಿಕವಾಗಿ ಉತ್ತುಂಗ ಶಿಖರಕ್ಕೇರಿದ ಕೀರ್ತಿ ಗೋರಟಾ ಗ್ರಾಮಕ್ಕೆ ಸಲ್ಲುತ್ತದೆ. ಭವಾನಿ ಮಂದಿರದ ಬಳಿ ದೊರೆತ ಶಾಸನದಲ್ಲಿ ಗೋರಟಾ ಗ್ರಾಮಕ್ಕೆ ಗೋರಂಟಿ ಎಂದು ಕರೆಯುತ್ತಿದ್ದರು ಎನ್ನುವ ಉಲ್ಲೇಖ ಇದೆ.

ಶಿಕ್ಷಣ ಹಾಗೂ ದೇಗುಲಗಳಿಂದಾಗಿ ಪ್ರಸಿದ್ಧಿ ಪಡೆದಿತ್ತು. ಗೋರಂಟಿಯ ಅಗ್ರಹಾರದಲ್ಲಿ ಸಂಗೀತ ವಿಶ್ವವಿದ್ಯಾಲಯ ಇತ್ತು. 400 ಉಪನ್ಯಾಸಕರು ಹಾಗೂ ಸಾವಿರ ವಿದ್ಯಾರ್ಥಿಗಳಿದ್ದರು. ವಿದ್ವಾಂಸ ಭಾಸ್ಕರ ಚಟ್ಟೋಪಾಧ್ಯಾಯ ಇದರ ಕುಲಪತಿಯಾಗಿದ್ದರು. 

ಆರನೇ ವಿಕ್ರಮಾದಿತ್ಯ ಸಂಗೀತ ಪ್ರೇಮಿಯಾಗಿದ್ದ. ಇತನ ಪತ್ನಿಯರಾಗಿದ್ದ ಕೇತಲಾದೇವಿ ಹಾಗೂ ಚಂದಲಾದೇವಿ ಸಂಗೀತದಲ್ಲಿ ಪ್ರವೀಣೆಯರಾಗಿದ್ದರು. ಇವರು ಸಂಗೀತ, ನೃತ್ಯ, ವಿದ್ಯಾಧರಿ ಹಾಗೂ ನಾಟ್ಯ ಮಯೂರಿ ಬಿರುದುಗಳನ್ನು ಪಡೆದುಕೊಂಡಿದ್ದರು.

ವಿಕ್ರಮಾದಿತ್ಯನ ಪುತ್ರ ಭೂಲೋಕಮಲ್ಲ ಮೂರನೇ ಸೋಮೇಶ್ವರನು ರುದ್ರೇಶ್ವರ ದೇವರ ಸೇವೆಗಾಗಿ ತನ್ನ ಗುರುಗಳಾದ ಭಾಸ್ಕರಾಚಾರ್ಯರಿಗೆ ದತ್ತಿಕೊಟ್ಟಿರುವುದನ್ನು ಮಲ್ಲಪ್ರಜೆ ಎನ್ನುವ ವ್ಯಕ್ತಿ ಶಾಸನದಲ್ಲಿ ಬರೆಸಿದ್ದಾನೆ. ಗ್ರಾಮದ ಹರಿಜನಕೇರಿಯ ಪೋಚಮ್ಮ ದೇವಸ್ಥಾನದ ಬಳಿ ಎರಡು ಶಾಸನ, ಹನುಮಂತ ದೇವಾಲಯ, ನಾಗಪ್ಪ ಹಳೆಯಂಬರ ಅವರ ಮನೆಯಂಗಳ,

ಗುರಪ್ಪ ಕನಕಟ್ಟೆ ಹಾಗೂ ಬಸವಣ್ಣ ಬಿರಾದಾರ ಅವರ ಹೊಲದಲ್ಲಿ ಶಾಸನಗಳು ದೊರೆತಿವೆ. ಇವೆಲ್ಲ ಸಂರಕ್ಷಣೆ ಇಲ್ಲದೆ ಹಾಳಾಗುತ್ತಿವೆ. ಮಹಾದೇವ ಮಂದಿರದ ಒಳಭಾಗದಲ್ಲಿರುವ ಶಾಸನವು ಜೈನ ಪಂಥದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ. ಧಾರ್ಮಿಕ ಪರಂಪರೆ ಹಾಗೂ ಗೋರಟಾದ ವೈಭವಕ್ಕೆ ಸಾಕ್ಷಿಯಾಗಿದ್ದ ಐದು ದೇಗುಲಗಳು ಮತಾಂಧರ ದಾಳಿಗೆ ತುತ್ತಾಗಿವೆ. ಗ್ರಾಮದ ಪರಿಸರದಲ್ಲಿ ಮನೆಗಳ ನಿರ್ಮಾಣಕ್ಕೆ ಅಡಿಪಾಯ ಹಾಕಲು ನೆಲ ಅಗೆದಾಗ ಹಾಗೂ ಬಾವಿ ತೋಡುವಾಗ ಕೆತ್ತನೆಯ ಶಿಲೆಗಳು ಕಣ್ಣಿಗೆ ಬೀಳುತ್ತವೆ.

ಚಾರಿತ್ರಿಕ ಘಟನೆಗಳನ್ನು ಉಲ್ಲೇಖಿಸುವ ಶಾಸನಗಳ ರಕ್ಷಣೆಗೆ ಇಂದಿಗೂ ಒತ್ತುಕೊಟ್ಟಿಲ್ಲ. ಗ್ರಾಮದಲ್ಲಿ ಇಂತಹ ಅಮೂಲ್ಯ ಶಾಸನಗಳು ಇವೆ ಎನ್ನುವುದು ಗ್ರಾಮದ ಬಹುತೇಕ ಜನರಿಗೆ ತಿಳಿದೂ ಇಲ್ಲ.

ಹುತಾತ್ಮರ ಸ್ಮಾರಕ: ­1947ಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತಾಗಲೂ  ಹೈದರಾಬಾದ್ ಕರ್ನಾಟಕ ಮತ್ತು ಮಹಾರಾಷ್ಟ್ರದ ಮರಾಠವಾಡಾ ಭಾಗ ನಿಜಾಮ ಆಡಳಿತದಲ್ಲಿತ್ತು. ಲಾತೂರನ ಕಾಸಿಂ ರಜ್ವಿ, ನಿಜಾಮ ಆಡಳಿತದ ಪ್ರದೇಶವನ್ನು ಭಾರತದಿಂದ ಪ್ರತ್ಯೇಕಗೊಳಿಸಲು ಇತ್ತೆಹಾದುಲ್ ಮುಸ್ಲಮಿನ್ ಸಂಘಟನೆ ಸ್ಥಾಪಿಸಿದ.

ಈ ಸಂಘಟನೆಯವರನ್ನು ರಜಾಕರ್  ಎಂದೇ ಗುರುತಿಸಲಾಯಿತು. ಭಾರತದ ಒಕ್ಕೂಟದಲ್ಲಿ ವಿಲೀನಗೊಳ್ಳಲು ಪ್ರಯತ್ನಿಸುತ್ತಿದ್ದ ಹಾಗೂ ಭಾರತದ ಪರವಾಗಿದ್ದ 200 ಜನರನ್ನು ರಜಾಕರ್ ಹತ್ಯೆಗೈದರು. ಅನೇಕ ಮನೆಗಳಿಗೆ ಬೆಂಕಿ ಹಚ್ಚಿದರು.

ಅಂದಿನ ಕೇಂದ್ರ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಸೇನಾ ಕಾರ್ಯಾಚರಣೆಗೆ ಆದೇಶ ನೀಡಿದರು. ಆಪರೇಷನ್ ಪೋಲೋ ಹೆಸರಿನಲ್ಲಿ ಈ ಪ್ರದೇಶಕ್ಕೆ ಮುತ್ತಿಗೆ ಹಾಕಲಾಯಿತು. 1948ರ ಸೆಪ್ಟೆಂಬರ್ 17ರಂದು ನಿಜಾಮನು ಭಾರತ ಒಕ್ಕೂಟದಲ್ಲಿ ವಿಲೀನಕ್ಕೆ ಒಪ್ಪಿಗೆ ನೀಡಿದ. ಈ ಮೂಲಕ ಹೈದರಾಬಾದ್‌ ಕರ್ನಾಟಕ ವಿಮೋಚನೆಗೊಂಡಿತು.

ವಿಮೋಚನಾ ಚಳವಳಿಯಲ್ಲಿ ಹುತಾತ್ಮರಾದವರ ನೆನಪಿಗಾಗಿ ಗೋರಟಾದಲ್ಲಿ ಸರ್ದಾರ್‌ ವಲ್ಲಭಭಾಯಿ ಪಟೇಲ್ ಸ್ಮಾರಕ ನಿರ್ಮಾಣಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈಗಾಗಲೇ  ಧ್ವಜಸ್ತಂಭ ಮತ್ತು ಜ್ಯೋತಿ ಸ್ತಂಭ ನಿರ್ಮಾಣಗೊಂಡಿದೆ. ಕಳೆದೊಂದು ವರ್ಷದಿಂದ ಈ ಕಾಮಗಾರಿಯೂ ಸ್ಥಗಿತಗೊಂಡಿದೆ.

ಅಧಿಕಾರಿಗಳು ಸ್ಪಂದಿಸುತ್ತಿಲ್ಲ
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಅಡಿಯಲ್ಲೇ ಗೋರಟಾದಲ್ಲಿ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆದರೆ ಅಧಿಕಾರಿಗಳೇ ಕೆಲಸ ಮಾಡುತ್ತಿಲ್ಲ ಎಂದು ಸಂಸದ ಭಗವಂತ ಖೂಬಾ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಕೇಂದ್ರದಿಂದ ಪ್ರತ್ಯೇಕ ಅನುದಾನ ಒದಗಿಸಿಲ್ಲ ನಿಜ. ಆದರೆ ಕೇಂದ್ರದ ಯೋಜನೆಗಳಿಗೆ ಬರುವ ಅನುದಾನವನ್ನೇ ಬಳಸಿಕೊಂಡು ಆದರ್ಶ ಗ್ರಾಮವಾಗಿ ರೂಪಿಸಬಹುದಾಗಿದೆ. ಈ ಸಂಬಂಧ ಮೂರು ಬಾರಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ. ಇದು ಒಬ್ಬ  ವ್ಯಕ್ತಿಯಿಂದ ಆಗುವ ಕೆಲಸವಲ್ಲ. ಅಧಿಕಾರಿಗಳೂ ಆಸಕ್ತಿ ತೋರಿಸಬೇಕು ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT