ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿನ ಮರ ಕಡಿತಕ್ಕೆ ಅನುಮತಿ; ಆಕ್ಷೇಪ

Last Updated 20 ಏಪ್ರಿಲ್ 2017, 9:55 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ವಾನಳ್ಳಿ– ಹುಲೇಕಲ್ ಭಾಗದಲ್ಲಿ ಮಾಲ್ಕಿ ಜಮೀನಿನಲ್ಲಿರುವ ಅನೇಕ ಮಾವಿನ ಮರಗಳನ್ನು ಕಟಾವು ಮಾಡಲಾಗಿದೆ. ಇನ್ನೂ 500 ಮರಗಳ ಕಟಾವಿಗೆ ಸಿದ್ಧತೆ ನಡೆದಿದೆ ಎಂದು ಪರಿಸರ ಸಂಘಟನೆಗಳು ಆರೋಪಿಸಿವೆ.ಶಿರಸಿ ಅರಣ್ಯ ವಿಭಾಗದಲ್ಲಿ ಕಳೆದ ಮೂರು ತಿಂಗಳುಗಳಿಂದ ಮಾವಿನ ಮರ ಕಟಾವಿಗೆ ಪರವಾನಿಗೆ ಸಡಿಲಗೊಳಿಸಲಾಗಿದೆ. ಇದನ್ನೇ ಆಧರಿಸಿ ಮರ ಗುತ್ತಿಗೆದಾರರು ಮಾವಿನ ಮರ ಕಡಿಯುತ್ತಿದ್ದಾರೆ. ಪಶ್ಚಿಮಘಟ್ಟದಲ್ಲಿ ನೈಸರ್ಗಿಕವಾಗಿ ಬೆಳೆದ ಲಕ್ಷಾಂತರ ಮಾವಿನ ಮರಗಳು ಖಾಸಗಿ ಭೂಮಿಯಲ್ಲಿವೆ. ವಿನಾಶದ ಅಂಚಿನಲ್ಲಿ ಇರುವ ಈ ಕಾಡು ಮಾವು, ಸಾಸಿವೆ ಹಣ್ಣು, ಅಪ್ಪೆಮಿಡಿ, ಮಿಡಿಮಾವು ಸೇರಿ ಸಾವಿರಕ್ಕೂ ಹೆಚ್ಚು ಜಾತಿಯ ಮಾವಿನ ತಳಿಗಳಿವೆ. ವಿನಾಕಾರಣ ಫಲ ಕೊಡುವ ಮಾವಿನಮರ ಕಡಿಯಲು ಪರವಾನಿಗೆ ಕೊಡಬಾರದು ಎಂಂದು ವೃಕ್ಷಲಕ್ಷ ಆಂದೋಲನ ಸಂಘಟನೆ ಆಗ್ರಹಿಸಿದೆ.

ಮಲೆನಾಡಿನಲ್ಲಿ ಬೃಹತ್ ಗಾತ್ರದ ಮಾವಿನ ಮರಗಳು ಇವೆ. ನದಿಗಳ ಅಂಚಿನಲ್ಲಿರುವ ಬೃಹತ್ ಗಾತ್ರದ ಮರಗಳು ’ಬಿಗ್ ಟ್ರೀ’ ಎಂದೇ ಹೆಸರು ಪಡೆದಿದೆ. ಅಪ್ಪೆ ಮಿಡಿ ಉಪ್ಪಿನ ಕಾಯಿಗೆ ಹೆಸರಾಗಿದೆ. ಈಗ ಉಪ್ಪಿನಕಾಯಿ ರಫ್ತು ಉದ್ಯಮವಾಗಿದೆ. ಮಲೆನಾಡಿನ ಗ್ರಾಮೀಣ ಜನರಿಗೆ ಆದಾಯದ ಮೂಲವಾಗಿದೆ. ಮಾವು ಪಾರಂಪರಿಕ ವೃಕ್ಷ. ರಾಜ್ಯ ಜೀವವೈವಿಧ್ಯ ಮಂಡಳಿಯ ಪಾರಂಪರಿಕ ವೃಕ್ಷಗಳ ಪಟ್ಟಿಯಲ್ಲಿ ಮಾವಿಗೆ ಅಗ್ರ ಸ್ಥಾನವಿದೆ. ಇಷ್ಟೆಲ್ಲ ಮಹತ್ವವಿರುವ ಮಾವಿನ ಮರಗಳ ಕಟಾವಿಗೆ ಅನುಮತಿ ನೀಡುವುದು ಸರಿಯಲ್ಲ ಎಂದು ಸಂಘಟನೆ ಪ್ರತಿಪಾದಿಸಿದೆ.

ಎರಡು ವರ್ಷಗಳ ಹಿಂದೆ ಮಾವಿನ ಮರಗಳ ಕಟಾವಿಗೆ ಪರವಾನಿಗೆ ಬೇಡ ಎಂಬ ಪಟ್ಟಿಗೆ ಸರ್ಕಾರ ಸೇರಿಸಿದ್ದರಿಂದ ಸಾವಿರಾರು ಮರಗಳ ಕಟಾವಿಗೆ ಕಾರಣವಾಗಿತ್ತು. ವ್ಯಾಪಕ ವಿರೋಧದ ನಂತರ ವೃಕ್ಷ ಸಂರಕ್ಷಣಾ ಕಾಯ್ದೆ ತಿದ್ದುಪಡಿ ತಂದು ಈ ಪಟ್ಟಿಯಿಂದ ಮಾವಿನಮರ ಹೊರಗಿಡಲಾಗಿತ್ತು. ಸರ್ಕಾರ ಡಿಸೆಂಬರ್ 7, 2016ರಂದು ಈ ಬಗ್ಗೆ ಆದೇಶ ಹೊರಡಿಸಿದೆ ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಅಶೀಸರ ತಿಳಿಸಿದ್ದಾರೆ.ಮಾವಿನ ಮರಗಳ ಕಟಾವು ತಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ವೃಕ್ಷಲಕ್ಷ ಆಂದೋಲನಕ್ಕೆ ಶಿರಸಿಯ ಪ್ರಭಾರ ಡಿಸಿಎಫ್ ವಸಂತ ರೆಡ್ಡಿ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT