ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘‘ಹ್ಯಾಂಡ್‌ಸಮ್ ನಾಯಕರ ಜೊತೆ ಡುಯೆಟ್ ಹಂಬಲ...

Last Updated 20 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

‘ಸ್ಟಾರ್ ನಟರ ಎಂಟ್ರಿಗೆ ಸಿಗುವುದಕ್ಕಿಂತ ಹೆಚ್ಚು ಶಿಳ್ಳೆ–ಚಪ್ಪಾಳೆಗಳು ಸಾಧು ಕೋಕಿಲ ಅವರ ಎಂಟ್ರಿಗೆ ಸಿಗುತ್ತದೆ. ಅದು ಅವರ ವಿಶಿಷ್ಟ ಅಭಿನಯಕ್ಕೆ ಸಲ್ಲುವ ಮೆಚ್ಚುಗೆ. ಪಾತ್ರ ಯಾವುದಾದರೂ ಸಾಧು ಅವರಂತೆ ನಮ್ಮತನವನ್ನು ಉಳಿಸಿಕೊಂಡು ನಟಿಸಿ ಸೈ ಎನ್ನಿಸಿಕೊಳ್ಳಬೇಕು. ಅದ್ಭುತ ಪಾತ್ರ ಬರಬಹುದು ಎಂದು ಕಾದು ಕೂರುವಂತಿಲ್ಲ. ಹಿಂದಾದರೆ ನೋಡುಗರನ್ನು ಯೋಚನೆಗೆ ಹಚ್ಚುವ ಪಾತ್ರಗಳು ನಾಯಕಿಗೆ ದೊರೆಯುತ್ತಿದ್ದವು. ಆದರೆ ಈಗ ಕನ್ನಡದಲ್ಲಿ ನಾಯಕಿಯನ್ನು ಪ್ರಧಾನವಾಗಿ ಇರಿಸಿಕೊಂಡು ಅತ್ಯುತ್ತಮ ಎನ್ನುವಂಥ ಕಥೆ ಎಷ್ಟು ಬರುತ್ತವೆ? ನಾಯಕಿ ಕೂಡ ಪೋಷಕ ಪಾತ್ರಗಳಂತೆ ತೀರಾ ಸಹಜ ಪಾತ್ರವಷ್ಟೇ ಆಗಿದ್ದಾಳೆ’.

ಇವು ಈಗತಾನೇ ಚಿತ್ರರಂಗದಲ್ಲಿ ಕನಸುಕಂಗಳನ್ನು ಅರಳಿಸುತ್ತಿರುವ ನಟಿ ಅದಿತಿ ಪ್ರಭುದೇವ ಅವರ ಮಾತುಗಳು. ‘ಗುಂಡ್ಯಾನ ಹೆಂಡ್ತಿ’ ಧಾರಾವಾಹಿಯಿಂದ ಕಿರುತೆರೆ ಪ್ರವೇಶಿಸಿದ ಅವರು – ಈಗ ‘ಧೈರ್ಯಂ’ ಮತ್ತು ‘ಪ್ರೀತಿ ಪ್ರಾಪ್ತಿರಸ್ತು’ ಚಿತ್ರಗಳ ನಾಯಕಿ. ದಾವಣಗೆರೆಯ ಈ ನಗುವಿನ ಬಳ್ಳಿ ಓದಿದ್ದು ಎಂಜಿನಿಯರಿಂಗ್ ಮತ್ತು ಎಂಬಿಎ. ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಪ್ರತಿಷ್ಠಿತ ಕಂಪೆನಿಗೆ ಆಯ್ಕೆಯಾಗಿದ್ದರೂ ಅವರನ್ನು ಸೆಳೆದಿದ್ದು ಮಾತ್ರ ಸಿನಿಮಾ ಕ್ಯಾಂಪಸ್.

ಕಾಲೇಜು ದಿನಗಳಲ್ಲಿ ಅಪ್ಪನ ಹತ್ತಿರ ಪಾಕೆಟ್ ಮನಿ ಕೇಳುವ ಮುಜುಗರದಿಂದ ತಪ್ಪಿಸಿಕೊಳ್ಳಲು ಅದಿತಿ ಕಾರ್ಯಕ್ರಮ ನಿರೂಪಣೆಯಲ್ಲಿ ತೊಡಗಿಕೊಂಡರು. ಸಿನಿಮಾ ಸಮಾರಂಭಗಳಿಗೂ ನಿರೂಪಕಿಯಾಗಿ ಗುರ್ತಿಸಿಕೊಂಡ ಅವರಿಗೆ ನಿಧಾನವಾಗಿ ಕನ್ನಡ ಚಿತ್ರರಂಗದ ನಂಟು ಬೆಳೆಯಿತು. ಡಿಸ್ಟಿಂಕ್ಷನ್ ವಿದ್ಯಾರ್ಥಿನಿ ಆಗಿದ್ದರೂ ಓದಿನಲ್ಲಿ ತೃಪ್ತಿ ಕಾಣದ ಅದಿತಿ ಬಣ್ಣಕ್ಕೆ ಮುಖವೊಡ್ಡುತ್ತಲೇ, ‘ತಾನಿರಬೇಕಾದ ಜಾಗ ಇದೇ, ತನಗೆ ಖುಷಿ ಕೊಡುವ ವೃತ್ತಿ ಇದೇ’ ಎಂಬುದನ್ನು ಅರಿತರು.

ಅದಿತಿಯ ನಟನಾ ಕಾಯಕ ಆರಂಭವಾಗಿದ್ದು ಸುವರ್ಣ ವಾಹಿನಿಯ ‘ಗುಂಡ್ಯಾನ ಹೆಂಡ್ತಿ’ ಧಾರಾವಾಹಿಯ ಮೂಲಕ.

ಸುಮಾರು ಎಂಟು ತಿಂಗಳು ಪ್ರಸಾರವಾದ ಆ ಧಾರಾವಾಹಿಯಲ್ಲಿ ಅದಿತಿ, ಉತ್ತರ ಕರ್ನಾಟಕದ ಭಾಷೆಯನ್ನು ಮಾತನಾಡಬೇಕಿತ್ತು. ‘ಕನ್ನಡದ ಹಲವು ಸ್ಲ್ಯಾಂಗ್‌ಗಳಲ್ಲಿ ಮಾತನಾಡುವ ರೂಢಿ ಇದ್ದ ಕಾರಣ ಗುಂಡ್ಯಾನ ಹೆಂಡ್ತಿ ಪಾತ್ರ ಕಷ್ಟವೇ ಆಗಲಿಲ್ಲ’ ಎನ್ನುತ್ತಾರೆ ಅವರು. ಚಿತ್ರೀಕರಣ ಹೇಗಿರುತ್ತದೆ ಎಂದು ಅವರು ನೋಡಿದ್ದೇ ‘ಗುಂಡ್ಯಾನ ಹೆಂಡ್ತಿ’ ಸಂದರ್ಭದಲ್ಲಿ.

ಈ ಧಾರಾವಾಹಿ ಚಿತ್ರೀಕರಣ ಆಗುತ್ತಿದ್ದುದು ಬೆಳಗಾವಿಯಿಂದ ನಲವತ್ತೈದು ಕಿಲೋಮೀಟರ್ ದೂರದ ಹಳ್ಳಿಯಲ್ಲಿ. ಅಲ್ಲಿ ತಿನ್ನಲು ತಕ್ಷಣಕ್ಕೆ ಬೇಕೆಂದರೆ ಏನೂ ಸಿಗದ, ಒಳ್ಳೆಯ ಕುಡಿಯುವ ನೀರೂ ಇರದ ಪರಿಸ್ಥಿತಿ. ಅಂಥ ಪರಿಸರದಲ್ಲಿ ಕೆಲಸ ಮಾಡುವ ಕಷ್ಟವನ್ನು ತಂಡ ಮೈ ಮೇಲೆ ಎಳೆದುಕೊಂಡಿತ್ತು. ಅದಿತಿ ಆ ಧಾರಾವಾಹಿಯಿಂದ ಸಾಕಷ್ಟು ಕಲಿತಿದ್ದಾರೆ. ‘ಗುಂಡ್ಯಾನ ಹೆಂಡ್ತಿ’ ಮುಗಿಯುವ ಹೊತ್ತಿಗೆ ಶಿವತೇಜಸ್ ನಿರ್ದೇಶನದ ‘ಧೈರ್ಯಂ’ ಸಿನಿಮಾಕ್ಕೆ ಆಡಿಶನ್ ಕೊಡುವಂತೆ ಕರೆ ಬಂತು. ಅದನ್ನೇನೂ ಮಾಡು ಇಲ್ಲವೇ ಮಡಿ ಅವಕಾಶ ಎಂದೆಲ್ಲ ಪರಿಗಣಿಸದ ಅದಿತಿ, ‘ಸಿಂಪಲ್ಲಾಗಿ ಆಡಿಶನ್ ಎದುರಿಸಿದೆ. ಕೊಟ್ಟ ಸಂಭಾಷಣೆಯನ್ನು ನನ್ನದೇ ಶೈಲಿಯಲ್ಲಿ ಒಪ್ಪಿಸಿದ್ದೆ’ ಎನ್ನುತ್ತಾರೆ. ಸಿನಿಮಾಕ್ಕೆ ಆಯ್ಕೆಯಾಗಿದ್ದೇನೆಂದು ಗೊತ್ತಾದಾಗ ಸಂಭ್ರಮದ ಅಲೆಯಲ್ಲಿ ತೇಲಾಡಿದ್ದಾರೆ.


‘ಧೈರ್ಯಂ’ ನನ್ನ ಪಾಲಿಗೆ ಸಿನಿಮಾ ಮಾತ್ರವಲ್ಲ; ಅದೊಂದು ಬದುಕಿನ ಪಾಠ ಎಂದು ಬಣ್ಣಿಸುತ್ತಾರೆ. ವಯೋಸಹಜವಾದ ಹುಡುಗಾಟದಲ್ಲಿ ಪರಿಣಾಮಗಳ ಅರಿವಿಲ್ಲದೇ ಯಾರ ಜೊತೆಗಾದರೂ ಮಾತನಾಡುವ ಅವರ ಗುಣಕ್ಕೆ ಈ ಸಿನಿಮಾ ತಡೆ ಹಾಕಿದೆ. ಹೇಗೆ ವರ್ತಿಸಬೇಕು, ಏನು ಮಾತನಾಡಬೇಕು, ಅದರ ಪರಿಣಾಮ ಏನಾಗಬಹುದು ಎಂದೆಲ್ಲ ಯೋಚಿಸಿ ಮಾತನಾಡುವುದನ್ನು ಕಲಿಸಿದೆ. ಅಂಥದ್ದೊಂದು ತಂಡ ಸಿಕ್ಕಿದ್ದು ತನ್ನ ಪುಣ್ಯ ಎನ್ನುತ್ತಾರೆ ಅವರು.

‘ಧೈರ್ಯಂ’ ಚಿತ್ರದಲ್ಲಿ ಅವರು ಪ್ರಬುದ್ಧ ಹುಡುಗಿ. ಪ್ರತಿಯೊಂದನ್ನೂ ಯೋಚಿಸಿ ಕೆಲಸ ಮಾಡುವ ನಾಯಕಿ. ಧೈರ್ಯವಂತೆ, ಕತ್ತಿ ಹಿಡಿದು ಎದುರಿನವರನ್ನು ಹೆದರಿಸುವ ಲಕ್ಷಣವೂ ಅವರ ಪಾತ್ರಕ್ಕಿದೆ. ಮೊದಲ ಸಿನಿಮಾ ಬಿಡುಗಡೆ ಆಗುವ ಮುನ್ನವೇ ಮತ್ತೊಂದು ಸಿನಿಮಾ ಕೂಡ ಅವರನ್ನು ಹುಡುಕಿಕೊಂಡು ಬಂದಿದೆ. ಪಿ.ಎಂ. ವೀರೇಶ್ ನಿರ್ದೇಶನದ ‘ಪ್ರೀತಿ ಪ್ರಾಪ್ತಿರಸ್ತು’ ಅದಿತಿಯ ಎರಡನೇ ಚಿತ್ರ. ಈ ಚಿತ್ರದಲ್ಲಿ ಅವರು ಮೃದು ಹೃದಯಿ, ಅಳುಮುಂಜಿ. ಮೊದಲ ಚಿತ್ರಕ್ಕೆ ವಿರುದ್ಧವಾದ ಪಾತ್ರ ಇಲ್ಲಿಯದು.

ಒಳ್ಳೆಯ ಪ್ರಾರಂಭ ಇದ್ದಾಗ ಮಾತ್ರ ಅಂತ್ಯವೂ ಒಳ್ಳೆಯ ರೀತಿಯಲ್ಲಿ ಆಗುತ್ತದೆ ಎಂಬುದು ಅವರ ನಂಬಿಕೆ. ಸಿನಿಮಾಕ್ಕೆ ಪ್ರವೇಶ ಮಾಡಬೇಕಾದರೆ ಒಳ್ಳೆಯ ತಂಡದ ಮೂಲಕವೇ ಪರಿಚಯವಾಗಬೇಕು. ‘ಧೈರ್ಯಂ’ ಅವಕಾಶ ಬಂದಾಗ ಮೊದಲು ಅವರು ವಿಚಾರಿಸಿದ್ದು ತಂಡದ ಬಗ್ಗೆ. ತಂಡಕ್ಕೆ ನಾನು ಹೊಂದಿಕೊಳ್ಳುತ್ತೇನೆ ಎಂದು ಅನ್ನಿಸಿದ ನಂತರವೇ ಅವರು ಸಿನಿಮಾಕ್ಕೆ ಸಹಿ ಹಾಕಿದ್ದು.

‘ಒಬ್ಬ ನಾಯಕಿ ಎಂಥದ್ದೇ ಹಿಟ್ ಸಿನಿಮಾ ನೀಡಿದರೂ, ಎಷ್ಟೇ ಬೇಡಿಕೆಯ ನಟಿಯಾಗಿದ್ದರೂ ಆರೇಳು ವರ್ಷವಷ್ಟೇ ಆಕೆಯ ಮಾರುಕಟ್ಟೆ ಇರುವುದು ಸದ್ಯದ ವಾಸ್ತವ. ಅದಾದ ನಂತರ ಚಿತ್ರರಂಗ ಬಿಟ್ಟು ಬೇರೆ ದಾರಿ ನೋಡಿಕೊಳ್ಳಲೇಬೇಕು’ ಎಂಬುದು ಅದಿತಿಯ ದೂರದೃಷ್ಟಿ.

‘ನಾಯಕಿ ಎಂದರೆ ಶೂಟಿಂಗ್ ಸಂದರ್ಭಕ್ಕೆ ಸೆಟ್‌ಗೆ ಹೋಗಿ ಅಭಿನಯಿಸಿ ಬಂದುಬಿಡುವುದಲ್ಲ. ಯಾರಾದರೂ ನಮ್ಮನ್ನು ನಾಯಕಿ ಎಂದು ಒಪ್ಪಿಕೊಳ್ಳಬೇಕಾದರೆ ನಮ್ಮಲ್ಲಿ ಅಂಥ ಗುಣಗಳು ಒಂದಷ್ಟಾದರೂ ಇರಬೇಕು’ ಎಂದು ಪ್ರತಿಪಾದಿಸುವ ಅವರು, ತಮ್ಮದೇ ಲಹರಿಯಲ್ಲಿ ಯೋಚಿಸುತ್ತಾರೆ.

ಅದಿತಿಯದು ಯಾವುದಕ್ಕೂ ಅತಿಯಾಗಿ ತಲೆ ಕೆಡಿಸಿಕೊಳ್ಳುವ ವ್ಯಕ್ತಿತ್ವವಲ್ಲ. ಜೀವನವನ್ನು ಹೇಗೆ ಲೀಡ್ ಮಾಡಬೇಕು, ಹೇಗೆ ಎಲ್ಲವನ್ನೂ ಎಂಜಾಯ್ ಮಾಡಬೇಕು ಎಂದು ಸ್ವತಃ ಅದಿತಿ ಬಿ.ಎಡ್. ವಿದ್ಯಾರ್ಥಿಗಳಿಗೆ ಮೋಟಿವೇಶನ್ ತರಗತಿಗಳನ್ನೂ ನಡೆಸಿದ್ದಾರೆ. ಚಿತ್ರೀಕರಣಕ್ಕೆ ತೆರಳಿದರೆ ಸೆಟ್ ಬಾಯ್‌ನಿಂದ ಹಿಡಿದು ತಂಡದ ಎಲ್ಲರನ್ನೂ ತಾನಾಗಿಯೇ ಮಾತನಾಡಿಸುವ ಗುಣ ಅವರದು. ‘ನಗು ನಗುತಾ ನಲಿ ಏನೇ ಆಗಲಿ’ ಹಾಡನ್ನು ನೆನೆಯುವ ಅವರು ಯಾವಾಗಲೂ ಹಸನ್ಮುಖಿ.

ಬಹುಶಃ ಇಂಥ ಗುಣಗಳಿಂದಾಗಿಯೇ ಅವರು, ‘ಚಿತ್ರರಂಗದಲ್ಲಿ ತೊಡಗಿಸಿಕೊಂಡ ಎರಡು ವರ್ಷಗಳಲ್ಲಿ ಒಂದೂ ಅಹಿತಕರ ಘಟನೆ ಆಗಿಲ್ಲ’ ಎಂದು ಖುಷಿಯಿಂದಲೇ ಹೇಳುತ್ತಾರೆ. ಅವರಿಗೆ ಚಿತ್ರರಂಗ ಒಂದು ಅದ್ಭುತ ಜಗತ್ತು ಎಂಬ ಭಾವ ಮೂಡಿಸಿದೆ. ಮುಂದೆಯೂ ತನಗೆ ಸೂಕ್ತ ಎನ್ನುವಂಥ ತಂಡವನ್ನೇ ಹುಡುಕಿ ಕೆಲಸ ಮಾಡುವ ನಿರ್ಧಾರ ಅವರದು. ಭಾವನೆಗಳ ಜೊತೆಗೆ ಗುದ್ದಾಡುವ ಪಾತ್ರವನ್ನು ಇಷ್ಟಪಡುವ ಅದಿತಿ ಭಾವಜೀವಿ. ಬೋಲ್ಡ್ ಪಾತ್ರಗಳಿಗೂ ಸೈ ಅಂತಾರೆ. ಕನ್ನಡದಲ್ಲಿ ಇರುವ ಎಲ್ಲ ಹ್ಯಾಂಡ್‌ಸಮ್ ನಾಯಕರ ಜೊತೆಯೂ ಕೆಲಸ ಮಾಡುವ ಆಸೆ ಅವರಿಗಿದೆ.

ಅಭಿನಯಿಸಿದ ಎರಡು ಸಿನಿಮಾಗಳಲ್ಲಿ ಇನ್ನೂ ಒಂದೂ ಬಿಡುಗಡೆ ಕಂಡಿಲ್ಲ. ‘ಧೈರ್ಯಂ’ ಮುಂದಿನ ತಿಂಗಳು ತೆರೆ ಕಾಣಲಿದೆ. ‘ಪ್ರೀತಿ ಪ್ರಾಪ್ತಿರಸ್ತು’ ಚಿತ್ರೀಕರಣ ಒಂದಷ್ಟು ಬಾಕಿ ಇದೆ. ಅಷ್ಟರಲ್ಲಾಗಲೇ ಅದಿತಿಗೆ ಏಳೆಂಟು ಸಿನಿಮಾಗಳ ಆಫರ್ ಬಂದಿದೆ. ಆದರೂ ‘ಧೈರ್ಯಂ’ ಬಿಡುಗಡೆ ಆಗುವವರೆಗೆ ಯಾವುದನ್ನೂ ಒಪ್ಪಿಕೊಳ್ಳುವುದು ಅವರಿಗೆ ಇಷ್ಟವಿಲ್ಲ.

‘ಒಳ್ಳೆಯ ಎತ್ತರವಿದೆ. ಸ್ಪಷ್ಟವಾಗಿ ಕನ್ನಡ ಮಾತನಾಡುತ್ತೇನೆ. ದೇಹಸೌಂದರ್ಯವನ್ನು ಚೆನ್ನಾಗಿ ಕಾಪಾಡಿಕೊಂಡಿದ್ದೇನೆ. ಹಾಗಾಗಿ ಯಾವ ಉಡುಪಿನಲ್ಲೂ ನಾನು ಕೆಟ್ಟದಾಗಿ ಕಾಣುವುದಿಲ್ಲ. ಇದು ನನಗೆ ಪ್ಲಸ್ ಪಾಯಿಂಟ್’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಅದಿತಿ. ‘ಬೇರೆ ಭಾಷೆಯ ನಾಯಕಿಯರನ್ನು ಪ್ರೀತಿಯಿಂದ ಸ್ವಾಗತಿಸುವ ಕನ್ನಡದ ಪ್ರೇಕ್ಷಕರು, ಕನ್ನಡತಿಯಾದ ನನ್ನನ್ನು ಖಂಡಿತವಾಗಿಯೂ ಒಪ್ಪಿಕೊಳ್ಳುತ್ತಾರೆ’ ಎನ್ನುವುದು ಅವರ ವಿಶ್ವಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT