ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷರಿಗೆ ಪರಮಾಧಿಕಾರ: ಟರ್ಕಿಯ ಭವಿಷ್ಯವೇನು?

Last Updated 21 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

-ಗೊನುಲ್‌ ಟಾಲ್‌

*
ದೇಶದ ಸಂವಿಧಾನಕ್ಕೆ ಹಲವು ತಿದ್ದುಪಡಿಗಳನ್ನು ತರುವುದಕ್ಕೆ ಭಾನುವಾರ ನಡೆಸಲಾದ ಜನಮತಗಣನೆಯ ಗೆಲುವು ಅಧಿಕಾರದ ಮೇಲೆ ತಮ್ಮ ಹಿಡಿತವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ ಎಂದು ಅಧ್ಯಕ್ಷ ರಿಸೆಪ್‌ ತಯ್ಯಿಪ್‌ ಎರ್ಡೋಗನ್‌ ಭಾವಿಸಿದ್ದಾರೆ. ತಮ್ಮ ಅಧಿಕಾರ ಪ್ರಶ್ನಾತೀತವಾಗಿ ಮುಂದುವರಿಯಲಿದೆ ಎಂಬ ಭಾವನೆಯೂ ಅವರಲ್ಲಿದೆ. ಆದರೆ ಅವರು ಭಾವಿಸಿದಷ್ಟು ಸುಲಭವಾಗಿ ಅದು ಸಾಧ್ಯವಾಗದು ಎಂಬುದು ಗೋಚರಿಸುತ್ತಿದೆ. ಸಂವಿಧಾನ ತಿದ್ದುಪಡಿಯ ಪರ ನಡೆದಷ್ಟು ತೀವ್ರವಾಗಿ ವಿರುದ್ಧದ ಪ್ರಚಾರಾಂದೋಲನ ನಡೆದಿಲ್ಲ. ಹಾಗಿದ್ದರೂ ಅಧ್ಯಕ್ಷ ಎರ್ಡೋಗನ್‌ ನಿರೀಕ್ಷಿಸಿದಂತೆ ‘ಪರ’ ಅಭಿಯಾನ ಭಾರಿ ಗೆಲುವು ದಾಖಲಿಸುವಲ್ಲಿ ವಿಫಲವಾಗಿದೆ. ತಮ್ಮ ಆಡಳಿತಕ್ಕೆ ಈ ಜನಮತಗಣನೆ ಕಾನೂನಿನ ಮುದ್ರೆ ಒತ್ತಲಿದೆ ಎಂದು ಎರ್ಡೋಗನ್ ಭಾವಿಸಿದ್ದರು. ಆದರೆ ಸಂವಿಧಾನ ತಿದ್ದುಪಡಿಯ ಅವರ ಪ್ರಸ್ತಾವಕ್ಕೆ ಸಿಕ್ಕಿದ್ದು ಶೇ 51ರಷ್ಟು ಮತಗಳು ಮಾತ್ರ.

ಸಂಸದೀಯ ವ್ಯವಸ್ಥೆಯಿಂದ ಯಾವುದೇ ಅಂಕುಶ ಇಲ್ಲದ ಅಧ್ಯಕ್ಷೀಯ ವ್ಯವಸ್ಥೆಗೆ ಆಡಳಿತ ವಿಧಾನ ಪರಿವರ್ತನೆ ಆಗುವ ತೀರ್ಮಾನಗಳಿಗೆ ರಾಷ್ಟ್ರೀಯ ಸಹಮತದ ಅಗತ್ಯ ಇದೆ. ಸಂವಿಧಾನದ ಪ್ರಸ್ತಾವಿತ ತಿದ್ದುಪಡಿಗಳಿಗೆ ಶೇ 49ರಷ್ಟು ಜನರು ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ಮತದಾನದಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪಗಳಿವೆ. ಹಾಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಸ್ಪಷ್ಟವಾದ ಸಹಮತ ಸಾಧ್ಯವಾಗಿಲ್ಲ.

ಎರ್ಡೋಗನ್ ಅವರ ನಿರಂಕುಶಾಧಿಕಾರದ ತಂತ್ರಗಳ ನಡುವೆಯೂ ಟರ್ಕಿಯ ಪ್ರಜಾತಂತ್ರ ಇನ್ನೂ ಜೀವಂತವಾಗಿದೆ ಎಂಬುದನ್ನು ಜನಮತಗಣನೆ ಸಾಬೀತು ಮಾಡಿದೆ. ವಾಸ್ತವದಲ್ಲಿ ಜನಮತಗಣನೆಯ ಫಲಿತಾಂಶ ತಿದ್ದುಪಡಿ ವಿರೋಧಿಗಳಿಗೆ ದೊರೆತ ಗೆಲುವಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಮತದಾರರು ಮತಗಟ್ಟೆಗೆ ಹೋಗಿದ್ದಾರೆ. ಬೆಂಬಲಿಗರನ್ನು ಸಂಘಟಿಸಲು ಪ್ರಮುಖ ವಿರೋಧ ಪಕ್ಷಕ್ಕೆ ಅವಕಾಶ ನೀಡಲಾಗಿರಲಿಲ್ಲ. ಹಾಗೆಯೇ ವಿರೋಧ ಪಕ್ಷದ ಅತ್ಯಂತ ಪ್ರಭಾವಿ ನಾಯಕನನ್ನು ಸೆರೆಯಲ್ಲಿ ಇರಿಸಲಾಗಿತ್ತು. ಅಷ್ಟೇ ಅಲ್ಲ, ಅಧ್ಯಕ್ಷೀಯ ವ್ಯವಸ್ಥೆಯ ವಿರೋಧಿಗಳನ್ನು ಎರ್ಡೋಗನ್ ಅವರು ಭಯೋತ್ಪಾದಕರು ಎಂದು ಬಣ್ಣಿಸಿದ್ದರು. ಮಾಧ್ಯಮದ ಮೇಲೆ ಸರ್ಕಾರ ಹೊಂದಿರುವ ಬಿಗಿ ಹಿಡಿತದಿಂದಾಗಿ ತಿದ್ದುಪಡಿ ಪರ ಅಭಿಯಾನಕ್ಕೆ ಭಾರಿ ಪ್ರಚಾರ ದೊರೆತಿತ್ತು. ತಿದ್ದುಪಡಿ ವಿರುದ್ಧ ವಿವಿಧ ಸ್ಥಳಗಳಲ್ಲಿ ವಿರೋಧ ಪಕ್ಷ ಅಳವಡಿಸಿದ್ದ ಭಿತ್ತಿಪತ್ರಗಳನ್ನು ಆಡಳಿತ ಪಕ್ಷ ತೆರವುಗೊಳಿಸಿತ್ತು.

ಚುನಾವಣೆ ಮೇಲೆ ನಿಗಾ ಇರಿಸಲು ಸ್ವತಂತ್ರ ವೀಕ್ಷಕರಿಗೆ ಅವಕಾಶ ನೀಡಿರಲಿಲ್ಲ. ಚುನಾವಣಾ ಪ್ರಕ್ರಿಯೆಯನ್ನು ವೀಕ್ಷಿಸಲು ವಿರೋಧ ಪಕ್ಷದವರು ಸಲ್ಲಿಸಿದ ಅರ್ಜಿಗಳನ್ನು ಚುನಾವಣಾ ಮಂಡಳಿ ತಿರಸ್ಕರಿಸಿತ್ತು. ಅಕ್ರಮ ನಡೆದಿದೆ ಎಂಬ ಆರೋಪ ಮಾಡುವುದಕ್ಕೆ ಕಷ್ಟವಾಗುವ ನಿರ್ಧಾರವೊಂದನ್ನು ಕೊನೆಯ ಕ್ಷಣದಲ್ಲಿ ಇದೇ ಮಂಡಳಿ ತೆಗೆದುಕೊಂಡಿತ್ತು. ‘ಎಣಿಕೆ ಪ್ರಕ್ರಿಯೆಯಲ್ಲಿ ಕೊನೆ ಕ್ಷಣದಲ್ಲಿ ಮಾಡಿದ ಬದಲಾವಣೆಗಳು ಮಹತ್ವದ ಸುರಕ್ಷತಾ ಕ್ರಮಗಳನ್ನು ತೊಲಗಿಸಿದವು’ ಎಂದು ಐರೋಪ್ಯ ಸಮಿತಿಯ ಸಂಸದೀಯ ಸಭೆ ಸೋಮವಾರ ಹೇಳಿತು. ಕಳೆದ ಕೆಲವು ವರ್ಷಗಳಿಂದ ಟರ್ಕಿ ನಿರಂಕುಶಾಧಿಕಾರದತ್ತ ಸಾಗುತ್ತಿದೆ. ಇತ್ತೀಚೆಗೆ ಅದು ಇನ್ನಷ್ಟು ವೇಗ ಪಡೆದುಕೊಂಡಿದೆ. ಹಾಗಿದ್ದರೂ ಮತಗಟ್ಟೆಗೆ ಹೋಗುವ ಮೂಲಕ ಟರ್ಕಿಯ ಜನರು ತಮಗೆ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ನಂಬಿಕೆ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಲು ಭಾನುವಾರ ನಡೆದ ಜನಮತಗಣನೆ ಕೊನೆಯ ಅವಕಾಶವಾಗಿತ್ತು ಎಂದು ಟರ್ಕಿಯ ಹಲವು ಜನರು ಭಾವಿಸಿದ್ದಾರೆ. ಈಗ ಸಂವಿಧಾನ ತಿದ್ದುಪಡಿಗಳು ಅಂಗೀಕಾರವಾಗಿವೆ. ಯಾವ ಅಂಕುಶವೂ ಇಲ್ಲದ ಅಧ್ಯಕ್ಷೀಯ ವ್ಯವಸ್ಥೆಯತ್ತ ಟರ್ಕಿ ಅಧಿಕೃತವಾಗಿ ಪರಿವರ್ತನೆಯಾಗಿದೆ. ಎರ್ಡೋಗನ್ ಅವರು 2019ರವರೆಗೆ ಆಳ್ವಿಕೆ ನಡೆಸಬಹುದು. ನ್ಯಾಯಮೂರ್ತಿಗಳು ಮತ್ತು ಸಚಿವರನ್ನು ನೇಮಿಸುವ ಅಧಿಕಾರ ಅವರಿಗಿದೆ. ಸೇನೆ, ಗುಪ್ತಚರ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ಮುಖ್ಯಸ್ಥರನ್ನು ನೇಮಿಸುವ ಅಧಿಕಾರವೂ ಅವರದ್ದಾಗಿದೆ. ಅಧ್ಯಕ್ಷೀಯ ಆದೇಶದ ಮೂಲಕ ಅವರು ಕಾನೂನುಗಳನ್ನೂ ಮಾಡಬಹುದು.

ತಮ್ಮ ಹೊಸ ಅಧಿಕಾರಗಳನ್ನು ಎರ್ಡೋಗನ್ ಹೇಗೆ ಬಳಸುತ್ತಾರೆ ಎಂಬುದರ ಮೇಲೆ ಟರ್ಕಿಯ ಪ್ರಜಾಪ್ರಭುತ್ವದ ಭವಿಷ್ಯ ನಿಂತಿದೆ. ಧ್ರುವೀಕರಣಗೊಂಡ ತಮ್ಮ ದೇಶದ ಮಾತನ್ನು ಅವರು ಕೇಳಬಹುದೇ ಮತ್ತು ದೇಶದ ಗಾಯಗಳ ಉಪಶಮನಕ್ಕೆ ಶ್ರಮಿಸಬಹುದೇ? ಅಥವಾ ಪಶ್ಚಿಮ ವಿರೋಧಿ ರಾಷ್ಟ್ರೀಯತೆಯ ಜನಪ್ರಿಯ ನಿಲುವನ್ನು ಮುಂದುವರಿಸಬಹುದೇ? 2019ರಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.

ಎರ್ಡೋಗನ್ ಅವರು ತಮ್ಮ ಕಾರ್ಯತಂತ್ರವನ್ನು ಬದಲಿಸಿಕೊಳ್ಳಲೇಬೇಕು ಎಂಬುದು ಈಗ ದೊರೆತ ಅತ್ಯಲ್ಪ ಬಹುಮತದ ಸಂದೇಶ. ಮೊದಲನೆಯದಾಗಿ, 2015ರಿಂದಲೇ ಕುರ್ದ್ ಸಮುದಾಯದ ವಿರುದ್ಧ ನಿಂತಿರುವ ಎರ್ಡೋಗನ್ ಈ ಸಮುದಾಯದ ಜತೆ ಸಂಧಿ ಮಾಡಿಕೊಳ್ಳಬೇಕಾಗಬಹುದು. ಆ ವರ್ಷ ನಡೆದ ಸಂಸದೀಯ ಚುನಾವಣೆಯಲ್ಲಿ ಎರ್ಡೋಗನ್ ಪಕ್ಷ ಸೋತಿತು. ನಂತರ, ನ್ಯಾಯಸಮ್ಮತವಾಗಿ ನಡೆಯುತ್ತಿದ್ದ ಕುರ್ದ್ ರಾಜಕೀಯ ಚಳವಳಿಯನ್ನು ಎರ್ಡೋಗನ್ ಹತ್ತಿಕ್ಕಿದ್ದರು. ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿಯ ಮುಖಂಡರನ್ನು ಜೈಲಿಗೆ ತಳ್ಳಲಾಯಿತು ಮತ್ತು ಚಳವಳಿ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಲಾಯಿತು. ಇದು ಕುರ್ದ್ ಸಮುದಾಯವನ್ನು ವಿರೋಧಿಸುವ ಟರ್ಕಿ ರಾಷ್ಟ್ರೀಯವಾದಿಗಳ ಬೆಂಬಲವನ್ನು ಎರ್ಡೋಗನ್‌ಗೆ ಕೊಟ್ಟಿತು.

ಆದರೆ ಎರ್ಡೋಗನ್ ಅವರ ರಾಷ್ಟ್ರೀಯವಾದಿ ಗೆಳೆಯರು ಜನಮತಗಣನೆಯಲ್ಲಿ ಬೆಂಬಲ ನೀಡಲಿಲ್ಲ. ದೇಶದಾದ್ಯಂತ ಈ ವರ್ಗ ಸಂವಿಧಾನ ತಿದ್ದುಪಡಿಗೆ ವಿರುದ್ಧವಾಗಿ ಮತ ಚಲಾಯಿಸಿತು. ಕುರ್ದ್ ಸಮುದಾಯದಿಂದ ನಿರೀಕ್ಷೆಗಿಂತ ಹೆಚ್ಚು ಬೆಂಬಲ ದೊರೆತಿದೆ. ಕುರ್ದ್ ಬೆಂಬಲವನ್ನು ಹಾಗೆಯೇ ಉಳಿಸಿಕೊಳ್ಳಬೇಕಾದರೆ ಹೊಸ ಅಧಿಕಾರಗಳನ್ನು ಪಡೆದುಕೊಂಡಿರುವ ಅಧ್ಯಕ್ಷ 2019ರ ಚುನಾವಣೆಗೆ ಮುನ್ನವೇ ಸಂಧಿ ಮಾತುಕತೆ ಆರಂಭಿಸಬೇಕಾಗುತ್ತದೆ.

ಕುರ್ದ್‌ ಸಮುದಾಯದ ಜತೆಗಿನ ಶಾಂತಿ ಮತ ತರುವುದರ ಜತೆಗೆ ಟರ್ಕಿಯ ಅಸ್ಥಿರ ಅರ್ಥ ವ್ಯವಸ್ಥೆಯನ್ನು ಸ್ಥಿರಗೊಳಿಸುತ್ತದೆ. ಜತೆಗೆ ಎರ್ಡೋಗನ್‌ ಅವರ ಜನಪ್ರಿಯತೆಯನ್ನು ಮರುಸ್ಥಾಪಿಸುತ್ತದೆ.

1994ರಲ್ಲಿ ಇಸ್ತಾಂಬುಲ್‌ ಮೇಯರ್‌ ಹುದ್ದೆಗೆ ಸ್ಪರ್ಧಿಸಿದಾಗಿನಿಂದ ಎಂದೂ ಇಲ್ಲಿ ಎರ್ಡೋಗನ್‌ಗೆ ಹಿನ್ನಡೆ ಆಗಿಲ್ಲ. ಆದರೆ ಈ ಬಾರಿಯ ಜನಮತಗಣನೆಯಲ್ಲಿ ಇಸ್ತಾಂಬುಲ್‌  ಸೇರಿ ಬಹುತೇಕ ನಗರ ಪ್ರದೇಶಗಳಲ್ಲಿ ಅವರು ಬೆಂಬಲ ಕಳೆದುಕೊಂಡಿದ್ದಾರೆ. ಎರ್ಡೋಗನ್‌ ಹಿಂದೆ ಗಟ್ಟಿಯಾಗಿ ನಿಂತಿದ್ದ ನಗರ ಪ್ರದೇಶದ ಜನರು ಅಧ್ಯಕ್ಷರ ನಿರಂಕುಶ ನೀತಿಗಳಿಂದಾಗಿ ದೂರ ಸರಿದಿದ್ದಾರೆ. ಅವರನ್ನು ಒಲಿಸಿಕೊಳ್ಳಲು ಹೊಸ ಕಾರ್ಯತಂತ್ರವನ್ನು ರೂಪಿಸಲೇಬೇಕು.

ಇದು ಸುಲಭದ ಕೆಲಸವೇನೂ ಅಲ್ಲ. ತಮ್ಮ ವೃತ್ತಿ ಜೀವನದ ಉದ್ದಕ್ಕೂ ಧ್ರುವೀಕರಣವನ್ನೇ ನೆಚ್ಚಿಕೊಂಡು ಬಂದವರು ಎರ್ಡೋಗನ್‌. 2015ರಲ್ಲಿ ಸಂಸತ್‌ ಚುನಾವಣೆಯಲ್ಲಿ ಬಹುಮತ ಕಳೆದುಕೊಂಡಾಗಲೂ ಜನರಲ್ಲಿ ಭಯ ಹುಟ್ಟಿಸುವ ಮೂಲಕ ಅವರು ತಮ್ಮ ಅಧಿಕಾರವನ್ನು ಗಟ್ಟಿಗೊಳಿಸಿಕೊಂಡಿದ್ದರು.

ಕಳೆದ ಬೇಸಿಗೆಯಲ್ಲಿ ನಡೆದ ಅಧ್ಯಕ್ಷರ ಪದಚ್ಯುತಿಯ ವಿಫಲ ಯತ್ನ ಸರ್ಕಾರಿ ಸಂಸ್ಥೆಗಳಿಂದ ತಮ್ಮ ವಿರೋಧಿಗಳನ್ನು ಹೊರಗೆ ದಬ್ಬಲು ಎರ್ಡೋಗನ್‌ಗೆ ನೆರವಾಯಿತು. ವ್ಯವಸ್ಥೆಯನ್ನು ಸರಿಪಡಿಸುವುದು ತಮ್ಮಿಂದ ಮಾತ್ರ ಸಾಧ್ಯ ಎಂದು ಬಿಂಬಿಸುವಲ್ಲಿ ಅವರು ಯಶಸ್ವಿಯಾಗಿದ್ದರು. ಆದರೆ ಈಗ ಅವರು ಬೆಂಬಲ ಕಳೆದುಕೊಂಡಿರುವುದು ಸ್ಪಷ್ಟವಾಗಿದೆ. ಆಳವಾಗಿ ವಿಭಜಿತ ದೇಶವನ್ನು ಮುನ್ನಡೆಸಲು ಮತ್ತು 2019ರ ಚುನಾವಣೆಯಲ್ಲಿ ಗೆಲ್ಲಲು ಎರ್ಡೋಗನ್‌ ಅವರು ಮಧ್ಯಮ ಹಾದಿಯನ್ನು ಅನುಸರಿಸಲೇಬೇಕಿದೆ. ಜತೆಗೆ ಧ್ರುವೀಕರಣದ ತಂತ್ರವನ್ನು ಬದಿಗಿರಿಸಿ ತಮ್ಮ 15 ವರ್ಷಗಳ ಆಡಳಿತದಲ್ಲಿ ಉಂಟಾಗಿರುವ ಗಾಯಗಳನ್ನು ಶಮನ ಮಾಡಬೇಕಿದೆ. ಇಲ್ಲವಾದರೆ ಅಸ್ಥಿರತೆ ಮತ್ತು ಅವ್ಯವಸ್ಥೆ ಇನ್ನಷ್ಟು ಹೆಚ್ಚುವುದು ಖಚಿತ.
(ಲೇಖಕಿ ಮಿಡ್ಲ್‌ ಈಸ್ಟ್‌ ಇನ್‌ಸ್ಟಿಟ್ಯೂಟ್‌ನ ಟರ್ಕಿ ಅಧ್ಯಯನ ಕೇಂದ್ರದ ನಿರ್ದೇಶಕಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT