ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕರಿಗೆ ಮುಕ್ತವಾಗದ ಉದ್ಯಾನ

Last Updated 24 ಏಪ್ರಿಲ್ 2017, 5:13 IST
ಅಕ್ಷರ ಗಾತ್ರ

ತುಮಕೂರು: ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾಗಿರುವ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒತ್ತುವರಿ ಆಗಿರುವ ನೂರಾರು ಉದ್ಯಾನಗಳ ತೆರವು ಕಾರ್ಯಾಚರಣೆ ಇಂದಿಗೂ ಮರೀಚಿಕೆ ಆಗಿಯೇ ಉಳಿದಿದೆ.

ಅಸ್ತಿತ್ವ ಕಳೆದುಕೊಂಡ ಉದ್ಯಾನಗಳು ಸಾಕಷ್ಟು ಪ್ರಮಾಣದಲ್ಲಿವೆ. ಕೆಲವು ಅಭಿವೃದ್ಧಿಯಾದರೂ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿಲ್ಲ. ಅಂತಹವುಗಳಲ್ಲಿ ಪಾಲಿಕೆ ಆವರಣದಲ್ಲೇ ಇರುವ ಉದ್ಯಾನ ಕೂಡ ಒಂದು.

ಕಳೆದ ಐದು ವರ್ಷದಿಂದ ಪಳಿಯುಳಿಕೆಯಂತಿದ್ದ ಉದ್ಯಾನವನ್ನು ₹33 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಹುಲ್ಲುಹಾಸು, ನೀರಿನ ಕಾರಂಜಿ (ಫೌಂಟೇನ್‌) ಒಳಗೊಂಡ ಸುಸಜ್ಜಿತ ಉದ್ಯಾನ ನಿರ್ಮಿಸಲಾಗಿದೆ. ಆದರೆ, ಗುತ್ತಿಗೆದಾರರು ಹಾಗೂ ಪಾಲಿಕೆ ಹಗ್ಗಜಗ್ಗಾಟದಿಂದ ಈವರೆಗೂ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿಲ್ಲ.

‘ಪಾಲಿಕೆಯ ಆವರಣ ಹಾಗೂ ಬಿಜಿಎಸ್‌ ವೃತ್ತದಲ್ಲಿ ದಿನಕ್ಕೊಂದು ಪ್ರತಿಭಟನೆ, ಧರಣಿ, ಜಾಥಾಗಳು ನಡೆಯುತ್ತವೆ. ಇಲ್ಲಿಗೆ ಬರುವವರು ಉದ್ಯಾನವನ್ನು ಹಾಳು ಮಾಡಬಹುದು. ಅಕ್ರಮ, ಅನೈತಿಕ ಚಟುವಟಿಕೆಗಳು ನಡೆಯಬಹುದು ಎಂಬ ಭೀತಿಯಿಂದ ಪಾಲಿಕೆ ಅಧಿಕಾರಿಗಳು ಈವರೆಗೂ ಉದ್ಯಾನವನ್ನು ಸುಪರ್ದಿಗೆ ಪಡೆದಿಲ್ಲ. ಹೀಗಾದರೆ, ಉದ್ಯಾನ ನಿರ್ಮಾಣದ ಉದ್ದೇಶಕ್ಕೆ ಅರ್ಥವೇ ಇರದು’ ಎಂದು ಸಾರ್ವಜನಿಕರು ಹಾಗೂ ಪರಿಸರ ಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎರಡು ಬಾರಿ ಅಭಿವೃದ್ಧಿ: ನಗರಸಭೆ ಅವಧಿಯಲ್ಲಿ ಉದ್ಯಾನಕ್ಕೆ ಫೆನ್ಸಿಂಗ್‌ ಹಾಕಲು ₹22 ಲಕ್ಷ ವ್ಯಯಿಸಲಾಗಿತ್ತು. ಈಗ ನಂಜುಂಡೇಶ್ವರ ಹೋಟೆಲ್‌ ಹಾಗೂ ಆವರಣದ ಉದ್ಯಾನ ಅಭಿವೃದ್ಧಿಗೆ ₹33 ಲಕ್ಷ ವ್ಯಯಿಸಲಾಗಿದೆ. ಉದ್ಯಾನವು ಸುಸಜ್ಜಿತವಾಗಿ ಅಭಿವೃದ್ಧಿಯಾಗಿದೆ. ಆದರೆ, ಆರು ತಿಂಗಳಿಂದ ಬೀಗ ಹಾಕಲಾಗಿದೆ. ಪಾಲಿಕೆ ಕಚೇರಿ, ಶಾಸಕರ ಕಚೇರಿಗೆ ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ಆವರಣದ ಮರಗಳ ನೆರಳಲ್ಲಿ ಕುಳಿತು ವಿಶ್ರಾಂತಿ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ.

ಉದ್ಯಾನದಲ್ಲಿ ಈ ಹಿಂದೆ ಮಳೆ ನೀರು ಸಂಗ್ರಹಕ್ಕೆ ತೊಟ್ಟಿ ನಿರ್ಮಿಸಲಾಗಿತ್ತು. ಆದರೆ, ವಾಸ್ತುದೋಷದ ಕಾರಣ ಅದನ್ನು ಮುಚ್ಚಿ ಹಾಕಲಾಗಿದೆ.

ಕಚೇರಿ ಎದುರಿನ ಉದ್ಯಾನ ನಾಶ: ‘ಪಾಲಿಕೆ ಕಚೇರಿ ಎದುರು ಕಿರು ಉದ್ಯಾನವನ್ನು ನಿರ್ಮಿಸಲಾಗಿತ್ತು. ಆದರೆ, ಈಚೆಗೆ ಕುಡಿಯುವ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸುವ ನೆಪದಲ್ಲಿ ಅದನ್ನು ಹಾಳು ಮಾಡಲಾಗಿದೆ. ಇಲ್ಲಿ ನಿರ್ಮಿಸಿದ್ದ ಆಳೆತ್ತರದ ಗೋಡೆ ಉರುಳಿಸಿ, ಬೇರೆ ಕಡೆ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಮುಂದಾಗಿದ್ದಾರೆ. ವೃಥಾ ಜನರ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ’ ಎಂದು ಸಾಮಾಜಿಕ ಹೋರಾಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT