ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಸಂವೇದನೆಯಿಂದ ಭೂಮಿ ರಕ್ಷಣೆ

Last Updated 24 ಏಪ್ರಿಲ್ 2017, 6:11 IST
ಅಕ್ಷರ ಗಾತ್ರ

ಶಿರಸಿ: ‘ಬದಲಾದ ಕಾಲಘಟ್ಟದಲ್ಲಿ ಮಾನವ ಸಂವೇದನೆ ಉಳಿಸಿಕೊಂಡು ಭೂಮಿಯ ಸ್ವಾಸ್ಥ್ಯ ಕಾಪಾಡಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ’ ಎಂದು ವಿಜ್ಞಾನ ಬರಹಗಾರ ನಾಗೇಶ ಹೆಗಡೆ ಬಕ್ಕೆಮನೆ ಹೇಳಿದರು.ಗಾಯತ್ರಿ ಗೆಳೆಯರ ಬಳಗವು ಭಾನುವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

‘ಮನುಷ್ಯರು ಅತಿ ಸುಖ ಬಯಸಿದ ಪರಿಣಾಮ ಪರಿಸರ ತುಳಿಯುವ ಕೆಲಸವಾಗುತ್ತಿದೆ. ನಾಗರಿಕತೆ ಅನಗತ್ಯ ಭೋಗದೆಡೆ ಸಾಗುತ್ತಿದೆ. ಮಾನವನ ಕೊಳ್ಳುಬಾಕ ಸಂಸ್ಕೃತಿ ಉದ್ದೀಪನಗೊಳಿಸಲು ಜಾಗತಿಕ ಶಕ್ತಿಗಳು ನಿರಂತರವಾಗಿ ಪ್ರಯತ್ನಿಸಿ ಬಹುತೇಕ ಯಶ ಕಂಡಿವೆ. ಇದರಿಂದಾಗಿ ದಿನದಿಂದ ದಿನಕ್ಕೆ ಭೂಮಿ ತನ್ನ ಅಸ್ತಿತ್ವ ಹಾಗೂ ಅಸ್ಮಿತೆಯನ್ನು ಕಳೆದುಕೊಂಡು ಬಿಸಿಯುಂಡೆಯಾಗುತ್ತಿದೆ. ವಾಸದ ಕ್ಷೇತ್ರ ದುರಂತದ ಕಡೆ ಸಾಗುತ್ತಿದೆ. ಪರಿಸರ ಪ್ರಜ್ಞೆ ಕಳೆದುಕೊಂಡ ಹೀನ ಮನಸ್ಸು ಹೆಚ್ಚಿದ ಪರಿಣಾಮ ಇಂತಹ ಅವಘಡಗಳು ಹೆಚ್ಚಿವೆ. ವರ್ತಮಾನ ಹಾಗೂ ಭವಿಷ್ಯದ ಪೀಳಿಗೆಯಲ್ಲಿ ಪರಿಸರ ಪ್ರೀತಿ ಬೆಳೆಸುವ ಅಗತ್ಯವಿದೆ’ ಎಂದರು.

‘ಪ್ರಕೃತಿ ವಿಕೋಪಕ್ಕಿಂತ ಮಾನವ ವಿಕೋಪ ಹೆಚ್ಚಿದೆ. ನಾಗರಿಕತೆಯ ಉತ್ತುಂಗಕ್ಕೇರಿದ ಸಮಾಜ ಸಹಸ್ರಾರು ವರ್ಷಗಳ ಹಿಂದಿನ ಮಾನವ ಜೀವನ ವನ್ನು ಹಿಂದೆ ಕೊಂಡೊಯ್ಯುತ್ತಿದ್ದರೂ ನಾವು ಜಾಗೃತರಾಗುತ್ತಿಲ್ಲ. ಮರುಭೂಮಿ ಯಲ್ಲಿ ಹಿಮಪಾತ, ಮರಳು ಬಿರುಗಾಳಿ, ಬೆಂಕಿ ಪ್ರಳಯ, ಸುನಾಮಿ ಹೆಚ್ಚುತ್ತಿದೆ. ಭೂಮಿಗೆ ನಾಜೂಕು ಸ್ಥಿತಿಗೆ ಬಂದಿದೆ. ಉದ್ಯಮ, ಸಂಚಾರ ಹಾಗೂ ಆಹಾರದ ಅನಿವಾರ್ಯತೆಯ ಭ್ರಮೆ ಹತ್ತಿಸಿದ ಸರ್ಕಾರ ಹಾಗೂ ಜಾಗತಿಕ ಶಕ್ತಿಗಳಿಂದ ಪರಿಸರ ನಾಶದ ಅಭಿವೃದ್ಧಿ ಹೆಚ್ಚಾಗು ತ್ತಿದೆ. ಕೈಗಾ, ಸೂಪರ್ ಥರ್ಮಲ್ ಘಟಕಗಳಿಗೆ ಹಣ ಸುರಿಯುವ ಬದಲಾಗಿ ಅದೇ ಹಣವನ್ನು ಜನಸಾಮಾನ್ಯರಿಗೆ ನೀಡಿದ್ದರೆ ಪರಿಸರ ಪೂರಕ ಅಭಿವೃದ್ಧಿಗೆ ನಾಂದಿ ಹಾಡಿದಂತಾಗುತ್ತಿತ್ತು’ ಎಂದರು.

ಪ್ರಪಂಚದಲ್ಲಿ 120ಕ್ಕೂ ಹೆಚ್ಚು ದೇಶಗಳು ಭೂಮಿ ದಿನಾಚರಣೆಯನ್ನು ಆಚರಿಸಿವೆ. ಆದರೆ ಹಲವು ಪರಿಸರ ಸಂಬಂಧಿ ಇಲಾಖೆಗಳು, ಮಂಡಳಿಗಳು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿವೆ. ಇವುಗಳಿಗೆ ವಿಶ್ವ ಭೂ ದಿನದ ಆಚರಿಸಲು ಸಮಯವಿಲ್ಲದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಗಾಯತ್ರಿ ಬಳಗದ ಪ್ರಮುಖರ ವಿ.ಜಿ. ಗಾಯತ್ರಿ ಮತ್ತು ಗೀತಾ ಅವರು ನಾಗೇಶ ಹೆಗಡೆಯವರ ‘ಭೋಗ ಪ್ರಳಯ ಮತ್ತು ಬಿಸಿಭೂಮಿ’ ಪುಸ್ತಕ ಬಿಡುಗಡೆಗೊಳಿಸಿದರು. ಸಿ.ಎನ್.ಹೆಗಡೆ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT