ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಕಿಯ ‘ಹೈಟೆಕ್‌ ನಂದಗೋಕುಲ’

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಅವರು ಎಂಜಿನಿಯರಿಂಗ್‌ ಪದವೀಧರ. 
ಇನ್ಫೋಸಿಸ್‌ ಸಂಸ್ಥೆಯಲ್ಲಿ 15 ವರ್ಷ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೈತುಂಬಾ ಸಂಬಳ ಪಡೆಯುತ್ತಿದ್ದರು. ಅದರಲ್ಲೂ ದಶಕದ ಕಾಲ ಅಮೆರಿಕ, ಸ್ವಿಡ್ಜರ್ಲೆಂಡ್‌ ಸೇರಿದಂತೆ 15 ದೇಶಗಳಲ್ಲಿ ಕರ್ತವ್ಯ ನಿರ್ವಹಿಸುವ ಅವಕಾಶ ಅವರದಾಗಿತ್ತು.

ಆದರೆ ದೇಹ ವಿದೇಶದಲ್ಲಿದ್ದರೂ, ಮನಸು ಗ್ರಾಮೀಣ ಬದುಕಿನತ್ತ ಸೆಳೆಯುತ್ತಿತ್ತು. ಕೊನೆಗೂ ಮನಸಿನ ಮಾತಿನಂತೆ ಐಟಿ ಉದ್ಯೋಗ ಕೈಬಿಟ್ಟು, ಹೈನುಗಾರಿಕೆಯನ್ನು ಅಪ್ಪಿಕೊಂಡ ಮೂಡುಬಿದಿರೆ ಸಮೀಪದ ಟೆಕಿಯ ‘ಹೈಟೆಕ್‌ ನಂದಗೋಕುಲ’ ಹಲವು ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ.
 
ಮೂಡುಕೊಣಾಜೆ ಗ್ರಾಮದ ಕಂಚರ್ಲಗುಡ್ಡೆಯ ಶಂಕರ ಕೋಟ್ಯಾನ್‌ ನಾಲ್ಕು ವರ್ಷಗಳಿಂದ ಹೈನೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. 5 ರಾಸುಗಳೊಂದಿಗೆ ಹೈನುಗಾರಿಕೆಗೆ ಮುನ್ನುಡಿ ಬರೆದ ಅವರು, ಹಟವಾದಿಯಂತೆ ಮುನ್ನುಗ್ಗಿ ಆ ಸಂಖ್ಯೆಯನ್ನು 40ಕ್ಕೆ ಏರಿಸಿದ್ದಾರೆ.
 
ಅವರ ಗೋಶಾಲೆಯಲ್ಲಿ ಎಚ್ಎಫ್‌, ಜರ್ಸಿ, ಮಿಶ್ರ ತಳಿ, ದೇಸಿ ತಳಿಯ ರಾಸುಗಳಿವೆ. ತಾವು ಪಡೆದ ತಾಂತ್ರಿಕ ಶಿಕ್ಷಣದ ಅನುಭವವನ್ನು ಗೋಶಾಲೆಯಲ್ಲಿ ಅಳವಡಿಸಿಕೊಂಡು, ಅನಗತ್ಯ ಮಾನವ ಶ್ರಮಕ್ಕೆ ಕಡಿವಾಣ ಹಾಕುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಮೊದಲೆರಡು ವರ್ಷ ಶಂಕರ್‌ ಕೈಸುಟ್ಟುಕೊಂಡರೂ, ಇದೀಗ ಲಾಭ ಗಳಿಕೆಯತ್ತ ಹೆಜ್ಜೆ ಹಾಕಿದ್ದಾರೆ.
 
ಬರಡು ಭೂಮಿಯಲ್ಲಿ ಕೃಷಿ ಮಾಡಲು ಹಿಂಜರಿಯುವವರೇ ಹೆಚ್ಚು. ಆದರೆ, ಶಂಕರ್ ಬರಡು ಭೂಮಿಯನ್ನೇ ಹಸಿರನ್ನಾಗಿಸಿದ್ದಾರೆ. ಇಳಿಜಾರು ಪ್ರದೇಶವಾಗಿದ್ದ 8 ಎಕರೆ ಭೂಮಿಯನ್ನು ಸಮತಟ್ಟು ಮಾಡಿದ್ದಾರೆ. ಎತ್ತರದ ಪ್ರದೇಶದಲ್ಲಿ ಗೋಶಾಲೆ ನಿರ್ಮಿಸಿದ್ದು, 4,000 ಚದರ ಅಡಿ ವಿಸ್ತ್ರೀರ್ಣ ಹೊಂದಿರುವ ಗೋಶಾಲಾ ಕಟ್ಟಡವನ್ನು ವ್ಯವಸ್ಥಿತವಾಗಿ ರಚಿಸಿದ್ದಾರೆ.
 
ಪ್ರತಿ ದನಕ್ಕೂ ಸ್ಥಳಾವಕಾಶ ಸಿಗುವಂತೆ ಕಬ್ಬಿಣದ ಸರಳನ್ನು ಸಮಾನಾಂತರದಲ್ಲಿ ಜೋಡಿಸಿದ್ದಾರೆ. ಅಲ್ಲದೆ, ಒಂದು ದನಕ್ಕೆ ಹಾಕಿದ ಮೇವು ಮತ್ತೊಂದು ದನ ಆಕ್ರಮಿಸದಂತೆಯೂ ಸರಳನ್ನು ಅಳವಡಿಸಿದ್ದಾರೆ. ಗೋಶಾಲೆಯಲ್ಲಿ ಹಸುಗಳಿಗೆ ಉತ್ತಮ ವಾತಾವರಣ ಇದ್ದರೆ ಅಧಿಕ ಇಳುವರಿ ಪಡೆಯಬಹುದು ಎಂಬುದು ಅವರ ಲೆಕ್ಕಾಚಾರ.
***
 
ಸೆಗಣಿ ನೀರಿನಿಂದಲೂ ಆದಾಯ
ಸೆಗಣಿಯನ್ನು ಬಯೋ ಗ್ಯಾಸ್‌ಗೆ ಬಳಸಿ, ಅದರ ಸ್ಲರಿಯನ್ನು (ಸೆಗಣಿ ನೀರು) ಕೂಡ ಶಂಕರ್‌ ಮಾರಾಟ ಮಾಡುತ್ತಿದ್ದಾರೆ. 40,000 ಲೀಟರ್‌ ಸಾಮರ್ಥ್ಯದ ಸ್ಲರಿ ಟ್ಯಾಂಕ್‌ ನಿರ್ಮಿಸಿರುವ ಅವರು, ಹಿಂದಿನ ಎರಡು ವರ್ಷದಲ್ಲಿ 3.5 ಲಕ್ಷ ಲೀಟರ್‌ಗೂ ಅಧಿಕ ಸ್ಲರಿ ಮಾರಾಟ ಮಾಡಿ, ಲಕ್ಷಾಂತರ ರೂಪಾಯಿ ಆದಾಯ ಗಳಿಸಿದ್ದಾರೆ. ಸೆಗಣಿ ನೀರನ್ನು ಗ್ರಾಹಕರ ತೋಟಕ್ಕೆ ಕೊಂಡೊಯ್ಯಲು ಬೇಕಾದ ವಾಹನ, ಟ್ಯಾಂಕ್‌ ವ್ಯವಸ್ಥೆ ಅವರ ಬಳಿ ಇದೆ.

ಹೀಗಾಗಿ, ಸ್ಥಳೀಯವಾಗಿ ಅದಕ್ಕೆ ಭಾರಿ ಬೇಡಿಕೆಯಿದೆ. ಇನ್ನು ಗಂಜಲ ಮತ್ತು ಕೊಟ್ಟಿಗೆ ತೊಳೆಯುವ ನೀರನ್ನು ಕೂಡ ಟ್ಯಾಂಕ್‌ ಮೂಲಕ ಸಂಗ್ರಹಿಸಿ ಅದನ್ನು ತಾವು ಬೆಳೆಯುವ ಹುಲ್ಲುಗಳಿಗೆ ಬಳಸುತ್ತಿದ್ದಾರೆ.
 
ಇಳಿಜಾರಿರುವ ಸ್ಥಳಕ್ಕೆ ಪೈಪ್‌ ಮೂಲಕ ನೇರಹರಿಸಿದರೆ, ಎತ್ತರದ ಪ್ರದೇಶಕ್ಕೆ ಮೋಟಾರ್‌ ಪಂಪ್‌ ಮೂಲಕ ಹರಿಸುತ್ತಿದ್ದಾರೆ. 5ರಿಂದ 6 ಎಕರೆ ಪ್ರದೇಶದಲ್ಲಿ ನೇಪಿಯರ್‌ ತಳಿ ಹುಲ್ಲನ್ನು ಬೆಳೆದಿರುವ ಅವರು, ಶೇ90 ಮೇವನ್ನು ತಾವೇ ಉತ್ಪಾದಿಸುತ್ತಿದ್ದಾರೆ.
 
‘ಸುರತ್ಕಲ್‌ನಲ್ಲಿ ಕಂಪ್ಯೂಟರ್‌ ಎಂಜಿನಿಯರಿಂಗ್‌ ಪದವಿ ಪಡೆದು 1996ರಲ್ಲಿ ಇನ್ಫೋಸಿಸ್‌ನಲ್ಲಿ ಉದ್ಯೋಗಕ್ಕೆ ಸೇರಿದೆ. ಐದೂವರೆ ವರ್ಷ ಬೆಂಗಳೂರಿನಲ್ಲೇ ಕರ್ತವ್ಯ ನಿರ್ವಹಿಸಿದೆ. ಹಲವು ದೇಶಗಳಲ್ಲಿ ದುಡಿವ ಅವಕಾಶ ದೊರಕಿತ್ತು.
 
ಆದರೆ ಮನಸ್ಸು ಹಳ್ಳಿ ಬದುಕನ್ನು ಹಂಬಲಿಸುತ್ತಿತ್ತು. ಸ್ವಿಡ್ಜರ್ಲೆಂಡ್‌ನಲ್ಲಿದ್ದಾಗ ಅಲ್ಲಿನ ವ್ಯವಸ್ಥಿತ ಹೈನುಗಾರಿಕೆಯನ್ನು ನೋಡಿದ್ದೆ. ಕೆಲವು ಗೋಶಾಲೆಗಳಿಗೆ ಭೇಟಿಯೂ ನೀಡಿದ್ದೆ. ಅದೇ ಸ್ಫೂರ್ತಿಯಿಂದ 2012ರಲ್ಲಿ ಈ ಜೀವನ ಶುರು ಮಾಡಿದೆ’ ಎನ್ನುತ್ತಾರೆ ಶಂಕರ್‌.
 
‘ಮೂಡುಕೋಣಾಜೆಯಲ್ಲಿ ಎಂಟು ಎಕರೆ ಗುಡ್ಡಜಾಗವನ್ನು ಖರೀದಿಸಿದೆ. ಹವಾನಿಯಂತ್ರಿತ ಕೊಠಡಿಯಲ್ಲಿ ಕೆಲಸ ಮಾಡಿದ್ದ ನನಗೆ ಮೊದಮೊದಲು ಬಿಸಿಲಲ್ಲಿ ಕೆಲಸ ಮಾಡುವುದು ತ್ರಾಸವಾಯಿತು.  
 
ಪ್ರತಿ ಹಂತದಲ್ಲೂ ನನ್ನ ಪತ್ನಿ ನಂದಿತಾ ಬಂಗೇರ, ಭಾವ ನವೀನ್‌ ಬಂಗೇರ ಸಾಥ್‌ ನೀಡಿದರು. ಮಾಸಿಕವಾಗಿ ₹ 30ರಿಂದ 40 ಸಾವಿರ ನಿವ್ವಳ ಲಾಭ ಬರುತ್ತಿದೆ. ಹಲವು ರಾಸುಗಳು ಗರ್ಭ ಧರಿಸಿವೆ. ಗೋಶಾಲೆಯ ಶೇ 75ರಷ್ಟು ಹಸುಗಳು ಹಾಲು ನೀಡಿದರೆ ಮಾಸಿಕ ₹ 70 ರಿಂದ 80 ಸಾವಿರ ಆದಾಯದ ನಿರೀಕ್ಷೆ ಇದೆ’ ಎನ್ನುತ್ತಾರೆ ಅವರು.
 
‘ನಮಗಿಬ್ಬರಿಗೂ ಯಾಂತ್ರಿಕ ಜೀವನ ಬೇಜಾರಾಗಿತ್ತು. ಮಾನವೀಯ ಸಂಬಂಧಕ್ಕೆ ನಮ್ಮಿಬ್ಬರ ಮನಸ್ಸು ಹಾತೊರೆಯುತ್ತಿತ್ತು. ಅದರಂತೆ ತವರಿಗೆ ಬಂದು ನಿಸರ್ಗದ ಮಧ್ಯೆ ಹೊಸ ಬದುಕು ಕಟ್ಟಿಕೊಂಡೆವು. ಎಲ್ಲಿಯೂ ಸಿಗದ ಆನಂದ ಈಗ ಸಿಗುತ್ತಿದೆ’ ಎನ್ನುತ್ತಾರೆ ಪತ್ನಿ ನಂದಿತಾ. ಸಂಪರ್ಕಕ್ಕೆ: 99011 83452. ****
ಲೆಕ್ಕಾಚಾರದಲ್ಲೇ ಜೀವನ
ಕೋಡಿಂಗ್‌ ಥಿಯರಿಯ ಜ್ಞಾನವನ್ನು ಹೊಂದಿರುವ ಶಂಕರ್‌ ಅವರು ತನ್ನ ಗೋಶಾಲೆಯ ನಡೆಯುವ ಪ್ರತಿಯೊಂದು ಆಗುಹೋಗುಗಳನ್ನು ಡೇಟಾಬೇಸ್‌ನಲ್ಲಿ ದಾಖಲಿಸುತ್ತಿದ್ದಾರೆ. ದಿನನಿತ್ಯದ ಹಾಲಿನ ಇಳುವರಿ, ಕೃತಕ ಗರ್ಭಧಾರಣೆಯ ದಿನಾಂಕ, ಕರು ಹಾಕಿದ ದಿನಾಂಕ ಸೇರಿದಂತೆ ನಾಲ್ಕು ವರ್ಷದ ಪ್ರತಿಯೊಂದು ಮಾಹಿತಿ ಅವರ ಸಂಗ್ರಹದಲ್ಲಿದೆ.

ಹಸುವಿನ ಇಳುವರಿ, ಬೆಳವಣಿಗೆಯ ಆಧಾರದಲ್ಲೇ ಅವುಗಳಿಗೆ ಆಹಾರ, ರೋಗನಿರೋಧಕ ಲಸಿಕೆ ನೀಡಲಾಗುತ್ತದೆ. ಡೇಟಾಬೇಸ್‌ನಲ್ಲಿ ಆಧಾರದಲ್ಲೇ ಲಾಭ–ನಷ್ಟದ ಲೆಕ್ಕಾಚಾರ, ಮುಂದಿನ ಕಾರ್ಯಯೋಜನೆ ಹಾಕುತ್ತಾರೆ. ಇಳುವರಿ ಕಡಿಮೆಯಾದರೆ ಅದರ ಹಿಂದಿರುವ ಕಾರಣವನ್ನು ಪತ್ತೆ ಹಚ್ಚಲು ಡೇಟಾಬೇಸ್‌ ಅನುಕೂಲವಾಗಿದೆ.
****
ಗೋಶಾಲೆ ಅಚ್ಚುಕಟ್ಟು
ಇವರ ಗೋಶಾಲೆಯಲ್ಲಿ ಎಲ್ಲವೂ ಅಚ್ಚುಕಟ್ಟು. ದನಗಳನ್ನು ತೊಳೆಯಲು, ಕೊಟ್ಟಿಗೆಯನ್ನು ಶುಚಿ ಮಾಡಲು ಆಧುನಿಕ ಉಪಕರಣವನ್ನು ಬಳಸಲಾಗುತ್ತಿದೆ. ಬೇಸಿಗೆಯಲ್ಲಿ ಅಧಿಕ ಉಷ್ಣಾಂಶ ಇರುವುದರಿಂದ ಮಧ್ಯಾಹ್ನ ಪ್ರತಿ ಅರ್ಧ ಗಂಟೆಗೊಮ್ಮೆ ದನಗಳಿಗೆ ನೀರು ಚಿಮುಕಿಸಲು ವ್ಯವಸ್ಥೆಯನ್ನೂ ಮಾಡಲಾಗಿದೆ.

ಬೇಕಾದ ಗಾತ್ರಕ್ಕೆ ಹುಲ್ಲನ್ನು ತುಂಡರಿಸುವ ಮತ್ತು ಪಶುಆಹಾರ ಮಿಶ್ರಣ ಮಾಡುವ ಯಂತ್ರವೂ ಇಲ್ಲಿವೆ. ಕೆಲ ರಾಸುಗಳಿಗೆ ವಿಮೆಯನ್ನೂ ಮಾಡಲಾಗಿದೆ. ಆರಂಭದ ದಿನಗಳಲ್ಲಿ ಮಾನವ ಶ್ರಮದಿಂದ ಹಸುಗಳ ಹಾಲನ್ನು ಕರೆಯಲಾಗುತ್ತಿತ್ತು. ಆದರೆ, ಅಧಿಕ ಇಳುವರಿಯ ದೃಷ್ಟಿಯಿಂದ ಎರಡು ವರ್ಷದಿಂದ ಹಾಲು ಕರೆಯಲು ಯಂತ್ರವನ್ನು ಬಳಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT