ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಹಕಟಾಂಜನ ಶಾಸನ : ಬೇಕಿದೆ ಅಧ್ಯಯನ

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಹತ್ತಿರದ ತಾಳಗುಂದಲ್ಲಿ ದೊರೆತ ಸಿಂಹಕಟಾಂಜನ ಶಾಸನ ಹಲ್ಮಿಡಿ ಶಾಸನಕ್ಕಿಂತ ಪುರಾತನವಾದದ್ದು ಎಂದು ‘ಹಿರಿತನ ತಂದ ಶಾಸನ’ ಎಂಬ ಶೀರ್ಷಿಕೆಯಲ್ಲಿ ಇದೇ 4ರಂದು ‘ಕರ್ನಾಟಕ ದರ್ಶನ’ ಪುರವಣಿಯಲ್ಲಿ ಪ್ರಕಟಗೊಂಡ ಲೇಖನಕ್ಕೆ ಈ ಪ್ರತಿಕ್ರಿಯೆ:
 
ಸಿಂಹಕಟಾಂಜನ ಶಾಸನ ಹಲ್ಮಿಡಿಗಿಂತ ಹಿಂದಿನದೆಂದು ಹೇಳಲು ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕಾಗಿದೆ. ಪುರಾತತ್ವ ಇಲಾಖೆ ಇದರ ಬಗ್ಗೆ ಪ್ರಕಟಿಸಿದ್ದರೂ ಈ ಬಗ್ಗೆ ಅವಸರದ ತೀರ್ಮಾನ ಬೇಡ. 
 
ಈ ಶಾಸನದಲ್ಲಿ ಕನ್ನಡ ಪದಗಳಿರುವುದು ಆರು ಮಾತ್ರ. ಹಾಗು ಈ ಶಾಸನ ವಜಿನಾಗ(ಯ್ಯ) ಎಂಬ ಅಂಬಿಗನಿಗೆ ಭೂಮಿಯನ್ನು ಉಡುಗೊರೆಯಾಗಿ ನೀಡಿದ ಬಗ್ಗೆ ಬೆಳಕು ಚೆಲ್ಲುತ್ತದೆ ಎಂದು ಪುರಾತತ್ವ ಇಲಾಖೆ ಪ್ರಕಟಿಸಿದೆ ಎಂದು ಲೇಖಕರು ಬರೆದಿದ್ದಾರೆ.
 
ಅದಷ್ಟೇ ಶಾಸನದ ಒಕ್ಕಣೆಯಾಗಿದ್ದರೆ ಶಾಸನದಲ್ಲಿ ಆ ಆರು ಪದಗಳು ಸೇರಿ ಹಾಗೆ ವಜಿನಾಗ(ಯ್ಯ) ಎಂಬ ಅಂಬಿಗನಿಗೆ ಭೂಮಿಯನ್ನು ಉಡುಗೊರೆಯಾಗಿ ನೀಡಿರುವ ಅರ್ಥ ಬರುವಂತೆ ಒಂದು ವ್ಯವಸ್ಥಿತ (ವ್ಯಾಕರಣಬದ್ಧ) ವಾಕ್ಯ ಇರಬೇಕಾಗುತ್ತದೆಯಷ್ಟೆ? ಅಂಥ ವಾಕ್ಯ ನಿಜವಾಗಿಯೂ ಅಲ್ಲಿದೆಯೆ? ಇದ್ದರೆ ಅದು ಹೇಗಿದೆ ಎಂಬುದನ್ನು ಲೇಖಕರು ಉಲ್ಲೇಖಿಸಬೇಕಾಗಿತ್ತು. ಹೋಗಲಿ, ಅದರಲ್ಲಿ ಅಂಬಿಗ ಎಂಬ ಅರ್ಥದ ಶಬ್ದ ಬಂದಿರುವುದಾದರೂ ಯಾವುದು? 
 
ಎರಡು ವರ್ಷಗಳ ಹಿಂದೆ ಕರ್ನಾಟಕ ಇತಿಹಾಸ ಅಕಾಡೆಮಿಯ ಸಮ್ಮೇಳನದಲ್ಲಿ ಈ ಶಾಸನದ ಬಗ್ಗೆ ಟಿ.ಎಂ. ಕೇಶವ ಅವರು ಸಚಿತ್ರವಾಗಿ ವಿಷಯಮಂಡನೆ ಮಾಡಿದ್ದರು. ಅದರ ಮಂಡನೆಗೆ ಮುಂಚೆ ಅವರು ಆ ಶಾಸನದ ಅಕ್ಷರಗಳಿರುವ ಕೆಲವು ಚಿತ್ರಗಳನ್ನು ನನಗೆ ತೋರಿಸಿದ್ದರು.
 
ನಾನು ಕಂಡಂತೆ ಆ ಶಾಸನದಲ್ಲಿ ಅಲ್ಲಲ್ಲಿ ಅಕ್ಷರಗಳು ಮುಕ್ಕಾಗಿದ್ದವಷ್ಟೇ ಅಲ್ಲ, ಕೆಲವಂತೂ ತುಂಬ ಅಸ್ಪಷ್ಟವಾಗಿದ್ದವು. ಅದರಲ್ಲಿರುವ ಎಲ್ಲ ಅಕ್ಷರಗಳೂ ಕೆಲವೆಡೆ ಬಿಡಿಪದಗಳಾಗಿ ಕೂಡುವಂತಿದ್ದರೂ ಪೂರ್ಣ ವಾಕ್ಯಗಳಾಗಿ ಸಂಯೋಜನೆಗೊಳ್ಳುವಂತಿರಲಿಲ್ಲ.
 
ಆ ಶಾಸನದ ಚಿತ್ರಗಳಲ್ಲಿ ಕಂಡ ನಾವಿದ ಎಂಬ ಶಬ್ದವನ್ನು ಟಿ.ಎಂ. ಕೇಶವ ಅವರು ನಾವಿಕ ಎಂದು ಅರ್ಥೈಸಿ ವಿವರಿಸಿದರು. ಆಗ ನಾನು ನಾವಿದ ಶಬ್ದಕ್ಕೆ ಆ ಅರ್ಥ ಇಲ್ಲವೆಂದೂ ಅದು ಕ್ಷೌರಿಕ ಅರ್ಥದ ಶಬ್ದ ಇರುವುದಾಗಿಯೂ ತಿಳಿಸಿದೆ.
 
ಅದನ್ನು ಅವರು ಪ್ರೀತಿಯಿಂದ ಸ್ವೀಕರಿಸಿದರಷ್ಟೇ ಅಲ್ಲ, ವಿಷಯ ಮಂಡನೆ ಮಾಡುವಾಗ ಆ ಶಬ್ದಕ್ಕೆ ತಾವು ಮೊದಲಿಗೆ ಇಟ್ಟುಕೊಂಡಿದ್ದ ಅರ್ಥವನ್ನು- ನನ್ನೊಂದಿಗೆ ಚರ್ಚಿಸಿದ ಮೇಲೆ ಮಾರ್ಪಡಿಸಿಕೊಂಡಿರುವುದಾಗಿಯೂ ಹೇಳಿದರು. ಇದರ ಬಗ್ಗೆ ಲೇಖನದಲ್ಲಿ ಸ್ಪಷ್ಟತೆ ಇರಬೇಕಿತ್ತು.
 
ಉತ್ಖನನದಲ್ಲಿ ಸಿಕ್ಕ ಇಟ್ಟಿಗೆಯ ನೆಲಹಾಸು, ಅಲ್ಲಿ ಸಿಕ್ಕ ‘ಕಾ’ ಅಕ್ಷರವಿರುವ ಕದಂಬರ ಕಾಲದ ಚಿನ್ನದ ಬೇಳೆಕಾಸು ಮತ್ತಿತರ ನಾಣ್ಯಗಳು, ಅದೇ ಕಟಾಂಜನದಲ್ಲಿರುವ ಇನ್ನೊಂದು ತುಂಡರಿಸಿದ ಶಾಸನ- ಇಷ್ಟರಿಂದಲೇ ಈ ಶಾಸನ ಹಲ್ಮಿಡಿಗಿಂತ ಪೂರ್ವದ್ದು ಎಂದು ತೀರ್ಮಾನಿಸಲು ಆಗುವುದಿಲ್ಲ.
 
ಏಕೆಂದರೆ ಕನ್ನಡದ ಅತ್ಯಂತ ಪ್ರಾಚೀನ ಶಾಸನವೆಂದು ತಿಳಿಯಲಾಗಿರುವ ಹಲ್ಮಿಡಿ ಶಾಸನ, ಅಷ್ಟೇ ಪ್ರಾಚೀನವಾದ ತಾಳಗುಂದದ ಸ್ತಂಭಶಾಸನ, ಅದಕ್ಕಿಂತ ಪ್ರಾಚೀನವಾದ ಮಳವಳ್ಳಿ ಶಾಸನ, ಇವೆಲ್ಲ ಯಾವ ಭೂಮಿಯ ಅಡಿಯಲ್ಲೂ ಸಿಕ್ಕಿದವಲ್ಲ. ಈ ಎಲ್ಲಾ ಕಾರಣಗಳಿಂದಲೇ ನನ್ನಂಥ ಇತಿಹಾಸ ತಜ್ಞರು, ಸಾಹಿತಿಗಳು ಈ ಹೊಸ ಶಾಸನದ ಬಗ್ಗೆ ಮೌನ ತಾಳಿರಬಹುದು. ಆದ್ದರಿಂದ ಈ ಮೌನವನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು ಸರಿಯಲ್ಲ. -ಡಾ. ಬಿ. ರಾಜಶೇಖರಪ್ಪ, ಇತಿಹಾಸ ಸಂಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT