ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಕು ವಾಹನದಲ್ಲಿ ಕರೆದೊಯ್ದರೆ ಕ್ರಮ

Last Updated 25 ಏಪ್ರಿಲ್ 2017, 4:42 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವಂತಹ ಪ್ರಕರಣಗಳು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು  ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ಶ್ರೀರಂಗಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸರಕು ಸಾಗಣೆ ವಾಹನಗಳನ್ನು ತಪಾಸಣೆ ಮಾಡಿ. ಪ್ರಯಾಣಿಕರನ್ನು ಕರೆದೊಯ್ಯುವ ಪ್ರಕರಣಗಳು ಕಂಡು ಬಂದರೆ, ಕ್ರಮ ಕೈಗೊಳ್ಳಿ’ ಎಂದು ಸೂಚಿಸಿದರು.

‘ಪ್ರಯಾಣಿಕರ ಆಟೊಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವುದು ಅಪರಾಧ.  ಇಂಥ ವಾಹನಗಳನ್ನು ಪೊಲೀಸರು ಗಮನಿಸಿ ಕ್ರಮ ಕೈಗೊಳ್ಳಬೇಕು’ ಎಂದರು.

‘ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ವ್ಯಾಪ್ತಿಯಲ್ಲಿ 250 ಮೀಟರ್‌ ಒಳಗೆ ಖಾಸಗಿ ಬಸ್ ನಿಲ್ಲಿಸುವಂತಿಲ್ಲ. ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಂತಿಲ್ಲ. ನಿಯಮವಿದ್ದರೂ ಅದನ್ನು ಖಾಸಗಿ ಬಸ್‌ನವರು ಪಾಲಿಸುತ್ತಿಲ್ಲ. ಈ ಕುರಿತು ಖಾಸಗಿ ಬಸ್‌ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು’ ಎಂದು ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗದ ಡಿಟಿಒ ಅರುಣ್‌ಕುಮಾರ್ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದರು. ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಲಿಂಗಾರೆಡ್ಡಿ, ‘ಚಳ್ಳಕೆರೆ ಮತ್ತು ಹೊಸದುರ್ಗದ ಖಾಸಗಿ ಬಸ್ ನಿಲ್ದಾಣಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ಲಿಸಲು ಅವಕಾಶ ನೀಡುತ್ತೇವೆ. ನಮ್ಮ ವಾಹನಗಳನ್ನೇಕೆ ನಿಲ್ಲಿಸಬಾರದು’ ಎಂದು ಸಭೆಯಲ್ಲಿ ಪ್ರಶ್ನಿಸಿದರು.

‘ಖಾಸಗಿ ಬಸ್‌ ಮಾಲೀಕರು ನಾವೇ ನಿಲ್ದಾಣ ನಿರ್ಮಿಸಿಕೊಂಡವರ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ನಗರಸಭೆ, ಪುರಸಭೆಯಿಂದ ಜಾಗ ಪಡೆದು ನಿರ್ಮಿಸಿಕೊಟ್ಟಿದ್ದೇವೆ. ನಿಮಗೂ ಅನುಕೂಲ ಮಾಡಿಕೊಟ್ಟಿದ್ದೇವೆ. ಪ್ರತ್ಯೇಕವಾಗಿ ನಿಮಗೆ ನಿಲ್ದಾಣ ಬೇಕೆಂದರೆ 2 ಎಕರೆ ಜಾಗ ಖರೀದಿಸಿ ನಿಲ್ದಾಣ ನಿರ್ಮಿಸಿಕೊಳ್ಳಿ. ಅಲ್ಲಿ ಒಂದೂ ಕೆಎಸ್‌ಆರ್‌ಟಿಸಿ ಬಸ್‌ ನಿಲ್ಲದ ರೀತಿಯಲ್ಲಿ ನಾವು ನೋಡಿಕೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು.

‘ಹಳ್ಳಿಗಳಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಏಕಕಾಲಕ್ಕೆ (10 ರಿಂದ 15 ನಿಮಿಷ ವ್ಯತ್ಯಾಸ)  ಸಂಚರಿಸುವುದರಿಂದ ಪಟ್ಟಣ ಮತ್ತು ನಗರ ಪ್ರದೇಶಕ್ಕೆ ಬರುವ ನೌಕರರು, ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಆದ್ದರಿಂದ ಬಸ್‍ ಸಂಚಾರದ ನಡುವೆ ಕನಿಷ್ಠ ಒಂದು ಅಥವಾ ಎರಡು ಗಂಟೆಗಳಾದರೂ  ವ್ಯತ್ಯಾಸವಿದ್ದರೆ ತುಂಬಾ ಅನುಕೂಲವಾಗುತ್ತದೆ. ಆದ್ದರಿಂದ ಸಮಯದ ವಿಚಾರದಲ್ಲಿ ಸೌಹಾರ್ದತೆ, ಹೊಂದಾಣಿಕೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

‘ಚಿತ್ರದುರ್ಗ – ಚಳ್ಳಕೆರೆ ಮಾರ್ಗದಲ್ಲಿ ಖಾಸಗಿ ಬಸ್‌ಗಳು ₹ 35 ಪ್ರಯಾಣ ದರ ಪಡೆಯುತ್ತಿವೆ. ಆದರೆ, ಕೆಎಸ್‌ಆರ್‌ಟಿಸಿ ಬಸ್‌ನವರು ₹ 30 ಪ್ರಯಾಣ ದರ ನಿಗದಿಪಡಿಸಿದ್ದಾರೆ. ಇದರಿಂದಾಗಿ ನಮಗೆ ತೊಂದರೆ ಆಗಿದೆ’ ಎಂದು ಖಾಸಗಿ ಬಸ್‍ ಮಾಲೀಕರೊಬ್ಬರು ಎದುರು ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಶ್ರೀರಂಗಯ್ಯ, ‘ತೈಲ ಬೆಲೆ ಕಡಿಮೆಯಾದಾಗ ಸಾರಿಗೆ ಬಸ್ ಪ್ರಯಾಣ ದರ ಇಳಿಯುತ್ತದೆ. ಆದರೆ, ಖಾಸಗಿ ಬಸ್‌ಗಳು ಮಾತ್ರ ಇಳಿಕೆ ಮಾಡುವುದಿಲ್ಲ. ನಿಮ್ಮ ಬೇಡಿಕೆ ಸಮಂಜಸವಲ್ಲ’ ಎಂದರು.

ಹೊಸ ಮಾರ್ಗಗಳಿಗೆ ಪರವಾನಗಿ:  ಅರಸೀಕೆರೆ– ಚಿತ್ರದುರ್ಗ, ಬೇಲೂರು– ಚಿತ್ರದುರ್ಗ ಮಾರ್ಗಕ್ಕೆ ಕೆಎಸ್ಆರ್‌ಟಿಸಿಯಿಂದ ಹೊಸ 2 ಪರವಾನಗಿಗೆ ಸಭೆ ಅನುಮೋದನೆ ನೀಡಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್ ರಂಗರಾಜನ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಪಿ.ಚಂದ್ರಶೇಖರನ್ ಹಾಗೂ ವಿವಿಧ ಖಾಸಗಿ ಬಸ್ ಮಾಲೀಕರು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT