ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಭದ್ರೇಶ್ವರ ಜಾತ್ರೆ: ಪ್ರಭಾವಳಿ ಉತ್ಸವ ಇಂದು

Last Updated 25 ಏಪ್ರಿಲ್ 2017, 5:53 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಸುಲೇಪೇಟ ಗ್ರಾಮದ ಆರಾಧ್ಯ ದೇವ, ಪುರಾಣ ಪ್ರಸಿದ್ಧಿಯ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಮಂಗಳವಾರ ಬೆಳಿಗ್ಗೆ ಪ್ರಭಾವಳಿ ಉತ್ಸವ, ಅಗ್ನಿಪ್ರವೇಶ ಮತ್ತು ಸಂಜೆ 6ಕ್ಕೆ ರಥೋತ್ಸವ ನಡೆಯಲಿದೆ.

ಒಂದು ತಿಂಗಳು ಕಾಲ ನಡೆಯುವ ಜಿಲ್ಲೆಯ ಪ್ರಮುಖ ಜಾತ್ರಾ ಮಹೋತ್ಸವಗಳಲ್ಲಿ ಒಂದಾದ ಸುಲೇಪೇಟ ವೀರಭದ್ರೇಶ್ವರ ಜಾತ್ರೆಯಲ್ಲಿ ಯುಗಾದಿ ಅಮಾವಾಸ್ಯೆಯಿಂದ 21 ದಿನಗಳ ಕಾಲ ಪ್ರತಿದಿನ ರಾತ್ರಿ 7ರಿಂದ 9ರವರೆಗೆ ಜೋಡಿ ಪಲ್ಲಕ್ಕಿ ಉತ್ಸವ, 9 ದಿನಗಳ ಕಾಲ ಬೆಳಿಗ್ಗೆ 7 ರಿಂದ 9.30ರವರೆಗೆ ಜೋಡಿ ಪಲ್ಲಕ್ಕಿ ಜತೆಗೆ ಉಚ್ಚಾಯಿ ಮೆರವಣಿಗೆ ಕೊನೆಯ ದಿನ ಪ್ರಭಾವಳಿ ಉತ್ಸವ  ನಡೆಯಲಿದೆ. ಅಗ್ನಿ ಪ್ರವೇಶ ಮತ್ತು ಸಂಜೆ ರಥೋತ್ಸವ ಜರುಗಲಿದೆ.

ವೀರಭದ್ರೇಶ್ವರ ಜಾತ್ರೆ ಮುಗಿಯುವವರೆಗೆ  ಸುಲೇಪೇಟದಲ್ಲಿ ಮದುವೆ ಮುಂಜಿಯಂತಹ ಶುಭ ಕಾರ್ಯಗಳು ನಡೆಯುವುದಿಲ್ಲ.  ವ್ಯಾಪಾರಸ್ಥರು ಹಾಗೂ ರೈತಾಪಿ ಜನರ ಆರಾಧ್ಯದೇವ ಎನಿಸಿದ ವೀರಭದ್ರೇಶ್ವರ ಬೇಡಿ ಬಂದ ಭಕ್ತರ ಕಷ್ಟ ಕಳೆಯುವ ಭಾಗ್ಯದಾತ ಎನಿಸಿದ್ದಾರೆ. ಅಂತೆಯೇ ಶತಮಾನಗಳಿಂದಲೂ ಅತ್ಯಂತ ಭಕ್ತಿ ಶ್ರದ್ಧೆಯಿಂದ ಜಾತ್ರಾ ಮಹೋತ್ಸವ ನಡೆಸಲಾಗುತ್ತಿದೆ.

ಪ್ರಮುಖ ಆಕರ್ಷಣೆ: ಜಾತ್ರೆಯ ಪ್ರಮುಖ ಆಕರ್ಷಣೆಯೆಂದರೆ ಪ್ರಭಾವಳಿ ಉತ್ಸವ. ಇದು ಯುವ ಭಕ್ತರ ಆಮಿತೋತ್ಸವದ ಪ್ರತೀಕ ನಡೆಯುವ ಸಾಹಸಮಯ ಆಚರಣೆ. ಸುಲೇಪೇಟ ಹಳೆ ಊರು ಮತ್ತು ಹೊಸ ಊರಿನ ಯುವ ಭಕ್ತರು ಎರಡು ಗುಂಪುಗಳಾಗಿ ಪ್ರಭಾವಳಿ ಹೊತ್ತು ಮೆರವಣಿಗೆ ನಡೆಸುತ್ತಾರೆ.

ಎರಡು ಬೃಹತ್‌ ಮರಗಳ ದಿನ್ನೆಯ ಮೇಲೆಯ ಕಟ್ಟಿಗೆಯ ಹಲಗೆ ಜೋಡಿಸಿ ವಿವಿಧ ಅಲಂಕಾರಿಕ ವಸ್ತುಗಳಿಂದ ಪ್ರಭಾವಳಿ ನಿರ್ಮಿಸಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ. ಒಂದು ಮರದ ದಿನ್ನೆಯನ್ನು ಹಳೆ ಊರಿನವರು, ಇನ್ನೊಂದು ಮರದ ದಿನ್ನೆಯನ್ನು ಹೊಸ ಊರಿನವರು ಇನ್ನೊಂದು ಮರದ ದಿನ್ನೆಯನ್ನು ಹಳೆ ಊರಿನವರು ಹೊತ್ತು ಮೆರವಣಿಗೆ ನಡೆಸುತ್ತಾರೆ.

ಒಮ್ಮೆ ಹೊಸ ಊರಿನವರ ಕೈ ಮೇಲಾದರೆ ಮತ್ತೊಮ್ಮೆ ಹಳೆ ಊರಿನವರ ಕೈ ಮೇಲಾಗುತ್ತದೆ. ಆಗ ಪ್ರಭಾವಳಿಯಲ್ಲಿ ನಿಂತ ಸ್ವಾಮೀಜಿ ತಮ್ಮ ಸ್ಥಾನ ಪಲ್ಲಟ ಮಾಡಿ ಪ್ರಭಾವಳಿಯ ಸಮತೋಲನ ಕಾಪಾಡುತ್ತಾರೆ.

ಇಡಿ ಉತ್ಸವ ಅತ್ಯಂಕ ಆಕರ್ಷಕ ಮತ್ತು ಯುವ ಭಕ್ತರ ಶ್ರದ್ಧೆಯು ಪ್ರತೀಕವಾಗಿ ಕಣ್ಮನ ಸೆಳೆಯುತ್ತದೆ. ಪ್ರಭಾವಳಿ ವೀರಭದ್ರೆಶ್ವರ ದೇವಾಲಯದಿಂದ ಮುಖ್ಯರಸ್ತೆಗಳ ಮೂಲಕ ಖಟ್ವಾಂಗೇಶ್ವರ ಮಠದ ಬಳಿಯ ತೇರು ಮೈದಾನಕ್ಕೆ ಬಂದು ಅಗ್ನಿ ಕುಂಡಕ್ಕೆ ಐದು ಸುತ್ತ ಹಾಕಿದ ಮೇಲೆ ಸಂಪ್ರದಾಯದಂತೆ ಅಗ್ನಿಪ್ರವೇಶ (ಕೆಂಡ ಕಾಯುವುದು) ನಡೆಯುತ್ತದೆ. 

‘ಇದನ್ನು ನೋಡಲು ಸುತ್ತಲಿನ ಹತ್ತಾರು ಹಳ್ಳಿಗಳ ಸಹಸ್ರಾರು ಭಕ್ತರು ಬಂದು ಉತ್ಸವದಲ್ಲಿ ಭಾಗಿಯಾಗುತ್ತಾರೆ’ಎಂದು ಯುವ ಮುಖಂಡ ಮಹೇಶ ಬೇಮಳಗಿ ತಿಳಿಸಿದರು.

ಸಚಿವರಿಂದ ದರ್ಶನ: ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರು ಅವರೊಂದಿಗೆ ಒಂದು ದಿನ ಮುಂಚೆಯೇ (ಸೋಮವಾರ) ಗ್ರಾಮಕ್ಕೆ ಬಂದು ದೇವಾಲಯಕ್ಕೆ ತೆರಳಿ ಕರ್ಪೂರ ಬೆಳಗಿ ತೆಂಗಿನಕಾಯಿ ಒಡೆದು ವೀರಭದ್ರೇಶ್ವರ ದರ್ಶನ ಪಡೆದರು.

‘ದೇವಾಲಯದ ಗೋಪುರದ ಬಲವರ್ಧನೆ ಜತೆಗೆ ನವೀಕರಣ ಕಾರ್ಯ ಕೈಗೊಳ್ಳಬೇಕು’ ಎಂದು ಬಸವರಾಜ ವಿ. ಸಜ್ಜನ್‌ ಅವರು ಸಚಿವರಿಗೆ ಮನವಿ ಮಾಡಿದರು.  ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು ‘ಮುಜರಾಯಿ ಇಲಾಖೆಯ ಮಂದಿರಗಳ ಪಟ್ಟಿಯಲ್ಲಿ ಅಥವಾ ಪುರಾತತ್ವ ಇಲಾಖೆಯ ಪಟ್ಟಿಯಲ್ಲಿ ಈ ದೇವಾಲಯ ಇರುವ ಬಗ್ಗೆ ಪರಿಶೀಲಿಸಿ, ಕ್ರಮ ಕೈಗೊಳ್ಳುತ್ತೇನೆ’ ಎಂದರು.

‘ರಥೋತ್ಸವ ಹಾಗೂ ಪ್ರಭಾವಳಿ ಉತ್ಸವದ ದಿನ ಸಚಿವರ ಬೇರೆಡೆ ಪ್ರವಾಸ ಇರುವುದರಿಂದ ಒಂದು ದಿನ ಮುಂಚಿತವಾಗಿ ಬಂದು ದರ್ಶನ ಮಾಡಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ ತಿಳಿಸಿದರು.

ಅಮರೇಶ ಗೋಣಿ, ಅಂಬರೀಷ ಗಾಂಗಜಿ, ಉಮಾಶಂಕರ, ಮಹಾರುದ್ರಪ್ಪ, ನಸೀರ್‌  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT