ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಕಟ್ಟು – ಕಥನ ಕೌತುಕದ ಜುಗಲ್‌ಬಂದಿ

Last Updated 28 ಏಪ್ರಿಲ್ 2017, 11:50 IST
ಅಕ್ಷರ ಗಾತ್ರ

ಅತಿರಂಜಿತ ದೃಶ್ಯಾವಳಿಗಳು ಪ್ರಧಾನವಾಗಿ, ಕಥೆ ಹಿನ್ನೆಲೆಗೆ ಸರಿದಿದ್ದ ‘ಬಾಹುಬಲಿ’ಯ ಮುಂದುವರೆದ ಆವೃತ್ತಿ ಅದಕ್ಕೆ ವಿರುದ್ಧವಾದ ದೆಸೆಯಲ್ಲಿದೆ. ರಂಜನೆಗಿಂತ ಮುಖ್ಯವಾಗಿ ಇಲ್ಲಿ ಕಥೆ ಹೇಳುವ ನಿರ್ದೇಶಕರ ಉಮೇದು ಕಾಣಿಸುತ್ತದೆ. ಭೋರ್ಗರೆವ ಜಲಪಾತದ ಮೊರೆತ, ಬಣ್ಣಬಣ್ಣದ ಹೂದೋಟದ ವಿಹಾರ, ಪ್ರೇಮವಿಲಾಸದ ಸಂಗತಿಗಳನ್ನು ಲವಲವಿಕೆಯಿಂದ ಹಾಗೂ ರಣರಂಗದಲ್ಲಿನ ಯುದ್ಧೋನ್ಮಾದವನ್ನು ಅಷ್ಟೇ ವೇಗವಾಗಿ ಚಿತ್ರಿಸಿದ್ದ ನಿರ್ದೇಶಕ ರಾಜಮೌಳಿ, ಇಲ್ಲಿ ತಮ್ಮ ಧಾಟಿಯನ್ನು ತುಸು ಬದಲಿಸಿದ್ದಾರೆ.

ಪ್ರಕೃತಿಯ ಸೌಂದರ್ಯವನ್ನು ಚಿತ್ತಾಕರ್ಷಕವಾಗಿ ಚಿತ್ರಿಸುವಷ್ಟು ಕಾಲಾವಕಾಶ ಇಲ್ಲಿಲ್ಲ. ಅಮರೇಂದ್ರ ಬಾಹುಬಲಿ ಮತ್ತು ಕುಂತಲ ದೇಶದ ಯುವರಾಣಿ ದೇವಸೇನಾಳ ಪ್ರೇಮಸಲ್ಲಾಪದ ದೃಶ್ಯಗಳನ್ನು, ಶಿವುಡು ಮತ್ತು ಆವಂತಿಕಾಳ ಪ್ರೇಮಕಥನದಷ್ಟು ರಸಮಯವಾಗಿ ಕಟ್ಟಿಕೊಡುವಷ್ಟು ಸಾವಧಾನವೂ ಇಲ್ಲ. ಇಲ್ಲಿ ಭೂತಕಾಲದಲ್ಲಿ ಜರುಗಿದ ಸುದೀರ್ಘ ಕಥನವನ್ನು ವೇಗವಾಗಿ ಹೇಳುವ ಅನಿವಾರ್ಯತೆ ಇದೆ. ‘ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ’ ಎಂಬ ಕುತೂಹಲ ತಣಿಸುವ ಜೊತೆಯಲ್ಲಿ, ಆ ಕೊಲೆಯ ನಂತರದ ಸೇಡಿನ ಅಧ್ಯಾಯವನ್ನು ಪೂರ್ಣಗೊಳಿಸುವ ಆತುರವಿದೆ.

ದೃಶ್ಯ ಶ್ರೀಮಂತಿಕೆಯ ಮೂಲಕವೇ ‘ಬಾಹುಬಲಿ’ಯ ಮೊದಲ ಭಾಗ ಹೆಚ್ಚು ಗಮನ ಸೆಳೆದಿತ್ತು. ಅನಾಥನಾಗಿ ನದಿಯಲ್ಲಿ ಸಿಕ್ಕಿ, ನೆಚ್ಚಿನ ಮಗನಾಗಿ ಬೆಳೆಯುವ ಶಿವುಡುವಿನ ಸಾಹಸ ಮತ್ತು ಆತನ ಪ್ರೇಮಕಥೆಗೇ ಹೆಚ್ಚು ಆದ್ಯತೆ ದೊರೆತಿತ್ತು. ತನ್ನ ನೆಚ್ಚಿನ ಸೇನಾನಿಯಿಂದಲೇ ಹತ್ಯೆಯಾಗುವ ಬಾಹುಬಲಿಯ ಸಾವಿನ ಹಿಂದಿನ ರಹಸ್ಯ, ಮುಂದುವರಿದ ಆವೃತ್ತಿಯ ಕುರಿತ ಕೌತುಕವನ್ನು ಉಳಿಸಿತ್ತು. ಕಥೆಯ ವಿಸ್ತರಣೆಯೊಂದಿಗೆ ಆ ಕೌತುಕವನ್ನು ವೇಗದ ನಿರೂಪಣೆಯೊಂದಿಗೆ ಬಿಡಿಸಿದ್ದಾರೆ ರಾಜಮೌಳಿ.

ಮಾಹಿಷ್ಮತಿಯ ರಾಜನಾಗಿ ಪಟ್ಟಕ್ಕೇರುವ ಮುನ್ನ ಲೋಕಜ್ಞಾನ ಪಡೆದುಕೊಳ್ಳಬೇಕೆಂಬ ಅಮ್ಮನ ಆಶಯಕ್ಕೆ ಅನುಗುಣವಾಗಿ ಕುಂತಲ ದೇಶಕ್ಕೆ ತೆರಳುವ ಅಮರೇಂದ್ರ ಬಾಹುಬಲಿಗೆ, ಅಲ್ಲಿನ ಯುವರಾಣಿ ದೇವಸೇನಾ ಒಲಿಯುತ್ತಾಳೆ. ಮಾಹಿಷ್ಮತಿಯ ರಾಜಮನೆತನಕ್ಕೆ ಸೇರಿದವರೆಂಬ ಗುಟ್ಟು ಬಿಟ್ಟುಕೊಡದೆ ಬಾಹುಬಲಿ ಮತ್ತು ಕಟ್ಟಪ್ಪ ಮುಗ್ಧರಂತೆ ನಟಿಸುವ ಸನ್ನಿವೇಶಗಳನ್ನು, ಮೊದಲಾರ್ಧದಲ್ಲಿ ಮನರಂಜನೆ ಉಣಬಡಿಸುವ ಸೂತ್ರಕ್ಕೆ ಬದ್ಧವಾಗುವ ಸಲುವಾಗಿ ಹಿಗ್ಗಿಸಲಾಗಿದೆ. ಬಾಹುಬಲಿಯ ಶಕ್ತಿ ಸಾಮರ್ಥ್ಯವನ್ನು ಬಹಿರಂಗಪಡಿಸಲೆಂದೇ ಯುದ್ಧದ ಸನ್ನಿವೇಶ ಸೃಷ್ಟಿಯಾಗಿದೆ. ಪ್ರೀತಿಯನ್ನು ಉಳಿಸಿಕೊಳ್ಳುವ ಕಾರಣಕ್ಕೆ ರಾಜಮಾತೆಯ ಆಜ್ಞೆಯನ್ನು ಮೀರುವ ಬಾಹುಬಲಿ, ಬಲ್ಲಾಳದೇವನ ಕುತಂತ್ರದಿಂದ ರಾಜ್ಯಭ್ರಷ್ಟನೂ ಆಗುತ್ತಾನೆ. ಆ ಸಂಚು ಆತನ ಸಾವಿಗೂ ಕಾರಣವಾಗುತ್ತದೆ. ಹಳೆಯ ಕಥೆಯ ಕೊಂಡಿಯೊಂದಿಗೆ ಹೊಸತನ್ನು ಬೆಸೆಯುವ ಚಿತ್ರದ ಅಂತ್ಯ ಊಹೆಯಂತೆಯೇ ನಡೆಯುತ್ತದೆ.

ಗ್ರಾಫಿಕ್ಸ್‌ ತಂತ್ರಜ್ಞಾನದಿಂದ ಸೃಷ್ಟಿಯಾದ ಭವ್ಯ ಮಾಹಿಷ್ಮತಿ ಮತ್ತು ಕುಂತಲ ಸಾಮ್ರಾಜ್ಯಗಳು, ಹಡಗನ್ನು ವಿಮಾನದಂತೆ ಹಾರಿಸುವ ದೃಶ್ಯಗಳು ಕಲ್ಪನಾಲೋಕಕ್ಕೆ ಕೊಂಡೊಯ್ಯುತ್ತವೆ. ಯುದ್ಧದ ಸನ್ನಿವೇಶಗಳಲ್ಲಿ ಹಿಂದಿನದೇ ತೀವ್ರತೆಯಿದೆ. ಬಾಹುಬಲಿಯ ಎರಡೂ ಅವತಾರಗಳಲ್ಲಿ ಪ್ರಭಾಸ್‌ ಅತಿಮಾನುಷ ಶಕ್ತಿಯಾಗಿ ಕಾಣಿಸುತ್ತಾರೆ. ಇದಕ್ಕೆ ರಾಣಾ ದಗ್ಗುಬಾಟಿ ಸರಿಸಾಟಿಯಾಗಿ ನಿಲ್ಲುತ್ತಾರೆ.

ಮೊದಲ ಭಾಗದಲ್ಲಿ ಸೌಂದರ್ಯ ಮತ್ತು ಆವೇಶದ ಸೆಲೆಯಾಗಿದ್ದ ತಮನ್ನಾ ಇಲ್ಲಿ ನೆಪಮಾತ್ರಕ್ಕೆ ಇದ್ದಾರೆ. ಚಿತ್ರದಲ್ಲಿ ಹೆಚ್ಚು ಆವರಿಸಿಕೊಳ್ಳುವುದು ರಮ್ಯಕೃಷ್ಣ ಮತ್ತು ಅನುಷ್ಕಾ ಶೆಟ್ಟಿ ಅವರ ಪಾತ್ರಗಳು. ಕಥೆಯಲ್ಲಿನ ರೋಚಕತೆ ಸಿನಿಮಾದಲ್ಲಿ ಪ್ರಮುಖವಾದರೂ, ಅದಕ್ಕೆ ಸಿರಿವಂತಿಕೆ ತುಂಬುವುದು ತಾಂತ್ರಿಕತೆ. ಸೆಂದಿಲ್‌ ಕುಮಾರ್‌ ಛಾಯಾಗ್ರಹಣ, ಎಂ.ಎಂ. ಕೀರವಾಣಿ ಸಂಗೀತ ಮತ್ತು ಕೊಟಗಿರಿ ವೆಂಕಟೇಶ್ವರ ರಾವ್‌ ಸಂಕಲನದಲ್ಲಿನ ಶ್ರಮಕ್ಕೆ ಹೆಚ್ಚು ಅಂಕ ಸಲ್ಲುತ್ತದೆ. ಕಾಲ್ಪನಿಕ ಕಥೆಯೊಂದನ್ನು ಅದ್ದೂರಿಯಾಗಿ, ರಂಜನೀಯವಾಗಿ ಹಾಗೂ ಭಾವತೀವ್ರತೆಯಲ್ಲಿ ಹೇಳಿರುವ ಕಾರಣಕ್ಕಾಗಿ ರಾಜಮೌಳಿ ಅವರ ಈ ಚಿತ್ರ ಗಮನಸೆಳೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT