ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆಯಾಗು ಮನವೇ...

Last Updated 28 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಕವಿತೆಗೂ ಹೆಣ್ಣುಮಕ್ಕಳಿಗೂ ಅದೆಂಥಾ ಅನುಬಂಧ ಅಂತೀರಿ... ಕವಿತೆಯನ್ನು ಇಷ್ಟಪಡದವರೇ ಇಲ್ಲವೆನ್ನಬಹುದು. ಕವಿತೆಯೆಂದರೆ ಎಲ್ಲರಿಗೂ ಎಲ್ಲಿಲ್ಲದ ಅಕ್ಕರೆ. ಸಾಹಿತ್ಯದ ಗಂಧ ಗಾಳಿ ಇಲ್ಲದವರ ಮುಂದೆ ಕವಿತೆ ಓದಿ ನೋಡಿ – ಅವರಿಗೆ ಅರ್ಥವಾಗದಿದ್ದರೂ ಮಿಕಿ ಮಿಕಿ ನೋಡುತ್ತಾ ಕೇಳುವ ವ್ಯವಧಾನವಿದೆ. ದೊಡ್ಡ ದೊಡ್ಡ ಗಂಭೀರ ಲೇಖನ, ಪುಟಗಟ್ಟಲೆ ಪ್ರಬಂಧ, ಒಂದು ಪುಸ್ತಕಕ್ಕಾಗುವಷ್ಟು ನಾವು ಕಥೆ ಬರೆದರೂ ಅವರ್ಯಾರಿಗೂ ಅದರ ಬಗ್ಗೆ ಕಿಂಚಿತ್ತು ಗೊಡವೆಯೇ ಇರುವುದಿಲ್ಲ.

ಏನೋ ಹಾಳು ಮೂಳು ಬರೆದುಕೊಂಡು ಇರ್ತಾರಪ್ಪ  ಅಂತ ಜನ ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದವರಂತೆ, ತಿರುಗಿಯೂ ನೋಡದೆ ಬೀಡುಬೀಸಾಗಿ ಸಾಗುತ್ತಲೇ ಇರುತ್ತಾರೆ. ಆಶ್ಚರ್ಯ ಎಂದರೆ, ಒಂದೆರಡು ಸಾಲು ಕವಿತೆ ಗೀಚಿದಾಕ್ಷಣ ಅವರೆಲ್ಲಾ ಇತ್ತಲೇ ನೋಡುತ್ತಾರೆ. ಆ ಕವಿತೆ ಸಾಲಿನೊಳಗೆ ಮಣ್ಣು–ಮಸಿ ಒಂದೂ ಇಲ್ಲದಿದ್ದರೂ ಪರವಾಗಿಲ್ಲ. ನಾವೇನೋ ಮಹಾನ್ ಸಾಧನೆ ಮಾಡಿದವರಂತೆ ಎಲ್ಲರೂ ಇತ್ತಲೇ ಕಣ್ಣರಳಿಸಿ ನೋಡುವಾಗ... ನಿಜಕ್ಕೂ ಕವಿತೆಯೇ ಕಂಗಾಲಾಗಿ ಚಡಪಡಿಸುತ್ತದೆ. ಕವಿತೆಯ ಬಗ್ಗೆ ಎಲ್ಲರಿಗೂ ಒಂದು ರೀತಿಯ ಸೆಳೆತವೇ! ಬಹುಶಃ, ಕವಿತೆಗೆ ಅಯಸ್ಕಾಂತದ ಗುಣವಿರಬೇಕೇನೋ?

ಅವರಿವರ ಮಾತೇಕೇ? ನಂದೂ ಹೆಚ್ಚು ಕಮ್ಮಿ ಇದೇ ಕಥೆ! ಎಳವೆಯಿಂದಲೇ ಕವಿತೆಯನ್ನ ಆರಾಧಿಸುತ್ತಾ, ಕವಿತೆಯ ಹಿಂದೆಮುಂದೆ ಓಡಿದ್ದೇ ಓಡಿದ್ದು. ಆದರೆ ಕವಿತೆಯನ್ನ ಮುಟ್ಟೋಕು ಭಯ, ಹಿಡಿಯೋಕೂ ಭಯ. ಇನ್ನು ಬಿಳಿಯ ಹಾಳೆಗಳ ಮೇಲೆ ಅದರ ಕೈ ಹಿಡಿದು ತಂದು ಜತನದಲ್ಲಿ ತಂದು ಕುಳ್ಳಿರಿಸುವುದೆಂತು ಬಂತು? ಏನೋ ಹುಚ್ಚು ಧೈರ್ಯ ತಂದುಕೊಂಡು, ಮೆಲ್ಲ ಹಾಳೆಗಳ ಮೇಲಿಳಿಸಿದರೂ ಯಾರ ಇದಿರಿಗೆ ಅದನ್ನ ತಂದು ನಿಲ್ಲಿಸುವ ಧೈರ್ಯ ಇತ್ತು? ಅಥವಾ ಗಡಿಬಿಡಿಯಲ್ಲಿ ಹುಚ್ಚು ಧೈರ್ಯ ತಂದುಕೊಂಡು, ಯಾರೊಬ್ಬರ ಮುಂದೆಯಾದರೂ ಕವಿತೆಯನ್ನು ತೋರಿಸುವ ಅಂದರೆ... ಎಲಾ! ಕವಿತೆಯೇ..! ಅದು ನನಗಿಂತ ಸಂಕೋಚದ ಮುದ್ದೆ. ಸರಿ ಹೋಯಿತು ಇನ್ನು, ಅದಕ್ಕೆ ನನ್ನಷ್ಟೂ ಧೈರ್ಯ ಇಲ್ಲ ಅಂದಮೇಲೆ ಏನು ಮಾಡೋ ಹಾಗಿದೆ?

ಕವಿತೆ ಅಂದರೆ ಯಾಕೆ ಎಲ್ಲರಿಗೂ ಅಷ್ಟು ಪ್ರಿಯ? ಯಾಕೆ ಎಲ್ಲರೂ ಕವಿತೆಯನ್ನು ಅಷ್ಟೊಂದು ಆರಾಧಿಸುತ್ತಾರೆ? ಅರ್ಥವಾಗದಿದ್ದರೂ ಅನಂತ ಅರ್ಥಗಳನ್ನು ಹುಡುಕುತ್ತಾರೆ ಅಂತ ನಾನು ಅರ್ಥವಾಗದೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡು ಯೋಚಿಸತೊಡಗಿದರೂ ಅರ್ಥವಾಗುತ್ತಿಲ್ಲ. ಕವಿತೆಯೆಂದರೆ ಸಾಮಾನ್ಯವಾ? ಅದು ಸುಲಭಕ್ಕೆ, ಅರ್ಥಕ್ಕೆ ದಕ್ಕುವುದಿಲ್ಲ. ಅದಕ್ಕೇ ಇರಬೇಕು ಕವಿತೆ ಎಂದರೆ ಎಲ್ಲರಿಗೂ ಎಲ್ಲಿಲ್ಲದ ಕಕ್ಕುಲಾತಿ. ಆದರೆ ಕವಿತೆ ನಾವು ಅಂದುಕೊಂಡಷ್ಟು ಸರಳವಲ್ಲ. ಎಲ್ಲರ ಕಣ್ಣೋಟದ ಹಿಂದಿನ ಭಾವವನ್ನು, ಮನದಾಳದ ಇಂಗಿತವನ್ನು ಸುಲಭವಾಗಿ ಗ್ರಹಿಸಿಕೊಂಡು, ಏನೂ ಅರ್ಥವಾಗದ ಹಾಗೆ ‘ಮೊನಾಲಿಸಾ ನಗು’ ಬೀರುತ್ತಾ ನಿಂತುಕೊಳ್ಳುತ್ತದೆ.

ಕಾವ್ಯಕ್ಕೆ ಅದೆಂಥಾ ಶ್ರೀಮಂತ ಪರಂಪರೆ ಇದೆಯೆಂಬುದು ಸಾಹಿತ್ಯ ಓದದ ಸಾಮಾನ್ಯ ಮನುಷ್ಯನಿಗೂ ಗೊತ್ತಿದೆ. ದರ್ಪದಿಂದ ರಾಜ್ಯವನ್ನಾಳುವ, ಖಡ್ಗ, ಆಯುಧಗಳಿಗೆ ಪ್ರಾಶಸ್ತ್ಯ ಕೊಡುತ್ತಾ ತೀರಾ ವ್ಯಾವಹಾರಿಕವಾಗಿ ಯೋಚಿಸುವ ರಾಜ ಮಹಾರಾಜರ ಆಸ್ಥಾನದಲ್ಲೂ ಕೂಡ ಆಸ್ಥಾನ ಕವಿಗಳಿದ್ದರು ಎನ್ನುವುದಕ್ಕೆ ಈಗಲೂ ಜನರ ನಾಲಗೆಯ ತುದಿಯಲ್ಲಿ ಹೊರಳಾಡುವ ಪಂಪ, ರನ್ನ, ಪೊನ್ನ, ಜನ್ನ ಮುಂತಾದವರ ಹೆಸರುಗಳೇ ಸಾಕ್ಷಿ. ಹಾಡಿ ಹೊಗಳಿ ಬಹುಪರಾಕ್ ಎಂದು ಕವಿತೆ ಹೆಣೆದು ಅರ್ಪಿಸಿದರೆ ಸಾಕು – ಅದೆಂಥಾ ಖುಷಿ ರಾಜನಿಗೆ! ದಂಡೆತ್ತಿ ಮತ್ತೊಂದು ರಾಜ್ಯವನ್ನೇ ಗೆದ್ದು ತಂದಷ್ಟೇ ಬಿಂಕ ಬಿಗುಮಾನ.

ಅಷ್ಟಕ್ಕೇ ಖುಷಿ ಮೇರೆ ಮೀರಿ ತನ್ನ ಕತ್ತಿನಲ್ಲಿದ್ದ ಮುತ್ತು, ಮಾಣಿಕ್ಯ, ವಜ್ರ, ವೈಢೂರ್ಯ... ಯಾವ ಸರ ತನ್ನ ಕೈಗೆ ಮೊದಲು ಸಿಕ್ಕಿತೋ ಅದನ್ನೇ ಕವಿ ಮಹಾಶಯನ ಕೊರಳಿಗೆ ಹಾಕಿ ಬಿಡುತ್ತಿದ್ದರು. ಆಹಾ! ಅದೆಂಥಾ ಭಾಗ್ಯ. ರಾಜನ ಕೊರಳ ಸರ ಕವಿಪುಂಗವರ ಕೊರಳಲ್ಲಿ. ಇದು ಕವಿಯ ಭಾಗ್ಯವೋ? ಕವಿತೆಯ ಭಾಗ್ಯವೋ? ತರ್ಕಿಸುವುದೆಂತು? ಖಡ್ಗಕ್ಕಿಂತ ಲೇಖನಿ ಹರಿತ ಅಂತ ಸುಮ್ಮನೆ ಗಾದೆಮಾತು ಹುಟ್ಟಲಿಲ್ಲ ನೋಡಿ. ಇದೆಲ್ಲಾ ಹೌದಾ? ಅನ್ನುವ ಕುತೂಹಲದ ದೃಷ್ಠಿಗೆ, ಅನೇಕ ಉದಾಹರಣೆಗಳನ್ನು ಕೊಡುತ್ತಾ ಹೋದರೆ ಅದು ವಿಷಯಾಂತರ ಆಗಿ ಬಿಡುತ್ತದೆಯೋ ಏನೋ? ಅದೂ ಹೇಳಿ ಕೇಳಿ ಕವಿತೆಯ ಬಗ್ಗೆಯೇ ಮಾತನಾಡುತ್ತಾ, ಕವಿತೆಯ ಜೊತೆಗೆ ಸಂವಾದಿಸುತ್ತಾ ಇರುವಾಗ ಅದಕ್ಕೆ ಸಿಟ್ಟು ಬಂದು ನನ್ನ ಬಿಟ್ಟು ಹೋಗಲೂಬಹುದು.

ಹಾಂ, ಕವಿತೆ ಸಿಟ್ಟು–ಕೋಪ ಮಾಡಿಕೊಳ್ಳುತ್ತದೆಯೋ ಅಂತ ಹೌಹಾರಬೇಡಿ. ಇಲ್ಲ, ಕವಿತೆಗೆ ಸಿಟ್ಟು, ಸೆಡವು ಕೋಪ, ತಾಪ, ಈರ್ಷ್ಯೆ, ಧಗ, ಮೋಸ ವಂಚನೆ, ಕಪಟ, ಸುಳ್ಳು ಒಂದೂ ಗೊತ್ತೇ ಇಲ್ಲ. ಸುಮ್ಮಗೆ ಮಾತಿಗೆ ಹೇಳಿದೆ ಅಷ್ಟೆ. ಕವಿತೆಯದ್ದು ಏನಿದ್ದರೂ ಸಾತ್ವಿಕ ಸಿಟ್ಟು. ಸಣ್ಣಮಟ್ಟದ ಮುನಿಸು ಅಷ್ಟೆ. ಆದರೂ ಕವಿತೆ ಮುನಿಸಿಕೊಂಡಿದೆ ಅಂದರೆ ಯಾರಿಗೂ ಸಹ್ಯವಾಗಲ್ಲ. ಕವಿತೆ ಯಾವಾಗಲೂ ಅಮ್ಮನ ಸೆರಗಿನಂತೆ ಮೃದುವಾಗಿ ಸ್ಪರ್ಶಿಸುತ್ತಾ, ಸಖಿಯಂತೆ ನೇವರಿಸುತ್ತಾ, ನಮ್ಮ ಹಿಂದುಮುಂದು ಸುಳಿದಾಡುತ್ತಿರಬೇಕಷ್ಟೆ. ಕೋಪ ತಾಪ ಏನಿದ್ದರೂ ಅದು ನರಮನುಷ್ಯರ ಸೊತ್ತು ತಾನೇ? ಸಿಟ್ಟು ಸೆಡವುಗಳ ಶಮನಗೊಳಿಸುವ ದಿವ್ಯ ಔಷಧಿ ಕವಿತೆ.

ಔಷಧಿ ಅಂದಾಕ್ಷಣ ನೆನಪಾಯ್ತು ನೋಡಿ. ಕೆಲವರಿಗೆ ಕೆಲವು ಕಾಯಿಲೆಗಳು, ಅವುಗಳಿಗೆ ನೂರೆಂಟು ಔಷಧಿಗಳು. ಇನ್ನು ನನ್ನಂತಹ ಕೆಲವರ ಪಂಗಡ ಉಂಟು. ಅವರಿಗೆ ಒಂದೆರಡು ಸಾಲು ಕವಿತೆ ಗೀಚೋಕ್ಕಾಗಲ್ಲ ಅಂದರೆ ಸಿಕ್ಕಾಪಟ್ಟೆ ವ್ಯಸ್ತರಾಗಿಬಿಡುತ್ತಾರೆ. ಹಾಳೊ–ಮೂಳೊ, ಕನಸೋ ವಾಸ್ತವವೋ... ಏನೋ ಒಂದು ಕವಿತೆಯ ಹೆಸರಿಟ್ಟು ಬಿಳಿಯ ಹಾಳೆಗಳ ಮೇಲೆ ಅಕ್ಷರದ ರೂಪ ಕೊಡುತ್ತಿರಬೇಕಷ್ಟೆ. ಅದೇನೋ ಕಾರಣಾಂತರದಿಂದ ಸಾಧ್ಯವಾಗಲಿಲ್ಲ ಎಂದರೆ, ಒಂದು ರೀತಿಯ ಖಿನ್ನತೆ, ಅನ್ಯಮನಸ್ಕತೆ ಆವರಿಸಿಕೊಂಡು ಏಕ್‌ದಂ ಜ್ವರ ಅಮರಿಕೊಂಡು ಬಿಟ್ಟಿತ್ತೆಂದರೆ, ಮತ್ತೆ ಅದು ಯಾವ ಔಷಧಿಯಿಂದಲೂ ಬಡಪೆಟ್ಟಿಗೆ ಬಗ್ಗುವುದಿಲ್ಲ. ಕವಿತೆ ಎಷ್ಟು ಹೊತ್ತು ಹೀಗೇ ನಮ್ಮ ಬಗಲಲ್ಲೇ ಇರೋಕೆ ಸಾಧ್ಯ? ಅದಕ್ಕೂ ಲೋಕಪರ್ಯಟನೆ ಮಾಡಬೇಕು, ಜಗತ್ತನ್ನ ಬೆರಗುಗಣ್ಣಿನಿಂದ ನೋಡಬೇಕು ಅಂತ ತವಕ ಇರೋದಿಲ್ಲವಾ? ಹಾಗಂತ ತಮ್ಮ ಬಳಿಯಲ್ಲೇ ಇರಬೇಕು ಅಂತ ಕವಿತೆಯನ್ನ ಕಟ್ಟಿ ಹಾಕಲು ಸಾಧ್ಯವಾ? ಇದು ಉಚಿತವಲ್ಲ ತಾನೇ? ಇಷ್ಟಕ್ಕೆ ಬೇಸರ ಹುಟ್ಟಿ, ಕವಿತೆ ರೆಕ್ಕೆಪುಕ್ಕ ಕಟ್ಟಿಕೊಂಡು ಹಾರಿಯೇ ಹೋಗಿಬಿಟ್ಟಿರುತ್ತದೆ. ಅದನ್ನು ಮುಚ್ಚಟ್ಟೆಯಾಗಿ ಮುಚ್ಚಿಟ್ಟುಕೊಳ್ಳೋದಿಕ್ಕೆ ಅದು ನಮ್ಮೊಬ್ಬರ ಸ್ವತ್ತಾ? ಅಷ್ಟಕ್ಕೂ ಬಿಗಿದು ಕಟ್ಟುವ ಅಂದರೆ, ಅದಕ್ಕೆ ಕೈ–ಕಾಲು... ಹೀಗೊಂದು ಮೂರ್ತ ಆಕಾರ ಈವರೆಗೂ ದಕ್ಕಿದೆಯಾ? ನಾವು ಕೊಟ್ಟದ್ದೇ ಆಕಾರ.

ಕವಿತೆ ನಿರಾಕಾರ ತಾನೇ? ಇಂತಿಪ್ಪ ಕವಿತೆ ಯಾವುದೋ ಕ್ಷಣದಲ್ಲಿ ಮರೆಯಾದ ಮರುಕ್ಷಣ, ನಾವಿಲ್ಲಿ ಸಿಕ್ಕಾಪಟ್ಟೆ ತಳಮಳಿಸಿ, ನಿದ್ದೆಯಿಲ್ಲದೆ, ಊಟ ಸೇರದೆ ಸೊರಗಿ ಸೊಪ್ಪೆಯಾಗಿ ಕುಳಿತ್ತಿದ್ದರೆ... ಅದೃಶ್ಯ ಕವಿತೆ ಪಿಸು ಮಾತಾಡಿ, ಮಾಂತ್ರಿಕ ಸ್ಪರ್ಶ ನೀಡಿದರಷ್ಟೇ ಮತ್ತೆ ಕಣ್ಣರಳಿಸಿ ನೋಡುವಷ್ಟು ಲವಲವಿಕೆ.
ಅಂದಹಾಗೆ, ಕೆಲವರು ಲವಲವಿಕೆ ಮನಸಿಗೆ ತಂದುಕೊಳ್ಳಲಿಕ್ಕೆ ಆಚೆಗೊಂದು ಫೋನಾಯಿಸಿ ‘ಊಟ ಆಯ್ತಾ? ತಿಂಡಿಗೇನು? ಸಿನಿಮಾ ನೋಡಿದ್ರಾ?’ – ಹೀಗೆ ನೂರೆಂಟು ಸಂಬಂಧವೇ ಇಲ್ಲದ ಪ್ರಶ್ನೆಗಳನ್ನು ಎಸೆಯುತ್ತಾ ಹೊತ್ತು ಕಳೆಯೋದಿಕ್ಕೆ ಹೆಣಗಾಡುವುದುಂಟು. ನನಗ್ಯಾಕೋ ಈ ಫೋನಿನಲ್ಲಿಯೇ ಅಡುಗೆ ಮೆನುಗಳನ್ನು ಕೇಳುತ್ತಾ, ಪಾಕ ಸವಿಯುತ್ತಾ ಕುಳಿತುಕೊಳ್ಳುವಾಗ ಹಸಿವೆಯೇ ಇಂಗಿಹೋದಂತಾಗುತ್ತದೆ. ಇವುಗಳನ್ನೆಲ್ಲಾ ಬದಿಗಿಟ್ಟು ಕವಿತೆ, ಕತೆ, ಸಾಹಿತ್ಯ, ಬರಹ... ಇದರ ಬಗ್ಗೆ ಗೆಳತಿಯರ ಜೊತೆ ಮಾತಾಡಿದಾಕ್ಷಣ ಅವರಿಗೆ ಬೋರ್ ಹೊಡೆದು ಮುಸಿ ಮುಸಿ ನಗುತ್ತಾ ‘ನಿನಗೇನೋ ಹುಚ್ಚು ಹಿಡಿದಿದೆ ಮಾರಾಯ್ತಿ’ ಅಂತ ಹೇಳುವುದುಂಟು.

ಅಹುದಹುದು! ಇದೊಂದು ರೀತಿಯ ಹುಚ್ಚೇ ಅಂತ ನಾನು ಯಾವ ಮುಲಾಜು ಇಲ್ಲದೆ ಒಪ್ಪಿಕೊಳ್ಳುತ್ತೇನೆ. ಹಾಗಂತ ಮತ್ತೊಮ್ಮೆ ಅವರೇ ಫೋನಾಯಿಸಿ, ಅವರಾಗಿಯೇ ‘ಏನು ಬರೆದೆ’ ಅಂತ ಪ್ರಶ್ನೆ ಹಾಕುವಾಗ – ‘ಅಯ್ಯೋ! ಸದ್ಯಕ್ಕೆ ಏನು ಕವಿತೆ ಬರೆದೇ ಇಲ್ಲವಲ್ಲ’ ಅಂತ ನೆನಪಾಗಿ ನಿಜಕ್ಕೂ ಹುಚ್ಚೇ ಹಿಡಿದಂತಾಗುತ್ತದೆ. ಹೌದಲ್ವಾ ಮತ್ತೆ, ಕವಿತೆಯೊಂದೇ ನಮ್ಮೆಲ್ಲರಿಗೆ ಹಿಡಿದ ಅಹಂಕಾರದ, ಅಹಂನ, ಸೋಗಲಾಡಿತನದ ಹುಚ್ಚು ಬಿಡಿಸಿ ನಮ್ಮನ್ನು ನಾವಾಗಿಯೇ ತೋರಿಸುವಂತಹ ನೈಜ ಕನ್ನಡಿ; ಒಳ ಹೊರಗು ಎರಡನ್ನೂ ಇದಮಿತ್ಥಂ ತೋರಿಸುವ ಕನ್ನಡಿ. ಕವಿತೆ ನಮ್ಮೆಲ್ಲವನ್ನು ತೊಳೆಯಿಸುವಾಗ ನಾವು ಹಕ್ಕಿಯಷ್ಟು ಹಗುರವಾಗಿ ತೇಲಿಬಿಡುತ್ತೇವೆ. ಮಗುವಿನಷ್ಟು ಮುಗ್ಧವಾಗಿ ನಕ್ಕು ಬಿಡುತ್ತೇವೆ. ಕವಿತೆ ಪುಟ್ಟ ಮಗುವೇ ತಾನೇ? ಕವಿತೆಯೆಂದರೆ ಮಗುವಿನ ತುಟಿಯಂಚಿನಲಿ ಉಳಿದುಕೊಂಡ ನಗುವಲ್ಲವೆ.

ಮೊನ್ನೆ ಮೊನ್ನೆ ಕವಿಗೋಷ್ಠಿಯೊಂದರಲ್ಲಿ, ಹಿರಿಯ ಕವಿಯೊಬ್ಬರು ಕವಿತೆ ಬಗ್ಗೆ ನಮಗೆಲ್ಲಾ ಉಪನ್ಯಾಸ ಕೊಡುತ್ತಿದ್ದರು. ನಾವೋ ಇದೇ ಸದಾವಕಾಶ ಅಂತ ಮೈಯೆಲ್ಲಾ ಕಿವಿಯಾಗಿ ಕುಳಿತಿದ್ದರೆ, ಅವರೋ ಕವಿತೆಯ ಒಳಹೊರಗು ಎಲ್ಲವನ್ನೂ ಎಳೆದೆಳೆದು ಬಗೆದು ತೆಗೆದು ನಮ್ಮ ಮುಂದೆ ಇಡುತ್ತಿದ್ದರು. ಕವಿತೆಯೆಂದರೆ ಹಾಗಿರಬೇಕು, ಹೀಗಿರಬೇಕು, ಬರೆದದ್ದೆಲ್ಲಾ ಕವಿತೆ ಅಲ್ಲ, ಕುಮಾರವ್ಯಾಸನನ್ನು ಓದಿಕೊಳ್ಳಬೇಕು, ಪಂಪ ರನ್ನರು ಗೊತ್ತಿರಬೇಕು, ಕನ್ನಡದಲ್ಲಿ  ಎಂ.ಎ. ಬರಿಬೇಕು – ಹೀಗೆ ಬಿಡದೇ ಪಾಠ ಮಾಡುತ್ತಿದ್ದರೆ.. ನನಗೆ ಸಿಕ್ಕಾಪಟ್ಟೆ ಹೆದರಿಕೆ ಆಗಿಹೋಗಿತ್ತು. ಜೊತೆಗೆ ಇವರು ಅವತ್ತೇ ನಮಗೆ ಮೇಷ್ಟ್ರಾಗಿ ಸಿಗಬಾರದಿತ್ತಾ ಅಂತ ವ್ಯಥೆಯೂ ಆಗಿತ್ತು. ಇನ್ನು, ನನಗೆ ಹತ್ತನೇ ತರಗತಿಯವರೆಗೆ ಮಾತ್ರ ಕನ್ನಡ ಓದಲಿಕ್ಕೆ ಅವಕಾಶ ಸಿಕ್ಕಿದ್ದು. ಇನ್ನು ಈ ವಯಸ್ಸಿನಲ್ಲಿ ಹಳೆಗನ್ನಡ, ನಡುಗನ್ನಡ ಕಲಿಯೋದಿಕ್ಕೆ ಮತ್ತೊಮ್ಮೆ ಶಾಲೆಗೆ ಹೋಗಬೇಕಾ?! ಮಕ್ಕಳಿಗೆ ತಿನಿಸಿ, ಕಲಿಸಿ, ಅವರ ಚಾಕರಿ ಮಾಡಿ, ಅವರನ್ನು ಶಾಲೆಗೆ ಕಳುಹಿಸುವಷ್ಟರಲ್ಲಿ, ನಮ್ಮ ಸೊಂಟ ಸೋಬಾನೆ ಹಾಡಿ ಸಾಕುಬೇಕಾಗುತ್ತದೆ.

ಇನ್ನು ಓದಿ, ಪರೀಕ್ಷೆ ಬರೆದು, ನಮ್ಮ ಮಕ್ಕಳಿಗಿಂತ ಕಡಿಮೆ ಮಾರ್ಕ್ಸ್ ತೆಗೆದರೆ ಅಷ್ಟೆ ಮತ್ತೆ. ನಂತರ ಅವರ ಅಂಕಗಳ ಬಗ್ಗೆ ನಾವುಗಳು ತಕರಾರು ಎತ್ತುವ ಹಾಗಿಲ್ಲವೆಂಬುದು ನೆನಪಾಗಿ... ಇವರನ್ನೆಲ್ಲಾ ಓದಿಕೊಳ್ಳದಿದ್ದರೆ ಬರೆದದ್ದು ಕವಿತೆ ಆಗೋದೇ ಇಲ್ಲವಾ? ಅಂತ ನಿಜಕ್ಕೂ ಗಾಬರಿ ಬಿದ್ದು, ಕವಿತೆ ನನ್ನನ್ನು ಬಿಟ್ಟುಹೋಗಿಯೇ ಬಿಡುತ್ತದೆಯೇನೋ ಅಂತ ನಿಜಕ್ಕೂ ಭಯವಾಗಿ, ಸಂಕಟಕ್ಕೆ ಅಳುವೇ ಒತ್ತಿ ಬಂದಾಗ – ಹಳೆಗನ್ನಡ, ನಡುಗನ್ನಡ ಓದಿ ಅರಗಿಸಿಕೊಂಡವರೆಲ್ಲಾ ಕವಿತೆ ಬರೀತಿಲ್ಲ. ಅವೆಲ್ಲಾ ಓದಿಕೊಂಡರೆ ನಾನು ಮತ್ತಷ್ಟು ಲಕಲಕಿಸುತ್ತೇನೆ ಅಷ್ಟೆ. ಯಾವುದಕ್ಕೂ ನೀ ಹೆದರಬೇಡ. ನೀ ತೋಚಿದ್ದನ್ನು ಗೀಚು. ಯಾವ ಕಾಲಕ್ಕೂ ನಾ ನಿನ್ನ ಬಳಿಯೇ ಇರುವೆ ಅಂತ ಕವಿತೆ ಪಕ್ಕಕ್ಕೆ ಬಂದು ಸಂತೈಸುತ್ತಿದೆ. ನಾನು ಎಲ್ಲ ಮರೆತು ಹಗುರವಾಗಿ ಪದ ಪದಗಳ ನಡುವೆ ಮೆಲ್ಲನೆ ಪದವಿಡುತ್ತಿರುವೆ. ಅಮೂರ್ತ ಕವಿತೆಯೊಂದು ಅದೃಶ್ಯವಾಗಿ ಕೈ ಹಿಡಿದು ಮುನ್ನಡೆಸುತ್ತಿದೆ. ಕವಿತೆಯಾಗು ಮನವೇ ಅಂತ ನಾನು ಗುನುಗುತ್ತಾ ಸಾಗುತ್ತಿರುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT