ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಕಾಳಜಿಗೆ ಹೊಸತನದ ಸ್ಪರ್ಶ

ಬೆಂಗಳೂರು ಆರೋಗ್ಯ ಉತ್ಸವ ಆರಂಭ: ಸ್ವಾಸ್ಥ್ಯ ರಕ್ಷಣೆಗೆ ಚಿಂತನ– ಮಂಥನ
Last Updated 4 ಮೇ 2017, 19:59 IST
ಅಕ್ಷರ ಗಾತ್ರ
ಬೆಂಗಳೂರು: ಆರೋಗ್ಯ ಹಾಗೂ ವೈದ್ಯಕೀಯ ಕ್ಷೇತ್ರಗಳ ಹೊಸ ವಿಚಾರ ಗಳನ್ನು ಪರಿಚಯಿಸುವ ‘ಬೆಂಗಳೂರು ಆರೋಗ್ಯ ಉತ್ಸವ’ ನಗರದ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣ ದಲ್ಲಿ  ಗುರುವಾರ ಆರಂಭಗೊಂಡಿತು. 
 
ಮೇ 7ರವರೆಗೆ ನಡೆಯಲಿರುವ ಈ ಉತ್ಸವ, ಹೊಸ ಬಗೆಯ ಚಿಕಿತ್ಸೆಗಳು, ಅತ್ಯಾಧುನಿಕ ವೈದ್ಯಕೀಯ ಪರಿಕರಗಳು, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ಯಿಂದ ಆರೋಗ್ಯ  ಸೇವೆಯಲ್ಲಿ ಆಗುತ್ತಿರುವ ಸುಧಾರಣೆಗಳು,  ಹೊಸ ಔಷಧಗಳು, ಮನೆಯಲ್ಲೇ ಕುಳಿತು ಆರೋಗ್ಯ ಮಾಹಿತಿ ಪಡೆಯುವ, ತಜ್ಞ ವೈದ್ಯರ ಸೇವೆ ಪಡೆಯುವ ಅವಕಾಶ ಗಳು,   ಆರೋಗ್ಯಕ್ಕೆ ಪೂರಕ ಆಹಾರ, ವಿಮಾ ಯೋಜನೆಗಳು... ಹೀಗೆ ಆರೋಗ್ಯ  ಕ್ಷೇತ್ರದ ನವನವೀನ ವಿಚಾರ ಗಳನ್ನು ಒಂದೇ ಸೂರಿನಡಿ ಒದಗಿಸುತ್ತಿದೆ.
 
ಸ್ವಾಸ್ಥ್ಯ ಸಂರಕ್ಷಣೆಗೆ ಸಂಬಂಧಿಸಿದ  ಕಾರ್ಯಕ್ರಮಗಳು ವೈದ್ಯಕೀಯ ತಜ್ಞರ ಜೊತೆ  ನೇರವಾಗಿ ಸಮಾಲೋಚನೆ ನಡೆಸುವ ಮುಕ್ತ ಅವಕಾಶವನ್ನು ನಾಗರಿಕರಿಗೆ ಕಲ್ಪಿಸಿವೆ. 
 
ಚಿಂತನ–ಮಂಥನ: ಉತ್ಸವದ ಮೊದಲ ದಿನ,  ಜ್ವರಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ತಜ್ಞರು ಸಂವಾದ ನಡೆಸಿದರು. ಪ್ರೇಕ್ಷಕರ    ಸಂದೇಹಗಳನ್ನು ನಿವಾರಿ ಸುವ ಪ್ರಯತ್ನ ಮಾಡಿದರು. 
 

 
‘ನಗರದಲ್ಲಿ ವೈರಾಣು ಜ್ವರ, ಡೆಂಗಿ, ಚಿಕೂನ್‌ಗುನ್ಯ, ಮಲೇರಿಯಾ, ವಿಷಮ ಶೀತ ಜ್ವರ (ಟೈಫಾಯ್ಡ್‌) ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ.  ಕೆಲವು  ಔಷಧಿ ಸೇವನೆಯಿಂದ, ಅಲರ್ಜಿಯಿಂದ, ರಕ್ತ ಪೂರಣದಿಂದ ಜ್ವರ ಬರುವ ಸಾಧ್ಯತೆ ಗಳೂ ಇವೆ.  ಶಸ್ತ್ರಚಿಕಿತ್ಸೆ ಬಳಿಕವೂ ಜ್ವರ ಕಾಣಿಸಿಕೊಳ್ಳುತ್ತದೆ’ ಎಂದು ಬೆಂಗಳೂರು ವೈದ್ಯಕೀಯ ಕಾಲೇಜಿನ ತಜ್ಞವೈದ್ಯ ಡಾ.ರವೀಂದ್ರ ಮಾಹಿತಿ ನೀಡಿದರು.
 
‘ಜ್ವರ ಔಷಧಿಯಿಂದ ಗುಣಪಡಿಸ ಬಹುದಾದ ಕಾಯಿಲೆ. ಸಕಾಲದಲ್ಲಿ ವೈದ್ಯ ರನ್ನು ಕಾಣದೆ ಪರಿಸ್ಥಿತಿ ಉಲ್ಬಣ ಗೊಂಡರೆ ಮಾತ್ರ ರೋಗಿ ಸಾಯುವ ಪರಿಸ್ಥಿತಿ ಎದುರಾಗುತ್ತದೆ’ ಎಂದರು.
 
‘ಸೊಳ್ಳೆಗಳಿಂದ, ಆಹಾರಗಳ ಮೂಲಕ, ಕಲುಷಿತ ನೀರಿನಿಂದ ಜ್ವರ ತರುವ ರೋಗಾಣು ದೇಹವನ್ನು ಸೇರುತ್ತವೆ. ಬೆಂಗಳೂರಿನ ಹವಾಮಾನ ಸೊಳ್ಳೆ ಗಳ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿದೆ. ಇಲ್ಲಿ ಜನಸಾಂದ್ರತೆ ಹೆಚ್ಚು. ಜನರೂ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟು ಕೊಳ್ಳಲು ಆದ್ಯತೆ ನೀಡುವುದಿಲ್ಲ. ಹಾಗಾಗಿ, ಜ್ವರ ಒಬ್ಬರಿಂದ  ಒಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚು’ ಎಂದು ವಿವರಿಸಿದರು.
 
‘ಡೆಂಗಿ ಮಾರಣಾಂತಿಕ ರೋಗವಲ್ಲ. ಆರಂಭದಲ್ಲೇ ಸರಿಯಾದ ಚಿಕಿತ್ಸೆ ಸಿಗ ದಿದ್ದರೆ ಮಾತ್ರ ಅದು ವಿಷಮಸ್ಥಿತಿ ತಲುಪುತ್ತದೆ. ಡೆಂಗಿಯಿಂದ ರೋಗಿಗಳು ಮೃತಪಟ್ಟ ಪ್ರಕರಣಗಳಲ್ಲಿ, ಜ್ವರದ ಲಕ್ಷಣ ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಕಾಣದೇ ಇರುವುದೇ ಕಾರಣ’ ಎಂದರು.
 
ಮೆಡ್‌ಜೋನ್‌ ಆಸ್ಪತ್ರೆಯ ತಜ್ಞವೈದ್ಯ  ಡಾ.ಮೋಹನ್‌ ಶ್ರೀಹರಿ, ‘ಬಿಟ್ಟು ಬಿಟ್ಟು ಜ್ವರ ಕಾಣಿಸಿಕೊಳ್ಳುತ್ತಿದ್ದರೆ, ಎರಡು ದಿನಗಳಲ್ಲಿ ನಿಯಂತ್ರಣಕ್ಕೆ ಬಾರದಿದ್ದರೆ, ಸುಸ್ತು ಇದ್ದರೆ ವೈದ್ಯರನ್ನು ಸಂಪರ್ಕಿಸಲೇ ಬೇಕು. ಮಧುಮೇಹ  ಇದ್ದವರು, ಜ್ವರಕ್ಕೆ ಸ್ವಯಂ ಔಷಧಿ ಸೇವನೆ ಮಾಡುವುದು ಒಳ್ಳೆಯದಲ್ಲ’ ಎಂದರು. 
 
ತುಮಕೂರಿನ ಸಿದ್ಧಾರ್ಥ ವೈದ್ಯ ಕೀಯ  ಕಾಲೇಜಿನ ಸಮುದಾಯ ಆರೋಗ್ಯ ತಜ್ಞ ಡಾ.ಎಂ.ಎಸ್‌. ರಾಜಣ್ಣ ಮಾತನಾಡಿ, ‘ಜ್ವರ ಗುಣವಾಗದಿದ್ದರೆ ವೈದ್ಯರನ್ನು ಬದಲಾಯಿಸಿ ಪ್ರಯೋಜನ ಇಲ್ಲ.  ಔಷಧಿಯ ಜೊತೆಗೆ ಸೊಪ್ಪು ತರಕಾರಿ, ಮೊಳಕೆ ಬರಿಸಿದ ಕಾಳುಗಳನ್ನು ಸೇವಿಸಬೇಕು. ಕುದಿಸಿ ಆರಿಸಿದ ನೀರನ್ನೇ  ಕುಡಿಯಬೇಕು’ ಎಂದರು.
 
ಟಿ.ವಿ. ಹೌಸ್ ನೆಟ್‌ವರ್ಕ್ ಸಂಸ್ಥೆಯು, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳ ಸಹಯೋಗದಲ್ಲಿ  ಈ ಉತ್ಸವವನ್ನು ಆಯೋಜಿಸಿದೆ. ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’  ಪತ್ರಿಕೆಗಳು ಈ ಉತ್ಸವಕ್ಕೆ ಮಾಧ್ಯಮ ಸಹಯೋಗ ಒದಗಿಸಿವೆ. 
****
ಮನ ರಂಜಿಸಿದ ವಿದ್ಯಾರ್ಥಿಗಳು
ಆರೋಗ್ಯ ಸಂರಕ್ಷಣೆಗೆ ಸಂಬಂಧಿಸಿದ ಉಪಯುಕ್ತ ಮಾಹಿತಿಗಳನ್ನು ಹಾಡು, ನೃತ್ಯ, ಪ್ರಹಸನ ಹಾಗೂ ಮೂಕಾಭಿನಯದ ಮೂಲಕ ಪ್ರಸ್ತುತಪಡಿಸಲಾಯಿತು.

ವೈಷ್ಣವಿ ನಾಟ್ಯಾಲಯದವರು ನಾಟ್ಯದ  ಮೂಲಕ ಆರೋಗ್ಯ ಕಾಳಜಿಯ ಮಹತ್ವ ಸಾರಿದರು. ಬೆಂಗಳೂರು ವೈದ್ಯಕೀಯ ಕಾಲೇಜಿನ ಅಪಘಾತ ಮತ್ತು ತುರ್ತುಚಿಕಿತ್ಸೆ ವಿಭಾಗದ ವಿದ್ಯಾರ್ಥಿಗಳು, ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗ ದಾನದ ಮಹತ್ವ, ತಂಬಾಕು ಸೇವನೆಯ ದುಷ್ಪರಿಣಾಮ ಹಾಗೂ ವೈದ್ಯರ ಮೇಲೆ ಹಲ್ಲೆ ನಡೆಸಿದರೆ ಏನು ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದನ್ನು ಪ್ರಹಸನದ ಮೂಲಕ ಪ್ರಸ್ತುತಪಡಿಸಿದರು.

ಕೈ ತೊಳೆಯುವ ಏಳು ಹಂತಗಳನ್ನು  (ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದ ಮಾದರಿಯಲ್ಲಿ) ವಿದ್ಯಾರ್ಥಿಗಳು ನೃತ್ಯದ ಮೂಲಕ ತೋರಿಸಿಕೊಟ್ಟರು.
****
ತಲೆಸುತ್ತು ಚಿಕಿತ್ಸೆಗೆ ತಿರುಗುವ ಕುರ್ಚಿ
ತಲೆಸುತ್ತುವಿಕೆ ಸಮಸ್ಯೆಗೆ  ಚಿಕಿತ್ಸೆ ನೀಡಲು ಪ್ರೊ.ಬಿ.ಎನ್‌. ಪ್ರಾಣೇಶ ರಾವ್‌ ಅವರು ತಿರುಗುವ ಕುರ್ಚಿಯನ್ನು ಅಭಿವೃದ್ಧಿಪಡಿಸಿದ್ದಾರೆ.  
 

‘ತಲೆಸುತ್ತು ಸಮಸ್ಯೆಯನ್ನು ಔಷಧಿಯಿಂದ ಗುಣಪಡಿಸುವುದು ಕಷ್ಟಸಾಧ್ಯ. ಮೊದಲ ಬಾರಿ ಬೈಸಿಕಲ್‌ ಓಡಿಸುವಾಗ ಸಮತೋಲನ ಸಿಗುವುದಿಲ್ಲ.   ಸರ್ಕಸ್‌ಗಳಲ್ಲಿ ಹಗ್ಗದ ಮೇಲೆಯೂ ನಿರಾತಂಕವಾಗಿ ಬೈಸಿಕಲ್‌ ಓಡಿಸುತ್ತಾರೆ. 

ಇದೇ ತತ್ವವನ್ನು ಬಳಸಿ ತಲೆಸುತ್ತು ಸಮಸ್ಯೆಗೆ ನಾನು ತಿರುಗುವ ಕುರ್ಚಿಯ ಮೂಲಕ ಚಿಕಿತ್ಸೆ ನೀಡುವ ವಿಧಾನವನ್ನು ರೂಪಿಸಿದ್ದೇನೆ’ ಎಂದು ರಾವ್‌  ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT