ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಮಾಧ್ಯಮದ ದುರ್ಬಳಕೆ

Last Updated 5 ಮೇ 2017, 19:30 IST
ಅಕ್ಷರ ಗಾತ್ರ

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮವು ಸಾರ್ವಜನಿಕ ಸಮೂಹ ಮಾಧ್ಯಮವನ್ನು ಮೀರಿ ಬೆಳೆಯುತ್ತಿದ್ದು, ಜನಸಾಮಾನ್ಯರ ಮಧ್ಯೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದರಲ್ಲಿ ಜನಸಾಮಾನ್ಯರೂ ಸಾರ್ವಜನಿಕ ವಿದ್ಯಮಾನಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸಾಧ್ಯವಿರುವುದರಿಂದ ಕೆಲ ಮಾಧ್ಯಮ ತಜ್ಞರು ಇದನ್ನು ಜನಸಾಮಾನ್ಯರ ಸಬಲೀಕರಣದ ಬೆಳವಣಿಗೆಯೆಂದೂ ಬಣ್ಣಿಸಿರುವುದುಂಟು.  ಆದರೆ ಈ ಮಾಧ್ಯಮ ಇಂದು ಬೆಳೆಯುತ್ತಿರುವ ರೀತಿ, ಅದರ ದಿಕ್ಕು, ಸ್ವರೂಪ ಮತ್ತು  ಅದು ಬಳಕೆಯಾಗುತ್ತಿರುವ ಉದ್ದೇಶಗಳನ್ನು ಗಮನಿಸಿದರೆ ಯಾರಿಗಾದರೂ ಗಾಬರಿಯಾಗುತ್ತದೆ.

ಮೊದಮೊದಲು ಕೆಲವು ಸಂಘಟಿತ ಗುಂಪುಗಳು ಈ ಮಾಧ್ಯಮವನ್ನು ತಾವು ನಂಬಿದ ರಾಜಕೀಯ ಸಿದ್ಧಾಂತ ಹರಡಲು ಬಳಸಿಕೊಳ್ಳಲು ಆರಂಭಿಸಿದವು. ನಂತರ ತನ್ನ ಹಾದಿಗೆ ಅಡ್ಡಿ ಬರುವುವೆಂದು ಅವು ಭಾವಿಸಿದ ಇತರ ರಾಜಕೀಯ ಸಿದ್ಧಾಂತಗಳ ಅವಹೇಳನವನ್ನು ಆರಂಭಿಸಿದವು. ಈ ಅವಹೇಳನ ತಾತ್ವಿಕ ವಾದವಿವಾದಗಳ ಚೌಕಟ್ಟಿನಲ್ಲಿರುವವರೆಗೆ ಅದನ್ನು ಸಹಿಸಬಹುದಾಗಿತ್ತು. ಆದರೆ ಈಗ ಇಂತಹ ಗುಂಪುಗಳ ಹಾವಳಿ ಯಾವ ಮಟ್ಟವನ್ನು ಮುಟ್ಟಿದೆ ಎಂದರೆ, ಸಾರ್ವಜನಿಕ ಜೀವನದಲ್ಲಿ ಬಹು ಮಹತ್ವದ ವ್ಯಕ್ತಿತ್ವಗಳೆಂದು ಸ್ಥಾಪಿತವಾಗಿರುವ ಚಾರಿತ್ರಿಕ ವ್ಯಕ್ತಿಗಳ ವೈಯಕ್ತಿಕ ಅವಹೇಳನಗಳನ್ನು ಆರಂಭಿಸಲಾಗಿದೆ. ನಮ್ಮ ರಾಷ್ಟ್ರಪಿತನಿಂದ ಹಿಡಿದು ನಮ್ಮ ಸ್ವಾತಂತ್ರ್ಯ ಹೋರಾಟದ ಮುಖ್ಯ ವ್ಯಕ್ತಿಗಳ ಚಾರಿತ್ರ್ಯಹನನದ ನಿರಂತರ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಆ ಮೂಲಕ ನಮ್ಮ ರಾಷ್ಟ್ರೀಯ ಹೋರಾಟದ ಚರಿತ್ರೆಯನ್ನೇ ವಿರೂಪಗೊಳಿಸುವ ಯೋಜಿತ ಪ್ರಯತ್ನವನ್ನು ನಡೆಸಲಾಗುತ್ತಿದೆ. ಇದು ಯಾವ ರಾಜಕೀಯ ಶಕ್ತಿಯ ಪರವಾಗಿ ಯಾರು ನಡೆಸುತ್ತಿದ್ದಾರೆಂದು ಹೇಳುವ ಅಗತ್ಯವಿಲ್ಲದಷ್ಟು ಸ್ಪಷ್ಟವಿದೆ.

ಮಹಾತ್ಮ ಗಾಂಧಿ ನಿಜವಾಗಿ ಮಹಾತ್ಮನಾಗಿರಲಿಲ್ಲವೆಂದು ಸಾರಲು, ಅಂಬೇಡ್ಕರ್ ಅವರ ಭಾಷಣಗಳ ಆಯ್ದ ತುಣುಕುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಗಾಂಧಿಯವರು ಗುಟ್ಟಾಗೇನೂ ನಡೆಸದ ಅವರ ಬ್ರಹ್ಮಚರ್ಯ ಪಾಲನೆ-ಪರೀಕ್ಷೆಗಳ ಪ್ರಯೋಗಗಳ ವರ್ಣನೆಗಳನ್ನು ಮತ್ತು ಆ ಕುರಿತು ಕೆಲವರು ಮಾಡಿದರೆಂದು ಹೇಳಲಾಗುವ ಟೀಕೆಗಳನ್ನು ಗಾಂಧಿ ಒಬ್ಬ ಅನೈತಿಕ ಮತ್ತು ಅಶ್ಲೀಲ ವ್ಯಕ್ತಿತ್ವದವರಾಗಿದ್ದರೆಂದು ಪ್ರಚಾರ ಮಾಡಲು ಬಳಸಿಕೊಳ್ಳಲಾಗುತ್ತಿದೆ. ಇದರ ಪರಿಣಾಮವೆಂದರೆ, ಇಂತಹ ಕಾರ್ಯಕ್ರಮಗಳನ್ನು ನೋಡಿದ ಅಮಾಯಕರನೇಕರು ಅಲ್ಲಿಯೇ, ಇಂತಹ ‘ದುಷ್ಟ ಗಾಂಧಿ’ಯನ್ನು ಕೊಂದ ಗೋಡ್ಸೆಯ ಗುಣಗಾನ ಮಾಡಿ  ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. ಇದು ಸಾಂಕ್ರಾಮಿಕವಾಗಿ ಬೆಳೆದಿದೆ.

ಇನ್ನು ನೆಹರೂ ಅವರನ್ನಂತೂ ಯಾವ ನೈತಿಕ ನಿರ್ಬಂಧವೂ ಇಲ್ಲದೆ ಅವಹೇಳನಕ್ಕೆ ಗುರಿ ಮಾಡಲಾಗಿದೆ. ನೆಹರೂ ಕೆಲವು ಮಹಿಳೆಯರೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿರುವ, ಒಡನಾಡುತ್ತಿರುವ, ಈಗಾಗಲೇ ಸಾರ್ವಜನಿಕವಾಗಿರುವ ಹಲವು ಚಿತ್ರಗಳ ಸರಣಿಯನ್ನೇ ನೀಡಿ ಅವರೊಬ್ಬ ಹೆಣ್ಣುಬಾಕ ಎಂಬ ಅಭಿಪ್ರಾಯವನ್ನು ಮೂಡಿಸಲು ಯತ್ನಿಸಲಾಗಿದೆ. ಇದಕ್ಕೆ ಉದಾಹರಣೆಯಾಗಿ ಖ್ಯಾತ ಹಿಂದಿ ನಟನೊಬ್ಬನ (ಆತ ಹಿಂದಿಯ ಬಹು ಖ್ಯಾತ ಸಾಹಿತಿ ದಂಪತಿ ಮಗ) ಮುಖಚರ್ಯೆ ನೆಹರೂ ಅವರನ್ನು ಹೋಲುತ್ತಿದೆ ಎಂದು ಹೇಳುತ್ತಾ, ಆತ ನೆಹರೂ ಅವರ ಅಕ್ರಮ ಸಂತಾನ ಎಂದು ಸೂಚಿಸಲಾಗಿದೆ. ಇನ್ನು  ದೇಶದ ಹಲವು ಭೂಭಾಗಗಳನ್ನು ನೆರೆ ದೇಶಗಳಿಗೆ ದಾನ ಮಾಡಿ ದೇಶದ ಭದ್ರತೆಗೆ ಅಪಾಯ ತಂದೊಡ್ಡಿರುವ ಮತ್ತು ತನ್ನ ಜಾಗತಿಕ ರಾಜಕಾರಣದ ಮಹತ್ವಾಕಾಂಕ್ಷೆಗಾಗಿ, ನೇಪಾಳದ ರಾಜ ತನ್ನ ದೇಶವನ್ನು ಭಾರತದಲ್ಲಿ ವಿಲೀನಗೊಳಿಸಲು ಮುಂದಾದರೂ ಅದನ್ನೊಪ್ಪಿಕೊಳ್ಳದ ದೇಶದ್ರೋಹಿ ಎಂಬಂತೆ ನೆಹರೂ ಅವರನ್ನು ಚಿತ್ರಿಸಲಾಗಿದೆ. ಈ ಎಲ್ಲ ಅವಹೇಳನಗಳಿಗೆ ಯಾವುದೇ ಬಗೆಯ ಸಾಕ್ಷ್ಯವನ್ನು ಒದಗಿಸಲಾಗಿಲ್ಲ. ಈ ಅವಹೇಳನಕಾರರು ಯಾವ ಮಟ್ಟಕ್ಕೆ ಇಳಿದಿದ್ದಾರೆಂದು ಸೂಚಿಸಲಷ್ಟೆ ಈ ವಿವರಗಳನ್ನು ನೀಡಲಾಗಿದೆ.

ಈ ಪ್ರಯತ್ನಗಳು ನಂಬಿರುವುದು ಅನ್ಯರ ಅವಹೇಳನದ ಬಗ್ಗೆ ಸದಾ ಕುತೂಹಲ ತಾಳಿರುವ ಜನಸಾಮಾನ್ಯರ ಮಾನಸಿಕ ದೌರ್ಬಲ್ಯವನ್ನಷ್ಟೇ. ಹಾಗಾಗಿಯೇ ಇವಕ್ಕೆ ಲಕ್ಷಾಂತರ ಜನರ ವೀಕ್ಷಣೆಯ ದಾಖಲೆ ಅಲ್ಲೇ ಕಾಣುವಂತಿದೆ. ಇಂತಹ ಸರಣಿ ಕಾರ್ಯಕ್ರಮಗಳನ್ನೇ ತಯಾರಿಸಿ ಸಾಮಾಜಿಕ ಮಾಧ್ಯಮದಲ್ಲಿ ಮುಕ್ತವಾಗಿ ಅಳವಡಿಸಲಾಗುತ್ತಿದೆ. ಇವನ್ನು ದಿನವಹಿ ವೀಕ್ಷಿಸಲು ದೇಶಭಕ್ತಿಯ ನೆವದಲ್ಲಿ ಅಮಾಯಕ ಜನರನ್ನು ಅತ್ಯಂತ ಸ್ಥಿತಪ್ರಜ್ಞ ಶೈಲಿಯ ಧ್ವನಿಯ ಮರೆಯಲ್ಲಿ ಆಹ್ವಾನಿಸಲಾಗುತ್ತಿದೆ. ದೇಶದ ಇತಿಹಾಸವನ್ನು ವ್ಯವಸ್ಥಿತವಾಗಿ ಕಲಿಯದ ಅಥವಾ ತಿಳಿಯುವ ಗೋಜಿಗೆ ಹೋಗದ ಜನ, ವಿಶೇಷವಾಗಿ ಹೊಸ ತಲೆಮಾರಿನ ಹದಿಹರೆಯದವರು ಮತ್ತು ಯುವಜನರು ಇಂತಹ ವಿಕ್ಷಿಪ್ತ ಕಾರ್ಯಕ್ರಮ ಸರಣಿಗೆ ಸುಲಭ ಬಲಿಗಳಾಗಿರುತ್ತಾರೆ. ಈ ಕಾರ್ಯಕ್ರಮಗಳ ತಯಾರಕರ ಉದ್ದೇಶವೂ ಇದೇ ಆಗಿರುವುದು ಸ್ಪಷ್ಟ.

ಇವು ಇಂದಿನ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಅತ್ಯಂತ ಬೇಜವಾಬ್ದಾರಿಯುತವೂ, ಅನೈತಿಕವೂ ಆಗಿರುವ ಮತ್ತು ಯಾವ ಎಗ್ಗೂ ಇಲ್ಲದೆ ನಡೆದಿರುವ ವಿದ್ಯಮಾನಗಳ ಒಂದೆರಡು ಮಾದರಿಗಳಷ್ಟೇ. ತಮ್ಮ ರಾಜಕೀಯ ನಾಯಕರ ಬಗೆಗೋ ಅಥವಾ ಸಹವರ್ತಿಗಳ ಬಗೆಗೋ ಒಂದು ಪರೋಕ್ಷ ಟೀಕೆಯ ಮಾತನ್ನು ಬರೆದರೂ ಅವರ ವಿರುದ್ಧ ಸಾಮಾಜಿಕ ಮಾಧ್ಯಮಗಳ ಕಾನೂನಿನ ಪ್ರಕಾರ ಮೊಕದ್ದಮೆ ಹೂಡಲು ಆದೇಶಿಸುವ ಸರ್ಕಾರ ಮತ್ತು ಕೆಲವೊಮ್ಮೆ ತಾವಾಗಿಯೇ ಮುನ್ನುಗ್ಗಿ ಮೊಕದ್ದಮೆ ದಾಖಲಿಸಿ ಸಂಬಂಧಪಟ್ಟವರನ್ನು ಬಂಧಿಸಲು ಮುಂದಾಗುವ ನಮ್ಮ ಪೋಲೀಸ್ ವ್ಯವಸ್ಥೆ, ಸಾರ್ವಜನಿಕ ಜೀವನದ ಶಾಂತಿಯನ್ನು ಕದಡಬಲ್ಲ ಇಂತಹ ದುರುದ್ದೇಶಪೂರ್ವಕ, ವ್ಯವಸ್ಥಿತ ಮತ್ತು ಕುತ್ಸಿತ ಪ್ರಯತ್ನಗಳ ವಿರುದ್ಧ ಏಕೆ ಕ್ರಮಕ್ಕೆ ಮುಂದಾಗಿಲ್ಲ ಎಂದು ಆಶ್ಚರ್ಯವಾಗುತ್ತದೆ.

ಹಾಗೇ ಇಂತಹ ಮಾಧ್ಯಮ ಪುಂಡಾಟಿಕೆಯನ್ನು ಹೇಳುವವರೂ, ಕೇಳುವವರೂ ಯಾರೂ ಇಲ್ಲ ಎಂಬ ಭಾವನೆ ಉಂಟಾದಾಗ ಯಾರು ಬೇಕಾದರೂ ಯಾರ ಮೇಲಾದರೂ ಇಂತಹ ದುಷ್ಟ ಅವಹೇಳನದ ದಾಳಿ ನಡೆಸಲಾರಂಭಿಸಿದರೆ (ಈ ಪೃವೃತ್ತಿ ಆರಂಭವಾಗಿರುವ ಸೂಚನೆಗಳು ಈಗಾಗಲೇ ಕಾಣತೊಡಗಿವೆ) ಸಾರ್ವಜನಿಕ ಜೀವನ ಯಾವ ಪರಿಸ್ಥಿತಿಗೆ ಈಡಾಗಬಹುದೆಂದು ಆತಂಕವಾಗುತ್ತದೆ. ಜೊತೆಗೆ ತಂತ್ರಜ್ಞಾನ ಇಂದು ಸಾಮಾಜಿಕವಾಗಿ ವರವೋ ಶಾಪವೋ ಎಂಬ ಗಂಭೀರ ಪ್ರಶ್ನೆಯನ್ನು ಕೇಳುವಂತಾಗುತ್ತದೆ.

ಗೋರಕ್ಷಣೆಯ ಹೆಸರಿನಲ್ಲಿ ಕಾನೂನುಗಳನ್ನು ತಮ್ಮ ಕೈಗೇ ತೆಗೆದುಕೊಂಡು ಅನ್ಯಮತೀಯರನ್ನು ಹೊಡೆದು ಕೊಲ್ಲುವ ರಾಕ್ಷಸೀಯ ಕೃತ್ಯವನ್ನಾಗಲೀ, ಅಂತಹವರನ್ನು ಭಗತ್‌ಸಿಂಗ್‌ಗೆ ಹೋಲಿಸಿ ಭಗತ್‌ಸಿಂಗ್‌ರಂತಹ ವೀರರಿಗೆ ಅವಮಾನ ಮಾಡುವ ದುರುಳತನವನ್ನಾಗಲೀ ಬಹಿರಂಗವಾಗಿ ಖಂಡಿಸಲು ಮುಂದಾಗದ ಸರ್ಕಾರದ ವತಿಯಿಂದ ಈ ಬಗ್ಗೆ ಕ್ರಮ ನಿರೀಕ್ಷಿಸುವುದು ತಪ್ಪಾದೀತೇನೋ. ಆದರೆ ಸ್ವಾತಂತ್ರ್ಯ ಹೋರಾಟದ ವಾರಸುದಾರಿಕೆಯನ್ನು ಹೇಳಿಕೊಳ್ಳುವ ಪಕ್ಷದ ನೇತೃತ್ವದ ಸರ್ಕಾರಗಳು ಏನು ಮಾಡುತ್ತಿವೆ? ತಿಳಿಯದಾಗಿದೆ.
- ಎಚ್.ಎಸ್. ದೊರೆಸ್ವಾಮಿ, ಸುರೇಂದ್ರ ಕೌಲಗಿ, ಎಸ್.ಆರ್. ಹಿರೇಮಠ, ಕಡಿದಾಳು ಶಾಮಣ್ಣ, ವೈದೇಹಿ, ಡಿ.ಎಸ್. ನಾಗಭೂಷಣ, ನಾಗೇಶ ಹೆಗಡೆ,
ಎಚ್.ಎಸ್. ರಾಘವೇಂದ್ರ ರಾವ್, ಓ.ಎಲ್. ನಾಗಭೂಷಣ ಸ್ವಾಮಿ, ಜಿ. ರಾಜಶೇಖರ, ಸವಿತಾ ನಾಗಭೂಷಣ


(ಈ ಎಲ್ಲರ ಅನುಮತಿಯನ್ನೂ ಇ-ಮೇಲ್ ಅಥವಾ ದೂರವಾಣಿ ಕರೆ ಮೂಲಕ ಪಡೆದ ನಂತರವೇ ಅವರ ಹೆಸರುಗಳನ್ನು ಇಲ್ಲಿ ಸೇರಿಸಲಾಗಿದೆ
-ಡಿ.ಎಸ್. ನಾಗಭೂಷಣ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT