ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ನಗರ: ಕುಸಿದ ಸ್ಥಾನ ನಾವೆಲ್ಲ ತಲೆತಗ್ಗಿಸಬೇಕು

Last Updated 5 ಮೇ 2017, 19:30 IST
ಅಕ್ಷರ ಗಾತ್ರ

ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಪ್ರಕಟಿಸಿದ ಈ ಸಲದ ‘ಸ್ವಚ್ಛ ನಗರ’ ಪಟ್ಟಿಯಲ್ಲಿ ನಮ್ಮ ಮೈಸೂರು ಐದನೇ ಸ್ಥಾನಕ್ಕೆ ಇಳಿದಿದೆ. ಹಿಂದೆ ಎರಡು ವರ್ಷಗಳು ಅದು ಸತತವಾಗಿ ಮೊದಲ ಸ್ಥಾನದಲ್ಲಿ ಇತ್ತು. ಆದರೆ ಮೂರನೇ ವರ್ಷವೂ ಈ ಹೆಗ್ಗಳಿಕೆಯನ್ನು ಉಳಿಸಿಕೊಂಡು ಹ್ಯಾಟ್ರಿಕ್‌  ಸಾಧಿಸುವ ಕನಸು ಮಾತ್ರ ಕರಗಿಹೋಯಿತು. 425 ಮನೆಗಳಿಗೆ ಶೌಚಾಲಯ ಕಟ್ಟಿಸಿಕೊಡಲು ವಿಫಲವಾಗಿದ್ದರಿಂದ ಐದನೇ ಸ್ಥಾನಕ್ಕೆ ಕುಸಿದಿದೆ ಎಂದು ಅಲ್ಲಿನ ಮೇಯರ್‌ ಒಪ್ಪಿಕೊಂಡಿದ್ದಾರೆ. ಅಂದರೆ ಇದು ಸ್ವಯಂಕೃತ ಅಪರಾಧದ ಫಲ. ಅಷ್ಟು ದೊಡ್ಡ ಮಹಾನಗರಪಾಲಿಕೆ, ₹ 869 ಕೋಟಿಯ ಬಜೆಟ್‌, ಜನಪ್ರತಿನಿಧಿಗಳು ಮತ್ತು ನೌಕರರ ದೊಡ್ಡ ಸೈನ್ಯ ಇದ್ದೂ ಒಂದು ವರ್ಷದಲ್ಲಿ  425 ಶೌಚಾಲಯಗಳನ್ನು ನಿರ್ಮಿಸಲು ಆಗಲಿಲ್ಲ ಎಂದರೆ ಏನರ್ಥ? ಆದರೆ ಅದರಿಂದ ಪೆಟ್ಟು ಬಿದ್ದದ್ದು ಮೈಸೂರಿಗೆ ಮಾತ್ರವಲ್ಲ ಇಡೀ ಕರ್ನಾಟಕಕ್ಕೆ.

ಇನ್ನು,  ವಿಶ್ವದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಹೆಸರು ಎಂದು ಶಹಬ್ಬಾಶ್‌ಗಿರಿ ಕೊಟ್ಟುಕೊಳ್ಳುವ ರಾಜಧಾನಿ ಬೆಂಗಳೂರು ಸ್ವಚ್ಛತೆಯ ದೃಷ್ಟಿಯಲ್ಲಿ ಪಾತಾಳಕ್ಕೆ ಇಳಿದಿದೆ.  ಎರಡು ವರ್ಷದ ಹಿಂದೆ ಏಳನೇ ರ್‍ಯಾಂಕ್‌, ಹೋದ ವರ್ಷ 38ನೇ ರ್‍ಯಾಂಕ್‌ ಇದ್ದದ್ದು ಈ ಸಲ 210ಕ್ಕೆ ಕುಸಿದಿದೆ. ಇದಕ್ಕಿಂತಲೂ ದೊಡ್ಡ ಅವಮಾನ ಬೇರೆ ಇರಲಿಕ್ಕಿಲ್ಲ. ಐ.ಟಿ, ಬಿ.ಟಿ ನಗರ ಎಂಬ ಹಣೆಪಟ್ಟಿಯ ಜತೆ ಕೊಳಕು  ನಗರ ಎಂಬುದೂ ಸೇರಿದಂತಾಗಿದೆ. ಇದಕ್ಕೆಲ್ಲ ಮುಖ್ಯ ಕಾರಣ ನಮ್ಮ ರಾಜಕೀಯ ನಾಯಕತ್ವ ಮತ್ತು ಆಡಳಿತಶಾಹಿಯ ವೈಫಲ್ಯ, ಜನಸಾಮಾನ್ಯರ ಉದಾಸೀನ. ನಮ್ಮ ಸುತ್ತಮುತ್ತಲಿನ ಪರಿಸರವು ಆರೋಗ್ಯವಂತ ಮತ್ತು ಒಳ್ಳೆಯ ಗುಣಮಟ್ಟದ ಬದುಕನ್ನು ನಿರ್ಧರಿಸುವ ದಿಸೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನೇ ಮರೆತಿದ್ದೇವೆ.

ವಿನಾಕಾರಣ ಕಸ ಸೃಷ್ಟಿಸಬಾರದು, ಎಲ್ಲೆಂದರಲ್ಲಿ ಎಸೆಯಬಾರದು ಎಂಬ ಕನಿಷ್ಠ ಪ್ರಜ್ಞೆಯೂ ನಮಗಿಲ್ಲ. ಬಯಲು ಶೌಚಮುಕ್ತ ಹಳ್ಳಿ– ಪಟ್ಟಣಗಳ ಯೋಜನೆಯಂತೂ ಕುಂಟುತ್ತ ಸಾಗಿದೆ. ಸ್ವಚ್ಛತೆ ಎನ್ನುವುದನ್ನು ಒಂದು ಆಂದೋಲನದ ರೀತಿಯಲ್ಲಿ ಮುಂದೆ ತೆಗೆದುಕೊಂಡು ಹೋಗಬೇಕಾಗಿತ್ತು. ಅದೊಂದು ಜೀವನ ವಿಧಾನ ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಾಗಿತ್ತು. ಕಸ, ಕೊಚ್ಚೆಯಿಂದ ಕಾಯಿಲೆಗಳು ಹೆಚ್ಚುವುದರ ಬಗ್ಗೆ ಜಾಗೃತಿ ಮೂಡಿಸಬೇಕಾಗಿತ್ತು.  ಅಲ್ಲೊಂದು ಇಲ್ಲೊಂದು ಅಪವಾದ ಎಂಬುವುದನ್ನು ಬಿಟ್ಟರೆ ಅಂತಹ ಗಟ್ಟಿ  ಪ್ರಯತ್ನ ಕಂಡುಬರುತ್ತಿಲ್ಲ.

ಹಾಗೆ ನೋಡಿದರೆ, ಬೆಂಗಳೂರಿನ ಸ್ಥಾನ ಇಳಿದಿರುವುದು ಅಂತಹ ಅಚ್ಚರಿಯೇನಲ್ಲ. ಒಂದಿಷ್ಟೂ ಸಂಕೋಚ ಇಲ್ಲದೆ ಖಾಲಿ ಜಾಗದಲ್ಲಿ ಕಸ ಎಸೆಯುವ ಪೌರರಿದ್ದರೆ, ಕಂಡಕಂಡಲ್ಲೆಲ್ಲ ಕಸದ ರಾಶಿ ಇದ್ದರೆ ಇನ್ನೇನಾಗುತ್ತದೆ? ಕಸ ವಿಲೇವಾರಿಗೆ ಎಂದು ಹೋದ ವರ್ಷ ಮಹಾನಗರ ಪಾಲಿಕೆ ಸುಮಾರು ₹400 ಕೋಟಿ ಖರ್ಚು ಮಾಡಿದೆ. ಅದರಿಂದ ಕಸ ಸಾಗಣೆ ಹೆಸರಿನಲ್ಲಿ ದೊಡ್ಡ ಮಾಫಿಯಾ ಬೆಳೆದಿದೆ. ಅದರ ಪಾಲಿಗೆ ಕಸ ಎಂದರೆ ಕಾಯಂ ಚಿನ್ನದ ಗಣಿ. ಈ ನಗರದಲ್ಲಿ ದಿನಕ್ಕೆ ಎಷ್ಟು ಕಸ ಉತ್ಪತ್ತಿಯಾಗುತ್ತದೆ ಎಂಬ ವೈಜ್ಞಾನಿಕ ಲೆಕ್ಕಾಚಾರವೇ ಇಲ್ಲ. ಅಂದಾಜಿನ ಮೇಲೆಯೇ ಎಲ್ಲವೂ ನಡೆಯುತ್ತಿದೆ. ಅದು ಎಷ್ಟೋ ಪ್ರಭಾವಿಗಳ ಜೇಬು ತುಂಬಿಸುತ್ತಿದೆ. ಹೀಗಾಗಿ ಸ್ವಚ್ಛ ನಗರಗಳ ಪಟ್ಟಿಗೆ ಸೇರುವ ಪ್ರಾಮಾಣಿಕ ಪ್ರಯತ್ನವೇ ಇಲ್ಲಿ ಆಗಿಲ್ಲ.

‘ಐದನೇ ಸ್ಥಾನಕ್ಕೆ ಕುಸಿದಿದೆ ಎಂದರೆ ಮೈಸೂರಿನ ಸ್ವಚ್ಛತೆ ಕಡಿಮೆಯಾಗಿದೆ ಎಂದಲ್ಲ; ಇತರ ನಗರಗಳು ಅದಕ್ಕಿಂತ ಹೆಚ್ಚು ಅಂಕ ಗಳಿಸಿವೆ’ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಸಾಂತ್ವನದ ಮಾತು ಆಡಿದ್ದಾರೆ. ಆದರೆ ಔದ್ಯಮಿಕ ನಗರ ವಿಶಾಖಪಟ್ಟಣ, ಪ್ಲೇಗ್‌ನಿಂದ ಕಳಂಕ ಅಂಟಿಸಿಕೊಂಡಿದ್ದ ಸೂರತ್‌ ಕೂಡಾ ಮೈಸೂರನ್ನು ಹಿಂದೆ ಸರಿಸಿ ಒಳ್ಳೆಯ ರ್‍ಯಾಂಕ್‌ ಪಡೆದಿವೆ. ಅವಕ್ಕೆ ಆಗಿದ್ದು ನಮಗೇಕೆ ಸಾಧ್ಯವಾಗಲಿಲ್ಲ? ಮೊದಲ 50 ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರು ಬಿಟ್ಟರೆ ನಮ್ಮ ರಾಜ್ಯದ ಯಾವ ನಗರವೂ ಇಲ್ಲ.    ಇದು ಗಂಭೀರ ವಿಚಾರ. ಆದ್ದರಿಂದ,  ಅಸಡ್ಡೆ ಸಾಕು. ಸ್ವಚ್ಛತೆ ಒಂದು ಅಭಿಯಾನವಾಗಬೇಕು. ಅದರಲ್ಲಿ ಸಾರ್ವಜನಿಕರು ಮಾತ್ರವಲ್ಲ, ತನ್ನ ಪಾತ್ರವೂ ದೊಡ್ಡದು ಎಂಬುದನ್ನು ರಾಜ್ಯ ಸರ್ಕಾರ ತಿಳಿದುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT