ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯ್ದೆ ತ್ವರಿತ ಜಾರಿಗೆ ಆಗ್ರಹಿಸಿ ಪ್ರತಿಭಟನೆ

Last Updated 7 ಮೇ 2017, 19:37 IST
ಅಕ್ಷರ ಗಾತ್ರ

ಬೆಂಗಳೂರು:  ‘ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ರಿಯಲ್‌ ಎಸ್ಟೇಟ್‌ (ನಿಯಂತ್ರಣ ಮತ್ತು ಅಭಿವೃದ್ಧಿ)  ಕಾಯ್ದೆಯ ನಿಯಮಗಳನ್ನು ರಾಜ್ಯದಲ್ಲಿ ತ್ವರಿತವಾಗಿ ಅನುಷ್ಠಾನಕ್ಕೆ ತರಬೇಕು’ ಎಂದು ಒತ್ತಾಯಿಸಿ ‘ಫೈಟ್‌ ಫಾರ್‌ ರೇರಾ’ ಸಮಿತಿಯ ರಾಜ್ಯ ಘಟಕದ ಸದಸ್ಯರು ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

‘ನಮ್ಮ ಬೆಂಗಳೂರು ಪ್ರತಿಷ್ಠಾನ’,  ‘ಕರ್ನಾಟಕ ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘ’ ಹಾಗೂ ‘ಡ್ರಿಮ್‌ ಇನ್ಫ್ರಾ ಇಂಡಿಯಾ ಲಿಮಿಟೆಡ್‌ನ ನೊಂದ ಗ್ರಾಹಕರ ಸಂಘ’ದ ಸಹಯೋಗದಲ್ಲಿ ಪುರಭವನ ಎದುರು ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

‘ಫೈಟ್‌ ಫಾರ್‌ ರೇರಾ’ ಸಮಿತಿಯ ಪ್ರತಿನಿಧಿ ಎಂ.ಎಸ್‌.ಶಂಕರ ಮಾತನಾಡಿ, ‘ದೇಶದ 13 ರಾಜ್ಯಗಳಲ್ಲಿ ಮೇ 1ರಿಂದ ಕಾಯ್ದೆ ಜಾರಿಗೆ ಬಂದಿದೆ. ರಾಜ್ಯ ಸರ್ಕಾರ ಜಾರಿಗೆ ತರಲು ಹಿಂದೇಟು ಹಾಕುತ್ತಿದ್ದು, ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ’ ಎಂದು ಹೇಳಿದರು.

‘ಇದರ ಕರಡನ್ನು ಅಕ್ಟೋಬರ್‌ನಲ್ಲಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು. ಅದಾದ ಬಳಿಕ ಹಲವು ಗ್ರಾಹಕರು ಸಲಹೆಗಳನ್ನೂ ನೀಡಿದ್ದರು. ಆದರೆ, ಆ ಕಾಯ್ದೆಯು ಇದುವರೆಗೂ ಅನುಷ್ಠಾನಕ್ಕೆ ಬಾರದಿರುವುದು ಆತಂಕ ಉಂಟುಮಾಡಿದೆ’ ಎಂದು ಹೇಳಿದರು.

ಚಾಲ್ತಿಯಲ್ಲಿರುವ ಯೋಜನೆ ಹೊರಗಿಡುವ ಹುನ್ನಾರ:  ‘ಕಾಯ್ದೆ ಅನ್ವಯ ರಾಜ್ಯ ಸರ್ಕಾರವು ಪ್ರಾಧಿಕಾರ ರಚಿಸಬೇಕಿದೆ. ಆ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಕೊಂಡ ಬಳಿಕವೇ ಬಿಲ್ಡರ್ಸ್‌ಗಳು ಯೋಜನೆ ಆರಂಭಿಸಬೇಕು. ಜತೆಗೆ ನೋಂದಣಿಗಾಗಿ ಸ್ಥಳೀಯ ಸಂಸ್ಥೆಗಳ ನಿರಾಕ್ಷೇಪಣಾ ಪತ್ರ ಹಾಗೂ ಯೋಜನೆಯ ಸಂಪೂರ್ಣ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ’ ಎಂದು ಶಂಕರ್‌ ಹೇಳಿದರು.

‘ಈ ಪ್ರಕ್ರಿಯೆ ಗ್ರಾಹಕರ ಸ್ನೇಹಿಯಾಗಿದೆ. ಆದರೆ, ಅಕ್ರಮಗಳ ಮೂಲಕ ಯೋಜನೆ ಆರಂಭಿಸಿರುವ ಹಲವು ಬಿಲ್ಡರ್ಸ್‌ಗಳು ಇಂಥ ಪ್ರಕ್ರಿಯೆಯಿಂದ ದೂರವುಳಿದು ಯೋಜನೆಯನ್ನು ಮುಂದುವರಿಸಲು ತೆರೆಮರೆಯಲ್ಲಿ ಪ್ರಯತ್ನಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

‘ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ  22,000 ಚಾಲ್ತಿಯಲ್ಲಿರುವ ಯೋಜನೆಗಳಿವೆ. ಬೆಂಗಳೂರಿನಲ್ಲೇ 5,000ಕ್ಕೂ ಹೆಚ್ಚು ಕಡೆಗಳಲ್ಲಿ ಕೆಲಸ ನಡೆದಿದೆ. ಇಂಥ ಯೋಜನೆಗಳ ಬಿಲ್ಡರ್ಸ್‌ಗಳು ಸಹ ಕಾಯ್ದೆಯನ್ವಯ  ನೋಂದಣಿ ಮಾಡಿಸಬೇಕಿದೆ. ಈ ರೀತಿಯಾದರೆ ಹಲವರು ಯೋಜನೆಗಳನ್ನೇ ನಿಲ್ಲಿಸುವ ಸ್ಥಿತಿ ಬರಲಿದೆ. ಅದೇ ಕಾರಣಕ್ಕೆ  ಅವರೆಲ್ಲ ಚಾಲ್ತಿಯಲ್ಲಿರುವ ಯೋಜನೆಗಳನ್ನು ಪ್ರಾಧಿಕಾರದ ವ್ಯಾಪ್ತಿಯಿಂದ ಹೊರಗಿಡುವಂತೆ ಕೆಲ ಸಚಿವರ ಮೂಲಕ ರಾಜ್ಯ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ. ಹೀಗಾಗಿ ಕಾಯ್ದೆ ಅನುಷ್ಠಾನ ವಿಳಂಬವಾಗುತ್ತಿದೆ’ ಎಂದು  ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT